|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಪ್ಲಾಸ್ಟಿಕ್ ಬಗ್ಗೆ ಎಚ್ಚೆತ್ತುಕೊಳ್ಳಿ – ಪ್ರವಾಹದ ವಿರುದ್ಧ ಈಜುವ ಧೈರ್ಯ ಮಾಡಿ | ‘ಅನ್ನಂ ಬ್ರಹ್ಮ’ ಪ್ರವಚನ – 48

ಅಶೋಕೆ: ಪ್ರವಾಹಕ್ಕೆ ವಿರುದ್ಧವಾಗಿ ಈಜುವ ಧೈರ್ಯ ನಮಗಿರಬೇಕು. ಪ್ಲಾಸ್ಟಿಕ್ ಹಾಳು ಎಂದು ಆಧುನಿಕ ವಿಜ್ಞಾನ ಹೇಳುತ್ತಿದೆಯಾದರೂ, ಪ್ಲಾಸ್ಟಿಕ್ ಇಂದು ಎಲ್ಲೆಡೆ ನಮ್ಮನ್ನು ಆವರಿಸಿದೆ. ಬದಲಾವಣೆಯು ಬೇರೆಯವರ ಮನೆಯಿಂದಲ್ಲ, ನಮ್ಮ ಮನೆಯಿಂದ ಮತ್ತು ನಮ್ಮಿಂದಲೇ ಆರಂಭವಾಗಬೇಕು ಎಂದು ಪರಮಪೂಜ್ಯ ಶ್ರೀಸಂಸ್ಥಾನದವರು ತಿಳಿಸಿದರು.

‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಭಾದ್ರಪದ ಶುದ್ಧ ಚೌತಿಯಂದು (14-09-2026) ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಸಂಸ್ಥಾನದವರು, ಉತ್ತಮವಾದುದನ್ನು ಕೆಡಿಸಿ, ಹಾನಿಕಾರಕವಾದುದನ್ನು ಸಮಾಜಕ್ಕೆ ಕೊಡುವುದೇ ಕಲಿಯುಗದ ಲಕ್ಷಣ. ಪ್ಲಾಸ್ಟಿಕ್, ಕೃತಕ ವಸ್ತುಗಳು ಅತ್ಯಂತ ಹಾನಿಕಾರಕ ಎಂದು ವಿಜ್ಞಾನವೇ ಒಪ್ಪಿಕೊಂಡಿದ್ದರೂ ಅವುಗಳ ಉತ್ಪಾದನೆ ಮತ್ತು ಬಳಕೆ ನಿಲ್ಲುತ್ತಿಲ್ಲ. ಕುಡಿಯುವ ನೀರನ್ನು ಶುದ್ಧೀಕರಿಸಲು RO ಪ್ಯೂರಿಫೈಯರ್’ಗಳು ಇವೆಯಾದರೂ ಅದು ಪ್ಲಾಸ್ಟಿಕ್‌ನಿಂದಲೇ ಅವೃತವಾಗಿದೆ ಎಂದರು.

ಆಯುರ್ವೇದದಲ್ಲಿ ನೀರನ್ನು ಶುದ್ಧೀಕರಿಸುವ ಹಲವಾರು ವಿಧಾನಗಳನ್ನು ಸೂಚಿಸಿದ್ದು, ನಿರ್ವಾಪಣ, ಕ್ವಥನ, ಪ್ರಸಾದನ ಮುಂತಾದ ಕ್ರಮಗಳನ್ನು ಹೇಳಿದ್ದು, ಕತಕ, ಗೋಮೇಧಿಕ, ಶೈವಾಲಮೂಲ, ಸ್ಪಟಿಕ ಮಣಿಗಳನ್ನು ಬಳಸಿ ನೀರನ್ನು ಬಳಕೆಗೆ ಯೋಗ್ಯವಾಗಿಸುವ ವಿಧಾನಗಳನ್ನೂ ವಿವರಿಸಿದ್ದು, ಹೂವು ಮತ್ತು ನೈಸರ್ಗಿಕ ಸುಗಂಧ ಪದಾರ್ಥಗಳನ್ನು ಬಳಸಿ ನೀರಿನ ಮೌಲ್ಯ ವೃದ್ಧಿಸುವ ವಿಧಾನಗಳನ್ನು ವಿವರಿಸಿದರು.

ಪ್ಲಾಸ್ಟಿಕ್ ಹಾನಿಕಾರಕ ಎಂದು ಇಡೀ ಪ್ರಪಂಚವೇ ಹೇಳುತ್ತಿದೆ. ಆದರೆ ಯಾರೂ ಅದನ್ನು ನಿಷೇಧ ಮಾಡುತ್ತಿಲ್ಲ. ಅದು ನಮ್ಮನ್ನು ಎಲ್ಲಾ ಕಡೆಯಿಂದ ಆವರಿಸಿಕೊಂಡಿದೆ. ನಾವು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ, ಕೊನೇ ಪಕ್ಷ ನಮ್ಮ ಜೀವನವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎಂದು ಕರೆನೀಡಿದರು.

ಓಂಕಾರ ಪೀಠದಲ್ಲಿ ಓಂಕಾರಮೂರ್ತಿ
ಪ್ರಾತಿವಾರ್ಷಿಕವಾಗಿ ಗಣೇಶಚತುರ್ಥಿಯಂದು ಶ್ರೀಮಠದ ಪಾರಂಪರಿಕ ಓಂಕಾರಪೀಠದಲ್ಲಿ ಗಣಪತಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಿಸುವುದು ಸಂಪ್ರದಾಯ. ಅದರಂತೆ, ಪರಮಪೂಜ್ಯ ಶ್ರೀಸಂಸ್ಥಾನದವರು ಓಂಕಾರಪೀಠಸ್ಥನಾದ ಮೃಣ್ಮಯ ಗಣಪತಿಯನ್ನು ಪೂಜಿಸಿದರು. ರಾಸಾಯನಿಕಗಳಿಲ್ಲದ, ವಿಷಕಾರಿ ಬಣ್ಣಗಳಿಲ್ಲದ ಶುದ್ಧ ಮಣ್ಣಿನ ಮೂರ್ತಿಯನ್ನು ಪೂಜಿಸುವುದು ಶ್ರೀಮಠದಲ್ಲಿ ಕಂಡುಬರುವ ವಿಶೇಷ.