ಸೋರುವ ಮನೆಗೆ ಸುರಿದ ಶ್ರೀಗುರುಕಾರುಣ್ಯದ ಮಳೆ

ಲೇಖನ


​ಬದುಕು ಒಮ್ಮೊಮ್ಮೆ ಅಂಧಕಾರದ ಕೂಪದಲ್ಲಿರುವಾಗ, ದೈವಿಕ ಸಂಕಲ್ಪವೊಂದು ಯಾವ ರೀತಿ ಬೆಳಕಾಗಿ ಬಂದು ಬದುಕಿನ ಕತ್ತಲನ್ನು ದೂರ ಸರಿಸಬಲ್ಲದು ಎನ್ನುವುದಕ್ಕೆ ಮುಳ್ಳೇರಿಯ ಹವ್ಯಕ ಮಂಡಲ ಗುಂಪೆ ವಲಯದ ಶ್ರಾವಣಕೆರೆ ಘಟಕದ ಪುತ್ತಿಗೆ ಕೃಷ್ಣ ಹೆಬ್ಬಾರರ ಕುಟುಂಬವೇ ನಿದರ್ಶನ.
‘ ಅಸಾಧ್ಯವನ್ನು ಸಾಧ್ಯವಾಗಿಸುವ ಗುರುಕರುಣೆಯ ಅನುಗ್ರಹ ‘ ಯಾವ ರೀತಿ ಗುರುಭಕ್ತರಿಗೆ ಒಲಿದು ಬರುತ್ತದೆ ಎನ್ನುವುದನ್ನು ನಾವು ಇಲ್ಲಿ ಕಣ್ಣಾರೆ ಕಾಣಬಹುದು.
ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯಾನುಗ್ರಹದೊಂದಿಗೆ, ಶಿಷ್ಯಭಕ್ತರ ಸಹಕಾರದ ಫಲವಾಗಿ ಇಂದು ಹೆಬ್ಬಾರರ ಶಿಥಿಲಗೊಂಡಿದ್ದ ನಿವಾಸವು ನವೀಕರಣಗೊಂಡು ಹೊಸರೂಪ ಪಡೆದಿದೆ. ಇದು ಅವರ ಅಂತರಂಗದ ಗುರುಭಕ್ತಿಗೆ ಸಂದ ಅನುಗ್ರಹ.
​ ‘ ಗುರು ಕರುಣೆಯೊಂದಿರಲು ಕೊರತೆ ಒರತೆಯಾದೀತು, ಅಭಾವ ಭಾವವಾದೀತು’ ಎಂಬುದಕ್ಕೆ ನಿದರ್ಶನ ಪುತ್ತಿಗೆಯ ಕೃಷ್ಣ ಹೆಬ್ಬಾರ್ ಮತ್ತು ಅವರ ಸಹೋದರ ಸಹೋದರಿಯ ಬದುಕು. ಎಲ್ಲಿ ಗುರುಭಕ್ತಿ ಇದೆಯೋ ಅಲ್ಲಿಗೆ ಗುರುಕೃಪೆ ಮಳೆಯಾಗಿ ಸುರಿಯುತ್ತದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

​ಕೃಷ್ಣ ಹೆಬ್ಬಾರರು, ಅವರ ಸಹೋದರ ಮತ್ತು ಸಹೋದರಿಯನ್ನೊಳಗೊಂಡ ಈ ಕುಟುಂಬ ಆರ್ಥಿಕವಾಗಿ ಬಹಳ ದುರ್ಬಲವಾಗಿದ್ದು, ವಾಸಿಸಲು ಯೋಗ್ಯವಲ್ಲದ, ಮಳೆ ನೀರು ಒಳಬರುತ್ತಿದ್ದ ಶಿಥಿಲಾವಸ್ಥೆಯ ಮನೆಯಲ್ಲಿ ಅವರು ದಿನಕಳೆಯುತ್ತಿದ್ದವರು. ಮೂಲಭೂತ ಸೌಕರ್ಯಗಳೂ ಅವರಲ್ಲಿ ಇರಲಿಲ್ಲ. ಮನೆಯ ಮಾಡು ಸಂಪೂರ್ಣವಾಗಿ ಶಿಥಿಲಗೊಂಡು, ಮಳೆಗಾಲ ಬಂತೆಂದರೆ ಮನೆಯೊಳಗೆ ಅಡುಗೆ ಮಾಡಲೂ ಜಾಗವಿಲ್ಲದಷ್ಟು ಸೋರುತ್ತಿತ್ತು.
​ಹಿಂದೆ ಅವರು ಸಾರ್ವಜನಿಕವಾಗಿ ಸಂಪರ್ಕಕ್ಕೂ ಸಿಗುತ್ತಿರಲಿಲ್ಲ. ಯಾರನ್ನೂ ಹತ್ತಿರ ಸೇರಿಸಿಕೊಳ್ಳಲು ಕೂಡ ಅಂಜುತ್ತಿದ್ದರು. ಅಪರಿಚಿತರನ್ನು ಕಂಡರೆ ದೂರ ಸರಿಯುತ್ತಿದ್ದ ಆ ಸಂಕೋಚದ ಸ್ವಭಾವ, ಇಂದು ಬದಲಾಗಿದೆ.
ಭವಸಾಗರ ದಾಟಿಸುವ ಶ್ರೀಗುರುಗಳ ಕರುಣೆಯಿರಲು ಭವ ಬಂಧನಗಳು ಕರಗಿ ಹೋಗುತ್ತವೆ ಎನ್ನುವುದಕ್ಕೆ ಇವರ ಬದಲಾದ ಜೀವನವೇ ಮಾದರಿ.

ಇತ್ತೀಚೆಗೆ​ ಗುಂಪೆ ವಲಯಾಧ್ಯಕ್ಷರ ಜೊತೆ ಕೃಷ್ಣ ಹೆಬ್ಬಾರರ ನವೀಕರಣಗೊಳ್ಳುತ್ತಿರುವ ಮನೆಗೆ ಭೇಟಿ ನೀಡಿದಾಗ ಅಲ್ಲಿ ಕಂಡುಬಂದ ದೃಶ್ಯಗಳು ಅವರ ಅನನ್ಯ ಗುರುಭಕ್ತಿಯ ನಿದರ್ಶನಗಳಾಗಿದ್ದವು. ಆ ಮನೆಯ ಸದಸ್ಯರಲ್ಲಿ ಶ್ರೀಗುರುಗಳ ಮೇಲೆ ಅಚಲವಾದ ಶ್ರದ್ಧಾ ಭಕ್ತಿಗಳು ತುಂಬಿವೆ.
​ಸಾರ್ವಜನಿಕರ ಸಂಪರ್ಕದಿಂದ ಸ್ವಲ್ಪ ದೂರವೇ ಉಳಿದಿರುವ ಅವರು ಜಾಲತಾಣಗಳಲ್ಲಾಗಲಿ, ಪತ್ರಿಕೆಗಳಲ್ಲಾಗಲಿ ಶ್ರೀಗುರುಗಳ ವಿಚಾರಗಳನ್ನು ಓದಿ, ನೋಡಿ ತಿಳಿದವರಲ್ಲ. ಅವರ ಬಳಿ ಸ್ಮಾರ್ಟ್ ಫೋನ್ ಸಹಾ ಇಲ್ಲದಷ್ಟು ಹೊರಜಗತ್ತಿನ ಸಂಪರ್ಕದಿಂದ ದೂರವಿದ್ದರೂ, ಅವರ ಹೃದಯಾಂತರಾಳದಲ್ಲಿ ಶ್ರೀಗುರುಗಳ ಬಗ್ಗೆ ಶ್ರದ್ಧಾಭಾವವಿದೆ.
ಶ್ರೀಗುರು ಕಾರುಣ್ಯವೇ ತಮ್ಮೆಡೆಗೆ ಹರಿದು ಬಂದಿದೆ ಎಂಬ ಸತ್ಯ ಅವರಿಗೆ ಮನವರಿಕೆಯಾಗಿದೆ. ಬಹುಶಃ ಅವರ ಅಂತರಂಗದ ಈ ಪವಿತ್ರ ಭಾವವೇ ಶ್ರೀಗುರು ಚರಣಗಳಿಗೆ ತಲುಪಿ ಅದುವೇ ಕಾರುಣ್ಯದ ರೂಪದಲ್ಲಿ ಹರಿದು ಬಂದು, ಈ ನಿವಾಸವಾಗಿ ರೂಪ ತಳೆದಿರಬೇಕು ಎಂದೆನಿಸುತ್ತಿದೆ. ಅವರ ಹೃದಯದ ಮೌನ ನಿವೇದನೆ ಶ್ರೀಗುರು ಸನ್ನಿಧಿಗೆ ತಲುಪಿದೆ ಎಂಬುದು ಈ ನವೀಕರಣದ ಕಾರ್ಯ ತೋರಿಸುತ್ತಿದೆ.

​ಗುರುಭಕ್ತರನ್ನು ಅವರು ಗೌರವಿಸುವ ರೀತಿ ಕಂಡರೆ ನಿಜಕ್ಕೂ ಮನಸ್ಸು ತುಂಬಿ ಬರುತ್ತದೆ. ನೀರ್ಚಾಲಿನಲ್ಲಿ ಶ್ರೀಗುರುಗಳ ದರ್ಶನ ಪಡೆದು ಬಂದ ನಮ್ಮನ್ನು ಕಂಡಾಗ ಸಾಕ್ಷಾತ್ ಶ್ರೀಗುರುಗಳ ಪ್ರತಿನಿಧಿಗಳೇ ತಮ್ಮ ಮನೆಗೆ ಬಂದಿದ್ದಾರೆ ಎಂಬಂತೆ ಅವರು ತೋರಿದ ಅಭಿಮಾನ ಅನನ್ಯವಾದುದು.
ಹಿಂದೆ ಜನರನ್ನು ಕಂಡರೆ ದೂರಸರಿಯುತ್ತಿದ್ದವರು, ಇಂದು ಗುರುಬಂಧುಗಳನ್ನು ಕಂಡರೆ ಶ್ರದ್ಧಾ ಭಾವದಿಂದ ಹತ್ತಿರ ಬರುತ್ತಿದ್ದಾರೆ ಎಂದರೆ ಇದು ಶ್ರೀಗುರುಗಳ ಅನುಗ್ರಹದ ಪ್ರಭಾವ ಎಂದೇ ಭಾವಿಸಬೇಕಿದೆ.
​ಬದುಕಿನ ಬವಣೆಗಳು ಅವರ ಹೃದಯದಲ್ಲಿರುವ ಗುರುಭಕ್ತಿಯನ್ನು ಕುಂದಿಸಲಿಲ್ಲ. ಅವರ ಈ ಪ್ರೀತಿ, ಅಭಿಮಾನ ಕಂಡಾಗ ಶ್ರೀಗುರುಗಳ ಕರುಣಾನುಗ್ರಹದ ಫಲದಿಂದ ಬದುಕಿಗೆ ದೊರಕುವ ಸೌಭಾಗ್ಯಗಳ ಬಗ್ಗೆ ಹೃದಯ ತುಂಬಿ ಬಂತು.

​ಶ್ರೀರಾಮಚಂದ್ರಾಪುರ ಮಠದ ಶಿಷ್ಯವೃಂದದ ಮತ್ತು ಗುರುಬಂಧುಗಳ ಸಹಕಾರದಿಂದ ಇಂದು ಈ ಮನೆಗೆ ಹೊಸ ರೂಪ ಬಂದಿದೆ. ಸೋರುತ್ತಿದ್ದ ಮನೆಗೆ ಭದ್ರತೆಯ ಆಶ್ರಯ ನೀಡಿ ನವೀಕರಿಸಿ ನೀಡಿದ ಗುರುಬಂಧುಗಳ ಸಹಕಾರವನ್ನು ಅವರು ಸದಾ ಸ್ಮರಿಸುತ್ತಾರೆ. ಅವರ ಶಿಥಿಲಗೊಂಡಿರುವ ಮನೆ ಇಂದು ನವೀಕರಣಗೊಂಡು ತಲೆಯೆತ್ತಿ ನಿಂತಿದೆ. ಆ ಕುಟುಂಬದ ದೃಷ್ಟಿಯಲ್ಲಿ ಶ್ರೀಗುರುಗಳ ಕಾರುಣ್ಯವೇ ನಿವಾಸದ ರೂಪದಲ್ಲಿ ತಮ್ಮೆದುರು ಬಂದು ನಿಂತಿದೆ. ಅಸಾಧ್ಯವನ್ನು ಸಾಧ್ಯವಾಗಿಸುವ ಕೃಪಾಸಿಂಧುವಿನ ಪೂರ್ಣ ಕೃಪೆಯಿಂದ ಆ ಗೃಹ ನವೀಕರಣಗೊಂಡಿದೆ ಎಂಬ ನಂಬಿಕೆ ಅವರದ್ದು.
​ ಶಿಷ್ಯ ಬಂಧುಗಳ ಸಹಕಾರದಿಂದ ಇಂದು ​ಮನೆಯನ್ನು ಮಳೆಯಿಂದ ರಕ್ಷಿಸಲು ಗಟ್ಟಿಯಾದ ಛಾವಣಿ ನಿರ್ಮಿಸಲಾಗಿದೆ. ಅವರು ಪ್ರೀತಿಯಿಂದ ಸಾಕುತ್ತಿದ್ದ ಗೋಮಾತೆಗೆ ಒಂದು ಸುಭದ್ರವಾದ ಆಶ್ರಯ ತಾಣ (ಹಟ್ಟಿ ), ಶೌಚಾಲಯ ಸೇರಿದಂತೆ ದೈನಂದಿನ ಬದುಕಿಗೆ ಬೇಕಾದ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲಾಗಿದೆ.
​ಭವಸಾಗರವನ್ನು ದಾಟಿಸುವ ಶ್ರೀಗುರುಗಳ ಅನುಗ್ರಹವಿದ್ದರೆ, ಬದುಕಿನಲ್ಲಿ ಪವಾಡ ಸದೃಶ ಬದಲಾವಣೆಯು ಸಾಧ್ಯ ಎಂಬುದನ್ನು ಕಣ್ಣಾರೆ ಕಾಣಬೇಕಿದ್ದರೆ ಈ ಕುಟುಂಬದ ಸದಸ್ಯರನ್ನು ಗಮನಿಸಿದರೆ ಸಾಕು. ಅವರ ಅಂತರಂಗದ ಪ್ರಾರ್ಥನೆ, ಅವರ ಮನದ ಮೌನ ನಿವೇದನೆ ಶ್ರೀಗುರುಚರಣಗಳಿಗೆ ತಲುಪಿದೆ ಎನ್ನುವುದಕ್ಕೆ ಅವರ ವರ್ತನೆಯಲ್ಲಿನ ಬದಲಾವಣೆಯೇ ಸಾಕ್ಷಿ. ಬದುಕಿನ ಬವಣೆಗಳ ನಡುವೆಯೂ ಅವರಿಗೆ ಇಂದು ನಿವೇಶನ ಭಾಗ್ಯ ಒದಗಿ ಬಂದಿರುವುದು ಗುರುಗಳ ಆಶೀರ್ವಾದದ ಫಲ. ಅಭಾವವಿದ್ದ ಜಾಗದಲ್ಲಿ ಇಂದು ಸುಖದ ಭಾವ ಮೂಡಿದೆ.
​ ಅಲ್ಲಿಂದ ಹೊರಡುವಾಗ, ಆ ಸಹೋದರ ಸಹೋದರಿಯರು ಅಂಗಳದ ತುದಿಯವರೆಗೂ ಬಂದು ನಮ್ಮನ್ನು ಬೀಳ್ಕೊಡುವ ಸಂದರ್ಭದಲ್ಲಿ ನಮ್ಮ ಕೈಯಲ್ಲಿದ್ದ ಮಂತ್ರಾಕ್ಷತೆಯನ್ನು ಅವರಿಗೆ ನೀಡಿದಾಗ ಅವರು ಅದನ್ನು ಸ್ವೀಕರಿಸಿದ ಆ ಭಾವ.., ಆ ಭಕ್ತಿ… ಆ ಕ್ಷಣವನ್ನು ಜ್ಞಾಪಿಸಿಕೊಂಡರೆ ನಿಜಕ್ಕೂ ಮಾತು ಮೂಕವಾಗುತ್ತದೆ, ಕಣ್ಣಂಚು ಹಸಿಯಾಗುತ್ತದೆ.

ನಾವು ಭೇಟಿ ನೀಡಿ ಬಂದ ಮಾರನೆಯ ದಿನವೇ ಪೂಜ್ಯ ಶ್ರೀಗಳ ದರ್ಶನಕ್ಕಾಗಿ ಹಂಬಲಿಸುತ್ತಿದ್ದ ಕೃಷ್ಣ ಹೆಬ್ಬಾರರು, ಪೆರಡಾಲ ಬ್ರಹ್ಮಕಲಶೋತ್ಸವಕ್ಕೆ ಆಗಮಿಸಿದ ಶ್ರೀಸಂಸ್ಥಾನದವರ ದರ್ಶನ ಪಡೆದು, ಫಲ ಕಾಣಿಕೆ ನೀಡಿ ಆಶೀರ್ವಾದ ಪಡೆದರು. ಸಾವಿರಾರು ಮಂದಿ ನೆರೆದಿದ್ದ ಭಕ್ತ ಸಾಗರದ ನಡುವೆ, ಕೃಷ್ಣ ಹೆಬ್ಬಾರ್ ಅವರಂತಹ ಸಾಮಾನ್ಯ ವ್ಯಕ್ತಿಗೂ ಶ್ರೀಗುರುಗಳ ಕೃಪಾಕಟಾಕ್ಷ ಸುಲಭವಾಗಿ ದೊರಕಿದೆ ಎಂದರೆ, ಅದಕ್ಕೆ ಅವರ ಅಚಲವಾದ ಶ್ರದ್ಧೆ ಮತ್ತು ನಿಷ್ಕಲ್ಮಶ ಭಕ್ತಿಯೇ ಕಾರಣ. ಅಂತರಂಗದ ಮೊರೆಗೆ ಶ್ರೀಚರಣಗಳು ಸ್ಪಂದಿಸುತ್ತವೆ ಎಂಬುದಕ್ಕೆ ಹೆಬ್ಬಾರರ ಕುಟುಂಬಕ್ಕೆ ದೊರಕಿದ ಈ ‘ಗುರುಕಾರುಣ್ಯವೇ ಸಾಕ್ಷಿ.
‘ಪುತ್ತಿಗೆ ಕೃಷ್ಣ ಹೆಬ್ಬಾರರ ಕುಟುಂಬದ ಅಂತರಂಗದಪ್ರಾರ್ಥನೆಗೆ, ಗೋಮಾತೆಯ ಮೇಲಿನ ಮಮತೆಗೆ ಇಂದು ಫಲ ದೊರಕಿದೆ. ಶ್ರೀಗುರುಗಳ ಆಶೀರ್ವಾದದ ಮಳೆ ಆ ಮನೆಯ ಮೇಲೆ ನಿರಂತರವಾಗಿ ಸುರಿಯಲಿ, ಅವರ ಬಾಳಿನಲ್ಲಿ ನೆಮ್ಮದಿ ನಿತ್ಯ ನೆಲೆಸಲಿ. ಕೃಪಾಸಿಂಧುವಿನ ಪೂರ್ಣ ಕೃಪೆ ಆ ಕುಟುಂಬಕ್ಕೆ ಸದಾ ಲಭಿಸಲಿ.

Leave a Reply

Your email address will not be published. Required fields are marked *