” ಶ್ರೀಗುರುಸೇವೆಯಿಂದ ಬಾಳಿಗೆ ನೆಮ್ಮದಿಯ ಬೆಳಕು ದೊರಕಿದೆ; ಗೋಮಾತೆಯ ಸೇವೆಯಿಂದ ನಮ್ಮ ಬದುಕು ಹಸನಾಗಿದೆ” ಎಂದು ಭಾವಪೂರ್ಣವಾಗಿ ನುಡಿದವರು ಜ್ಯೋತಿಲಕ್ಷ್ಮಿ ಲಾಡ. ಮಂಗಳೂರು ಮಂಡಲದ ಮುಡಿಪು ವಲಯದವರಾದ ಇವರು, ಶ್ರೀಮಠದ ಸೇವೆಯ ಜೊತೆಗೆ ಗೋಮಾತೆಯ ಸೇವೆಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಜ್ಯೋತಿಲಕ್ಷ್ಮಿ ಅವರ ಸಾತ್ತ್ವಿಕ ಬದುಕಿಗೆ ಮೂಲ ಪ್ರೇರಣೆ ದೊರಕಿದ್ದು ಅವರ ತವರು ಮನೆಯಿಂದಲೇ. ಚಾಲತ್ತಡ್ಕ ಮೂಲದ, ಪ್ರಸ್ತುತ ಮೂಡಬಿದ್ರೆ ಸಮೀಪದ ಪುಚ್ಚೆಮೊಗರು ನಿವಾಸಿಗಳಾಗಿರುವ ಶಂಭಟ್ಟ ಮತ್ತು ಪಾರ್ವತಿ ದಂಪತಿಗಳ ಪುತ್ರಿಯಾಗಿ ಜನಿಸಿದ ಇವರಿಗೆ, ಬಾಲ್ಯದಿಂದಲೇ ಉತ್ತಮ ಧಾರ್ಮಿಕ ಸಂಸ್ಕಾರ ಬಳುವಳಿಯಾಗಿ ದೊರಕಿತ್ತು.
ಜ್ಯೋತಿಲಕ್ಷ್ಮಿಯವರ ಪತಿ ಡಾ. ಜಯಪ್ರಕಾಶ್ ಲಾಡ ಅವರು ವೃತ್ತಿಯಿಂದ ಪಶು ವೈದ್ಯರಾಗಿದ್ದು, ಶ್ರೀಮಠದ ಜವಾಬ್ದಾರಿಯುತ ಹೊಣೆಗಾರಿಕೆಗಳನ್ನು ನಿಭಾಯಿಸುತ್ತಿದ್ದಾರೆ. ಶ್ರೀಮಠದ ಶಾಸನತಂತ್ರದ ಸಂಶೋಧನಾ ಖಂಡದ ಶ್ರೀಸಂಯೋಜಕರಾಗಿ ಹಾಗೂ ಬಾನ್ಕುಳಿಯ ‘ಗೋಸ್ವರ್ಗ’ದ ನಿರೀಕ್ಷಕರಾಗಿಯೂ ಅವರು ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿ ಮತ್ತು ಸೇವೆ ಎರಡರಲ್ಲೂ ಗೋಮಾತೆಯ ಒಡನಾಟ ಹೊಂದಿರುವ ಈ ದಂಪತಿಗಳು, ತಮ್ಮ ಮನೆಯಲ್ಲಿಯೂ ಹಸುಗಳನ್ನು ಸಾಕಿ ಮಮತೆಯಿಂದ ಪೋಷಿಸುತ್ತಿದ್ದಾರೆ.
ಮಾಣಿ ಮಠದಲ್ಲಿ ನಡೆದ ಚಾತುರ್ಮಾಸ್ಯದ ಸಂದರ್ಭವು ಜ್ಯೋತಿಲಕ್ಷ್ಮಿ ಅವರ ಕುಟುಂಬವನ್ನು ಶ್ರೀಮಠಕ್ಕೆ ಮತ್ತಷ್ಟು ನಿಕಟವಾಗಿಸಿತು. ಅಂದಿನಿಂದ ಶ್ರೀಮಠದ ಪ್ರತಿಯೊಂದು ಸೇವಾ ಕಾರ್ಯಗಳಲ್ಲೂ ಅತ್ಯಂತ ಶ್ರದ್ಧೆಯಿಂದ ಕೈ ಜೋಡಿಸಿದ ಇವರು ಶ್ರೀಗುರುಗಳ ಗೋ ಸಂರಕ್ಷಣಾ ಕಾರ್ಯಗಳಿಂದ ಪ್ರೇರೇಪಣೆ ಪಡೆದು ಸ್ವಯಂ ಇಚ್ಛೆಯಿಂದ ಶ್ರೀಮಠದ ‘ಮಾತೃತ್ವಮ್’ ಯೋಜನೆಗೆ ಕೈ ಜೋಡಿಸಿದರು.
ಗೋಸೇವೆಯ ಪವಿತ್ರ ಯಜ್ಞದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡ ಜ್ಯೋತಿಲಕ್ಷ್ಮಿ ಅವರು, ಶೀಘ್ರದಲ್ಲೇ ಒಂದು ಲಕ್ಷದ ಗುರಿಯನ್ನು ತಲುಪಿ ಶ್ರೀಗುರುಗಳ ಅಮೃತ ಹಸ್ತಗಳಿಂದ ‘ಲಕ್ಷ ಬಾಗಿನ’ವನ್ನು ಸ್ವೀಕರಿಸಿದರು.
”ಶ್ರೀಗುರುಗಳು ನಮ್ಮ ಮನೆಗೆ ಆಗಮಿಸಿ ಎರಡು ದಿನಗಳ ಕಾಲ ಮೊಕ್ಕಾಂ ಹೂಡಿದ್ದು ನಮ್ಮ ಬದುಕಿನ ಪರಮ ಸೌಭಾಗ್ಯ. ನಮ್ಮ ಮನೆಯಲ್ಲಿ ಐದು ಶ್ರೀಕರಾರ್ಚಿತ ಪೂಜೆ ನಡೆದಿದೆ ಎಂದರೆ ಅದು ಶ್ರೀಗುರುಗಳ ಅನುಗ್ರಹದಿಂದಲೇ” ಎಂದು ಜ್ಯೋತಿಲಕ್ಷ್ಮಿ ಅವರು ಭಾವತುಂಬಿ ಸ್ಮರಿಸುತ್ತಾರೆ.
ತಮ್ಮ ಬದುಕಿನಲ್ಲಿ ಎದುರಾದ ಅನೇಕ ಸಂಕಷ್ಟಗಳಿಂದ, ಆಪತ್ತುಗಳಿಂದ ಪಾರಾಗಿದ್ದು ಶ್ರೀಗುರುಗಳ ಆಶೀರ್ವಾದದ ಬಲದಿಂದಲೇ ಎಂಬ ಅಚಲವಾದ ಭರವಸೆ ಇವರದ್ದು.
ಶ್ರೀಮಠದ ಸಂಪರ್ಕಕ್ಕೆ ಬಂದ ಮೇಲೆ ತಮ್ಮ ಬದುಕಿನ ರೀತಿ-ನೀತಿಗಳು ಮತ್ತು ಧಾರ್ಮಿಕ ಸಂಪ್ರದಾಯಗಳು ಬದಲಾಗಿವೆ ಎನ್ನುತ್ತಾರೆ ಜ್ಯೋತಿಲಕ್ಷ್ಮಿ. ಈ ಪ್ರಭಾವವು ಇವರ ಮೂವರು ಮಕ್ಕಳ ಮೇಲೂ ಪರಿಣಾಮ ಬೀರಿ ಅವರಿಗೂ ಶ್ರೀಮಠದ ಮೇಲೆ ಮತ್ತು ಶ್ರೀಗುರುಚರಣಗಳ ಮೇಲೆ ಅಪಾರವಾದ ಶ್ರದ್ಧೆ ಮೂಡಿ, ಮಕ್ಕಳು ಸಹಾ ಶ್ರೀ ಮಠದ ಸೇವೆಯ ಬಗ್ಗೆ ಆಸಕ್ತಿ ಹೊಂದಿದ್ದಾರೆ.
‘ ತಮ್ಮ ಬದುಕಿನಲ್ಲಿ ನೆಮ್ಮದಿಯನ್ನು ತುಂಬಿದ ಶ್ರೀಗುರು ಸೇವೆ ಮತ್ತು ಗೋಮಾತೆಯ ಸೇವೆಯನ್ನು ಸದಾ ಮುಂದುವರಿಸುತ್ತಿರಬೇಕು ಮತ್ತು ತಮ್ಮ ಹೆಜ್ಜೆಯನ್ನೇ ಅನುಸರಿಸಿ ಮಕ್ಕಳೂ ಕೂಡ ಗುರುಸೇವೆಯ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕು ‘ ಎಂಬುದು ಜ್ಯೋತಿಲಕ್ಷ್ಮಿ ಲಾಡ ಇವರ ಹಂಬಲ.
ಪ್ರಸನ್ನಾ ವಿ. ಚೆಕ್ಕೆಮನೆ