|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಪುಣ್ಯಕೋಟಿಯ ಪೂಜಾಪರ್ವ

ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯಮಾರ್ಗದರ್ಶನದಂತೆ ಕಾರ್ಯನಿರ್ವಹಿಸುತ್ತಿರುವ ಶ್ರೀಮಠದ ವಿವಿಧ ಗೋಶಾಲೆಗಳಲ್ಲಿ ದೀಪಾವಳಿಯಂದು ಗೋಪೂಜೆ ಸಮರ್ಪಿಸಲಾಯಿತು.

ಅಶೋಕೆಯ ಗೋವಿಶ್ವದಲ್ಲಿ ಕಾಮಧೇನು ಹವನ ನಡೆಸಿ ರಾಜೋಪಚಾರ ಸಹಿತ ಗೋಪೂಜೆ ಸಮರ್ಪಿಸಲಾಯಿತು. ಗುರುಕುಲಗಳ ವಿದ್ಯಾರ್ಥಿಗಳಿಂದ ಭಜನೆ, ಸಂಗೀತ ಕಾರ್ಯಕ್ರಮ ನಡೆಯಿತು.

ಸಿದ್ದಾಪುರದ ಗೋಸ್ವರ್ಗದಲ್ಲಿ ಗೋಭಕ್ತರು ಗೋವುಗಳನ್ನು ಚೆನ್ನಾಗಿ ಅಲಂಕರಿಸಿ ಸಡಗರದಿಂದ ಪೂಜೆಯಲ್ಲಿ ಪಾಲ್ಗೊಂಡರು. ಬದುಕನ್ನು ಸಿಹಿಗೊಳಿಸುವ ಗೋವುಗಳಿಗೆ ಸಿಹಿ ಸಿಹಿ ಕಡಬುಗಳನ್ನು ಸಮರ್ಪಿಸಲಾಯಿತು. ಎಂದಿನಂತೆ ದೀಪಾವಳಿಯಲ್ಲಿ ಬಾಲಕ್ಕೊಂದು ಕಾಯಿ ಒಡೆಯುವ ಪದ್ಧತಿಯಂತೆ ಸಾಗರ, ಸಿದ್ದಾಪುರ ಮಂಡಲದ ಅನೇಕ ಭಕ್ತರು ತೆಂಗಿನಕಾಯಿಗಳನ್ನು ಗೋಸ್ವರ್ಗಕ್ಕೆ ಕಳಿಸಿದ್ದರು. 450 ಕ್ಕೂ ಅಧಿಕ ತೆಂಗಿನಕಾಯಿಗಳು ನೈವೇದ್ಯಕ್ಕೆ ಅರ್ಪಣೆಯಾದವು.

ಭಾರತೀಯ ಗೋತಳಿಗಳ ಸಂರಕ್ಷಣಾ ಕೇಂದ್ರವಾಗಿರುವ ಹೊಸನಗರದ ಮಹಾನಂದಿ ಗೋಲೋಕದಲ್ಲಿ ಮುಕ್ಕೋಟಿ ದೇವತೆಗಳ ಆವಾಸಸ್ಥಾನವಾಗಿರುವ ಗೋವುಗಳನ್ನು ಭಕ್ತಿಯಿಂದ ಪೂಜಿಸಲಾಯಿತು.

ಕೈರಂಗಳದ ಅಮೃತಧಾರಾ ಗೋಶಾಲೆಯಲ್ಲಿ ಗೋಬಂಧುಗಳು ಗೋಮಾತೆಯ ಮಹಾವಾತ್ಸಲ್ಯವನ್ನು ಭಾವಿಸಿ ಪೂಜೆ ಸಮರ್ಪಿಸಿದರು.

ನಂತೂರಿನ ಶ್ರೀಭಾರತೀ ಸಮೂಹ ಸಂಸ್ಥೆಯ ಅನಂತಶ್ರೀ ಗೋಶಾಲೆಯಲ್ಲಿ ಗೋಭಕ್ತರು ಸಾಮೂಹಿಕವಾಗಿ ಹಾಗೂ ವೈಯಕ್ತಿಕವಾಗಿ ಗೋಪೂಜೆ ಸಮರ್ಪಿಸಿದರು.

ಬೆಂಗಳೂರಿನ ನಂದಿನೀ ಗೋಶಾಲೆಯಲ್ಲಿ ಕರುಣೆಯ ಕಡಲು ಕಾಮಧೇನುವನ್ನು ಸಮರ್ಚಿಸಲಾಯಿತು.

ಬಜಕ್ಕೂಡ್ಲು ಗೋಶಾಲೆಯಲ್ಲಿ ಗೋಪೂಜೆ ಹಾಗೂ ಗೋಪಾಲಕೃಷ್ಣ ಪೂಜೆಗಳನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.

ಹೊಸಾಡದ ಭಾರತೀಯ ಗೋ ಬ್ಯಾಂಕ್ ಅಲ್ಲಿ ಪ್ರತಿ ದೀಪಾವಳಿಗೂ ಗೋವುಗಳಿಗೆ ವಿಶೇಷ ಸಮರ್ಪಣೆ ನಡೆಸುವ ಸಂಪ್ರದಾಯ ಇಟ್ಟುಕೊಂಡಿದ್ದು ಈ ವರ್ಷ ಗೋವುಗಳಿಗೆ ಸ್ವಯಂ ಚಾಲಿತ ಶುದ್ಧ ಕುಡಿಯುವ ನೀರಿನ ಘಟಕ ಸಮರ್ಪಿಸಲಾಯಿತು. ಜೊತೆಗೆ 200 ಕ್ಕೂ ಹೆಚ್ಚಿನ ಗೋಪ್ರೇಮಿಗಳು ಗೋಪೂಜೆಯನ್ನು ಹಾಗೂ ದೇಶೀ ತಳಿ ತುಪ್ಪದಿಂದ ಬೆಳಗಿದ ದೀಪಗಳನ್ನು ದೀಪೋತ್ಸವದಲ್ಲಿ ಸಮರ್ಪಿಸಿದರು.