ಅಶೋಕೆ: ಇಂದು ನಮಗೆ ಮಂಗಳ ಗ್ರಹದವರೆಗೂ ಗೊತ್ತಿದೆ. ಆದರೆ ನಮಗೆ ನಮ್ಮ ಬಗ್ಗೆಯೇ ತಿಳಿದಿಲ್ಲ. ಸರಿಯಾದ ಆಹಾರವನ್ನು ಸೇವಿಸಿದರೆ ನಮ್ಮನ್ನು ನಾವು ಕಂಡುಕೊಳ್ಳಬಹುದು ಎಂದು ಪರಮಪೂಜ್ಯ ಶ್ರೀಸಂಸ್ಥಾನದವರು ತಿಳಿಸಿದರು.
‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಶ್ರಾವಣ ಕೃಷ್ಣ ಬಿದಿಗೆಯಂದು (30-08-2026) ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಸಂಸ್ಥಾನದವರು, ಆಹಾರವೇ ಔಷಧವಾಗುವಂತೆ ಆಹಾರವನ್ನು ಸ್ವೀಕರಿಸಬೇಕು. ಹಾಗೆ ಮಾಡದೇ ಇದ್ದರೆ ಮುಂದೊಂದು ದಿನ ಔಷಧವೇ ಆಹಾರವಾಗುತ್ತದೆ. ಹಾಗಾಗಿ ಆಹಾರವನ್ನು ಸ್ವೀಕರಿಸುವಾಗ ಜಾಗ್ರತೆ ಅಗತ್ಯ. ಅನ್ನ ಔಷಧ ಮಾತ್ರವಲ್ಲ, ಸರಿಯಾಗಿ ಸೇವಿಸಿದ ಆಹಾರ ಸ್ವಯಂ ವೈದ್ಯನಾಗಿ ದೇಹವನ್ನು ಸರಿಪಡಿಸುತ್ತದೆ. ಆಧುನಿಕ ವಿಜ್ಞಾನದಲ್ಲಿ ದೇಹ ಕೆಟ್ಟ ಮೇಲೆ ಅದರ ರಿಪೇರಿಯ ಕಾರ್ಯ ಆರಂಭವಾಗುತ್ತದೆ. ಆದರೆ ಆಯುರ್ವೇದ ಅನಾರೋಗ್ಯ ಉಂಟಾಗದಂತೆ ತಡೆಯುವತ್ತ ಲಕ್ಷ್ಯವನ್ನು ನೆಟ್ಟಿದೆ ಎಂದು ನುಡಿದರು.
ಚರಕ ಮಹರ್ಷಿಗಳು ಯಾರು ಹಿತಭೋಜನವನ್ನು ಮಾಡುತ್ತಾನೋ ಅವನು 36 ಸಾವಿರ ರಾತ್ರಿಗಳ ಕಾಲ ರೋಗ ರಹಿತವಾಗಿ ಬದುಕುತ್ತಾನೆ ಎಂದಿದ್ದು, ಸರಿಯಾಗಿ ವಿಮರ್ಶೆ ಮಾಡಿ ಸಮರ್ಪಕವಾದ ಆಹಾರವನ್ನು ಮಾತ್ರ ಸ್ವೀಕರಿಸಬೇಕು. ಏಕೆಂದರೆ ದೇಹವೂ ಆಹಾರದಿಂದ ಹಾಗೂ ರೋಗವೂ ಆಹಾರದಿಂದ ಎಂದು ವಿವರಿಸಿದರು.
ಮಹಾನಾರಾಯಣ ಉಪನಿಷತ್ತಿನಲ್ಲಿ ಸೂರ್ಯನಿಂದಾಗಿ ಮೋಡ, ಮೋಡದಿಂದ ಮಳೆ, ಮಳೆಯಿಂದ ಆಹಾರ, ಆಹಾರದಿಂದ ಪ್ರಾಣ, ತಪಸ್ಸು, ಶ್ರದ್ಧೆ , ಶ್ರದ್ಧೆಯಿಂದ ಆತ್ಮಜ್ಞಾನ ಎಂದು ವಿವರಿಸಿದೆ. ಹಾಗೆಯೇ ಛಾಂದೋಗ್ಯ ಉಪನಿಷತ್ತು ಆಹಾರ ಶುದ್ಧಿಯಿಂದ ಶುದ್ಧ ಮನಸ್ಸು, ಶುದ್ಧವಾದ ಮನಸ್ಸಿನಿಂದ ನಿಜವಾದ ನಮ್ಮ ನೆನಪು ಸಾಧ್ಯ. ಅದು ಆತ್ಮ ಸಾಕ್ಷಾತ್ಕಾರಕ್ಕೆ ಕಾರಣವಾಗುತ್ತದೆ ಎಂದಿದೆ. ಹೀಗೆ ಎಲ್ಲವೂ ಆಹಾರದ ಮೇಲೆಯೆ ಅವಲಂಬಿತವಾಗಿದ್ದು, ಅನ್ನ ಏನಲ್ಲ? ಅನ್ನದಿಂದ ಏನೆಲ್ಲಾ?? ಎಂಬುದಕ್ಕೆ ಉತ್ತರ ಕಂಡುಕೊಂಡರೆ ಅನ್ನದ ಮಹತ್ತ್ವದ ಅರಿವಾಗುತ್ತದೆ ಎಂದು ತಿಳಿಸಿದರು.
**
ಮಂಗಳೂರು ಹವ್ಯಕ ಮಂಡಲ ಮಂಗಳೂರು ದಕ್ಷಿಣ, ಮಂಗಳೂರು ಮಧ್ಯ, ಮಂಗಳೂರು ಉತ್ತರ, ವಿಟ್ಲ, ಕಲ್ಲಡ್ಕ,ಉಡುಪಿ ಹವ್ಯಕ ವಲಯಗಳ ಪರವಾಗಿ ಶ್ಯಾಮ್ ಭಟ್ ಕಿಳಿಂಗಾರು ಕುಟುಂಬದವರು ಗುರುಭಿಕ್ಷಾಸೇವೆ ಸಮರ್ಪಿಸಿದರು.
ಯುವ ಮುಖಂಡರಾದ ಸಾಗರದ ಪ್ರಶಾಂತ್ ಕೆ.ಎಸ್, ಕರ್ಣಾಟಕ ಬ್ಯಾಂಕಿನ ಹಿರಿಯ ಮಾನವಸಂಪನ್ಮೂಲಾಧಿಕಾರಿ ಚಕ್ರಪಾಣಿ, ಗಿರೀಶ ಭಟ್ಟ ಯಲ್ಲಾಪುರ, ಮಹೇಶ ಚಟ್ನಳ್ಳಿ, ಶಾಂತಾರಾಮ ಹೆಗಡೆ, ಉಮೇಶ ಭಟ್ಟ ಕೋಣಮ್ಮೆ, ರಮೇಶ ಭಟ್ಟ ಸರವು, ದಿನಪ್ರಧಾನರಾಗಿ ಸೀತಾರಾಮ ಭಟ್ಟ ಅಡಿಕೆಹಿತ್ತಿಲು ದಂಪತಿಗಳು ಉಪಸ್ಥಿತರಿದ್ದರು.












