|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಗೋಸೇವೆಯ ಮಹತ್ವವನ್ನು ಮಕ್ಕಳಿಗೆ ಎಳವೆಯಿಂದಲೇ ತಿಳಿಸಬೇಕು ‘ – ಭಾರತಿ ಸುದರ್ಶನ್ ಸಾಗರ

” ನಮ್ಮ ಹಿರಿಯರು ಸಲ್ಲಿಸಿದ ಶ್ರದ್ಧೆಯ ಸೇವೆಯ ಫಲವನ್ನು ನಾವು ಇಂದು ಸುಖದ ರೂಪದಲ್ಲಿ ಉಣ್ಣುತ್ತಿದ್ದೇವೆ. ಹಾಗೆಯೇ ನಮ್ಮ ಮುಂದಿನ ತಲೆಮಾರು, ಮಕ್ಕಳು ಹಾಗೂ ಮೊಮ್ಮಕ್ಕಳು ಶಾಂತಿ-ನೆಮ್ಮದಿಯಿಂದ ಬಾಳಿ ಬದುಕಬೇಕೆಂದರೆ ನಾವು ಕೂಡ ಗೋಸೇವೆ ಹಾಗೂ ಸಮಾಜಸೇವೆಯಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಳ್ಳಬೇಕು” ಎಂಬ ಉದಾತ್ತ ಚಿಂತನೆಯನ್ನು ಹೊಂದಿರುವವರು ಸಾಗರದ ಭಾರತಿ ಸುದರ್ಶನ್.

ಸಾಗರ ಎಸ್.ಎನ್‌. ನಗರದ ಸುದರ್ಶನ್ ಅವರ ಪತ್ನಿಯಾಗಿರುವ ಇವರು, ಶ್ರೀರಾಮಚಂದ್ರಾಪುರ ಮಠದ ಶ್ರೀಸಂಸ್ಥಾನದವರ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಂದ ಪ್ರೇರಿತರಾಗಿ, ಗೋಮಾತೆಯ ಮೇಲಿನ ವಿಶೇಷ ಮಮತೆಯಿಂದ ‘ಮಾಸದ ಮಾತೆ’ಯಾಗಿ ಗೋಸೇವೆಯಲ್ಲಿ ನಿರತರಾಗಿದ್ದಾರೆ.

​ತುಮಕೂರು-ಹೆಬ್ರಿಯ ರಾಮಕೃಷ್ಣ ಜೋಯಿಸ್ ಮತ್ತು ಇಂದಿರಾ ದಂಪತಿಗಳ ಪುತ್ರಿಯಾಗಿ ಜನಿಸಿದ ಭಾರತಿ ಅವರಿಗೆ ಬಾಲ್ಯದಿಂದಲೇ ಹಸುಗಳೆಂದರೆ ತುಂಬಾ ಪ್ರೀತಿ. ಶ್ರೀಮಠದ ‘ಮಾತೃತ್ವಮ್’ ಯೋಜನೆಯಲ್ಲಿ ಈಗಾಗಲೇ ಮಾಸದ ಮಾತೆಯಾಗಿ ಸೇವೆ ಸಲ್ಲಿಸುತ್ತಿದ್ದ ಸೋದರಿಯೋರ್ವರ ಸತ್ಪ್ರೇರಣೆಯಿಂದ, ಭಾರತಿ ಅವರು ಕೂಡ ಕಳೆದ ಮೂರು ವರ್ಷಗಳಿಂದ ಮಾಸದ ಮಾತೆಯಾಗಿ ಶ್ರೀಮಠದ ಗೋಸೇವಾ ಯಜ್ಞಕ್ಕೆ ಕೈಜೋಡಿಸಿದ್ದಾರೆ. ನಿತ್ಯವೂ ತಮ್ಮ ಮನೆಯ ಬಾಗಿಲಿಗೆ ಬರುವ ಹಸುಗಳಿಗೆ ಪ್ರೀತಿಯಿಂದ ಮೇವು ನೀಡಿ ಆರೈಕೆ ಮಾಡುವುದು ಇವರ ದಿನಚರಿಯ ಭಾಗವಾಗಿದೆ.

​ವೃತ್ತಿಯಿಂದ ಶಿಕ್ಷಕಿಯಾಗಿದ್ದ ಭಾರತಿ ಸುದರ್ಶನ್ ಅವರಿಗೆ ಗಮಕ ಕಲೆ, ಹಾಡು ಹಾಗೂ ಭಜನೆಗಳಲ್ಲಿ ಆಸಕ್ತಿಯಿದೆ. ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮಗಳಲ್ಲಿ ಇವರು ಅತ್ಯಂತ ಉತ್ಸಾಹದಿಂದ ಭಾಗವಹಿಸುತ್ತಾ ಸಾಂಸ್ಕೃತಿಕ ಕಲಾ ಸೇವೆಯನ್ನೂ ಮಾಡುತ್ತಿದ್ದಾರೆ.

ಭಾರತಿ ಅವರ ಈ ಗೋಸೇವಾ ಕಾರ್ಯಕ್ಕೆ ಸ್ಪಂದಿಸಿ, ಅವರ ವಿದ್ಯಾರ್ಥಿನಿಯೊಬ್ಬರು ಗೋಮಾತೆಯ ಸೇವೆಗೆ ಕೈಜೋಡಿಸಿದ್ದರು. ಆ ಸಮಯದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಆ ವಿದ್ಯಾರ್ಥಿನಿಯ ತಾಯಿ, ಮುಂದೆ ಕೆಲವೇ ದಿನಗಳಲ್ಲಿ ಗೋಮಾತೆಯ ಕೃಪೆಯಿಂದ ಸಂಪೂರ್ಣ ಗುಣಮುಖರಾದರು!
” ಈ ಘಟನೆಯು ಗೋಮಾತೆಯ ಅನುಗ್ರಹಕ್ಕೆ ಸಾಕ್ಷಿಯಾಗಿದೆ” ಎಂದು ಭಾರತಿ ಅವರು ಶ್ರದ್ಧೆಯಿಂದ ಸ್ಮರಿಸುತ್ತಾರೆ.

​ಭಾರತಿಯವರ ಗೋಸೇವೆಯ ಪಯಣಕ್ಕೆ ಅವರ ಪತಿ, ಮಗ ಹಾಗೂ ಮಗಳು ಸಂಪೂರ್ಣ ಬೆಂಬಲ ನೀಡಿದ್ದಾರೆ. ತಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳ ಹುಟ್ಟುಹಬ್ಬದಂತಹ ವಿಶೇಷ ಸಂದರ್ಭಗಳಲ್ಲೂ ಗೋಮಾತೆಗಾಗಿ ವಿಶೇಷ ಕಾಣಿಕೆಯನ್ನು ಸಲ್ಲಿಸುವ ಸುಂದರ ಸಂಪ್ರದಾಯವನ್ನು ಈ ಕುಟುಂಬ ಕಾಯ್ದುಕೊಂಡು ಬಂದಿದೆ.

​” ಗೋಸೇವೆಯಲ್ಲಿ ತೊಡಗಿಸಿಕೊಂಡ ಮೇಲೆ ನಮ್ಮ ಬದುಕಿನಲ್ಲಿ ನೆಮ್ಮದಿ ನೆಲೆಸಿದೆ. ನನ್ನ ಈ ಸೇವೆಯಲ್ಲಿ ಅನೇಕ ಬಂಧುಗಳು, ಸ್ನೇಹಿತರು ಕೈಜೋಡಿಸಿದ್ದಾರೆ. ಶ್ರೀಗುರುಗಳ ಹಾಗೂ ಗೋಮಾತೆಯ ಈ ನಿರಂತರ ಸೇವೆಯಲ್ಲಿ ಬದುಕಿನ ಕೊನೆಯವರೆಗೂ ಸಾಗಬೇಕು ಎನ್ನುವುದೇ ನನ್ನ ಅಂತರಾಳದ ಅಭಿಲಾಷೆ” ಎಂದು ಭಾರತಿ ಸುದರ್ಶನ್ ಭಕ್ತಿಪೂರ್ವಕವಾಗಿ ನುಡಿಯುತ್ತಾರೆ.

​ ಪ್ರಸನ್ನಾ ವಿ. ಚೆಕ್ಕೆಮನೆ