|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಅಮೃತಪಾನದ ಸುತ್ತಮುತ್ತ | ‘ಅನ್ನಂ ಬ್ರಹ್ಮ’ ಪ್ರವಚನ – 27

ಅಶೋಕೆ: ಔಷಧದ ಅಂಗಡಿಯಲ್ಲಿ ಎಲ್ಲಾ ಔಷಧಗಳನ್ನೂ ಎಲ್ಲರಿಗೂ ಕೊಡುವುದಿಲ್ಲ. ಕೆಲವು ಔಷಧಗಳನ್ನು ವೈದ್ಯರಿಂದ ಸೂಕ್ತ ಚೀಟಿಯನ್ನು ಹೊಂದಿದವರಿಗಷ್ಟೇ ನೀಡಲಾಗುತ್ತದೆ. ಹಾಗೆಯೇ ಕೆಲವು ಔಷಧಗಳಿಗೆ ಅದನ್ನು ಮಕ್ಕಳಿಗೆ ನೀಡುವಂತಿಲ್ಲ ಎಂಬ ನಿಯಮಗಳಿರುತ್ತದೆ. ಹಾಗೆಯೇ ಎಲ್ಲಾ ಯೋಗ – ಪ್ರಾಣಾಯಾಮಗಳನ್ನು ಎಲ್ಲರೂ ಮಾಡಬಾರದು. ಪ್ರತಿಯೊಂದಕ್ಕೂ ಅದರದ್ದೇ ಆದ ನಿಯಮಗಳಿವೆ ಎಂದು ಪರಮಪೂಜ್ಯ ಶ್ರೀಸಂಸ್ಥಾನದವರು ತಿಳಿಸಿದರು.

‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಶ್ರಾವಣ ಶುದ್ಧ ದ್ವಾದಶಿಯಂದು (24-08-2026) ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಅಮೃತಾಹಾರವೆಂಬ ಯೋಗ ಸೂಕ್ಷ್ಮದ ಕುರಿತಾಗಿ ಪ್ರವಚನವನ್ನು ಅನುಗ್ರಹಿಸುತ್ತಾ, ಯೋಗ ಸೂಕ್ಷ್ಮವಾದ ಅಮೃತಪಾನವನ್ನು ಸಿದ್ಧಿಸಿಕೊಂಡವನಿಗೆ ತಕ್ಷಕ ಸರ್ಪದ ಮಹಾವಿಷದಿಂದಲೂ ಕೂಡ ಏನೂ ಆಗದು. ಒಮ್ಮೆ ಈ ಅಮೃತವನ್ನು ಆಸ್ವಾದಿಸಲು ಕಲಿತ ಯೋಗಿಯು ಮತ್ತೆ ಮತ್ತೆ ಅದನ್ನು ಬಯಸುತ್ತಾನೆ. ಈ ಅಮೃತದ ಆಸ್ವಾದನೆಗೆ ಸಮಾನವಾದದ್ದು ಯಾವುದೂ ಇಲ್ಲ ಎಂದ ಶ್ರೀಸಂಸ್ಥಾನದವರು, ಜಾಲಂಧರ ಬಂಧ, ಮೂಲಬಂಧ, ಖೇಚರಿ, ವಿಪರೀತ ಕರಣಿ ಮುಂತಾದವುಗಳ ಕುರಿತು ವಿವರಿಸಿದರು.

ಮೂಲಬಂಧದ ಮೂಲಕ ಕುಂಡಲಿನೀ ಶಕ್ತಿಯ ಜಾಗೃತಿ ಪ್ರಕ್ರಿಯೆಯ ಯೋಗ ಸೂಕ್ಷ್ಮಗಳನ್ನು ವಿವರಿಸಿದ ಶ್ರೀಗಳು, ಮೂಲಬಂಧದ ವಿವರ, ಕುಂಡಲಿನೀ ಜಾಗೃತಿಯ ಮಾರ್ಗ, ಅದು ಜಾಗೃತವಾದಾಗ ಉಂಟಾಗುವ ಪ್ರಯೋಜನಗಳ ಕುರಿತಾಗಿ ಮಾಹಿತಿ ನೀಡಿದರು. ಈ ಪ್ರಕ್ರಿಯೆಯು ನಮ್ಮನ್ನು ಮೋಕ್ಷದೆಡೆಗೆ ಕರೆದೊಯ್ಯುತ್ತದೆ ಹಾಗೂ ಮೋಕ್ಷವೇ ಜೀವಿಯ ಪರಮ ಗುರಿ ಎಂದು ತಿಳಿಸಿದರು.

ಮಹಿಳೆಯರೇಕೆ ಮಾಡಬಾರದು?
ಮಹಿಳೆಯರು ಉಸಿರಾಟದ ವ್ಯಾಯಾಮಗಳನ್ನು ಮಾಡಬಹುದು. ಆದರೆ ಮೂಲಬಂಧ ಸಹಿತವಾದ ಪ್ರಾಣಾಯಾಮಗಳನ್ನು ಹಾಗೂ ಕೆಲವು ಯೋಗ ಪ್ರಕ್ರಿಯೆಗಳನ್ನು ಮಾಡಬಾರದು. ಯೋಗಶಾಸ್ತ್ರವು ಮಹಿಳೆಯರ ಕುರಿತಾಗಿ ಪಕ್ಷಪಾತವನ್ನು ಹೊಂದಿಲ್ಲ. ಆದರೆ ಕಾಳಜಿಯನ್ನು ಹೊಂದಿದೆ. ಕೆಲವು ಯೋಗ ಪ್ರಕ್ರಿಯೆಗಳಿಂದ ಮಹಿಳೆಯರ ದೇಹದ ಮೇಲೆ ವಿಪರೀತ ಪರಿಣಾಮಗಳು ಉಂಟಾಗುತ್ತವೆ. ಇದು ಮಹಿಳೆಯರ ಹೆಣ್ಣುತನಕ್ಕೆ ಸಂಚಕಾರವನ್ನು ತರಬಹುದು. ಹಾಗಾಗಿ ಎಚ್ಚರಿಕೆವಹಿಸಬೇಕು ಎಂದು ತಿಳಿಸಿಕೊಟ್ಟರು.

**

ಭಾರತೀಯ ಗ್ರಾನೈಟ್ ಮತ್ತು ಕಲ್ಲು ಕೈಗಾರಿಕೆಗಳ ಒಕ್ಕೂಟದ ಉಪಾಧ್ಯಕ್ಷ ಜಿ. ಎಮ್ ಹೆಗಡೆ, ನಿವೃತ್ತ ಪೊಲೀಸ್ ಆಯುಕ್ತ ಟಿ.ಜಿ. ಕೃಷ್ಣ ಭಟ್ ಉಪಸ್ಥಿತರಿದ್ಧು ಶ್ರೀಸಂಸ್ಥಾನದವರ ಆಶೀರ್ವಾದ ಪಡೆದರು. ಯುನೈಟೆಡ್ ಕಿಂಕಡಮ್ (ಯು.ಕೆ.) ಹವ್ಯಕ ವಲಯದ ಪರವಾಗಿ ವಿವೇಕ ಭಟ್ ಮತ್ತು ಕುಟುಂಬದವರು ಗುರುಭಿಕ್ಷಾ ಸೇವೆಯನ್ನು ಸಮರ್ಪಿಸಿದರು. ದಿನಪ್ರಧಾನರಾದ ರಮಾನಂದ ಹೊಸ್ಮನೆ ದಂಪತಿಗಳು, ಸುರೇಶ್ ಭಟ್ ಆಡುಗೋಡಿ, ದಿನೇಶ್ ಹೆಗಡೆ, ನರಸಿಂಹ ಭಟ್ಟ ಬಡಗು, ಡಾ. ರವಿ ಪಾಂಡವಪುರ, ಸುಧನ್ವ ಶಾಸ್ತ್ರಿ ಮುಂತಾದವರು ಉಪಸ್ಥಿತರಿದ್ದರು.

ಖಾರ್ವಿ ಸಮಾಜದಿಂದ ಸ್ವರ್ಣಪಾದುಕಾ ಪೂಜೆ: ಪಾರಂಪರಿಕವಾಗಿ ಶ್ರೀಮಠಕ್ಕೆ ನಡೆದುಕೊಳ್ಳುತ್ತಿರುವ ಖಾರ್ವಿ ಸಮಾಜ ಹಾಗೂ ಕೊಂಕಣ ಖಾರ್ವಿ ಸಮಾಜದಿಂದ ಸ್ವರ್ಣಪಾದುಕಾ ಪೂಜೆ ನಡೆಯಿತು. ‘ಗುರುಪೀಠ ಹಾಗೂ ಖಾರ್ವಿ ಹಾಗೂ ಕೊಂಕಣ ಖಾರ್ವಿ ಸಮಾಜದ ಮಧ್ಯೆ ಪಾರಂಪರಿಕವಾಗಿ ಗುರುಶಿಷ್ಯ ಬಂಧವಿದ್ದು, ಶ್ರೀಮಠಕ್ಕೆ ಖಾರ್ವಿ ಸಮಾಜದ ಕುರಿತಾಗಿ ಕಳಕಳಿ ಸದಾ ಇದೆ. ಸಮಾಜದ ಸುಖದುಃಖಗಳಿಗೆ ಶ್ರೀಮಠ ಸದಾ ಇರಲಿದೆ’ ಎಂದು ಪರಮಪೂಜ್ಯರು‌ ಆಶೀರ್ವಚನವನ್ನು ಅನುಗ್ರಹಿಸಿದರು. ಚಂದ್ರು ಖಾರ್ವಿ ಮರವಂತೆ, ವಾಸು ಖಾರ್ವಿ, ಸುರೇಶ್ ಖಾರ್ವಿ, ಚರಣ ಖಾರ್ವಿ, ಉಮಾಕಾಂತ ಖಾರ್ವಿ, ಗೋಪಾಲ ಖಾರ್ವಿ ಸೇರಿದಂತೆ ಸಮಾಜದವರು ಉಪಸ್ಥಿತರಿದ್ದರು.