|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಅನಗತ್ಯದ ಬದಲು ಅಗತ್ಯಕ್ಕೆ ಖರ್ಚು ಮಾಡಿ | ‘ಅನ್ನಂ ಬ್ರಹ್ಮ’ ಪ್ರವಚನ – 49

ಅಶೋಕೆ: ಪ್ಲಾಸ್ಟಿಕ್ ಹಾಳು ಎಂದು ಆಧುನಿಕ ವಿಜ್ಞಾನ ಹೇಳುತ್ತಿದೆಯಾದರೂ, ಪ್ಲಾಸ್ಟಿಕ್ ಇಂದು ಎಲ್ಲೆಡೆ ನಮ್ಮನ್ನು ಆವರಿಸಿದೆ. ಬದಲಾವಣೆಯು ಬೇರೆಯವರ ಮನೆಯಿಂದಲ್ಲ, ನಮ್ಮ ಮನೆಯಿಂದ ಮತ್ತು ನಮ್ಮಿಂದಲೇ ಆರಂಭವಾಗಬೇಕು ಎಂದು ಪರಮಪೂಜ್ಯ ಶ್ರೀಸಂಸ್ಥಾನದವರು ತಿಳಿಸಿದರು.

‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ 15-09-2026 ರಂದು ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಸಂಸ್ಥಾನದವರು, ಉತ್ತಮವಾದದ್ದನ್ನು ಕೆಡಿಸಿ, ಹಾನಿಕಾರಕವಾದುದನ್ನು ಸಮಾಜಕ್ಕೆ ಕೊಡುವುದೇ ಕಲಿಯುಗದ ಲಕ್ಷಣ. ಪ್ಲಾಸ್ಟಿಕ್, ಕೃತಕ ವಸ್ತುಗಳು ಅತ್ಯಂತ ಹಾನಿಕಾರಕ ಎಂದು ವಿಜ್ಞಾನವೇ ಒಪ್ಪಿಕೊಂಡಿದ್ದರೂ ಅವುಗಳ ಉತ್ಪಾದನೆ ಮತ್ತು ಬಳಕೆ ನಿಲ್ಲುತ್ತಿಲ್ಲ ಎಂದರು.

ಮನುಷ್ಯನ ಆಲೋಚನೆ ಆಹಾರವನ್ನು ಅವಲಂಭಿಸಿದೆ. ಆಹಾರದ ಮೇಲೆ ಪಾತ್ರೆಗಳು ಪರಿಣಾಮವನ್ನು ಬೀರುತ್ತದೆ. ಇಂದು ನಮ್ಮ ಮನೆಗಳಲ್ಲಿ ಪಾರಂಪರಿಕ ತಾಮ್ರ, ಹಿತ್ತಾಳೆ ಹಾಗೂ ಕಂಚಿನ ಪಾತ್ರೆಗಳು ಮನೆಯ ಮೆತ್ತನ್ನು ಸೇರಿದೆ. ಅವುಗಳನ್ನು ಬಳಸುತ್ತಲೇ ಇಲ್ಲ. ಒಂದೆರಡು ತಲೆಮಾರಿನ ಹಿಂದೆ ಬಡತನ ಇತ್ತಾದರೂ ಅವರು ಸೂಕ್ತವಾದ ಲೋಹದ ಪಾತ್ರೆಗಳನ್ನೇ ಬಳಸುತ್ತಿದ್ದರು. ಇದು ಹಣವಿರುವ ಕಾಲ, ಹಾಗಾಗಿ ಅನಗತ್ಯ ಹಣ ವ್ಯರ್ಥ ಮಾಡುವ ಬದಲು ಅತ್ಯಂತ ಅಗತ್ಯವಾಗಿರುವ ಆರೋಗ್ಯ, ಆಹಾರ, ನೀರು, ಪಾತ್ರೆಗಳಿಗೆ ಖರ್ಚು ಮಾಡಬೇಕು ಎಂದು ಮಾರ್ಗದರ್ಶಿಸಿದರು.

ತಾಮ್ರದ ಹರಿವಾಣದ ಮಧ್ಯೆ ಸ್ವಲ್ಪ ಚಿನ್ನವನ್ನು ಹಾಕಿಸಿ, ಪ್ರತಿದಿನ ಭೋಜನವನ್ನು ಮಾಡಿದರೆ ಅತ್ಯಂತ ಶ್ರೇಷ್ಠ. ಧರ್ಮಶಾಸ್ತ್ರವು ಮಣ್ಣಿನ ಪಾತ್ರೆಯನ್ನು ಬಳಕೆಗೆ ಹೇಳಿಲ್ಲ. ಆದರೆ ಅದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಎಂಜಲಾದ ಮಣ್ಣಿನ ಪಾತ್ರೆಯನ್ನು ಪುನಃ ಬಳಸಬಾರದು ಎಂಬುದು ಧರ್ಮಶಾಸ್ತ್ರದ ಸಾರವಾಗಿದ್ದು, ಎಂಜಲಾಗದ ಮಣ್ಣಿನ ಪಾತ್ರೆಯನ್ನು ಬಳಸಲು ವಿರೋಧವಿಲ್ಲ ಎಂದು ತಿಳಿಸಿದರು.

ಪ್ರತಿದಿನ ಪ್ರಾತಃಕಾಲದಲ್ಲಿ ಎದ್ದ ಕೂಡಲೇ ಅವರವರ ಕೈಯಲ್ಲಿ ಎಂಟು ಬೊಗಸೆಯಷ್ಟು ನೀರನ್ನು ಕುಡಿದರೆ ಅವರಿಗೆ ರೋಗವಿಲ್ಲ ಮತ್ತು ಆಯುಸ್ಸು ಹೆಚ್ಚುತ್ತದೆ. ಊಟ ಮಾಡುವಾಗ ಮಧ್ಯದಲ್ಲಿ ಸ್ವಲ್ಪ ಸ್ವಲ್ಪ ನೀರನ್ನು ಕುಡಿಯಬೇಕು ಎಂದು ತಿಳಿಸಿದರು.

**

ಶ್ಯಾಮಸೂರ್ಯ ಭಟ್ಟ ಮುಳಿಗದ್ದೆ ಕುಟುಂಬದವರು ಗುರುಭಿಕ್ಷಾಸೇವೆ ಸಮರ್ಪಿಸಿದರು. ಸುಬ್ರಹ್ಮಣ್ಯ ಸೇರಾಜೆ ದಂಪತಿಗಳು ದಿನಪ್ರಧಾನರಾಗಿ ಉಪಸ್ಥಿತರಿದ್ದರು.