” ಬದುಕಿನಲ್ಲಿ ನಾವು ಭಾವಿಸಿಕೊಂಡಿರುವ ಕಾರ್ಯಗಳೆಲ್ಲ ಕೈಗೂಡಲು ಗುರುಕೃಪೆಯೇ ಮೂಲ ಕಾರಣ. ಎಷ್ಟೇ ಭಾರದ ಕೆಲಸವಾದರೂ ಗುರುಕರುಣೆಯೊಂದಿದ್ದರೆ ಸಾಕು, ಅದು ಹೂವಿನಷ್ಟು ಹಗುರವಾಗಿ ಯಾವುದೇ ವಿಘ್ನವಿಲ್ಲದೆ ಕೈಗೂಡುತ್ತದೆ” ಎಂದು ಅಚಲ ನಂಬಿಕೆಯಿಂದ ನುಡಿಯುವವರು ಹೊನ್ನಾವರ ಮಂಡಲದ ಕರ್ಕಿ ವಲಯದ ಹೆಗಡೆ ಕುಟುಂಬದ ನಾರಾಯಣ ಹೆಗಡೆ ಅವರ ಪತ್ನಿಯಾಗಿರುವ ಸುಮಂಗಲಾ ಯನ್. ಹೆಗಡೆ.
ಶ್ರೀರಾಮಚಂದ್ರಾಪುರ ಮಠದ ವಿವಿಧ ಸೇವಾ ಕಾರ್ಯಗಳಲ್ಲಿ ಕಳೆದ ಎರಡು ದಶಕಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು ಶ್ರೀಮಠದ ಸೇವೆಯಲ್ಲಿ ನಿಷ್ಠೆಯಿಂದ ಶ್ರದ್ಧೆಯಿಂದ ಭಾಗವಹಿಸುತ್ತಿರುತ್ತಾರೆ.
ಯಲ್ಲಾಪುರದ ನಾರಾಯಣ ಭಟ್ ಮತ್ತು ಕಮಲ ಯನ್. ಭಟ್ ದಂಪತಿಗಳ ಪುತ್ರಿಯಾಗಿ ಜನಿಸಿದ ಸುಮಂಗಲಾ ಅವರಿಗೆ ಬಾಲ್ಯದಿಂದಲೇ ಸಂಗೀತ ಚಿತ್ರಕಲೆಗಳ ಮೇಲೆ ಆಸಕ್ತಿ ಇತ್ತು. ಇವರ ಮೂಲ ಮನೆಯಲ್ಲಿ ದೇಶಿ ಹಸುಗಳನ್ನು ಸಾಕುತ್ತಿದ್ದ ಕಾರಣ ಗೋಮಾತೆಯ ಮೇಲಿನ ಪ್ರೀತಿ ಹಾಗೂ ಒಡನಾಟ ಇವರಿಗೆ ಒದಗಿ ಬಂತು.
‘ನವರತ್ನ ಹಪ್ಪಳ’ ಎಂಬ ಉದ್ಯಮ ಸಂಸ್ಥೆಯನ್ನು ನಡೆಸುತ್ತಿರುವ ಕಾರಣ ಇವರು ಪ್ರಸ್ತುತ ಮೂಲ ಮನೆಯಿಂದ ಹೊರಗಿರಬೇಕಾದರೂ, ಗೋಮಾತೆಯ ಮೇಲಿನ ಪ್ರೀತಿ ಕಿಂಚಿತ್ತೂ ಕಮ್ಮಿಯಾಗಿಲ್ಲ. ತಮ್ಮ ಮನೆಯ ಹತ್ತಿರಕ್ಕೆ ಬರುವ ಹಸುಗಳಿಗೆ ನಿತ್ಯವೂ ಹುಲ್ಲು ಹಾಗೂ ನೀರನ್ನು ನೀಡಿ, ಅವುಗಳ ಆರೈಕೆ ಮಾಡುವ ಸoಪ್ರದಾಯವನ್ನು ಇವರು ಮುಂದುವರಿಸಿಕೊಂಡು ಬಂದಿದ್ದಾರೆ.
ಆರಂಭದಲ್ಲಿ ಶ್ರೀಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದ ಸುಮಂಗಲಾ ಅವರು, ಪ್ರಸ್ತುತ ಕರ್ಕಿ ವಲಯದ ಮಾತೃ ಪ್ರಧಾನೆಯಾಗಿ ಹಾಗೂ ಮಾತೃತ್ವಮ್ ಹೊನ್ನಾವರ ನಗರ ಸಮಿತಿಯ ಕೋಶಾ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಮಾತೃತ್ವಮ್ ಸಮಿತಿಯ ಕೋಶಾ’ ದ ಜವಾಬ್ದಾರಿಯನ್ನು ವಹಿಸಿಕೊಂಡ ಮೇಲೆ ಗೋಮಾತೆಯ ಸೇವೆಯಲ್ಲಿ ಇನ್ನಷ್ಟು ತೊಡಗಿಕೊಳ್ಳಲು ಪ್ರೇರಣೆ ಮೂಡಿತು ಎನ್ನುತ್ತಾರೆ ಅವರು. ಇವರ ಈ ಗೋಸೇವಾ ಕಾರ್ಯಕ್ಕೆ ಅನೇಕ ಗೋಬಂಧುಗಳ ಸಹಕಾರವೂ ದೊರೆತಿದೆ.
“ಗುರು ಸೇವೆಯಿಂದ ಬದುಕಿನಲ್ಲಿ ನೆಮ್ಮದಿ ಮೂಡಿದೆ. ಅದರಲ್ಲೂ ವಿಶೇಷವಾಗಿ ನನ್ನ ಅವಳಿ ಮಕ್ಕಳಿಗೆ ಗುರುಗಳ ಕಾರುಣ್ಯ ದೊರೆತ ಕ್ಷಣವು ನಮ್ಮ ಬದುಕಿನಲ್ಲಿ ಎಂದೆಂದಿಗೂ ಮರೆಯಲಾರದ ದಿವ್ಯ ಅನುಭವ” ಎಂದು ಅವರು ಭಾವುಕರಾಗಿ ಆ ದಿನಗಳನ್ನು ಸ್ಮರಿಸಿಕೊಳ್ಳುತ್ತಾರೆ.
ಉದ್ಯಮ ಕ್ಷೇತ್ರದ ಒತ್ತಡಗಳ ನಡುವೆಯೂ ಶ್ರೀಮಠದ ಸೇವೆಗಾಗಿ ಸುಮಂಗಲಾ ಹೆಗಡೆ ಸಮಯವನ್ನು ಹೊಂದಿಸಿಕೊಳ್ಳುತ್ತಾರೆ. ಇವರು ‘ಗೋಸ್ವರ್ಗ’ಕ್ಕೆ ಹತ್ತಿರವಿರುವುದರಿಂದ, ಆಗಾಗ ಗೋಸ್ವರ್ಗಕ್ಕೆ ಭೇಟಿ ನೀಡಿ ಅಲ್ಲಿ ಸೇವಾ ಕಾರ್ಯಗಳಿಗೆ ಕೈಜೋಡಿಸುತ್ತಾರೆ.
ಇಬ್ಬರು ಮಕ್ಕಳಿಗೂ ತಾವು ಬಯಸಿದ ಉತ್ತಮ ಶಿಕ್ಷಣ ಹಾಗೂ ಉನ್ನತ ವಿದ್ಯಾಭ್ಯಾಸ ಲಭಿಸಿರುವುದು ಗುರುಕೃಪೆಯ ಫಲವೇ ಎಂದು ಅವರು ಶ್ರದ್ಧೆಯಿಂದ ನುಡಿಯುತ್ತಾರೆ.
“ಕಷ್ಟವೆಂದು ಭಾವಿಸಿಕೊಂಡ ಕೆಲಸಗಳೆಲ್ಲವೂ ಗುರುಚರಣಗಳನ್ನು ಸ್ಮರಿಸಿದರೆ ಹೂವೆತ್ತಿದಷ್ಟು ಸರಳವಾಗಿ ನೆರವೇರುತ್ತವೆ” ಎಂಬುದು ಇವರ ಅಚಲ ವಿಶ್ವಾಸ.
ಉದ್ಯೋಗ ಮತ್ತು ಸಾಮಾಜಿಕ ಸೇವೆಯ ಜೊತೆಗೆ ಸುಮಂಗಲಾ ಅವರಿಗೆ ಸಂಗೀತ, ಭಜನೆಗಳಲ್ಲಿ ತುಂಬಾ ಆಸಕ್ತಿ. ಸಂಗೀತದಲ್ಲಿ ‘ಸೀನಿಯರ್’ ಪದವಿ ಪಡೆದಿರುವ ಇವರು ರಂಗೋಲಿ ಕಲೆಯಲ್ಲಿಯೂ ಪರಿಣತಿ ಪಡೆದಿದ್ದಾರೆ.
ಹತ್ತು ಹಲವು ಕಲೆಗಳು ಹಾಗೂ ಉದ್ಯಮ ಕ್ಷೇತ್ರದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ಇವರಿಗೆ ಪತಿ ಹಾಗೂ ಮಕ್ಕಳ ಸಂಪೂರ್ಣ ಪ್ರೋತ್ಸಾಹವಿದೆ. ಶ್ರೀಮಠದ ಸೇವೆಯಲ್ಲಿ ತೊಡಗಿಕೊಂಡ ಮೇಲೆ ಅನೇಕ ಆತ್ಮೀಯ ಒಡನಾಟಗಳು ದೊರೆತಿದ್ದು, ಮನಸ್ಸು ಬಿಚ್ಚಿ ಸಂತಸ ಪಡುವ ಸುವರ್ಣ ದಿನಗಳು ತಮ್ಮ ಬದುಕಿನಲ್ಲಿ ಬಂದಿವೆ ಎನ್ನುತ್ತಾರೆ ಇವರು.
” ಇನ್ನಷ್ಟು ಗೋಸೇವೆ ಮಾಡಲು ಮತ್ತು ಶ್ರೀಮಠದ ಸತ್ಕಾರ್ಯಗಳಲ್ಲಿ ನಿರತರಾಗಲು ತನಗೆ ಉತ್ತಮ ಆರೋಗ್ಯ ಹಾಗೂ ನೆಮ್ಮದಿಯನ್ನು ಕರುಣಿಸಲಿ” ಎಂಬುದು ಶ್ರೀಗುರುಚರಣಗಳಲ್ಲಿ ಅವರ ಭಕ್ತಿಯ ಕೋರಿಕೆಯಾಗಿದೆ.
ಪ್ರಸನ್ನಾ ವಿ. ಚೆಕ್ಕೆಮನೆ
