ಅಶೋಕೆ: ‘ದೇಹದಲ್ಲಿ ಸಪ್ತ ಧಾತುಗಳಿದ್ದು, ಈ ಧಾತುಗಳು ಒಂದಕ್ಕೊಂದು ಸಾಮ್ಯವಾಗಿದ್ದಾಗ ಆರೋಗ್ಯ. ಧಾತುಗಳಲ್ಲಿ ವೈಷಮ್ಯ ಉಂಟಾದಾಗ ಅದೇ ಅನಾರೋಗ್ಯ. ಆಯುರ್ವೇದದ ಮುಖ್ಯ ಲಕ್ಷ್ಯವೇ ಧಾತುಗಳ ಸಾಮ್ಯವಾಗಿದೆ’ ಎಂದು ಪರಮಪೂಜ್ಯ ಶ್ರೀಸಂಸ್ಥಾನದವರು ತಿಳಿಸಿದರು.
‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಆಷಾಢ ಕೃಷ್ಟ ಸಪ್ತಮಿಯಂದು (05-08-2026) ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಸಂಸ್ಥಾನದವರು, ‘ಆರೋಗ್ಯವೆಂದರೆ ಕೇವಲ ರೋಗವಿಲ್ಲದ ಸ್ಥಿತಿಯಲ್ಲ. ದೇಹ, ಮನಸ್ಸು ಹಾಗೂ ಆತ್ಮದ ನಡುವೆ ಸಮತೋಲನ ಸಾಧಿಸಿದ ಸ್ಥಿತಿ ಎಂದು ಆಯುರ್ವೇದ ತಿಳಿಸುತ್ತದೆ. ವಾತ, ಪಿತ್ತ ಮತ್ತು ಕಫ ಎಂಬ ತ್ರಿದೋಷಗಳು ಪರಸ್ಪರ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಇವುಗಳ ಅಸಮತೋಲನವೇ ಅನಾರೋಗ್ಯಕ್ಕೆ ಕಾರಣವಾಗುತ್ತದೆ’ ಎಂದು ವಿವರಿಸಿದರು.

‘ಪೂರ್ಣ ಆರೋಗ್ಯ ಉಂಟಾದಾಗ ಮಾತ್ರ ಪೂರ್ಣ ಆತ್ಮದರ್ಶನವನ್ನು ಹೊಂದಲು ಸಾಧ್ಯ. ಧಾತು ಸಾಮ್ಯ ಏರ್ಪಟ್ಟಾಗ ಆತ್ಮದರ್ಶನವನ್ನು ಪಡೆಯಲು ಶಕ್ಯವಾಗುತ್ತದೆ. ಮಹಾನಾರಾಯಣೋಪನಿಷತ್ತು ಹಾಗೂ ಕಠೋಪನಿಷತ್ತುಗಳಲ್ಲಿ ಧಾತು ಸಾಮ್ಯವಾದಾಗ ಹೃದಯ ಗುಹೆಯಲ್ಲಿ ಹುದುಗಿ ಕುಳಿತಿರುವ ಆತ್ಮವನ್ನು ಕಾಣಬಹುದು ಎಂದು ಹೇಳಲಾಗಿದೆ ಎಂದು ಆಯುರ್ವೇದ ಹಾಗೂ ಉಪನಿಷತ್ತುಗಳ ಸಮೀಕರಣದೊಂದಿಗೆ ಆರೋಗ್ಯದಿಂದ ಆತ್ಮದರ್ಶನ ಸಾಧ್ಯ’ ಎಂದು ನಿರೂಪಿಸಿದರು.
‘ಒಂದು ಮನೆಯಲ್ಲಿ ಸದಸ್ಯರು ಹೊಂದಾಣಿಕೆಯಿಂದ ಬದುಕಿದಾಗ ಮನೆ ಸುಖಮಯವಾಗಿರುವಂತೆ, ದೇಹದಲ್ಲಿರುವ ವಾತ, ಪಿತ್ತ ಮತ್ತು ಕಫಗಳೂ ಸಮತೋಲನದಲ್ಲಿದ್ದಾಗ ಆರೋಗ್ಯ ಸ್ಥಿರವಾಗಿರುತ್ತದೆ. ಈ ಸ್ಥಿತಿಯನ್ನು ‘ಧಾತು ಸಾಮ್ಯ’ ಎಂದು ಆಯುರ್ವೇದದಲ್ಲಿ ಕರೆಯಲಾಗುತ್ತದೆ. ಸರಿಯಾದ ಆಹಾರ, ಉತ್ತಮ ನಿದ್ರೆ ಹಾಗೂ ನಿಯಮಿತ ಜೀವನಶೈಲಿಯ ಮೂಲಕ ಈ ಸಮತೋಲನವನ್ನು ಕಾಪಾಡಿಕೊಳ್ಳಬಹುದು’ ಎಂದು ನುಡಿದರು.
‘ಮಾನವನ ಜೀವನದಲ್ಲಿ ದೈಹಿಕ ಮತ್ತು ಮಾನಸಿಕ ವೇಗಗಳನ್ನು ಸರಿಯಾಗಿ ನಿರ್ವಹಿಸುವುದು ಅತ್ಯಂತ ಮುಖ್ಯ. ವಾಂತಿ, ಹಸಿವು, ಬಾಯಾರಿಕೆ ಮೊದಲಾದ ದೈಹಿಕ ವೇಗಗಳನ್ನು ಅನಗತ್ಯವಾಗಿ ತಡೆಯಬಾರದು. ಅದೇ ವೇಳೆ ಲೋಭ, ದ್ವೇಷ, ಈರ್ಷೆ, ಕೋಪದಂತಹ ಮನೋವೇಗಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಅಗತ್ಯವಿಲ್ಲದೆ ಮಾತನಾಡುವುದು, ಸುಳ್ಳು ಹೇಳುವುದು, ಕಟುವಾಗಿ ವರ್ತಿಸುವುದು ಹಾಗೂ ಇತರರಿಗೆ ನೋವುಂಟು ಮಾಡುವ ಮಾತುಗಳನ್ನು ಆಡಬಾರದು. ಒಟ್ಟಾರೆ, ಆರೋಗ್ಯಕರ ಜೀವನಕ್ಕಾಗಿ ದೇಹ, ಮನಸ್ಸು ಮತ್ತು ಆತ್ಮದ ಸಮನ್ವಯ ಅಗತ್ಯ. ಆಹಾರ, ನಿದ್ರೆ, ಬ್ರಹ್ಮಚರ್ಯ ಹಾಗೂ ಸದಾಚಾರದ ಮೂಲಕ ಧಾತುಗಳ ಸಮತೋಲನವನ್ನು ಕಾಪಾಡಿಕೊಂಡಾಗ ಮಾತ್ರ ಸಂಪೂರ್ಣ ಆರೋಗ್ಯ ಮತ್ತು ಆತ್ಮಜ್ಞಾನದ ಮಾರ್ಗ ಸುಗಮವಾಗುತ್ತದೆ’ ಎಂದು ತಿಳಿಸಿದರು.
‘ಬ್ರಹ್ಮಚರ್ಯ ಎಂಬುದಕ್ಕೆ ಧರ್ಮಶಾಸ್ತ್ರ, ಯೋಗಶಾಸ್ತ್ರ ಹಾಗೂ ಆಯೂರ್ವೇದ ಸ್ವಲ್ಪ ವಿಭಿನ್ನವಾದ ವ್ಯಾಖ್ಯಾನವನ್ನು ಮಾಡುತ್ತವೆ. ಸಂಕ್ಷೇಪವಾಗಿ ಹೇಳುವುದಾದರೆ ಆಯುರ್ವೇದದ ಪ್ರಕಾರ ಇಂದ್ರಿಯ ಸಂಯಮವೇ ಬ್ರಹ್ಮಚರ್ಯವಾಗಿದೆ. ಆಯುರ್ವೇದದ ಅಂತಿಮ ಉದ್ದೇಶ ಕೇವಲ ರೋಗ ನಿವಾರಣೆಯಲ್ಲ; ಆತ್ಮಜ್ಞಾನವನ್ನು ಸಾಧಿಸುವುದೇ ಅದರ ಪರಮ ಗುರಿಯಾಗಿದೆ. ಧಾತುಗಳ ಪ್ರಸನ್ನತೆ ಮತ್ತು ಮನಸ್ಸಿನ ಶುದ್ಧತೆಯ ಮೂಲಕ ಆತ್ಮಸಾಕ್ಷಾತ್ಕಾರ ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ಖ್ಯಾತ ದೈವಜ್ಞ ವಿಷ್ಣು ಪೂಚಕ್ಕಾಡು ದಂಪತಿಗಳು, ಯುವ ಮುಖಂಡ ಹರಿಪ್ರಕಾಶ ಕೋಣೆಮನೆ, ವಿದ್ವಾನ್ ಗೋಪಾಲಕೃಷ್ಣ ಭಟ್ ಹಂಡ್ರಮನೆ ಶ್ರೀಸಂಸ್ಥಾನದವರಿಂದ ಆಶೀರ್ವಾದ ಪಡೆದರು. ಸಾಗರ ಹವ್ಯಕ ಮಂಡಲ ಗೋಳಗೋಡು, ಕೋಗೋಡು, ಮರಗುಡಿ, ಸಾಗರ ಪೂರ್ವ, ಸಾಗರ ಪಶ್ಚಿಮ ವಲಯಗಳ ಪರವಾಗಿ ಸುಬ್ರಾಯ ಮಂಜಪ್ಪ ಹೆಗಡೆ ದಂಪತಿಗಳು ಭಿಕ್ಷಾಸೇವೆ ಸಮರ್ಪಿಸಿದರು. ಜಿ. ಕೆ. ಹೆಗಡೆ ಗೋಳಗೋಡ, ಲಕ್ಷ್ಮೀನಾರಾಯಣ ಸಂಪ, ವಿ. ಜಿ ಹೆಗಡೆ ಸಾಗರ, ಅನುಪಮಾ ಸಾರಂಗ, ರುಕ್ಮಾವತಿ ಸಾಗರ, ದಿನ ಪ್ರಧಾನರಾದ ಮುಳ್ಳಂಜ ವೆಂಕಟೇಶ್ವರ ಭಟ್ ಉಪಸ್ಥಿತರಿದ್ದರು.














