ಅಶೋಕೆ: ‘ಮಾನವನ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಸರಿಯಾದ ನಿದ್ರೆ ಅತ್ಯಂತ ಆವಶ್ಯಕ. ಹೀಗಾಗಿ ರಾತ್ರಿ ಸಮಯದಲ್ಲಿ ಸುಖನಿದ್ರೆ ಮಾಡುವುದು ಆರೋಗ್ಯಕರ ಜೀವನದ ಮೂಲಾಧಾರ ಎಂದು ಪರಮಪೂಜ್ಯ ಶ್ರೀಸಂಸ್ಥಾನದವರು ತಿಳಿಸಿದರು.
ಆಷಾಢ ಕೃಷ್ಣ ಪಂಚಮಿಯಂದು (03-08-2026) ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯ ‘ಅನ್ನಂ ಬ್ರಹ್ಮ’ ಪ್ರವಚನ ಮಾಲಿಕೆಯಲ್ಲಿ ಆಹಾರಕ್ಕೆ ಸಂವಾದಿಯಾಗಿರುವ ನಿದ್ರೆಯ ಕುರಿತಾಗಿ ಮಾತನಾಡುತ್ತಾ, ದೇಹದಲ್ಲಿ ಜಠರಾಗ್ನಿ, ಧಾತುಗಳ ಕಾರ್ಯ ಮತ್ತು ನಿದ್ರೆಯ ನಡುವೆ ಅವಿನಾಭಾವ ಸಂಬಂಧವಿದ್ದು, ಸರಿಯಾದ ನಿದ್ರೆಯಿಂದ ದೇಹದ ಅಂಗಾಂಗಗಳಿಗೆ ವಿಶ್ರಾಂತಿ ದೊರೆತು ಹೊಸ ಚೈತನ್ಯ ಮೂಡುತ್ತದೆ. ನಿದ್ರೆ ಸರಿಯಾದರೆ, ಎದ್ದಾಗ ಚೈತನ್ಯತೆ ಮೂಡುತ್ತದೆ ಎಂದು ವಿವರಿಸಿದರು.

ಆಯುರ್ವೇದದ ಪ್ರಕಾರ ರಾತ್ರಿ ಜಾಗರಣೆ ಹಾಗೂ ಹಗಲು ನಿದ್ರೆ ಎರಡೂ ಆರೋಗ್ಯಕ್ಕೆ ಹಾನಿಕಾರಕ. ಹಗಲು ನಿದ್ರೆಯಿಂದ ಕಫದೋಷ ಹೆಚ್ಚಾಗಿ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಸಮಸ್ಯೆಗಳು ಸೇರಿದಂತೆ ಅನೇಕ ಕಾಯಿಲೆಗಳ ಅಪಾಯ ಹೆಚ್ಚುತ್ತದೆ. ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಹಗಲು ನಿದ್ರೆಯನ್ನು ತಪ್ಪಿಸುವಂತೆ ಸಲಹೆ ನೀಡಿದರು.
ವಿಶೇಷ ವಿನಾಯಿತಿ
ಬಾಲಕರು, ವೃದ್ಧರು, ಶ್ರಮಜೀವಿಗಳು, ಗಾಯಗೊಂಡವರು ಮತ್ತು ಪ್ರಯಾಣದಿಂದ ದಣಿದವರಿಗೆ ಹಗಲು ನಿದ್ದೆಗೆ ವಿಶೇಷ ವಿನಾಯಿತಿಯಿದ್ದು, ಖಾಲಿ ಹೊಟ್ಟೆಯಲ್ಲಿ ಒಂದು ಮುಹೂರ್ತ (ಸುಮಾರು 48 ನಿಮಿಷ) ಮಲಗಲು ಆಯುರ್ವೇದ ಅವಕಾಶ ನೀಡಿದೆ ಎಂದು ತಿಳಿಸಿದರು.
ಯುವ ಜನಾಂಗಕ್ಕೆ ಸಂದೇಶ
ವಿದ್ಯಾರ್ಥಿಗಳು ಹಾಗೂ ಯುವ ಜನರು ರಾತ್ರಿ ತಡವಾಗಿ ಜಾಗರಣೆ ಮಾಡುವುದನ್ನು ಮತ್ತು ಚರವಾಣಿ ಸೇರಿದಂತೆ ಡಿಜಿಟಲ್ ಸಾಧನಗಳ ಅತಿಯಾದ ಬಳಕೆಯನ್ನು ಕಡಿಮೆ ಮಾಡಬೇಕು. ನಿಗದಿತ ಸಮಯದಲ್ಲಿ ಮಲಗಿ, ಬೆಳಗ್ಗೆ ಸಕಾಲದಲ್ಲಿ ಏಳುವ ಅಭ್ಯಾಸ ಬೆಳೆಸಿಕೊಂಡರೆ ಆರೋಗ್ಯಕರ ಜೀವನ ಸಾಧ್ಯವಾಗುತ್ತದೆ.
ಸುಖನಿದ್ರೆಯಿಂದ ದೇಹದಲ್ಲಿ ಜಠರಾಗ್ನಿ ಪ್ರಬಲವಾಗಿ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ದೇಹಕ್ಕೆ ಬಲ, ಮನಸ್ಸಿಗೆ ಪ್ರಸನ್ನತೆ ಹಾಗೂ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ನಿದ್ರೆಯ ಕೊರತೆಯಿಂದ ಮಾನಸಿಕ ಒತ್ತಡ, ದೌರ್ಬಲ್ಯ, ಜ್ಞಾನಕ್ಷಯ ಹಾಗೂ ಜೀವನದ ಗುಣಮಟ್ಟ ಕುಸಿಯುವ ಸಾಧ್ಯತೆ ಇದೆ ಎಂದು ಹೇಳಿದರು.
ಸರಿಯಾದ ನಿದ್ರೆ ವ್ಯಕ್ತಿಯ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲ, ಮಾನಸಿಕ ಸಮತೋಲನ, ನೆನಪಿನ ಶಕ್ತಿ ಹಾಗೂ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯಕ್ಕೂ ಅತ್ಯಂತ ಮುಖ್ಯವಾಗಿದೆ. ನಿರಂತರವಾಗಿ ನಿದ್ರೆಯ ಕೊರತೆಯಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ನಿದ್ರೆಯನ್ನು ಜೀವನಶೈಲಿಯ ಅವಿಭಾಜ್ಯ ಅಂಗವಾಗಿ ಪರಿಗಣಿಸಿ ಅದರ ಮಹತ್ತ್ವವನ್ನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಯುರ್ವೇದ ಮತ್ತು ಆಧುನಿಕ ವೈದ್ಯಕೀಯ ಎರಡೂ ಆರೋಗ್ಯಕರ ಜೀವನಕ್ಕಾಗಿ ಒಂದೇ ಸಂದೇಶ ನೀಡುತ್ತವೆ. ರಾತ್ರಿ ಸಮಯದಲ್ಲಿ ಮಿತವಾದ ಆಹಾರ ಸೇವನೆ, ನಿಯಮಿತ ನಿದ್ರೆ ಹಾಗೂ ಬೆಳಗ್ಗೆ ಸಕಾಲದಲ್ಲಿ ಏಳುವ ಅಭ್ಯಾಸ ಬೆಳೆಸಿಕೊಂಡರೆ ಉತ್ತಮ ಆರೋಗ್ಯದೊಂದಿಗೆ ಸಂತೋಷಕರ ಜೀವನ ನಡೆಸಲು ಸಾಧ್ಯವಾಗುತ್ತದೆ. ಆರೋಗ್ಯ ಕಾಪಾಡಿಕೊಳ್ಳಲು ಔಷಧಿಗಿಂತ ಉತ್ತಮ ಜೀವನಶೈಲಿಯೇ ಅತ್ಯುತ್ತಮ ಪರಿಹಾರ ಎಂದು ವಿವರಿಸಿದರು.
**
ರಾಮಚಂದ್ರಾಪುರ ಮಂಡಲದ ನಿಟ್ಟೂರು, ತುಮರಿ, ಹೊಸನಗರ, ಹೊಸಕೊಪ್ಪ, ಸಂಪೆಕಟ್ಟೆ ವಲಯದ ಪರವಾಗಿ ಮಂಜುನಾಥ ದಂಪತಿಗಳು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ಪ್ರಕಾಶ ಬೇರಾಳ, ಲಕ್ಷ್ಮೀನಾರಾಯಣ ಕೌಲಕೈ, ರಚನಾ ಜಗದೀಶ ಹೊನ್ನಗೋಡು, ಗಣಪತಿ ಭಟ್ಟ ಜಟ್ಟಿಮನೆ, ಶಂಕರನಾರಾಯಣ ಮಾಗಲು ಸೇರಿದಂತೆ ರಾಮಚಂದ್ರಾಪುರ ಮಂಡಲದ ಪ್ರಮುಖರು ಹಾಗೂ ದಿನ ಪ್ರಧಾನರಾದ ಪ್ರಕಾಶ ಬಾಗಿ ದಂಪತಿಗಳು ಉಪಸ್ಥಿತರಿದ್ದರು.










