‘ ಬಾಳಿನ ಸಂಕಷ್ಟಕ್ಕೆ ಸಾಂತ್ವನದ ತಂಪು ಗುರು ಸೇವೆಯಿಂದ ದೊರಕಿದೆ ‘ ಪಾರ್ವತಿ ಎಸ್ ಹೆಗಡೆ ಶಿರಾಲಿ, ಹೊನ್ನಾವರ

ಮಾತೃತ್ವಮ್

 

​ಜೀವನ ಸಾಗರದಲ್ಲಿ ಕಷ್ಟಗಳ ಅಲೆಗಳು ಅಪ್ಪಳಿಸಿದಾಗ ಮಾನವ ಅಸಹಾಯಕನಾಗುವುದು ಸಹಜ. ಆದರೆ ದಡ ಸೇರಿಸುವ ಗುರುವಿನ ಮೇಲೆ ಅಚಲವಾದ ನಂಬಿಕೆಯಿಟ್ಟವರಿಗೆ ಆ ಅಲೆಗಳೂ ಕೂಡ ಆಶೀರ್ವಾದದ ಮಂತ್ರಾಕ್ಷತೆಯಂತೆ ಕಷ್ಟದ ಪರಂಪರೆಯಿಂದ ಮುಕ್ತಿ ನೀಡುತ್ತದೆ.

ಇಂತಹ ಶ್ರದ್ಧೆಯ ಬದುಕನ್ನು ನಡೆಸುತ್ತಿರುವವರು ಪಾರ್ವತಿ ಶ್ರೀಧರ ಹೆಗಡೆ ಶಿರಾಲಿ. ಮೂಲತಃ ಹೊನ್ನಾವರ ಮಂಡಲ ಭವತಾರಿಣಿ ವಲಯದ ಶಿರಾಲಿಯ ‘ಜಯ ಗುರುನಿಲಯದ’, ಪ್ರಸ್ತುತ ಬೆಂಗಳೂರಿನ ಸರ್ವಧಾರಿ ವಲಯ ನಿವಾಸಿಗಳಾಗಿರುವ ಶ್ರೀಧರ ಹೆಗಡೆಯವರ ಪತ್ನಿಯಾದ ಇವರು ಶ್ರೀಮಠದ ಅತ್ಯಂತ ನಿಷ್ಠಾವಂತ ಸೇವಕಿಯಾಗಿ ಗುರುತಿಸಿಕೊಂಡಿದ್ದಾರೆ.

ಹೊನ್ನಾವರ ಹಡಿನಬಾಳದ ಕೆಳಗಿನಕೇರಿಯ ಗಣಪತಿ ಈಶ್ವರ ಹೆಗಡೆ ಮತ್ತು ಲಕ್ಷ್ಮೀ ಹೆಗಡೆ ದಂಪತಿಗಳ ಪುತ್ರಿಯಾದ ಪಾರ್ವತಿ ಅವರಿಗೆ ಬಾಲ್ಯದಿಂದಲೇ ಹಸುಗಳೆಂದರೆ ತುಂಬಾ ಮಮತೆ. ಇವರ ತಂದೆ ಗಣಪತಿ ಈಶ್ವರ ಹೆಗಡೆಯವರು ನಾಟಿ ವೈದ್ಯರಾಗಿದ್ದು, ಗೋವುಗಳಿಗೆ ಬಾಧಿಸುವ ಕಾಯಿಲೆಗಳಿಗೆ ಗಿಡಮೂಲಿಕೆಗಳ ಔಷಧಿಯನ್ನು ನೀಡುತ್ತಾ ‘ಗೋ ವೈದ್ಯ’ರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ತಂದೆ ಅತ್ಯಂತ ಪ್ರೀತಿಯಿಂದ ಗೋವುಗಳ ಆರೈಕೆ ಮಾಡುವುದನ್ನು, ಅವುಗಳ ನೋವನ್ನು ಅರಿತು ಚಿಕಿತ್ಸೆ ನೀಡುವುದನ್ನು ಹತ್ತಿರದಿಂದ ನೋಡುತ್ತಾ ಬೆಳೆದ ಪಾರ್ವತಿ ಅವರಿಗೆ ಗೋಮಾತೆಯ ಮೇಲೆ ಪ್ರೀತಿ ಮೂಡಿತು. ಬಾಲ್ಯದಲ್ಲಿ ದೊರಕಿದ ಈ ಸಂಸ್ಕಾರ ಮುಂದೆಯೂ ಅವರಲ್ಲಿ ಗೋಸೇವೆಯ ಹಂಬಲವನ್ನು ಜೀವಂತವಾಗಿರಿಸಿತು.

ತವರುಮನೆಯಲ್ಲಿ ಶ್ರೀಮಠದ ಸಂಪರ್ಕ ಹೊಂದಿದ್ದ ಪಾರ್ವತಿಯವರಿಗೆ ಮದುವೆಯ ನಂತರ ಪತಿಯ ಮನೆಯಲ್ಲೂ ಶ್ರೀಮಠದ ಸಂಪರ್ಕ ದೊರಕಿದ್ದು ಅವರ ಸೌಭಾಗ್ಯ. ಶ್ರೀಮಠದ ‘ಸಂತತಿಮಂಗಲ’ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗೀತಾ ಮಂಜುನಾಥ್ ಹೆಗಡೆ ಅವರ ಪ್ರೇರಣೆಯು ಇವರ ಸೇವಾ ಹಾದಿಗೆ ಹೊಸ ತಿರುವು ನೀಡಿತು. ಅವರ ಪ್ರೇರಣೆಯಿಂದ ‘ಮಾತೃತ್ವಮ್’ ಯೋಜನೆಯ ಮೂಲಕ ಮಾಸದ ಮಾತೆಯಾಗಿ ಗೋಮಾತೆಯ ಸೇವೆಗೆ ಕೈಜೋಡಿಸಿದರು.

ಪಾರ್ವತಿ ಅವರು ಸೇವೆಯ ಮೊದಲ ‘ಮಾತೃತ್ವಮ್’ ರಶೀದಿಯನ್ನು ಹಾಕಿದ್ದು ತಮ್ಮ ಮಗಳ ಹೆಸರಿನಲ್ಲಿ. ಮುಂದೆ ಕೇವಲ ಮೂರೇ ತಿಂಗಳ ಅವಧಿಯಲ್ಲಿ ಇವರು ಒಂದು ಲಕ್ಷದ ಗುರಿಯನ್ನು ತಲುಪಿ ‘ಲಕ್ಷ ಬಾಗಿನಿ’ಯಾದರು.

ಬದುಕಿನ ಸಂಕಷ್ಟದ ಪರಿಸ್ಥಿತಿಗಳಲ್ಲಿ ಪಾರ್ವತಿ ಎಸ್. ಹೆಗಡೆಯವರಿಗೆ ಸಾಂತ್ವನ ನೀಡಿದ್ದು ಶ್ರೀಗುರುಗಳ ನುಡಿಗಳು. ಇವರ ಮಗ ಎಂಬಿಬಿಎಸ್ ಮುಗಿಸಿ ಎಂ. ಡಿ ಉನ್ನತ ಶಿಕ್ಷಣಕ್ಕೆ ಸಿದ್ಧವಾಗುತ್ತಿದ್ದ ಸಂದರ್ಭದಲ್ಲಿ ಅವರಿಗೆ ಒಂದು ರೀತಿಯ ಆತಂಕ, ಅನಿಶ್ಚಿತತೆ ಕಾಡಿತ್ತು. ಅಂತಹ ಸಮಯದಲ್ಲಿ ಶ್ರೀಗುರುಗಳ ದರ್ಶನ ಪಡೆದಾಗ, ಶ್ರೀಗುರುಗಳ ಆಶೀರ್ವಾದದ ಮಾತುಗಳು ಅವರ ಮನಸ್ಸಿಗೆ ನೆಮ್ಮದಿ ನೀಡಿದವು. ಮಗನ ಭವಿಷ್ಯದ ಬಗ್ಗೆ ನಿರಾಳವಾಗುವಂತೆ ಮಾಡಿದ ಆ ಗುರುವಾಣಿ ಇವರ ಪಾಲಿಗೆ ಸಾಂತ್ವನದ ತಂಪಾಯಿತು. ಗುರುಗಳ ಆಶೀರ್ವಾದದಂತೆ ಮಗನ ಶಿಕ್ಷಣದ ಹಾದಿಯೂ ಸುಗಮವಾಯಿತು.

ಪಾರ್ವತಿ ಎಸ್. ಹೆಗಡೆಯವರ ಜೀವನದಲ್ಲಿ ನಡೆದ ಕೆಲವು ಘಟನೆಗಳು ಗುರುಗಳ ಮಹಿಮೆಯನ್ನು ಸಾರುತ್ತವೆ. ಒಮ್ಮೆ ಇವರ ಶಿರಾಲಿಯ ಮನೆಗೆ ಕಳ್ಳರು ನುಗ್ಗಿದ ಘಟನೆ ನಡೆದಿತ್ತು. ಅಮೂಲ್ಯವಾದ ಯಾವುದೇ ವಸ್ತುಗಳು ಅಲ್ಲಿ ಇಲ್ಲದಿದ್ದರೂ ಕೆಲವು ಚಿಕ್ಕಪುಟ್ಟ ಬೆಳ್ಳಿಯ ವಸ್ತುಗಳು ಕಾಣೆಯಾಗಿದ್ದವು. ಆದರೆ ಶ್ರೀಗುರುಗಳು ಹಿಂದೆ ಅನುಗ್ರಹಿಸಿದ್ದ ಪವಿತ್ರವಾದ ‘ರಾಮ ಟಂಕೆ’ಗೆ ಯಾವುದೇ ತೊಂದರೆಯಾಗದೆ ಅದು ಸುರಕ್ಷಿತವಾಗಿ ಉಳಿದಿದ್ದು ಗುರುಗಳ ಕೃಪೆ ‘ಎಂಬುದು ಪಾರ್ವತಿ ಅವರ ಅಚಲ ನಂಬಿಕೆ.

ತವರು ಮನೆಯಲ್ಲಿ ಅಣ್ಣನ ಮಗ ತೀವ್ರ ಅನಾರೋಗ್ಯಕ್ಕೆ ತುತ್ತಾದಾಗಲೂ ಇವರು ಶ್ರೀಗುರು ಚರಣಕ್ಕೇ ಮೊರೆ ಹೋಗಿದ್ದರು. ಆ ಭರವಸೆ ಅವರಿಗೆ ಅನುಗ್ರಹವಾಯಿತು. ಅಣ್ಣನ ಮಗ ಬಹಳ ಬೇಗನೆ ಚೇತರಿಸಿಕೊಂಡು ಆರೋಗ್ಯವಂತನಾದದ್ದು ಗುರುಗಳ ದಿವ್ಯಾನುಗ್ರಹಕ್ಕೆ ಸಾಕ್ಷಿಯಾಯಿತು.

​ಗೋ ಸೇವೆ, ಗುರು ಸೇವೆಯ ಜೊತೆಗೆ ಹಾಡುವುದರಲ್ಲೂ ಆಸಕ್ತಿ ಹೊಂದಿರುವ ಪಾರ್ವತಿ ಹೆಗಡೆ ‘ಕದಂಬವನವಾಸಿನಿ’ ಎಂಬ ಹವ್ಯಾಸಿ ಭಜನಾ ತಂಡವನ್ನು ಕಟ್ಟಿ, ಅದರ ಸಕ್ರಿಯ ಸದಸ್ಯರಾಗಿ ಭಜನಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

‘ ಭಜನೆ ಮಾಡುವುದರಿಂದ ಮನಸ್ಸಿಗೆ ಶಾಂತಿ ದೊರಕುತ್ತದೆ ‘ ಎನ್ನುವ ಇವರು ಈ ಹಿಂದೆ ಹೊನ್ನಾವರ ಮಂಡಲದ ಮಾತೃ ಪ್ರಧಾನೆಯಾಗಿಯೂ ಸೇವೆನಿರ್ವಹಿಸಿ, ಪ್ರಸ್ತುತ ಸರ್ವಧಾರಿ ವಲಯದ ಘಟಕವೊಂದರ ಮಾತೃ ಪ್ರಧಾನೆಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

‘ ನಂಬಿದವರನ್ನು ಕೈಬಿಡಲಾರರು ಶ್ರೀಗುರುಗಳು ‘ ಎಂಬ ಭರವಸೆಯೇ ಪಾರ್ವತಿ ಶ್ರೀಧರ ಹೆಗಡೆ ಅವರ ಬದುಕಿನ ಭರವಸೆಯ ಮಂತ್ರ. ನಮ್ಮ ಸಂಸ್ಕೃತಿ, ಸಂಸ್ಕಾರ, ಗೋಸೇವೆಯ ನಿಷ್ಠೆ ಮತ್ತು ಅಚಲವಾದ ಗುರುಭಕ್ತಿಯೇ ಇವರ ಮೊದಲ ಆದ್ಯತೆ. ಬದುಕಿನ ಪ್ರತಿ ಹೆಜ್ಜೆಯಲ್ಲೂ ಶ್ರೀಗುರುಗಳ ಕಾರುಣ್ಯದ ರಕ್ಷೆ ತಮಗೆ ದೊರೆಯುತ್ತಿದೆ ಎಂದು ಭಾವಪೂರ್ಣವಾಗಿ ನುಡಿಯುವ ಇವರು, ಇನ್ನೂ ಹೆಚ್ಚು ಶ್ರೀಮಠದ ಮತ್ತು ಗೋಮಾತೆಯ ಸೇವೆಯಲ್ಲಿ ತೊಡಗಿಸಿಕೊಳ್ಳುವ ಅಭಿಲಾಷೆ ಹೊಂದಿದ್ದಾರೆ.

ಪ್ರಸನ್ನಾ ವಿ. ಚೆಕ್ಕೆಮನೆ

Leave a Reply

Your email address will not be published. Required fields are marked *