|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಆಹಾರ ಕುರಿತಾದ ತಪ್ಪನ್ನು ಸರಿಪಡಿಸಿಕೊಳ್ಳಬೇಕು | ‘ಅನ್ನಂ ಬ್ರಹ್ಮ’ ಪ್ರವಚನ – 36

ಅಶೋಕೆ: ಮಾನವರ ಮೂಲವನ್ನು ಕುರಿತು ಭಾರತೀಯರ ದೃಷ್ಟಿಗೂ ಮತ್ತು ಆಧುನಿಕರ ದೃಷ್ಟಿಗೂ ತುಂಬಾ ವ್ಯತ್ಯಾಸಗಳಿವೆ. ಅಧುನಿಕರ ಪ್ರಕಾರ ಸೃಷ್ಟಿಯ ಆದಿಯಲ್ಲಿ ಮಾನವ ಸಂಸ್ಕೃತಿ ಹೀನನಾಗಿದ್ದು, ಕಾಡು ಮನುಷ್ಯನಂತಿದ್ದ ಎಂಬ ಕಲ್ಪನೆಗಳನ್ನು ನೀಡಲಾಗಿದೆ ಹಾಗೂ ಮಂಗನಿಂದ ಮಾನವ ಎಂಬ ಸಿದ್ಧಾಂತಗಳೂ ಇವೆ. ಇವು ನಮ್ಮ ಪೂರ್ವಜರ ಕುರಿತಾಗಿ ಜುಗುಪ್ಸೆ ಹುಟ್ಟಿಸುವಂತಿದೆ ಎಂದು ಶ್ರೀಸಂಸ್ಥಾನದವರು ತಿಳಿಸಿದರು.

ಶ್ರಾವಣ ಕೃಷ್ಣ ಪಂಚಮಿಯಂದು (02-09-2026) ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಸಂಸ್ಥಾನದವರು, ಭಾರತೀಯ ಪರಂಪರೆ ಹೇಳುವಂತೆ ಕೃತಯುಗದಲ್ಲಿ ದೇವರು ಜಗತ್ತನ್ನು ತುಂಬಾ ಸುಂದರವಾಗಿ ಸೃಷ್ಟಿಸಿದ್ದ. ಅದು ದೇವರು ಸೃಷ್ಟಿಸಿದಂತೆಯೇ ಇದ್ದ ಕಾಲ. ಕೃತಯುಗ ಒಳಿತಿನ ಒಳಿತಾದರೆ ಈಗಿನ ಕಲಿಯುಗ ಕೆಡುಕಿನ ಕೆಡುಕು ಎನ್ನಬಹುದು. ಅಂದು ಜನರು ಪರಿಪೂರ್ಣ ಆರೋಗ್ಯವನ್ನು ಹೊಂದಿದ್ದರು. ಕೃತಯುಗದ ವರ್ಣನೆಯನ್ನು ಕೇಳುವಾಗ ಅದು ಅತಿಶಯೋಕ್ತಿ ಎನಿಸಬಹುದು. ಏಕೆಂದರೆ ನಾವು ಅಂತಹ ವಾತಾವರಣವನ್ನು ನೋಡಿಲ್ಲ. ಹಾಗಾಗಿ ಅದು ಸುಳ್ಳು ಎನಿಸಬಹುದು ಎಂದರು.

ಚರಕ ಸಂಹಿತೆಯಲ್ಲಿ ಸೃಷ್ಟಿಯ ಆದಿಯಲ್ಲಿ ಮನುಷ್ಯರು ದೇವರಿಗೆ ಸರಿಸಮಾನವಾದ ಓಜಸ್ಸನ್ನು ಹೊಂದಿದ್ದರು. ಗಟ್ಟಿಮುಟ್ಟಾದ ಶರೀರವನ್ನು, ಪ್ರಸನ್ನವಾದ ಇಂದ್ರಿಯಗಳನ್ನು, ಪರಿಪೂರ್ಣ ಆರೋಗ್ಯವನ್ನು ಹೊಂದಿದ್ದರು ಎಂದಿದೆ. ಆಗ ರೋಗವೂ ಇರಲಿಲ್ಲ, ವೈದ್ಯರಿರಲಿಲ್ಲ, ವೈದ್ಯಶಾಸ್ತ್ರವೂ ಇರಲಿಲ್ಲ, ಔಷಧದ ಅಂಗಡಿಗಳೂ ಇರಲಿಲ್ಲ ಎಂದು ಶ್ರೀಸಂಸ್ಥಾನದವರು ವಿವರಿಸಿದರು.

ಮೊದಲ ತಪ್ಪು ಹೆಜ್ಜೆ: ಕೃತಯುಗದಲ್ಲಿ ಅಗ್ನಿ ಹಾಗೂ ಆಹಾರದ ವಿಚಾರದಲ್ಲಿ ಮೊದಲ ತಪ್ಪು ಹೆಜ್ಜೆ ಆರಂಭವಾಯಿತು. ಅಗತ್ಯಕ್ಕಿಂತ ಹೆಚ್ಚು ಆಹಾರವನ್ನು ಸ್ವೀಕರಿಸಲು ಕೆಲವರು ಆರಂಭಿಸಿದರು. ಪರಿಣಾಮವಾಗಿ ಮಾನವರ ದೇಹ ಸ್ಥೂಲವಾಯಿತು, ಆಲಸ್ಯ, ಕೂಡಿದುವ ಬುದ್ಧಿ, ಲೋಭ, ದ್ರೋಹ, ಸುಳ್ಳು, ಕಾಮ ಕ್ರೋಧಾದಿಗಳು, ಹೀಗೆ ಒಂದರಿಂದ ಒಂದು ದುರ್ಗುಣಗಳು ಬೆಳೆಯುತ್ತಾ ಸಾಗಿತು. ಮನುಷ್ಯನ ವ್ಯಕ್ತಿತ್ವ ಪತನದ ದಾರಿಯನ್ನು ಹಿಡಿಯಿತು. ಅಗ್ನಿಯ ವ್ಯತ್ಯಾಸದಿಂದ ವಾತದಲ್ಲಿ ಬದಲಾವಣೆ, ಪರಿಣಾಮವಾಗಿ ರೋಗಗಳು ಮನುಷ್ಯನನ್ನು ಆಕ್ರಮಿಸಿದವು ಎಂದು ಚರಕ ಸಂಹಿತೆಯ ಪ್ರಕಾರ ಮಾನವ ಜನಾಂಗದ ಮೊದಲ ತಪ್ಪು ಹೆಜ್ಜೆಯನ್ನು ತಿಳಿಸಿದರು.

ಹುಟ್ಟಿದ ಪ್ರತಿಜೀವಿಯೂ ಆಹಾರದ ಒಳಹೊರಗನ್ನು ತಿಳಿದುಕೊಳ್ಳಲೇ ಬೇಕು. ಆಹಾರದ ವಿಚಾರವನ್ನು ತಿಳಿದುಕೊಳ್ಳದೇ ಇದ್ದರೆ ಮನುಷ್ಯನಾಗಿ ಜೀವಿಸುವ ಹಕ್ಕನ್ನೇ ಕಳೆದುಕೊಂಡಂತೆ. ಹಾಗಾಗಿ ಆಹಾರದ ವಿಚಾರವಾಗಿ ನಾವು ವಿಮರ್ಶೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಎಲ್ಲಿ ತಪ್ಪಿದ್ದೇವೋ ಅಲ್ಲೇ ಸರಿಪಡಿಸಿಕೊಳ್ಳಬೇಕು ಎಂಬಂತೆ, ಅಂದಿನ ನಮ್ಮ ಪೂರ್ವಜರ ತಪ್ಪನ್ನು ಇಂದು ನಾವು ಸರಿಪಡಿಸಿಕೊಳ್ಳಬೇಕು. ಅಂದು ನಮ್ಮ ಪೂರ್ವಜರ ಅಧಃಪತನ ಊಟದ ವಿಷಯದಿಂದಲೇ ಆರಂಭವಾಯಿತು. ಇಂದು ನಾವು ಅದನ್ನು ಸರಿಪಡಿಸಿಕೊಳ್ಳುವ ಮೂಲಕ ಅಗ್ನಿಯನ್ನು ಸರಿಪಡಿಸಿಕೊಳ್ಳಬೇಕು. ನಮ್ಮನ್ನು ಸರಿಪಡಿಸಿಕೊಂಡರೆ, ಕಲಿಯುಗದಲ್ಲೂ ನಮ್ಮಲ್ಲಿ ನಾವು ಕೃತಯುಗವನ್ನು ತಂದುಕೊಳ್ಳಬಹುದು ಎಂದು ಪರಮಪೂಜ್ಯರು ದಿಗ್ದರ್ಶಿಸಿದರು.

**

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಂಜುನಾಥ ಜನ್ನು, ಮಹೇಶ ಶೆಟ್ಟಿ, ಹನುಮಂತ ಗೌಡ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಸಂಸ್ಥಾನದವರ ಆಶೀರ್ವಾದ ಪದೆದರು.

ಉಪ್ಪಿನಂಗಡಿ ಹವ್ಯಕ ಮಂಡಲದ ಮಾಣಿ, ಕಬಕ , ಉಜಿರೆ, ಉಪ್ಪಿನಂಗಡಿ, ಉರುವಾಲು, ವೇಣೂರು ಹವ್ಯಕ ವಲಯಗಳ ಪರವಾಗಿ ವೈ.ಗಣರಾಜ ಕೊಣಮ್ಮೆ ಕುಟುಂಬದವರು ಗುರುಭಿಕ್ಷಾ ಸೇವೆಯನ್ನು ಸಮರ್ಪಿಸಿದರು.
ನಾರಾಯಣ ಭಟ್ ಹಾರೆಕೆರೆ, ಅರವಿಂದ ದರ್ಬೆ, ಗಣಪತಿ ಜಟ್ಟಿಮನೆ, ಮಹೇಶ ಕುದಪುಲಾ, ಪರಮೇಶ್ವ ಭಟ್ ವೇಣೂರು, ಶಿವಪ್ರಸಾದ ವೇಣೂರು ಹಾಗೂ ದಿನಪ್ರಧಾನರಾಗಿ ವೆಂಕಟಗಿರಿ ಎಮ್. ಅರ್. ದಂಪತಿಗಳು ಉಪಸ್ಥಿತರಿದ್ದರು.