ಕುಮಟಾ: ‘ಸುವಾಸಿನೀ – ಸುವಾಸಿನ್ಯರ್ಚನಪ್ರೀತಾ’ ತಾಯಿ ಲಲಿತಾಂಬಿಕೆಯು ಸುವಾಸಿನಿಯ ರೂಪದಲ್ಲಿದ್ದು, ಸುವಾಸಿನಿಯರ ಪೂಜೆಯಿಂದ ಸಂಪ್ರೀತಳಾಗುವವಳು ಎಂದು ಲಲಿತಾ ಸಹಸ್ರನಾಮದಲ್ಲಿ ಹೇಳಲಾಗಿದೆ. ಅಂತಹ ಸಹಸ್ರಾಧಿಕ ಸುವಾಸಿನಿಯರಿಗೆ ಪೂಜೆ ಹಾಗೂ ಅನ್ನಸಂತರ್ಪಣೆ ಸಲ್ಲಿಸುವ ಪವಿತ್ರ ಕಾರ್ಯಕ್ರಮವು ಅಧಿಕಜ್ಯೇಷ್ಠ ಶುಕ್ಲ ತದಿಗೆಯಂದು (19-05-2026) ಹೊಳೆಗದ್ದೆಯ ಶ್ರೀಶಾಂತಿಕಾ ಪರಮೇಶ್ವರೀ ದೇವಿಯ ಸನ್ನಿಧಿಯಲ್ಲಿ ಸಂಪನ್ನಗೊಂಡಿತು.

ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯಸಂಕಲ್ಪ ಹಾಗೂ ಮಾರ್ಗದರ್ಶನದಂತೆ, ಹವ್ಯಕ ಮಹಾಮಂಡಲದ ಸಂಯೋಜನೆಯಲ್ಲಿ ಶಾಸ್ತ್ರೋಕ್ತ ವಿಧಾನದಲ್ಲಿ ಈ ಮಹಾಪೂಜೆ-ಮಹಾಸಂತರ್ಪಣೆ ನಡೆಯಿತು.
ಮಹಾಮಂಡಲದ ಮಾತೃಪ್ರಧಾನರ ಮುಖಾಂತರ ಶ್ರೀಸಂಸ್ಥಾನದವರ ಕರೆಗೆ ಸ್ಪಂದಿಸಿ, ವಿವಿಧ ಮಂಡಲಗಳಿಂದ-ಹಳ್ಳಿಗಳಿಂದ
ನಗರಗಳಿಂದ ಸುವಾಸಿನಿಯರು ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಪರಮಪೂಜ್ಯ ಶ್ರೀಸಂಸ್ಥಾನದವರು ಆಶೀರ್ವಚನವನ್ನು ಅನುಗ್ರಹಿಸಿ ‘ಉಣಿಸುವವಳ ಉದರ ತಂಪಾಗಿರಲಿ’ ಎಂದು ಶ್ರೀಸಂದೇಶ ನೀಡಿದರು.
ಕುಮಟಾ-ಹೊನ್ನಾವರ ಮಂಡಲಗಳ ಕಾರ್ಯಕರ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀಶಾಂತಿಕಾ ಪರಮೇಶ್ವರೀ ದೇವಾಲಯದ ಆಡಳಿತ ಮಂಡಳಿಯ ಸಹಕಾರದೊಂದಿಗೆ ಕಾರ್ಯಕ್ರಮದ ನಿರ್ವಹಣೆ ನಡೆಸಿದರು. ಕಾರ್ಯಕ್ರಮಕ್ಕಾಗಿ ಮಹಾಮಂಡಲ, ಮಂಡಲ, ವಲಯ ಹಾಗೂ ಘಟಕ ಮಟ್ಟದಲ್ಲಿ ಮನೆಮನೆಗೆ ತೆರಳಿ ಆಹ್ವಾನ ತಲುಪಿಸಲಾಗಿತ್ತು. ಅನೇಕರು ಕಾಯಿ, ಬಾಳೆಕಾಯಿ, ಅಕ್ಕಿ, ಕಾಳು-ಕಡಿ ಸೇರಿದಂತೆ ವಿವಿಧ ಸುವಸ್ತುಗಳನ್ನು ಸಮರ್ಪಿಸಿದ್ದರು.

ಸುವಾಸಿನಿಯರ ಭೋಜನ ವ್ಯವಸ್ಥೆಯನ್ನು ಪಾಕಜ್ಞರು ವ್ಯವಸ್ಥಿತವಾಗಿ ಹಾಗೂ ಸ್ವಾದಿಷ್ಟವಾಗಿ ಸಿದ್ಧಪಡಿಸಿದರು. ದೂರದ ಊರುಗಳಿಂದ ಆಗಮಿಸಿದ ನೂರಾರು ಭಕ್ತರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು.