|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಸ್ಟೀಲ್, ಪ್ಲಾಸ್ಟಿಕ್ ಬಿಟ್ಟು ಪಾರಂಪರಿಕ ಪಾತ್ರೆಗಳನ್ನು ಬಳಸಿ | ‘ಅನ್ನಂ ಬ್ರಹ್ಮ’ ಪ್ರವಚನ – 47

ಅಶೋಕೆ: ಚಿನ್ನದ ಮಾಯಾಜಿಂಕೆಯಂತಿರುವ ಹೊಳೆಯುವ ಪಾತ್ರೆಗಳ ಹಿಂದೆ ನಾವಿಂದು ಹೋಗುತ್ತಿದ್ದೇವೆ. ಪಾತ್ರೆಗಳು ಕೇವಲ ನೀರನ್ನು ಶೇಖರಿಸುವ ಸಾಧನವಲ್ಲ. ಪಾತ್ರೆಗಳ ಆಧಾರದ ಮೇಲೆ ಅವುಗಳ ಗುಣಾವಗುಣಗಳು ನೀರಿನಲ್ಲೂ ಸೇರಿಕೊಳ್ಳುತ್ತದೆ ಎಂದು ಶ್ರೀಸಂಸ್ಥಾನದವರು ತಿಳಿಸಿದರು.

‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಭಾದ್ರಪದ ಶುದ್ಧ ಪಾಡ್ಯದಂದು (13-09-2026) ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ನೀರಿನ ಪಾತ್ರೆಗಳ ಕುರಿತಾಗಿ ಪ್ರವಚನ ಅನುಗ್ರಹಿಸಿದ ಶ್ರೀಸಂಸ್ಥಾನದವರು, ಪಾರಂಪರಿಕ ಪಾತ್ರೆಗಳು ಕೇವಲ ಪದಾರ್ಥಗಳನ್ನು ಹಿಡಿದಿಡುವುದಿಲ್ಲ‌. ಅದು ಗುಣವೃದ್ಧಿಗೂ ಕಾರಣವಾಗುತ್ತದೆ. ಚಿನ್ನ ತನ್ನಲ್ಲಿರುವ ಪದಾರ್ಥಗಳ ಗುಣವನ್ನು ವೃದ್ಧಿಸುವುದರಿಂದಲೇ ಚಿನ್ನಕ್ಕೆ ಪಾರಂಪರಿಕವಾಗಿ ಹೆಚ್ಚಿನ ಬೆಲೆಯಿದೆ. ಚಿನ್ನ , ಬೆಳ್ಳಿ, ತಾಮ್ರ, ಕಂಚು, ಹಿತ್ತಾಳೆ ಪಾತ್ರೆಗಳು ನೀರಿನ ಗುಣವನ್ನು ವೃದ್ಧಿಸಿದರೆ, ಗಾಜು ಗುಣವೃದ್ಧಿ ಮಾಡದೇ ಇದ್ದರೂ ಅದು ಗುಣಹಾನಿಯನ್ನು ಮಾಡುವುದಿಲ್ಲ. ಆದರೆ ಸ್ಟೇನ್ಲೆಸ್ ಸ್ಟೀಲ್, ಅಲ್ಯೂಮಿನಿಯಂ ಹಾಗೂ ಪ್ಲಾಸ್ಟಿಕ್ ಪಾತ್ರೆಗಳು ಸರ್ವದಾ ಬಳಕೆಗೆ ಅಯೋಗ್ಯ ಎಂದು ಹೇಳಿದರು‌.

ನಮ್ಮ ಪ್ರಾಚೀನ ಮಹರ್ಷಿಗಳ ಕಾಲದಲ್ಲಿ ಪ್ಲಾಸ್ಟಿಕ್ ಹಾಗೂ ಸ್ಟೇನ್ಲೆಸ್ ಸ್ಟೀಲ್’ಗಳು ಇರಲಿಲ್ಲ. ಹಾಗಾಗಿ ಆ ಬಗ್ಗೆ ವಿವರಗಳು ಪ್ರಾಚೀನ ಗ್ರಂಥಗಳಲ್ಲಿ ಸಿಗುವುದಿಲ್ಲ. ಆದರೆ ನಾಡಿ ವಿಜ್ಞಾನದಲ್ಲಿ ಅಪರಿಮಿತ ಸಿದ್ಧಿಯನ್ನು ಹೊಂದಿದ್ದ ಶ್ರೀರಂಗ ಮಹಾಗುರುಗಳು ಬೇರೆಬೇರೆ ಪಾತ್ರೆಗಳಲ್ಲಿ ಹಾಲನ್ನು ಹಾಕಿದಾಗ ಅದರಿಂದಾಗುವ ಪರಿಣಾಮಗಳ ಕುರಿತಾಗಿ ಪ್ರಯೋಗಾತ್ಮಕವಾದ ಸಂಶೋಧನೆಯನ್ನು ನಡೆಸಿದ್ದು, ಸ್ಟೇನ್ಲೆಸ್ ಸ್ಟೀಲ್ ಪಾತ್ರೆಗಳನ್ನು ಬಳಸಿದಾಗ ಅದು ದೇಹದ ವಾತ – ಪಿತ್ತ – ಕಫದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದನ್ನು ದಾಖಲಿಸಿದ್ದಾರೆ. ಆಧುನಿಕ ವಿಜ್ಞಾನ ಆಹಾರ ದರ್ಜೆಯ ಸ್ಟೇನ್ಲೆಸ್ ಸ್ಟೀಲ್ ಬಳಕೆಗೆ ಯೋಗ್ಯ ಎಂದು ಹೇಳುತ್ತಿದೆಯಾದರೂ, ಬದಲಾಗುವ ಇಂದಿನ ವಿಜ್ಞಾನ ಕೆಲವು ವರ್ಷಗಳ ನಂತರ ಇದು ಅಯೋಗ್ಯ ಎಂದು ಹೇಳಬಹುದು. ಆದರೆ ಅಲ್ಲಿಯ ವರೆಗೆ ಬಹು ಮೌಲ್ಯದ ನಮ್ಮ ದೇಹವನ್ನು ನಾವು ಹಾಳು ಮಾಡಿಕೊಳ್ಳಬೇಕಾಗಿಲ್ಲ ಎಂದು ಅಭಿಪ್ರಾಯಪಟ್ಟರು.

ಶ್ರೀಕರಾರ್ಚಿತ ಪೂಜೆ ಹಾಗೂ ಮಠದ ಪೀಠಾಧಿಪತಿಗಳ ಎಲ್ಲಾ ರೀತಿಯ ಬಳಕೆಯಲ್ಲಿಯೂ ಸ್ಟೀಲ್, ಪ್ಲಾಸ್ಟಿಕ್ ಮುಂತಾದವನ್ನು ಹಲವಾರು ವರ್ಷಗಳಿಂದ ದೂರವಿಟ್ಟಿದ್ದು, ಸಮಾಜವೂ ಕೂಡ ತಮ್ಮ ಆರೋಗ್ಯಕ್ಕಾಗಿ ಇದನ್ನು ಅನುಸರಿಸಬೇಕು. ದೊಡ್ಡ ಶ್ರೀಮಂತರು ಇಂದು ಬೇರೆಬೇರೆ ವಿಚಾರಗಳಿಗೆ ಹಣವನ್ನು ಪೋಲು ಮಾಡುತ್ತಾರೆ. ಆದರೆ ಅನಾಹುತಕಾರಿಯಾದ ಪ್ಲಾಸ್ಟಿಕ್ ಲೋಟದಲ್ಲಿ ನೀರನ್ನು ಕುಡಿಯುತ್ತಾರೆ. ಸಾಮಾನ್ಯ ಜನರೂ ಕೂಡಾ ತಾಮ್ರ – ಕಂಚು – ಹಿತ್ತಾಳೆ – ಗಾಜಿನ ಪಾತ್ರೆಗಳನ್ನು ಬಳಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಹಂತಹಂತವಾಗಿ ನಾವು ಬಳಸುವ ಪಾತ್ರೆಗಳು ಧನಾತ್ಮಕವಾಗಿ ಬದಲಾಗಬೇಕು. ಈ ಪ್ರವಚನ ಮಾಲಿಕೆ ನಾಡಿನ ಕುರಿತಾದ ನಮ್ಮ ಸಾಮಾಜಿಕ ಕಳಕಳಿ ಎಂದು ಹೇಳಿದರು.

‘ಜೀವ ಹಾಗೂ ಜೀವನಕ್ಕಿಂತ ಬೆಲೆ ದೊಡ್ಡದ್ದಲ್ಲ. ದುಂದು ವೆಚ್ಚವನ್ನು ಕಡಿತಗೊಳಿಸಿ ಸ್ಟೀಲ್, ಅಲ್ಯೂಮಿನಿಯಂ, ಪ್ಲಾಸ್ಟಿಕ್ ಪಾತ್ರೆಗಳನ್ನು ದೂರ ಮಾಡಿ, ಪಾರಂಪರಿಕ ಪಾತ್ರೆಗಳ ಬಳಕೆಯನ್ನು ರೂಢಿಸಿಕೊಳ್ಳಿ’ ಎಂದು ಸಮಸ್ತರನ್ನೂ ಮಾರ್ಗದರ್ಶಿಸಿದರು.

***

ಶಿರಸಿಯ ಶಾಸಕ ಭೀಮಣ್ಣ ಟಿ. ನಾಯ್ಕ್, ಯಲ್ಲಾಪುರದ ಶಾಸಕ ಶಿವರಾಮ ಹೆಬ್ಬಾರ್, ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶ್ರೀಸಂಸ್ಥಾನದವರು ಆಶೀರ್ವಾದ ಪಡೆದರು. ಬೆಂಗಳೂರು ಉತ್ತರ ಮಂಡಲದ ಪರವಾಗಿ ಕೆ. ಎಮ್. ದಿವಾಕರ್ ಕುಟುಂಬದವರು ಗುರುಭಿಕ್ಷಾಸೇವೆ ಸಮರ್ಪಿಸಿದರು. ಗಣಪತಿ ಪುದುಕೊಳಿ ದಂಪತಿಗಳು ದಿನಪ್ರಧಾನರಾಗಿ ಉಪಸ್ಥಿತರಿದ್ದರು.