|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

‘ ಶ್ರೀಗುರುಗಳ ಪ್ರವಚನಗಳಿಂದ ನಮ್ಮ ಸಮಾಜ ಜಾಗೃತವಾಗುತ್ತಿದೆ ‘ ಅನಿತಾ ಲೋಕೇಶ್ ಹೆಗಡೆ ಕೆರೆಮನೆ

” ಗೋವಂಶದ ಮಹತ್ವವನ್ನು ಸಾರುವ ಕಾಮದುಘಾ ಯೋಜನೆಯನ್ನು ಸಮಾಜಕ್ಕೆ ನೀಡಿ, ಗೋಮಾತೆಯ ಸೇವೆ ಮಾಡಲು ಮಾತೆಯರಿಗಾಗಿ ಮಾತೃತ್ವಮ್ ಯೋಜನೆಯನ್ನು ಕರುಣಿಸಿದ ಶ್ರೀಗುರುಗಳ ಮಹತ್ವಪೂರ್ಣ ಕಾರ್ಯಕ್ಕೆ ಕೈಜೋಡಿಸಲು ನನಗೆ ಅಭಿಮಾನವೆನಿಸುತ್ತದೆ. ಇಂದು ಸಮಾಜ ಬದಲಾವಣೆಯ ಸಂಕೀರ್ಣ ಘಟ್ಟದಲ್ಲಿ ನಿಂತಿದ್ದರೂ, ಶ್ರೀಗುರುಗಳ ಅನುಗ್ರಹದಿಂದ ಭಾರತೀಯ ಸಂಸ್ಕೃತಿ, ಸಂಪ್ರದಾಯ ಮತ್ತು ಆಚರಣೆಗಳು ಮತ್ತೆ ನಮ್ಮ ದಿನಚರಿಯ ಭಾಗಗಳಾಗಿ ಬದಲಾಗುತ್ತಿರುವುದು ತುಸು ನೆಮ್ಮದಿಯ ವಿಚಾರ ” ಎಂದು ಅಭಿಮಾನದಿಂದ ನುಡಿಯುವವರು ಸಿದ್ದಾಪುರ ಮಂಡಲದ ಹರೀಶಿ ಮಂಗಳೂರು ವಲಯದ ಕೆರೆಮನೆ ಲೋಕೇಶ್ ಹೆಗಡೆ ಅವರ ಪತ್ನಿ ಅನಿತಾ ಲೋಕೇಶ್ ಹೆಗಡೆ.

ಸಿದ್ದಾಪುರ ಸಮೀಪದ ಮಂಗಳೂರಿನ ಚಂದು ನಾಗಪ್ಪ ಹೆಗಡೆ ಮತ್ತು ಸೀತಾ ನಾಗಪ್ಪ ಹೆಗಡೆ ದಂಪತಿಗಳ ಪುತ್ರಿಯಾದ ಅನಿತಾ ಅವರು ಸುಮಾರು ಎರಡೂವರೆ ದಶಕಗಳಿಂದ ಶ್ರೀಮಠದ ಸಂಪರ್ಕದಲ್ಲಿದ್ದು, ವಿವಿಧ ಸೇವಾಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬಾಲ್ಯದಿಂದಲೇ ಧಾರ್ಮಿಕ ವಾತಾವರಣದಲ್ಲಿ ಬೆಳೆದ ಇವರಿಗೆ ಶ್ರೀಮಠದ ಸಂಪರ್ಕವು ಬದುಕಿನಲ್ಲಿ ವಿಶೇಷವಾದ ಸ್ಥಾನ ಪಡೆದಿದೆ.

” ಇಂದು ಆಧುನಿಕತೆಯ ಗಾಳಿ ಸಮಾಜಕ್ಕೆ ಬೀಸಿದಂತೆ ಜನರು ಧಾರ್ಮಿಕತೆಯಿಂದ ವಿಮುಖರಾಗತೊಡಗಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ಶ್ರೀಗಳು ಧಾರ್ಮಿಕ ಪ್ರವಚನಗಳ ಮೂಲಕ ಸಮಾಜದ ಕಣ್ತೆರೆಸುವ ಕಾರ್ಯ ಮಾಡುತ್ತಿದ್ದಾರೆ. ನಿತ್ಯಾನುಷ್ಠಾನಗಳು, ಸಂಧ್ಯಾವಂದನೆ ಇವೆಲ್ಲವೂ ಜನಮಾನಸದಿಂದ ಮರೆಯಾಗುವ ಮೊದಲೇ ಶ್ರೀಗುರುಗಳು ಅವುಗಳನ್ನು ಮತ್ತೆ ಮನೆಮನೆಗಳಲ್ಲಿ ನೆಲೆಸುವಂತೆ ಮಾಡಿದ್ದಾರೆ. ಪ್ರತಿ ವರ್ಷವೂ ಶ್ರೀಗುರುಗಳು ಅನುಗ್ರಹಿಸುವ ಸ್ತೋತ್ರಗಳನ್ನು ಕಲಿಯುವ ಮೂಲಕ ಶಿಷ್ಯಬಂಧುಗಳು ಧಾರ್ಮಿಕತೆಯ ಕಡೆಗೆ ಒಲವು ತೋರುತ್ತಿದ್ದಾರೆ. ಸಮಾಜದ ಉದ್ಧಾರಕ್ಕಾಗಿ ಶ್ರೀರಾಮದೇವರು ಮತ್ತೊಮ್ಮೆ ಅವತಾರವೆತ್ತಿ ಬಂದಂತೆ ನಾನು ಭಾವಿಸುತ್ತೇನೆ. ಶ್ರೀಗುರುಗಳೇ ರಾಮಾವತಾರ ಎಂಬುದು ನನ್ನ ನಂಬಿಕೆ ” ಎನ್ನುತ್ತಾರೆ ಅನಿತಾ ಹೆಗಡೆ.

ಬಾಲ್ಯದಿಂದಲೇ ಗೋವುಗಳ ಒಡನಾಟದಲ್ಲಿ ಬೆಳೆದ ಇವರಿಗೆ ಗೋಮಾತೆಯ ಮೇಲಿನ ಪ್ರೀತಿ ಸಹಜವಾಗಿಯೇ ಮನದಲ್ಲಿ ಮೂಡಿ ಬಂದಿದೆ. ತಮ್ಮ ಮನೆಯಲ್ಲಿಯೂ ಎರಡು ಹಸುಗಳನ್ನು ಸಾಕುವ ಮೂಲಕ ಗೋಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರು ಮನೆಯ ಗೋಸೇವೆಯ ಜೊತೆಗೆ ಶ್ರೀಮಠದ ಮಾತೃತ್ವಮ್ ಯೋಜನೆಯ ಮೂಲಕವೂ ಗೋಮಾತೆಯ ಸೇವೆಯಲ್ಲಿ ಕೈಜೋಡಿಸಿದ್ದಾರೆ.
ಈ ಯೋಜನೆಯಡಿ ಸೇವೆ ಸಲ್ಲಿಸಿ ಶ್ರೀಗುರುಗಳಿಂದ ಬಾಗಿನ ಸ್ವೀಕರಿಸಿರುವುದು ಇವರಲ್ಲಿ ಸಾರ್ಥಕ ಭಾವನೆ ಮೂಡಿಸಿದೆ.

‘ ಶ್ರೀಮಠದ ಸಂಪರ್ಕಕ್ಕೆ ಬಂದ ಮೇಲೆ ಬದುಕಿನಲ್ಲಿ ಅನೇಕ ಒಳಿತುಗಳಾಗಿವೆ ‘ ಎನ್ನುತ್ತಾರೆ. ಅನಿತಾ ಹೆಗಡೆ.
ಹರೀಶಿಯ ಶ್ಯಾಮಲಾ ಮುರಾರಿ ಹೆಗಡೆ ಅವರ ಪ್ರೇರಣೆಯಿಂದ ಮಾಸದ ಮಾತೆಯಾಗಿ ಸೇವೆ ಆರಂಭಿಸಿದ ಇವರು, ಈ ಹಿಂದೆ ವಲಯ ಮುಷ್ಟಿಭಿಕ್ಷಾ ಪ್ರಧಾನೆಯಾಗಿಯೂ ಜವಾಬ್ದಾರಿ ನಿರ್ವಹಿಸಿದವರು.
‘ ಮಗನಿಗೆ ಅನುಯೋಜ್ಯಳಾದ ವಧು ದೊರೆತಿರುವುದು ಶ್ರೀಗುರುಗಳ ಅನುಗ್ರಹದಿಂದ ಎಂದು ಅವರು ಸ್ಮರಿಸಿಕೊಳ್ಳುತ್ತಾರೆ.

” ನನ್ನ ಎಲ್ಲ ಕಾರ್ಯಗಳಿಗೂ ಮನೆಯವರ ಸಂಪೂರ್ಣ ಸಹಕಾರವಿದೆ ” ಎನ್ನುವ ಅನಿತಾ ಅವರ ಪತಿ ಲೋಕೇಶ್ ಹೆಗಡೆ ಅವರು ವಲಯ ಕೋಶಾಧ್ಯಕ್ಷರಾಗಿ ಶ್ರೀಮಠದ ಸೇವೆಯಲ್ಲಿ ನಿರತರಾಗಿದ್ದಾರೆ.
ಪತಿ-ಪತ್ನಿಯರಿಬ್ಬರೂ ಶ್ರೀಮಠದ ಸೇವಾಕಾರ್ಯಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತಿರುವುದು ಇವರ ಕುಟುಂಬದ ಗುರುಭಕ್ತಿಗೆ ಸಾಕ್ಷಿ.
ಗೋಸೇವೆಯ ಬಗ್ಗೆ ವಿಶೇಷ ಪ್ರೀತಿ, ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಮೇಲಿನ ಗೌರವ, ಶ್ರೀಗುರುಗಳ ಮೇಲಿನ ಅಚಲ ಶ್ರದ್ಧೆ ಹೊಂದಿರುವ ಅನಿತಾ ಹೆಗಡೆ ಅವರಿಗೆ ಶ್ರೀಮಠದ ಸೇವೆಯಲ್ಲಿ ಸದಾ ಮುಂದುವರಿಯಬೇಕೆಂಬ ಹಂಬಲವಿದೆ. ಗೋಮಾತೆಯ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು, ಗುರುಗಳ ಅನುಗ್ರಹದೊಂದಿಗೆ ತಮ್ಮಿಂದ ಸಾಧ್ಯವಾದ ಸೇವೆಯನ್ನು ಸಲ್ಲಿಸುತ್ತಾ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂಬುದೇ ಅವರ ಅಭಿಲಾಷೆ.

ಪ್ರಸನ್ನಾ ವಿ. ಚೆಕ್ಕೆಮನೆ