ಬದುಕಿನಲ್ಲಿ ವಿದ್ಯೆ ಮತ್ತು ಸಂಸ್ಕಾರ ಒಂದಾದಾಗ ಅಲ್ಲಿ ಸೇವಾ ಮನೋಭಾವ ಜಾಗೃತವಾಗುತ್ತದೆ. ಶ್ರೀಗುರುಗಳ ಮಹತ್ವಾಕಾಂಕ್ಷೆಯ ಯೋಜನೆಯಾದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ (ವಿವಿವಿ) ಪರಂಪರಾ ಗುರುಕುಲದಲ್ಲಿ ಸಂಸ್ಕೃತ ಅಧ್ಯಾಪಿಕೆಯಾಗಿ ಸೇವೆ ಸಲ್ಲಿಸುವ ಜೊತೆಗೆ ಮಾಸದಮಾತೆಯಾಗಿ ಗೋಮಾತೆಯ ಸೇವೆಯನ್ನು ಮಾಡುತ್ತಿರುವ ಭಾಗ್ಯಶ್ರೀ ಪುತ್ತೂರು ಇವರು ಇದಕ್ಕೆ ಮಾದರಿಯಾಗಿದ್ದಾರೆ.
ಉಪ್ಪಿನಂಗಡಿ ಮಂಡಲ ಪುತ್ತೂರು ವಲಯದ ಕೆದಿಲ ವಳಂಕುಮೇರಿ ಮೂಲದವರಾದ ಪ್ರಸ್ತುತ ಪುತ್ತೂರು ತೆಂಕಿಲ ನಿವಾಸಿಗಳಾಗಿರುವ ಲಲಿತಾ ಪರಮೇಶ್ವರ ಭಟ್ ದಂಪತಿಗಳ ಪುತ್ರಿ ಭಾಗ್ಯಶ್ರೀ ಬಾಲ್ಯದಿಂದಲೇ ಶ್ರೀಮಠದ ಸಂಪರ್ಕ ಮತ್ತು ಗೋವುಗಳ ಒಡನಾಟದಲ್ಲಿ ಬೆಳೆದವರು.
ಅನಿವಾರ್ಯ ಕಾರಣಗಳಿಂದಾಗಿ ಮನೆಯಲ್ಲಿ ಹಸುಗಳನ್ನು ಸಾಕುವುದು ಕಷ್ಟವೆನಿಸಿದಾಗ ಅವರು ಗೋಮಾತೆಯ ಸೇವೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಗೋಸಂಜೀವಿನಿ ಎಂಬ ಕಾಣಿಕೆ ಡಬ್ಬಿಯಲ್ಲಿ ಒಂದಿಷ್ಟು ಮೊತ್ತವನ್ನು ಹಾಕಿ, ಅದನ್ನು ಗೋಶಾಲೆಗಳಿಗೆ ನೀಡುವ ಮೂಲಕ ಗೋಸೇವೆಯನ್ನು ಮುಂದುವರಿಸುತ್ತಿದ್ದರು. ಅವರ ಈ ಗೋಪ್ರೇಮವನ್ನು ಗಮನಿಸಿದ ನಾಗರತ್ನ ಶರ್ಮಾ ಅವರು ಮಾತೃತ್ವಮ್ ಯೋಜನೆಯ ಮೂಲಕ ಮಾಸದ ಮಾತೆಯಾಗಲು ಪ್ರೇರಣೆ ನೀಡಿದರು.
ಶ್ರೀಮಠದ ‘ಮಾತೃತ್ವಮ್’ ಯೋಜನೆಯ ಮೂಲಕ ಗೋಸೇವೆಯ ಅವಕಾಶವನ್ನು ಸ್ವೀಕರಿಸಿದ ಭಾಗ್ಯಶ್ರೀ, ತಮ್ಮ ತಾಯಿ ಲಲಿತಾ ಅವರ ಸಹಕಾರದಿಂದ ಈಗಾಗಲೇ ನಾಲ್ಕು ಹಸುಗಳ ಪೋಷಣೆಯ ಗುರಿಯನ್ನು ತಲುಪಿದ್ದಾರೆ. ಶ್ರೀಗುರುಗಳಿಂದ ‘ಲಕ್ಷ ಬಾಗಿನ’ವನ್ನು ಸ್ವೀಕರಿಸುವ ಸೌಭಾಗ್ಯವೂ ಇವರಿಗೆ ಒದಗಿಬಂದಿದೆ.
‘ ಬದುಕಿನ ಸಂಕಷ್ಟದ ಸಮಯದಲ್ಲಿ ಶ್ರೀಗುರುಗಳ ಅನುಗ್ರಹ ನಮ್ಮನ್ನು ಕಾಪಾಡಿದೆ. ಇಂದು ನಾನು ವಿವಿವಿಯಂತಹ ಸಂಸ್ಥೆಯಲ್ಲಿ ಶಿಕ್ಷಕಿಯಾಗಲು ಸಾಧ್ಯವಾಗಿದ್ದು ಶ್ರೀಗುರುಗಳ ಕೃಪೆಯಿಂದಲೇ ‘ ಎಂದು ಭಾವುಕರಾಗುತ್ತಾರೆ ಭಾಗ್ಯಶ್ರೀ.
ಬಹುಮುಖ ಪ್ರತಿಭೆಯಾಗಿರುವ ಭಾಗ್ಯಶ್ರೀ ಅವರಿಗೆ ಸಂಗೀತ, ಚಿತ್ರಕಲೆ, ಭರತನಾಟ್ಯ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿಯಿದೆ. ಓದಿನ ಹವ್ಯಾಸದೊಂದಿಗೆ ಸಾಹಿತ್ಯ ರಚನೆಯಲ್ಲೂ ತೊಡಗಿಸಿಕೊಂಡಿರುವ ಇವರು ಅಶೋಕೆಯ ಪುಣ್ಯ ಪರಿಸರದಲ್ಲಿ ಗೋವಿಶ್ವದ ಗೋವುಗಳ ಜೊತೆ ಕಳೆಯುವ ಕ್ಷಣಗಳು ಮನಸ್ಸಿಗೆ ತುಂಬಾ ನೆಮ್ಮದಿ ನೀಡುತ್ತದೆ ಎನ್ನುತ್ತಾರೆ.
‘ ಗೋಮಾತೆಯ ಸೇವೆಯನ್ನು ನಿರಂತರವಾಗಿ ಮುಂದುವರಿಸಬೇಕೆಂಬ ಹಂಬಲವಿದೆ ಅಮ್ಮನ ಪ್ರೋತ್ಸಾಹ ಮತ್ತು ಶ್ರೀಗುರುಗಳ ಆಶೀರ್ವಾದದಿಂದ ನನ್ನ ಎಲ್ಲ ಕನಸುಗಳು ನನಸಾಗಿವೆ. ಶ್ರೀಮಠದ ಸೇವೆಯಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಬೇಕು ಎಂಬ ಅಭಿಲಾಷೆಯಿದೆ ‘ ಎನ್ನುವ ಭಾಗ್ಯಶ್ರೀ ಅಧ್ಯಾಪಿಕೆಯಾಗಿ ಮಕ್ಕಳಿಗೆ ಜ್ಞಾನದ ಹಾದಿ ತೋರುತ್ತಾ, ಗೋಸೇವೆಯ ಕಾರ್ಯದಲ್ಲೂ ಮುಂಚೂಣಿಯಲ್ಲಿದ್ದಾರೆ.
ಪ್ರಸನ್ನಾ ವಿ. ಚೆಕ್ಕೆಮನೆ