ಅಶೋಕೆ: ‘ಅನ್ನಬ್ರಹ್ಮ ಚಾತುರ್ಮಾಸ್ಯ’ಕ್ಕಾಗಿ ನಾಡಿನಾದ್ಯಂತ ಶಿಷ್ಯ ಭಕ್ತರಿಂದ ವಿವಿಧ ಸುವಸ್ತುಗಳು ಸಮರ್ಪಿತವಾಗಿದ್ದು, ಶ್ರೀಮಠದ 11 ಮಂಡಲಗಳು, ಅಂಗಸಂಸ್ಥೆಗಳು ಹಾಗೂ ರಾಜ್ಯಾದ್ಯಂತದ ಶಿಷ್ಯಭಕ್ತರಿಂದ ಸಮರ್ಪಿತವಾದ ಧಾನ್ಯಲಕ್ಷ್ಮಿಗೆ ದ್ವಾದಶಿಯಂದು (ಜು. ೨೬) ಪರಮಪೂಜ್ಯ ಶ್ರೀಸಂಸ್ಥಾನದವರು ಪೂಜೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಕುಮಟಾದ ಶಾಸಕ ದಿನಕರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.


ತ್ರಯೋದಶಿಯಂದು (ಜು. ೨೭) ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯಸಾನ್ನಿಧ್ಯದಲ್ಲಿ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಕಾರ್ಯಕರ್ತರ ಸಭೆ ಸಂಪನ್ನಗೊಂಡಿತು. ಕಾರ್ಯಕರ್ತರನ್ನು ಉದ್ದೇಶಿಸಿ ಅನುಗ್ರಹ ಸಂದೇಶ ನೀಡಿದ ಪರಮಪೂಜ್ಯ ಶ್ರೀಸಂಸ್ಥಾನದವರು ‘ಬಂದವನನ್ನು ಭಗವಂತ ಎಂದು ಕಾಣಬೇಕು. ಮಠಕ್ಕೆ ಬಂದವನು ಶ್ರೀಮಂತನೋ ಅಥವಾ ಬಡವನೋ ಎಂದು ಬೇಧ ಭಾವ ಮಾಡಬಾರದು. ಮಠಕ್ಕೆ ಬಂದವರೆಲ್ಲರೂ ಸಂತೃಪ್ತರಾಗಿ ಹಿಂತಿರುಗುವಂತೆ ಮಾಡಬೇಕಾದ ಕರ್ತವ್ಯ ಕಾರ್ಯಕರ್ತರದ್ದು’ ಎಂದು ನುಡಿದರು.
‘ನಮ್ಮ ಪ್ರಾಚೀನ ಆಚರಣೆಗಳ ಹಿನ್ನೆಲೆ ತಿಳಿಯದೇ ಇರುವುದರಿಂದ ನಮ್ಮ ಆಚಾರಗಳು ಕಂದಾಚಾರ ಇರಬಹುದು ಎಂದು ಭಾವಿಸಿ ಅನೇಕರು ಅವುಗಳನ್ನು ಕೈಬಿಟ್ಟಿದ್ದಾರೆ. ನಮ್ಮ ಪಾರಂಪರಿಕ ಆಚರಣೆಗಳ ವೈಜ್ಞಾನಿಕತೆ ಹಾಗೂ ಹಿನ್ನೆಲೆಯನ್ನು ಸಮಾಜಕ್ಕೆ ತಿಳಿಸಬೇಕಾದ ಅಗತ್ಯತೆ ಇದೆ. ಇಂದು ಆಹಾರ ಹಾಗೂ ಊಟದ ವ್ಯವಸ್ಥೆಯಲ್ಲಿ ಅನೇಕ ಲೋಪಗಳಿವೆ. ನಾವು ಏನನ್ನು ತಿನ್ನುತ್ತೇವೆ ಹಾಗೂ ಹೇಗೆ ತಿನ್ನುತ್ತೇವೆ ಎಂಬುದು ನಮ್ಮ ಮೇಲೆ ಮಹತ್ತರವಾದ ಪರಿಣಾಮವನ್ನು ಉಂಟುಮಾಡುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಪ್ರಾಚೀನ ಆಚರಣೆಗಳನ್ನು ಪುನಃ ಆರಂಭಿಸಲೇ ಬೇಕಾದ ಅಗತ್ಯವಿದೆ. ಹಾಗಾಗಿ ಈ ಚಾತುರ್ಮಾಸ್ಯವನ್ನು ವಿಚಾರ ಪ್ರಧಾನ ಚಾತುರ್ಮಾಸ್ಯವಾಗಿ ಆಚರಿಸಲಾಗುತ್ತಿದ್ದು, ಚಾತುರ್ಮಾಸ್ಯದಲ್ಲಿ ತತ್ತ್ವ ಸಂವಾದಗಳು ಇರಲಿವೆ’ ಎಂದರು.
ಕಾರ್ಯಕ್ರಮದಲ್ಲಿ ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ಶಾಸನತಂತ್ರದ ಕಾರ್ಯದರ್ಶಿ ಕೃಷ್ಣಪ್ರಸಾದ ಎಡಪ್ಪಾಡಿ, ಹವ್ಯಕ ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪು, ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಮಂಜುನಾಥ ಸುವರ್ಣಗದ್ದೆ, ಚಾತುರ್ಮಾಸ್ಯದ ಪ್ರಧಾನ ಸಂಯೋಜಕ ಚಂದನ್ ಶಾಸ್ತ್ರಿ ಸೇರಿದಂತೆ ಎಲ್ಲಾ ಭಾಗಗಳ ಪ್ರಮುಖರು ಉಪಸ್ಥಿತರಿದ್ದರು.

