‘ಧನ್ಯಜನನೀ’ ವಿಶೇಷ ಪುರಸ್ಕಾರ ಪ್ರದಾನ

ಮಠ

ಹೊಸನಗರ: ಪ್ರಧಾನ ಮಠದಲ್ಲಿ ನಡೆಯುತ್ತಿರುವ ‘ಶ್ರೀರಾಮೋತ್ಸವ’ದಲ್ಲಿ ಫಾಲ್ಗುನ ಶುಕ್ಲ ಅಷ್ಟಮಿಯಂದು (26-03-2026) ಮಾತೃಸಮಾವೇಶದಲ್ಲಿ ಪರಮಪೂಜ್ಯ ಶ್ರೀಸಂಸ್ಥಾನದವರು ‘ಧನ್ಯಜನನೀ’ ಪುರಸ್ಕಾರವನ್ನು ಅನುಗ್ರಹಿಸಿದರು. ಒಟ್ಟು 87 ಮಾತೆಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸನಾತನಧರ್ಮದ ಸಂರಕ್ಷಣೆಯ ದಿಶೆಯಲ್ಲಿ, ಸಮಾಜಕ್ಷಯವನ್ನು ತಡೆಯುವ ನಿಟ್ಟಿನಲ್ಲಿ ಶ್ರೀಸಂಸ್ಥಾನದವರು ಉದ್ಘೋಷಿಸಿದ್ದ ಈ ಪುರಸ್ಕಾರವು ಮೂರು ಅಥವಾ ಅದಕ್ಕೂ ಅಧಿಕ ಮಕ್ಕಳನ್ನು ಪಡೆದ ಮಾತೆಯರಿಗೆ ನೀಡುವ ಅನುಪಮ ಗೌರವ.

ಶ್ರೀಸಂಸ್ಥಾನದವರು ಶ್ರೀಸಂದೇಶವನ್ನು ಅನುಗ್ರಹಿಸುತ್ತಾ ‘ಸಂತಾನವೇ ಸಂಪತ್ತು. ಮಕ್ಕಳು ಬೇಡ ಎಂಬ ಆಧುನಿಕ ಚಿಂತನೆ ದೇಶದ ವಿನಾಶಕ್ಕೆ ಕಾರಣವಾಗಬಹುದಾಗಿದೆ. ಮಿತ ಸಂತಾನದಿಂದ ಸಮಾಜವೇ ಕ್ಷಯವಾಗುವ ಆಪತ್ತು ಎದುರಾಗಿದ್ದು, ಸಮಾಜ ತಕ್ಷಣ ಎಚ್ಚೆತ್ತುಕೊಳ್ಳಬೇಕಿದೆ’ ಎಂದು ನುಡಿದರು.

‘ಮದುವೆಯ ಮೂಲ ಉದ್ದೇಶವೇ ಉತ್ತಮ ಸಂತಾನವನ್ನು ಪಡೆಯುವುದಾಗಿದ್ದು, ಒಂದೇ ಮಗುವನ್ನು ಹೊಂದಿದರೆ ನಮ್ಮ ಜನಸಂಖ್ಯೆ ಅರ್ಧಕ್ಕೆ ಇಳಿದಂತೆ. ಇಬ್ಬರು ಮಕ್ಕಳನ್ನು ಪಡೆದರೆ ಅಲ್ಲಿಂದಲ್ಲಿಗೆಯೆಷ್ಟೇ ಆದಂತೆ. ಮೂರು ಮಕ್ಕಳನ್ನು ಪಡೆದಾಗ ಸಮಾಜ ಸಶಕ್ತವಾಗಲು ಸಾಧ್ಯ. ಮೂರು ಮಕ್ಕಳು ಎನ್ನುವಾಗ ತಲೆತಗ್ಗಿಸುವ ಆವಶ್ಯಕತೆ ಇಲ್ಲ. ಸಮಾಜ ಅಂತಹ ಮಾತೆಯರನ್ನು ಗೌರವಿಸಬೇಕಿದೆ’ ಎಂದರು.

‘2024ರ ಡಿಸೆಂಬರ್‌ ನಲ್ಲಿ ನಡೆದ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ನಾವು ಈ ವಿಷಯವನ್ನು ಪ್ರಸ್ತಾಪಿಸಿದ್ದೆವು. ಅದು ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿದ್ದು, ಹಿರಿಯ ವಯಸ್ಸಿನ ಅನೇಕರು ಯುವ ದಂಪತಿಗಳಿಗೆ ಮಕ್ಕಳೆಂಬ ಸಂಪತ್ತನ್ನು ಪಡೆಯುವಂತೆ ಪ್ರೇರಣೆ ನೀಡುತ್ತಿರುವುದು ಕಂಡುಬರುತ್ತಿದೆ. ತಾಯಿ ಎಂಬ ಪದವಿಯು ಜಗತ್ತಿನ ಎಲ್ಲಾ ಪದವಿಗಿಂತ ಬಹುದೊಡ್ಡ ಪದವಿಯಾಗಿದ್ದು, ಪ್ರಜಾ ಸಂಪತ್ತನ್ನು ಸಂವರ್ಧಿಸುವ ತಾಯಿಯನ್ನು ಸಮಾಜ ಗೌರವಿಸಬೇಕು. ಇಂದಿನ ಯುವ ಪೀಳಿಗೆ ದುಡಿಮೆಯಲ್ಲಿ ಮೈಮರೆತು ಪ್ರಜಾ ಸಂವರ್ಧನೆಯ ಕರ್ತವ್ಯದಿಂದ ದೂರವಾಗುತ್ತಿರುವುದು ಆತಂಕಕಾರಿ’ ಎಂದು ಕಳವಳ ವ್ಯಕ್ತಪಡಿಸಿದರು.

‘ಕಂಚಿಯ ಪರಮಾಚಾರ್ಯರು ಕೆಲವು ದಶಕಗಳ ಮೊದಲು 10 ಮಕ್ಕಳನ್ನು ಹೆತ್ತ ತಾಯಿಗೆ ‘ವೀರಮಾತಾ’ ಪ್ರಶಸ್ತಿ ನೀಡಿ ಆಶೀರ್ವಾದ ಮಾಡುತ್ತಿದ್ದರು. ಅಭಿನವ ಶಂಕರರಾದ ಅವರು ಪ್ರಜಾ ಸಂಪತ್ತಿನ ಮಹತ್ತ್ವವನ್ನು ಅಂದೇ ಗುರುತಿಸಿದ್ದರು’ ಎಂದು ನುಡಿದರು.

Leave a Reply

Your email address will not be published. Required fields are marked *