|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಪ್ರತಿಭಾ ಪುರಸ್ಕಾರ

ಅಶೋಕೆ, ಬೆಂಗಳೂರು: ೨೦೨೫-೨೬ ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯೋಪಸ್ಥಿಯಲ್ಲಿ ಸಂಪನ್ನಗೊಂಡವು. ಭಾದ್ರಪದ ಕೃಷ್ಣ ಅಷ್ಟಮಿಯಂದು (ಅ. ೪) ಅಶೋಕೆಯಲ್ಲಿ ಹಾಗೂ ಆಶ್ವಯುಜ ಶುಕ್ಲ ಸಪ್ತಮಿ-ಅಷ್ಟಮಿಗಳಂದು (ಅ. ೧೭,೧೮) ಬೆಂಗಳೂರಿನಲ್ಲಿ ನಡೆದವು.

ಪರಮಪೂಜ್ಯ ಶ್ರೀಸಂಸ್ಥಾನದವರ ಕರಕಮಲಗಳಿಂದ ಹತ್ತನೇ ತರಗತಿ, ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿ, ಸಿ.ಎ, ಪಿ.ಹೆಚ್‌.ಡಿ, ಪ್ರದರ್ಶನ, ಕ್ರೀಡೆ, ಕಲೆ ಇತ್ಯಾದಿ ವಿಭಾಗಗಳಲ್ಲಿ ರಾಜ್ಯ, ಅಂತಾರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಸಾಧನೆ ಮಾಡಿದ ಹವ್ಯಕ ಮಹಾಮಂಡಲದ ವಿವಿಧ ಮಂಡಲಗಳ ವಿವಿಧ ವಯೋಮಾನದ ೪೦೦ಕ್ಕೂ ಅಧಿಕ ಸಾಧಕರು ಆಶೀರ್ವಾದ ಮಂತ್ರಾಕ್ಷತೆಯೊಂದಿಗೆ ಪುರಸ್ಕಾರ ಸ್ವೀಕರಿಸಿ ಧನ್ಯರಾದರು. ಚಿರಕಾಲ ಶುಭಸ್ಮರಣೆ ತಂದುಕೊಡುವ ಪರಮಪೂಜ್ಯ ಶ್ರೀಸಂಸ್ಥಾನದವರ ಹಸ್ತಾಕ್ಷರವನ್ನು ಒಳಗೊಂಡ ಪ್ರಶಸ್ತಿ ಪತ್ರವನ್ನು ಅವರಿಗೆ ನೀಡಲಾಗಿದ್ದು ವಿಶೇಷವಾಗಿತ್ತು.

ಹಿತಕ್ಕಾಗಿ ಬಳಸಬೇಕು
ಶ್ರೀಸಂಸ್ಥಾನದವರು ಆಶೀರ್ವಚನವನ್ನು ಅನುಗ್ರಹಿಸಿ ‘ವಿದ್ಯಾರ್ಥಿಗಳಲ್ಲಿ ಸಮಾಜದ ಉಜ್ವಲ ಹಾಗೂ ಬೆಳಕಿನ ಭವಿಷ್ಯ ಗೋಚರಿಸುತ್ತಿದೆ. ನಮ್ಮ ಸಮಾಜ ಚಿಕ್ಕದಾಗಿದ್ದರೂ, ಪ್ರತಿಭಾವಂತರೇ ತುಂಬಿರುವ ಸಮಾಜ. ಇಲ್ಲಿ ಪ್ರತಿಯೊಬ್ಬರೂ ಅದ್ಭುತ ಪ್ರತಿಭೆ ಹೊಂದಿದ್ದಾರೆ’ ಎಂದು ನುಡಿದರು. ‘ಅಯೋಗ್ಯಃ ಪುರುಷೋ ನಾಸ್ತಿ’ ಸುಭಾಷಿತದ ವಿವರಣೆ ನೀಡಿ ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ, ಮಾರ್ಗದರ್ಶನ ಹಾಗೂ ದೈವಾನುಕೂಲ ಲಭಿಸಿರುವುದು ಅವರ ಪುಣ್ಯ. ಬರಿಯ ಸಾಧನೆ ಅಥವಾ ಪ್ರತಿಭೆಯಷ್ಟೇ ಸಾಲದು; ಆ ಶಕ್ತಿ ಹಾಗೂ ವಿದ್ಯೆಯನ್ನು ನಾವು ಹೇಗೆ ಮತ್ತು ಎಲ್ಲಿ ಬಳಸುತ್ತೇವೆ ಎಂಬುದು ಮುಖ್ಯ. ಹನುಮಂತ ಮತ್ತು ರಾವಣನ ಉದಾಹರಣೆ ನೀಡುತ್ತಾ, ವಿದ್ಯಾರ್ಥಿಗಳು ಕೂಡ ತಮಗೆ ಒಲಿದ ಪ್ರತಿಭೆ-ವಿದ್ಯೆಯನ್ನು ಸ್ವಾರ್ಥಕ್ಕಷ್ಟೇ ಬಳಸದೆ, ಇಡೀ ಸಮಾಜ ಮತ್ತು ದೇಶದ ಹಿತಕ್ಕಾಗಿ ಬಳಸಬೇಕು ಎಂದು ಮಾರ್ಗದರ್ಶಿಸಿದರು.

ಆತ್ಮವಿದ್ಯೆಯೇ ನಿಜವಾದ ವಿದ್ಯೆ
ಕೇವಲ ಲೌಕಿಕ ವಿದ್ಯೆಗಳಷ್ಟೇ ಅಲ್ಲದೆ, ಮನುಷ್ಯನಿಗೆ ಶಾಂತಿ ಮತ್ತು ನೆಮ್ಮದಿಯನ್ನು ನೀಡುವ ಶ್ರೇಷ್ಠ ವಿದ್ಯೆಯಾದ ಆತ್ಮವಿದ್ಯೆಯ ಕಡೆಗೆ ನಾವೆಲ್ಲರೂ ಮುನ್ನಡೆಯಬೇಕು ಎಂದು ತಿಳಿಸಿದರು. ಗುರುಪೀಠದಿಂದ ನೀಡಲಾಗುತ್ತಿರುವ ಪುರಸ್ಕಾರ ಮತ್ತು ಮಂತ್ರಾಕ್ಷತೆ ಕೇವಲ ಗೌರವವಷ್ಟೇ ಅಲ್ಲ; ಅದು ಗುರುಗಳು ಮತ್ತು ಒಟ್ಟು ಸಮಾಜವು ಸದಾ ನಿಮ್ಮ ರಕ್ಷಣೆಗೆ ಜೊತೆಯಲ್ಲಿದೆ ಎಂಬುದರ ಸಂಕೇತ. ಬೆಳೆಯುತ್ತಿರುವ ಸೂರ್ಯನ ಬೆಳಕಿನಂತೆ ವಿದ್ಯಾರ್ಥಿಗಳ ಜೀವನದಲ್ಲಿ ಈ ಪ್ರತಿಭೆಯ ಪ್ರಭೆ ದಿನೇ ದಿನೇ ವೃದ್ಧಿಯಾಗಲಿ ಎಂದು ಶುಭ ಹಾರೈಸಿದರು.

ಬೆಂಗಳೂರಿನಲ್ಲಿ ನಡೆದ ಪ್ರತಿಭಾ ಪುರಸ್ಕಾರದಲ್ಲಿ ಪರಮಪೂಜ್ಯ ಶ್ರೀಸಂಸ್ಥಾನದವರು ಆಶೀರ್ವಚನ ಅನುಗ್ರಹಿಸಿ ವಿದ್ಯಾರ್ಥಿಗಳನ್ನು ಮಾರ್ಗದರ್ಶಿಸಿದರು.

ಪೂರ್ಣ ಮನಸ್ಸು
ಯಾವುದೇ ಕಾರ್ಯ ಮಾಡಿದರೂ ಪೂರ್ಣ ಮನಸ್ಸಿಟ್ಟು ಮಾಡಬೇಕು. ಸ್ನಾನ ಮಾಡಿದರೆ ಮೈ ಶುದ್ಧವಾಗಬೇಕು, ಊಟ ಮಾಡಿದರೆ ಹೊಟ್ಟೆ ತುಂಬಬೇಕು; ಹಾಗೆಯೇ ಓದುವಾಗ ಪೂರ್ಣ ಶ್ರದ್ಧೆ ಇಟ್ಟಿದ್ದರಿಂದಲೇ ಇಂತಹ ಸಾಧನೆ ಸಾಧ್ಯವಾಗಿದೆ. ಈ ಸಾಧನೆ ಪೋಷಕರಿಗೆ, ಮನೆಗೆ ಹಾಗೂ ಮಠಕ್ಕೆ ಹೆಮ್ಮೆ.

ಕೇವಲ ಅಂಕಗಳಲ್ಲ, ವ್ಯಕ್ತಿತ್ವ ಮುಖ್ಯ
ಕೇವಲ ಓದು ಅಥವಾ ಅಂಕಗಳಿಂದ ಮಾತ್ರ ಜೀವನ ಪೂರ್ಣವಾಗುವುದಿಲ್ಲ. ಓದಿನಲ್ಲಿ ಮುಂದಿದ್ದ ಅನೇಕರು ಬದುಕಿನಲ್ಲಿ ಎಡವುವುದನ್ನು ಕಾಣುತ್ತೇವೆ. ಜೀವನ ಕಲೆ, ಸದ್ಗುಣಗಳು, ಪರಹಿತ ಚಿಂತನೆ, ಮಾನವೀಯತೆ ಹಾಗೂ ಸರ್ವಾಂಗೀಣ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಅಷ್ಟೇ ಮುಖ್ಯ.

ಪರಂಪರೆ ಮತ್ತು ಸಂಸ್ಕೃತಿಯ ರಕ್ಷಣೆ
ಹೊರಗಿನ ಸಮಾಜದಲ್ಲಿ ನಾನಾ ರೀತಿಯ ಕಲುಷಿತ ವಾತಾವರಣ, ವಿಷಗಾಳಿ ಇರಬಹುದು; ಆದರೆ ಎಲ್ಲರೂ ಹೋಗುವ ತಪ್ಪಾದ ದಾರಿಯಲ್ಲಿ ನಾವು ಹೋಗಬಾರದು. ನಮಗೆ ಋಷಿಮುನಿಗಳ ಶ್ರೇಷ್ಠ ಪರಂಪರೆ ಮತ್ತು ಗೋತ್ರ ಸೂತ್ರಗಳ ಹಿನ್ನೆಲೆ ಇದೆ. ನಮ್ಮತನವನ್ನು ಬಿಟ್ಟುಕೊಟ್ಟು ಮುಂದೆ ಪಶ್ಚಾತ್ತಾಪ ಪಡಬಾರದು.

ಬದುಕನ್ನು ಸುಂದರ ಚಿತ್ರವನ್ನಾಗಿಸಿ
ವಿದ್ಯಾರ್ಥಿ ಜೀವನವೆಂದರೆ ಕೋರ ಹಾಳೆಯಿದ್ದಂತೆ; ಅದರಲ್ಲಿ ಗೀಚು-ಚಿತ್ತು ಮಾಡಿಕೊಳ್ಳದೆ, ಗುರು-ಹಿರಿಯರ ಮಾರ್ಗದರ್ಶನ ಮತ್ತು ಪರಂಪರೆಯ ಮೌಲ್ಯಗಳೊಂದಿಗೆ ಒಂದು ಸುಂದರವಾದ ಕಲಾಕೃತಿಯನ್ನಾಗಿ ಚಿತ್ರಿಸಿಕೊಳ್ಳಬೇಕು.

ಎಚ್ಚರಿಕೆ ಬೇಕು
ಈ ವಯಸ್ಸು ದಾರಿ ಸಿಗುವ ವಯಸ್ಸೂ ಹೌದು, ದಾರಿ ತಪ್ಪುವ ವಯಸ್ಸೂ ಹೌದು. ಹಾಗಾಗಿ ದೇಹದಲ್ಲಿ ಮತ್ತು ಮನಸ್ಸಿನಲ್ಲಿ ಯಾವುದೇ ಅಶುಚಿ ಪ್ರವೇಶ ಆಗದಂತೆ ಎಚ್ಚರಿಕೆ ವಹಿಸಬೇಕು. ನಾವು ಪವಿತ್ರವಾಗಿ ಉಳಿಯಬೇಕು, ಜೀವನ ಧನ್ಯವಾಗಬೇಕು. ಅದಕ್ಕೆ ಬೇಕಾದ ಎಚ್ಚರಿಕೆಯನ್ನು ನೀವೂ, ನಿಮ್ಮ ಹಿರಿಯರೂ ವಹಿಸಬೇಕು.