ಅಶೋಕೆ: ನೀರನ್ನು ದೇಹಕ್ಕೆ ಬೇಕಾದಾಗ ಕುಡಿಯಬೇಕು ಹೊರತು ಮನಸ್ಸಿಗೆ ಬೇಕಾದಾಗ ಕುಡಿಯುವುದಲ್ಲ. ಅನಗತ್ಯವಾಗಿ ಆಗಾಗ ನೀರನ್ನು ಕುಡಿಯುವ ಹವ್ಯಾಸ ಸರಿಯಲ್ಲ ಎಂದು ಪರಮಪೂಜ್ಯ ಶ್ರೀಸಂಸ್ಥಾನದವರು ತಿಳಿಸಿದರು.
‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಭಾದ್ರಪದ ಶುಕ್ಲ ಷಷ್ಠಿಯಂದು (17-09-2026) ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ನೀರಿನ ಕುರಿತಾಗಿ ಪ್ರವಚನ ಅನುಗ್ರಹಿಸಿದ ಶ್ರೀಸಂಸ್ಥಾನದವರು, ಜೀವನದಲ್ಲಿ ಯಾವುದು ಹೆಚ್ಚು ಅಥವಾ ಕಡಿಮೆ ಆದರೂ ಅನರ್ಥವೇ ಆಗುವುದು. ಹಾಗೆಯೇ ಹೆಚ್ಚಿನ ನೀರು ಹಾಗೂ ಕಡಿಮೆ ನೀರು ಸೇವನೆಯಿಂದ ಅನರ್ಥವೇ ಆಗುತ್ತದೆ. ನೀರನ್ನು ಹೆಚ್ಚಾಗಿ ಕುಡಿದಾಗ ಸರಿಯಾಗಿ ಸೇವಿಸಿದ ಆಹಾರವೂ ಸಮರ್ಪಕವಾಗಿ ಜೀರ್ಣವಾಗುವುದಿಲ್ಲ. ಹೆಚ್ಚಾಗಿ ನೀರು ಕುಡಿಯುವುದು ಎಲ್ಲಾ ರೀತಿಯ ಅನಾರೋಗ್ಯಕ್ಕೆ ಮೂಲವಾಗಬಹುದು. ಅಸಮರ್ಪಕವಾಗಿ ಸೇವಿಸಿದ ಔಷಧ, ಆಹಾರದಂತೆ ನೀರಿನಿಂದಲೂ ಅಡ್ಡಪರಿಣಾಮವಿದ್ದು, ನೀರನ್ನು ಸಮರ್ಪಕವಾಗಿ ಸೇವಿಸಬೇಕು ಎಂದು ಎಚ್ಚರಿಸಿದರು.
ಪ್ರಾಣ ಇರುವ ಎಲ್ಲರಿಗೂ ನೀರೇ ಪ್ರಾಣವಾಗಿದ್ದು, ದೇಹ ಕೇಳಿದಾಗ ಹಾಗೂ ಕೇಳಿದಷ್ಟು ಮಾತ್ರ ನೀರನ್ನು ಕುಡಿಯಬೇಕು ಎಂಬುದು ಆಯುರ್ವೇದದ ಆಚಾರ್ಯರ ಅಭಿಮತವಾಗಿದ್ದು, ನೀರನ್ನು ಇಷ್ಟೇ ಕುಡಿಯಬೇಕು ಎಂಬ ಪ್ರಮಾಣ ಆಯುರ್ವೇದದಲ್ಲಿ ಇಲ್ಲ. ಆಧುನಿಕ ವಿಜ್ಞಾನಕ್ಕೂ ಆಯುರ್ವೇದಕ್ಕೂ ನೀರಿನ ಸೇವನೆಯ ವಿಚಾರದಲ್ಲಿ ವ್ಯತ್ಯಾಸವಿದ್ದು, ವ್ಯಕ್ತಿಯ ತೂಕವನ್ನು ಆಧರಿಸಿ ನೀರಿನ ಪ್ರಮಾಣವನ್ನು ಆಧುನಿಕ ಪದ್ಧತಿ ಸೂಚಿಸುತ್ತದೆ. ಆದರೆ ಅದು ವ್ಯಕ್ತಿಯ ದೇಹ ಪ್ರಕೃತಿ ಹಾಗೂ ಜಠರಾಗ್ನಿಯ ಸಾಮರ್ಥ್ಯವನ್ನು ಪರಿಗಣಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಊಟಕ್ಕಿಂತ ಮೊದಲು ನೀರನ್ನು ಸೇವಿಸಿದರೆ ಅದು ಅಜೀರ್ಣಕ್ಕೆ ಕಾರಣ ಹಾಗೂ ಊಟದ ಕೊನೆಯಲ್ಲಿ ಸೇವಿಸಿದರೆ ಅದು ದೇಹದ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಆದರೆ ಊಟದ ಮಧ್ಯ ಮಧ್ಯದಲ್ಲಿ ಸೇವಿಸಿದ ನೀರು ದೇಹಕ್ಕೆ ಹಿತ ಎಂಬುದು ಆಯುರ್ವೇದ ಗ್ರಂಥಗಳ ಸಾರವಾಗಿದ್ದು, ನೀರನ್ನು ಗುಟುಕು ಗುಟುಕಾಗಿ ಘನಾಹಾರವನ್ನು ತಿನ್ನುವಂತೆ ನಿಧಾನವಾಗಿ ಕುಡಿಯಬೇಕು. ಪರಂಪರೆ ಹೇಳುವಂತೆ ನಿಂತು ಕುಡಿದ ನೀರು ರಾಜಸ ಗುಣವನ್ನು ಹೆಚ್ಚಿಸಿದರೆ, ಮಲಗಿ ಕುಡಿದರೆ ತಮೋಗುಣದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹಾಗೂ ಸರಿಯಾಗಿ ಕುಳಿತು ಕುಡಿದ ನೀರು ಸತ್ತ್ವ ಗುಣದ ವೃದ್ಧಿಗೆ ಕಾರಣ. ಹಾಗಾಗಿ ನೀರನ್ನು ಕುಳಿತೇ ಸೇವಿಸಬೇಕು. ಸರಿಯಾಗಿ ಸೇವಿಸಿದ ನೀರು ಅಮೃತ ಎಂದು ತಿಳಿಸಿದರು.
ನೀರನ್ನು ಯಾವಾಗ ಕುಡಿಯಬಾರದು?
ದೇಹಕ್ಕೆ ಹಸಿವಾದಾಗ, ಸಿಟ್ಟು ಬಂದಾಗ, ತುಂಬಾ ದಣಿದಾಗ, ತುಂಬಾ ಭಯಗೊಂಡಾಗ, ವ್ಯಾಯಾಮ ಮಾಡಿದ ತಕ್ಷಣ ನೀರನ್ನು ಸೇವಿಸಬಾರದು. ಮನಸ್ಸು ಪ್ರಸನ್ನವಾಗಿದ್ದಾಗ ನೀರನ್ನು ಕುಡಿಯಬೇಕು ಎಂದು ವಿವರಿಸಿದರು.
**
ಶ್ರೀರಾಮ ಕೆ.ಟಿ ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ದಿನಪ್ರಧಾನರಾಗಿ ರಾಮಮೂರ್ತಿ ಹೆದ್ಲಿ ದಂಪತಿಗಳು ಉಪಸ್ಥಿತರಿದ್ದರು.
**
ಪ್ರವಚನ ಬಿಂದುಗಳು
*ನೀರನ್ನು ಪ್ರಮಾಣ ಮೀರಿ ಕುಡಿಯಬಾರದು
*ಬೆಳಿಗ್ಗೆ ಎಂಟು ಗಂಟೆಗೆ ಆಹಾರ ಸೇವನೆ, ಮತ್ತು ಅತೀತ ಕಾಲವಾದ ಮಧ್ಯಾಹ್ನ ಮೂರು ಗಂಟೆಯ ಮೇಲೆ ಊಟ ಮಾಡುವುದು ಎರಡೂ ಒಳ್ಳೆಯದಲ್ಲ.
*ಊಟ ಮಾಡುವುದಕ್ಕೆ ಹಸಿವು ಎಷ್ಟು ಮುಖ್ಯವೋ, ನೀರು ಕುಡಿಯುವುದಕ್ಕೆ ಬಾಯಾರಿಕೆಯಾಗುವುದು ಕೂಡಾ ಅಷ್ಟೇ ಆವಶ್ಯಕ.
*ಭೋಜನದ ಆರಂಭದಲ್ಲಿ ನೀರು ಕುಡಿದರೆ ದೇಹ ಕೃಶವಾಗಬಹುದು, ಕೊನೆಯಲ್ಲಿ ಕುಡಿದರೆ ತೂಕ ಹೆಚ್ಚಾಗಬಹುದು, ಮಧ್ಯದಲ್ಲಿ ಸ್ವಲ್ಪ ಸ್ವಲ್ಪ ಕುಡಿದರೆ ಸಮತ್ವವನ್ನು ಕೊಡುತ್ತದೆ.
*ನೀರು, ಊಟ, ಔಷಧ – ಇವುಗಳನ್ನು ಸರಿಯಾಗಿ ಸೇವಿಸದಿದ್ದರೆ ಅಡ್ಡಪರಿಣಾಮಗಳು ಖಂಡಿತ.
*ಕುಳಿತುಕೊಂಡು ನೀರನ್ನು ಕುಡಿಯಬೇಕು. ಮಲಗಿ, ನಿಂತು, ಓಡಾಡುತ್ತಾ ಕುಡಿಯಬಾರದು.
*ಅತಿಯಾಗಿ ಆಯಾಸವಾದಾಗ, ಹಸಿವಾದಾಗ, ತುಂಬಾ ಸಿಟ್ಟು ಬಂದಾಗ, ಅತಿಯಾದ ಭಯವಾದಾಗ, ಗಡಿಬಿಡಿ ಮಾಡಿ ನೀರನ್ನು ಕುಡಿಯಬಾರದು.










