|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಸೇವಾ ಮಾರ್ಗದ ಸದ್ಬಳಕೆಯಿಂದ ಗೋಸೇವೆ – ರಾಜೇಶ್ವರೀ ಲಕ್ಷ್ಮೀನಾರಾಯಣ ಭಟ್, ಪಾರ್ಪಿಕಲ್ಲು

​” ಸ್ವತಃ ಗೋಸೇವೆ ಮಾಡುವ ಜೊತೆಗೆ, ಸಮಾಜದ ಜನರನ್ನು ಗೋಸೇವೆಯತ್ತ ಪ್ರೇರೇಪಿಸುವುದೇ ನಿಜವಾದ ಸಾರ್ಥಕತೆ. ಸೇವಾ ಮಾರ್ಗದ ಸದ್ಬಳಕೆಯ ಮೂಲಕ ಗೋಸೇವೆ ಮಾಡಿದ ನೆಮ್ಮದಿ ನಮ್ಮಲ್ಲಿದೆ ” ಎಂದು ನುಡಿದವರು ರಾಜೇಶ್ವರಿ ಕಂಜರ್ಪಣೆ.
ಉಪ್ಪಿನಂಗಡಿ ಮಂಡಲ, ಉಜಿರೆ ವಲಯದ ಪಾರ್ಪಿಕಲ್ಲು ‘ಮಹತಿ’ ನಿವಾಸಿಯಾದ ಯಂ. ಲಕ್ಷ್ಮೀನಾರಾಯಣ ಭಟ್ ಬೆಜಪ್ಪೆ ಅವರ ಪತ್ನಿಯಾಗಿರುವ ರಾಜೇಶ್ವರಿ, ಕಳೆದ ಎರಡು ದಶಕಗಳಿಂದ ಶ್ರೀರಾಮಚಂದ್ರಾಪುರ ಮಠದ ಸೇವೆಗಳಲ್ಲಿ ನಿರತರಾಗಿದ್ದಾರೆ.

​ಕಂಜರ್ಪಣೆಯ ಗಣಪಯ್ಯ ಮತ್ತು ಲಕ್ಷ್ಮಿ ದಂಪತಿಗಳ ಪುತ್ರಿಯಾಗಿ ಜನಿಸಿದ ರಾಜೇಶ್ವರಿ ಅವರಿಗೆ ಬಾಲ್ಯದಿಂದಲೇ ಹಸುಗಳ ಒಡನಾಟವಿತ್ತು. ತಮ್ಮ ಮನೆಯಲ್ಲಿ ಈಗಲೂ ಹಸುಗಳನ್ನು ಅತ್ಯಂತ ಪ್ರೀತಿಯಿಂದ ಪೋಷಿಸುತ್ತಿರುವ ಇವರು, ಶ್ರೀಮಠದ ಸಂಪರ್ಕಕ್ಕೆ ಬಂದ ಮೇಲೆ ತಮ್ಮ ಕಾಯಕವನ್ನು ಮತ್ತಷ್ಟು ವಿಸ್ತರಿಸಿಕೊಂಡಿದ್ದಾರೆ. ಪತಿ ಲಕ್ಷ್ಮೀನಾರಾಯಣ ಭಟ್ ಬೆಜಪ್ಪೆ ಅವರು ನಿಡ್ಲೆ ಘಟಕದ ಗುರಿಕಾರರಾಗಿ ಸೇವೆ ಸಲ್ಲಿಸುತ್ತಿದ್ದು, ಸಮಾಜಮುಖಿ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ರಾಜೇಶ್ವರಿ ಅವರು ಓದು, ಹಾಡುಗಾರಿಕೆ ಹಾಗೂ ನಿಟ್ಟಿಂಗ್ ಕಲೆಯಂತಹ ವಿಶಿಷ್ಟ ಹವ್ಯಾಸಗಳನ್ನು ಮೈಗೂಡಿಸಿಕೊಂಡಿರುವ ಗೃಹಿಣಿ.

​ಲಕ್ಷ್ಮೀನಾರಾಯಣ ಭಟ್ ದಂಪತಿಗಳು ಸಮಾಜದ ಬಂಧುಗಳಿಗೆ ನೆರವಾಗಲು ‘ಸೇತುಶ್ರೀ’ ಹಾಗೂ ‘ಹವ್ಯಕ ಅನುಬಂಧ’ ಎಂಬ ೧೫ ವಾಟ್ಸಾಪ್ ಗ್ರೂಪ್‌ಗಳನ್ನು ನಡೆಸುತ್ತಿದ್ದಾರೆ. ವಸ್ತು ವಿಕ್ರಯ ಮತ್ತು ವಿವಾಹ ಅಪೇಕ್ಷಿಗಳಿಗೆ ನೆರವಾಗುವ ಈ ಬಳಗದಿಂದ ಸಾವಿರಾರು ಮಂದಿ ಪ್ರಯೋಜನ ಪಡೆಯುತ್ತಿದ್ದಾರೆ. ಈ ಸೇವೆಯ ಜೊತೆಗೆ, ಈ ಗ್ರೂಪ್‌ಗಳಿಂದ ಪ್ರಯೋಜನ ಪಡೆದವರೆಲ್ಲರೂ ಸ್ವಯಂಪ್ರೇರಿತರಾಗಿ ಗೋಮಾತೆಗೆ ಒಂದಿಷ್ಟು ಕಾಣಿಕೆ ನೀಡುವ ವಿನೂತನ ಯೋಜನೆಯನ್ನು ಈ ದಂಪತಿಗಳು ಹಮ್ಮಿಕೊಂಡಿದ್ದಾರೆ.
” ನಮ್ಮ ಬಳಗದಿಂದ ಪ್ರಯೋಜನ ಪಡೆದವರು ನಮ್ಮ ಶ್ರೀಮಠದ ಗೋಶಾಲೆಗಷ್ಟೇ ಅಲ್ಲದೆ ಯಾವುದೇ ಗೋಶಾಲೆಗಳಿಗೂ ಸಹಾಯ ಮಾಡಬಹುದು ಎಂಬುದು ನಮ್ಮ ಆಶಯ. ಆದರೆ ಮೊದಲ ಆದ್ಯತೆ ಶ್ರೀಮಠದ ಗೋಶಾಲೆಗಳಿಗೆ ” ಎನ್ನುತ್ತಾರೆ ರಾಜೇಶ್ವರಿ.

​ಶ್ರೀಮಠದ ‘ಮಾತೃತ್ವಮ್’ ಯೋಜನೆಯ ಮೂಲಕ ‘ಮಾಸದ ಮಾತೆ’ಯಾದ ರಾಜೇಶ್ವರಿ ಅವರು ಈಗಾಗಲೇ ಎರಡು ಗೋವುಗಳ ನಿರ್ವಹಣೆಯ ಗುರಿಯನ್ನು ತಲುಪಿದ್ದಾರೆ.
” ಜೀವನದಲ್ಲಿ ನಮಗೆ ಎದುರಾಗಬಹುದಾಗಿದ್ದ ಎರಡು ದೊಡ್ಡ ಅವಘಡಗಳಿಂದ ನಾವು ಸುರಕ್ಷಿತವಾಗಿ ಪಾರಾಗಿದ್ದು ಶ್ರೀಗುರುಗಳ ಅನುಗ್ರಹ ಮತ್ತು ಗೋಮಾತೆಯ ಆಶೀರ್ವಾದದ ಬಲ” ಎಂದು ಅವರು ಸ್ಮರಿಸಿಕೊಳ್ಳುತ್ತಾರೆ.

​”ಸಮಾಜದ ಪ್ರತಿಯೊಬ್ಬರೂ ಗೋಮಾತೆಯ ಮಹತ್ವವನ್ನು ಅರಿತು ಗೋಸೇವೆಗೆ ಕೈಜೋಡಿಸಿದರೆ ನಮ್ಮ ಭಾರತೀಯ ತಳಿಯ ಹಸುಗಳು ವೃದ್ಧಿಯಾಗುತ್ತವೆ. ದೇಸೀ ಗೋವಿನ ಉತ್ಪನ್ನಗಳು ಎಲ್ಲರ ಆರೋಗ್ಯಕ್ಕೂ ಉತ್ತಮ” ಎನ್ನುವುದು ರಾಜೇಶ್ವರಿ ಅವರ ನುಡಿ. ಶ್ರೀಗುರುಸೇವೆಯೊಂದಿಗೆ ಕೃಷಿ ಕಾರ್ಯಗಳನ್ನು ನಡೆಸುತ್ತಾ, ಸಾಮಾಜಿಕ ಸೇವೆಗಳಲ್ಲಿ ಭಾಗವಹಿಸುವ ಮೂಲಕ ಕಾಯಕವನ್ನೇ ಧನ್ಯತೆಯಾಗಿಸಿಕೊಂಡಿರುವ ರಾಜೇಶ್ವರಿ, ಲಕ್ಷ್ಮೀನಾರಾಯಣ ಭಟ್ ಅವರ ಜೀವನ ಪಯಣವು ಎಲ್ಲರಿಗೂ ಪ್ರೇರಣಾದಾಯಕವಾಗಿದೆ.

ಪ್ರಸನ್ನಾ ವಿ. ಚೆಕ್ಕೆಮನೆ