ಬೆಂಗಳೂರು: ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯಸಂಕಲ್ಪದಂತೆ ಆರಂಭಗೊಂಡ ಶ್ರೀಮಠದ ಅಂಗಸಂಸ್ಥೆ ಗ್ರಾಮರಾಜ್ಯದಲ್ಲಿ ಆಷಾಢ ಬಹುಳ ತದಿಗೆಯಂದು (01-08-2026) ಶ್ರೀವರ್ಧಂತೀ ಆಚರಣೆ ಸಂಪನ್ನವಾಯಿತು.
ಅಭ್ಯಾಗತರಾಗಿ ಅಖಿಲ ಹವ್ಯಕ ಮಹಾಸಭಾ ಇದರ ಅಧ್ಯಕ್ಷರೂ ನಾಡಿನ ಖ್ಯಾತ ಆಯುರ್ವೇದ ತಜ್ಞರಾದ ಡಾ. ಗಿರಿಧರ ಕಜೆ ಆಗಮಿಸಿದ್ದರು. ಅವರು ಮಾತನಾಡಿ ‘ಕೆಲವರ ನಡೆ ಅನುಕರಣೀಯ. ಕೆಲವರ ನುಡಿ ಅನುಕರಣೀಯ. ನಮ್ಮ ಶ್ರೀಸಂಸ್ಥಾನದವರ ನಡೆ ಮತ್ತು ನುಡಿ ಎರಡೂ ಅನುಕರಣೀಯ’ ಎಂದು ಭಾವವ್ಯಕ್ತಗೊಳಿಸಿ, ‘ಅವರು ಸ್ಥಾಪಿಸಿದ ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಏರಲಿ’ ಎನ್ನುವ ಆಶಯ ವ್ಯಕ್ತಪಡಿಸಿದರು. ಗ್ರಾಮರಾಜ್ಯ ಸಂಸ್ಥೆಯ ವ್ಯವಸ್ಥೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸಿದ್ವಿನ್ ಆಟೋಟೆಕ್ ಸಂಸ್ಥೆಯ ಹಣಕಾಸು ಮತ್ತು ವ್ಯವಹಾರ ಬೆಳವಣಿಗೆ ಹಿರಿಯ ಅಧಿಕಾರಿ ಮನು ಪ್ರಭಾಕರ ಅವರು ಆಗಮಿಸಿ ಶ್ರೀಸಂಸ್ಥಾನದವರ ವರ್ಧಂತೀ, ಅವರ ಮಾರ್ಗದರ್ಶನ ಮತ್ತು ಅವರ ಕಾರ್ಯಗಳ ಮೆಲುಕು ಹಾಕಿದರು. ಹಾಗೆಯೇ ಗ್ರಾಮರಾಜ್ಯದ ಯಶಸ್ಸಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶ್ರೀಮಠದ ಶಾಸನತಂತ್ರ ವ್ಯವಸ್ಥೆಯ ಅಧ್ಯಕ್ಷರಾದ ಮೋಹನ ಭಾಸ್ಕರ ಹೆಗಡೆ, ಖ್ಯಾತ ಹಿನ್ನಲೆ ಧ್ವನಿ ಕಲಾವಿದ ಹಾಗೂ ನಿರೂಪಕ ಬಡೆಕ್ಕಿಲ ಪ್ರದೀಪ, ಗ್ರಾಮರಾಜ್ಯ ಸಂಯೋಜಕ ಶಶಾಂಕ ಕಂಗಿಲ, ಉದ್ಯೋಗಿಗಳು ಉಪಸ್ಥಿತರಿದ್ದರು.

