ಆಲೆಮನೆಯ ಆನಂದದ ಅಲೆ

ಗೋಶಾಲಾ

 

ಕುಮಟ: ಹೊಸಾಡದ ಭಾರತೀಯ ಗೋ ಬ್ಯಾಂಕ್ ಗೋಶಾಲೆಯಲ್ಲಿ ಕಾಮಧೇನುವಿನ ಸನ್ನಿಧಿಯಲ್ಲಿ ಕಾಮಧೇನು ಹವನ ಮುಂತಾದ ಕಾರ್ಯಕ್ರಮಗಳೊಂದಿಗೆ ಆಲೆಮನೆ ಹಬ್ಬ ನಾಲ್ಕು ದಿವಸಗಳ ಕಾಲ ನಡೆಯಿತು. ಈ ಕಾರ್ಯಕ್ರಮವು 19-02-2026 ರಂದು ಆರಂಭವಾಯಿತು. ಇದರ ಅಂಗವಾಗಿ ಉಪಾಸನಾ ಕಾರ್ಯಕ್ರಮಗಳು ಆರಂಭವಾದುವು. ಅನೇಕರು ಕಾಮಧೇನುವಿನ ಸನ್ನಿಧಿಯಲ್ಲಿ ವಿವಿಧ ಪೂಜೆಗಳನ್ನು ಸಲ್ಲಿಸಿದರು.

ಪ್ರಥಮ ದಿನದಂದು ವಿಶೇಷವಾಗಿ ವೈದಿಕ ಸಮಾವೇಶ ಕಾರ್ಯಕ್ರಮವು ಜರುಗಿತು. ವೈದಿಕರಿಂದ ದೀಪ ಬೆಳಗುವುದರೊಂದಿಗೆ ಆಲೆಮನೆ ಹಬ್ಬದ ಮೊದಲ ದಿನದ ಸಭಾ ಕಾರ್ಯಕ್ರಮ ಶುಭಾರಂಭಗೊಂಡಿತು. ಸಭಾ ಕಾರ್ಯಕ್ರಮದ ಅನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕೂಚಿಪುಡಿ, ತಾಳಮದ್ದಲೆ ಪ್ರದರ್ಶನಗಳು ನಡೆದವು.

ಎರಡನೇ ದಿನ ಕಾಮಧೇನು ಪೂಜೆ, ಗೋಪೂಜೆಗಳ ಜೊತೆ ಸಂಜೆ ಕಾಮಧೇನುವಿನ ಸನ್ನಿಧಿಯಲ್ಲಿ ಶತಾಧಿಕ ದೀಪ ಬೆಳಗಿ ಕಾಮಧೇನುವಿಗೆ ಆರತಿ ಎತ್ತಿ ಪ್ರಾರ್ಥನೆ ಸಲ್ಲಿಸಲಾಯಿತು. ಸಭಾಕಾರ್ಯಕ್ರಮದಲ್ಲಿ ಪ್ರತಿ ವರ್ಷದಂತೆ ಗೋಶಾಲೆಯ ಎಲ್ಲಾ ಗೋಪಾಲಕರನ್ನು ಗೌರವಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಭರತನಾಟ್ಯ ಪ್ರದರ್ಶನ ಅತ್ಯುತ್ತಮವಾಗಿ ಮೂಡಿ ಬಂತು.

ಆಲೆಮನೆ ಹಬ್ಬದಲ್ಲಿ ನೂರಾರು ಜನ ಪಾಲ್ಗೊಂಡರು. ಕಬ್ಬಿನ ಹಾಲು, ಬೆಲ್ಲ, ಕಬ್ಬಿನ ಹಾಲಿನ ತೊಡೆದೆವು, ಬೆಲ್ಲದ ಬಾಳೆದಿಂಡು, ಬೆಲ್ಲದ ಪಪ್ಪಾಯಿ, ಕಬ್ಬಿನ ಹಾಲಿನ ದೋಸೆ, ಕಬ್ಬಿನ ಹಾಲಿನ ರೊಟ್ಟಿ ಮುಂತಾದವುಗಳನ್ನು ಖರೀದಿಸಿ ಸವಿದರು. ಗವ್ಯೋತ್ಪನ್ನ ಮಾರಾಟ ಮಳಿಗೆ, ವಿವಿಧ ಬಗೆಯ ತಿಂಡಿ ತಿನಿಸುಗಳು, ಖಾದಿ ಬಟ್ಟೆಗಳು ಇನ್ನೂ ಹಲವಾರು ಬಗೆಯ ಅಂಗಡಿಗಳು ಜನರನ್ನು ಆಕರ್ಷಿಸಿದವು.‌ ಗೋಶಾಲೆಯಲ್ಲಿ ಅನೇಕರು ಗೋವುಗಳಿಗೆ ಗೋಗ್ರಾಸ ನೀಡಿ ನಲಿದರು. ಗೋರಕ್ಷಣೆಗೆ ದೇಣಿಗೆ, ಸುವಸ್ತು ಸಮರ್ಪಿಸಿದರು.

ಮೂರನೇ ದಿನ ಕಾಮಧೇನು ಹವನ, ಕಾಮಧೇನು ಪೂಜೆ, ಗೋಪೂಜೆಗಳ ಜೊತೆ ವಾರ್ಷಿಕ ‘ಗೋಸಂಧ್ಯಾ’ ಎಂಬ ಅಭಿಧಾನದೊಂದಿಗೆ ಭಾರತೀಯ ಗೋ ಬ್ಯಾಂಕ್ ವಾಟ್ಸಪ್ ಗುಂಪಿನ ಸಕ್ರಿಯ ಕಾರ್ಯಕರ್ತರ ಸಮ್ಮೇಳನ ಜರುಗಿತು. ಗೋವು, ಗವ್ಯೋತ್ಪನ್ನಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಆಲೆಮನೆ ಹಬ್ಬದ ಕೊನೆಯ ದಿನವು (22-02-2026) ಮಾತೆಯರ ಸಮಾವೇಶ, ಮಕ್ಕಳ ಸಂತೆ, ಭಜನ್ ಸಂಧ್ಯಾ ಎಂಬ ವಿಶೇಷತೆಗಳೊಂದಿಗೆ ಸಂಪನ್ನಗೊಂಡಿತು.

ಆಲೆಮನೆಯ ಅಷ್ಟೂ ದಿನಗಳಲ್ಲಿ ವಿವಿಧ ಗಣ್ಯರು ಭಾಗವಹಿಸಿದ್ದರು. ಅವರು ಗೋವಿನ ಮಹತ್ತ್ವದ ಬಗ್ಗೆ ಮಾತಾಡಿ ಗೋರಕ್ಷಣೆಗಾಗಿ ಶ್ರೀಸಂಸ್ಥಾನದವರ ಯೋಜನೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಆಬಾಲವೃದ್ಧರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಗೋಪ್ರೇಮವನ್ನು, ಗೋರಕ್ಷಣೆಗೆ ಬೆಂಬಲವನ್ನು, ಗೋಸೇವೆಗೆ ಬದ್ಧತೆಯನ್ನು ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *