ಅಶೋಕೆ: ವೀಗನ್ ಸಿದ್ಧಾಂತ ಹಾಲು – ತುಪ್ಪಗಳನ್ನು ಹಿಂಸೆಯ ವ್ಯಾಪ್ತಿಯಲ್ಲಿ ಸೇರಿಸಿದೆ. ಅಹಿಂಸಾತ್ಮಕವಾದ ಆ ಸಿದ್ಧಾಂತ ಸರಿ ಇದ್ದರೂ ಗೋವಿನ ಉತ್ಪನ್ನಗಳನ್ನು ಆ ವ್ಯಾಪ್ತಿಯಲ್ಲಿ ಸೇರಿಸುವ ಅಗತ್ಯವಿಲ್ಲ. ಗೋವಿನಲ್ಲಿ ಉತ್ಪತ್ತಿಯಾಗುವ ಹಾಲು ಕರುವಿನ ಅಗತ್ಯಕ್ಕಿಂತ ಹೆಚ್ಚಿರುತ್ತದೆ ಮತ್ತು ಹಾಲು ಕರೆಯುವಾಗ ಕರುವಿನ ಹಾಲನ್ನು ಬಿಟ್ಟು, ಉಳಿದ ಹಾಲನ್ನು ಮಾತ್ರ ಹಿಂಡುವ ಕ್ರಮ ಭಾರತದ ಉದ್ದಗಲಕ್ಕೂ ಇದೆ. ಹಾಗಾಗಿ ಹಾಲು – ತುಪ್ಪಗಳ ಹಿಂದೆ ಪ್ರಾಣಿ ಹಿಂಸೆ ಇಲ್ಲ ಎಂದು ಪರಮಪೂಜ್ಯ ಶ್ರೀಸಂಸ್ಥಾನದವರು ನುಡಿದರು.
‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಶ್ರಾವಣ ಕೃಷ್ಣ ನವಮಿಯಂದು (05-09-2026) ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಸಂಸ್ಥಾನದವರು, ಮನುಷ್ಯ ಜಾತಿಯ ಎಲ್ಲರಿಗೂ ಹೊಂದುವಂತಹ ಆಹಾರ ಎಂಬುದಾಗಿ ನೀರು – ತುಪ್ಪ – ಹಾಲು – ಅಕ್ಕಿಗಳನ್ನು ಆಯುರ್ವೇದ ಗುರುತಿಸಿದ್ದು, ಇವುಗಳನ್ನು ‘ಜಾತಿ ಸಾತ್ಮ್ಯ’ ಎಂಬುದಾಗಿ ಆಯುರ್ವೇದ ಗುರುತಿಸಿದೆ. ಇದು ಎಲ್ಲಾ ಪ್ರಕೃತಿಯ ಜೀವಿಗಳಿಗೂ ಒಗ್ಗುವ ಆಹಾರಗಳಾಗಿವೆ. ಹಾಗೆಯೇ ಈ ಪದಾರ್ಥಗಳನ್ನು ಆಯುರ್ವೇದ ಸೂಚಿಸಿರುವ ಹಿನ್ನೆಲೆಯಲ್ಲಿ ಕರ್ಮ ಸಿದ್ಧಾಂತದ ಪಾತ್ರವೂ ಇದ್ದು, ಈ ನಾಲ್ಕು ಪದಾರ್ಥಗಳಲ್ಲಿ ಪ್ರಾಣಿ ಹಿಂಸೆಯ ಪಾಲು ಇಲ್ಲವೇ ಇಲ್ಲ ಎನ್ನುವಷ್ಟೇ ಇದೆ ಎಂದು ಆಹಾರದಲ್ಲಿ ಕರ್ಮ ಸಿದ್ಧಾಂತದ ವಿಚಾರವನ್ನು ಪ್ರತಿಪಾದಿಸಿದರು.
ಪಾಪಗಳು ನಮ್ಮನ್ನು ಬಂದು ಸೇರುವ ಬಹುಮುಖ್ಯ ದ್ವಾರ ಆಹಾರ. ಆಹಾರದಿಂದ ದೋಷಗಳು ಬರದೇ ಇರುವಂತೆ ಜಾಗ್ರತೆ ವಹಿಸಬೇಕು ಎಂದು ಭಾರತೀಯ ಶಾಸ್ತ್ರಗಳು ಸೂಚಿಸಿವೆ. ನಾವು ನಡೆದುಕೊಂಡು ಹೋದಾಗಲೂ ಕೆಲವು ಜೀವಿಗಳು ಸಾಯಬಹುದು, ಸಸ್ಯಾಹಾರವನ್ನು ತಯಾರಿಸುವಾಗಲು ಸೂಕ್ಷ್ಮ ಜೀವಿಗಳೂ ಸೇರಿದಂತೆ ಕೆಲವು ಜೀವಿಗಳಿಗೆ ಹಿಂಸೆಯಾಗಬಹುದು. ಈ ಹಿನ್ನೆಲೆಯಲ್ಲೇ ಗೃಹಸ್ಥರಿಗೆ ‘ವೈಶ್ವದೇವ’ವನ್ನು ಶಾಸ್ತ್ರಗಳು ಸೂಚಿಸಿದ್ದು, ಅಡುಗೆ ಮಾಡುವಾಗ ಮಾಡಿದ ಹಿಂಸೆಯ ಪ್ರಾಯಶ್ಚಿತ್ತಕ್ಕೆ ಇರುವ ಕ್ರಮ ಇದಾಗಿದೆ ಎಂದು ತಿಳಿಸಿದರು.
ಕೆಲವು ವರ್ಷಗಳ ಹಿಂದೆ ಗೋಕರ್ಣದ ಹನುಮಜ್ಜನ್ಮಭೂಮಿಗೆ ಭೇಟಿ ನೀಡಿದಾಗಿನ ಪ್ರಸಂಗವೊಂದನ್ನು ಪ್ರಸ್ತಾಪಿಸಿದ ಶ್ರೀಸಂಸ್ಥಾನದವರು, ಅಲ್ಲಿದ್ದ ವಿದೇಶಿ ದಂಪತಿಗಳೊಬ್ಬರು ನಮ್ಮಲ್ಲಿ ಬಂದು, ತನ್ನ ಗಂಡನು ಮಾಂಸಾಹರವನ್ನು ಮಾಡುತ್ತಾನೆ. ಅದನ್ನು ತ್ಯಜಿಸುವಂತೆ ಸೂಚಿಸಿ ಎಂದು ನಮ್ಮಲ್ಲಿ ಕೇಳಿಕೊಂಡರು.
ಸಸ್ಯಾಹಾರದಲ್ಲಿ ಗಿಡ ಮರಗಳ ಹಿಂಸೆಯಾಗುತ್ತದೆ. ಅದೂ ಹಿಂಸೆಯಲ್ಲವೇ ಎಂದು ಆ ವ್ಯಕ್ತಿ ನಮ್ಮಲ್ಲಿ ಪ್ರಶ್ನಿಸಿದ. ಆದರೆ ಭಾರತೀಯ ಪರಂಪರೆಯು ಅಹಿಂಸೆಯಿಂದ ಬದುಕಬೇಕು, ಸಾಧ್ಯವಾಗದಿದ್ದರೆ ಅಲ್ಪ ಹಿಂಸೆಯಿಂದ ಬದುಕಬೇಕು ಎಂಬುದಾಗಿ ತಿಳಿಸಿದೆ. ಮಾಂಸದಲ್ಲೂ ಗುಣಗಳಿವೆ ಎಂಬುದಾಗಿ ಗ್ರಂಥಗಳಲ್ಲಿದೆ. ಕುರುಡಾಗಿ ಅದನ್ನು ತಿರಸ್ಕರಿಸುವಂತಿಲ್ಲ. ಆದರೆ ಹಿಂಸೆಯ ಪ್ರಮಾಣ ಅಧಿಕವಾಗಿರುವುದರಿಂದ ಅದನ್ನು ಸೂಚಿಸಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
**
ರಾಣಾಯನೀಯ ಶಾಖಾ ಸಾಮವೇದ ಪಾರಾಯಣ ಸಂಪನ್ನ
ನಾಡಿನ ಶ್ರೇಷ್ಠ ಸಾಮವೇದ ವಿದ್ವಾಂಸರಿಂದ ಐದು ದಿನಗಳ ಕಾಲ ನಡೆದ ರಾಣಾಯನೀಯ ಶಾಖಾ ಸಾಮವೇದ ಪಾರಾಯಣವು ಪೂರ್ಣವಾಯಿತು. ಪಾರಾಯಣಕರ್ತರಾದ ವೇ.ಮೂ ಶ್ರೀಸುಬ್ರಹ್ಮಣ್ಯ ಭಟ್ಟರು ಉಂಚಗೇರಿ, ವೇ.ಮೂ ಶ್ರೀವಿನಾಯಕ ಹೆಗಡೆ ಮಾಗೋಡು, ವೇ.ಬ್ರ.ಶ್ರೀ ರಾಜೇಶ ಭಟ್ಟರು, ವೇ.ಬ್ರ.ಶ್ರೀ ವೇಂಕಟರಮಣ ಭಟ್ಟರು, ವೇ.ಬ್ರ.ಶ್ರೀ ನಾರಾಯಣ ಭಟ್ಟರು, ವೇ.ಬ್ರ.ಶ್ರೀ ಗಣೇಶ ಭಟ್ಟರು ಆರೊಳ್ಳಿ ಇವರುಗಳನ್ನು ಪರಮಪೂಜ್ಯ ಶ್ರೀಸಂಸ್ಥಾನದವರು ಆಶೀರ್ವದಿಸಿದರು.
ಬೆಂಗಳೂರು ದಕ್ಷಿಣ ಹವ್ಯಕ ಮಂಡಲದ ಸರ್ವಧಾರಿ, ಜಯಪ್ರಕಾಶ, ಸೋಮೇಶ್ವರ, ಕೋರಮಂಗಲ ವಲಯಗಳ ಪರವಾಗಿ ಎ. ರಾಮ ಭಟ್ಟ ಕುಟುಂಬದವರು ಗುರುಭಿಕ್ಷಾಸೇವೆ ಸಮರ್ಪಿಸಿದರು. ಖ್ಯಾತ ಕಲಾವಿದ ದಿವಾಕರ ಹೆಗಡೆ ಕೆರೆಹೊಂಡ, ಮೋಹನ ಭಾಸ್ಕರ ಹೆಗಡೆ, ಜಿ. ಜಿ. ಹೆಗಡೆ, ಎನ್. ಜಿ. ಭಾಗ್ವತ್, ಅನಿತಾ ಭಟ್, ಅರ್ಚನಾ ಕುರುವೇರಿ, ದಿನಪ್ರಧಾನರಾಗಿ ಬೇರ್ಕಡವು ಶ್ಯಾಮ ಭಟ್ ದಂಪತಿಗಳು ಉಪಸ್ಥಿತರಿದ್ದರು.

























