|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಜಿಗಣಿಯಲ್ಲಿ ಗ್ರಾಮರಾಜ್ಯದ ನೂತನ ಮಳಿಗೆ ಲೋಕಾರ್ಪಣೆ

ಬೆಂಗಳೂರು: ಗ್ರಾಮೀಣ ಉತ್ಪಾದಕರು ಹಾಗೂ ನಗರ ಗ್ರಾಹಕರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವ ಗ್ರಾಮರಾಜ್ಯವು ಬೆಂಗಳೂರಿನ ಜಿಗಣಿಯ ನಿಸರ್ಗ ಲೇಔಟ್‌ನಲ್ಲಿ ತನ್ನ ನೂತನ ಮಳಿಗೆಯನ್ನು ಭಾದ್ರಪದ ಶುಕ್ಲ ದಶಮಿಯಂದು (21-09-2026) ಆರಂಭಿಸಿತು. ಇದರೊಂದಿಗೆ ಗ್ರಾಮರಾಜ್ಯವು ಬೆಂಗಳೂರಿನಲ್ಲಿ ತನ್ನ 7ನೇ ಮಳಿಗೆಯನ್ನು ಆರಂಭಿಸಿದೆ.

ಉದ್ಘಾಟನಾ ಕಾರ್ಯಕ್ರಮವು ಪೂಜಾ ವಿಧಿವಿಧಾನಗಳೊಂದಿಗೆ ನೆರವೇರಿತು. ಬಳಿಕ ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ದೀಪ ಬೆಳಗಿಸುವ ಮೂಲಕ ಮಳಿಗೆಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ನಿಸರ್ಗ ಲೇಔಟ್ ಕಾರ್ಯದರ್ಶಿ ಹಾಗೂ ಹಾಗೂ ಪಂಚಾಯತ್ ಸದಸ್ಯರಾದ ಮೈಕೋ ನಾಗರಾಜ್, ನಿರ್ಮಾಣ ಟೆಂಪಲ್ ಟ್ರಸ್ಟ್ ವಿಶ್ವಸ್ತರು ಹಾಗೂ ನಿಸರ್ಗ ಲೇಔಟ್‌ನ ಲೇಔಟ್ ಆಫೀಸರ್ ರನ್ನ ಕವಿ, ಸೋಮೇಶ್ವರ ವಲಯಾಧ್ಯಕ್ಷರಾದ ಮಹಾಬಲೇಶ್ವರ ಹೆಗಡೆ, ದಕ್ಷಿಣ ಬೆಂಗಳೂರು ಹವ್ಯಕ ಮಂಡಲದ ಅಧ್ಯಕ್ಷರಾದ ಎನ್. ಜಿ. ಭಾಗವತ್ ಹಾಗೂ ಗ್ರಾಮರಾಜ್ಯದ ವ್ಯವಸ್ಥಾಪಕರಾದ ರವಿಶಂಕರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮೈಕೋ ನಾಗರಾಜ್ ಅವರು ಮಾತನಾಡಿ, ಇಂದಿನ ಪೀಳಿಗೆಯ ಬದಲಾಗುತ್ತಿರುವ ಆಹಾರ ಪದ್ಧತಿಯ ಕುರಿತು ಮಾತನಾಡಿ, ಜನರಿಗೆ ನೈಸರ್ಗಿಕ ಆಹಾರ ಉತ್ಪನ್ನಗಳನ್ನು ಒದಗಿಸುವ ಗ್ರಾಮರಾಜ್ಯದ ಪ್ರಯತ್ನವನ್ನು ಶ್ಲಾಘಿಸಿದರು. ನಿಸರ್ಗ ಲೇಔಟ್‌ನಲ್ಲಿ ಗ್ರಾಮರಾಜ್ಯದ ಮಳಿಗೆ ಆರಂಭವಾಗಿರುವುದು ಸ್ಥಳೀಯ ನಿವಾಸಿಗಳಿಗೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು. ಮುಂದಿನ ದಿನಗಳಲ್ಲಿ ಗ್ರಾಮರಾಜ್ಯ ಇನ್ನಷ್ಟು ಯಶಸ್ಸು ಹಾಗೂ ಅಭಿವೃದ್ಧಿ ಸಾಧಿಸಲಿ ಎಂದು ಶುಭ ಹಾರೈಸಿದರು. ಶ್ರೀಯುತ ರನ್ನ ಕವಿ ಅವರು ಮೈಕೋ ನಾಗರಾಜ್ ಅವರ ಮಾತುಗಳಿಗೆ ಸಹಮತ ವ್ಯಕ್ತಪಡಿಸಿ, ಗ್ರಾಮರಾಜ್ಯದ ಮುಂದಿನ ಬೆಳವಣಿಗೆ ಹಾಗೂ ಯಶಸ್ಸಿಗೆ ಶುಭ ಹಾರೈಸಿದರು. ಗ್ರಾಮರಾಜ್ಯದ ವ್ಯವಸ್ಥಾಪಕರಾದ ಶ್ರೀಯುತ ರವಿಶಂಕರ್ ಅವರು ಮಾತನಾಡಿ, ಗ್ರಾಮರಾಜ್ಯದ ಉದ್ದೇಶ ಹಾಗೂ ಜನರಿಗೆ ನೈಸರ್ಗಿಕ ಮತ್ತು ಗುಣಮಟ್ಟದ ಉತ್ಪನ್ನಗಳನ್ನು ತಲುಪಿಸುವ ಸಂಸ್ಥೆಯ ಪ್ರಯತ್ನಗಳ ಕುರಿತು ವಿವರಿಸಿದರು. ಹೆಚ್ಚಿನ ಜನರಿಗೆ ಗ್ರಾಮರಾಜ್ಯದ ಉತ್ಪನ್ನಗಳನ್ನು ತಲುಪಿಸುವ ಮೂಲಕ ಗ್ರಾಮರಾಜ್ಯವನ್ನು ಇನ್ನಷ್ಟು ಬೆಳೆಸುವ ಉದ್ದೇಶವಿದೆ ಎಂದು ತಿಳಿಸಿದರು.

ಗಣ್ಯ ಅತಿಥಿಗಳಿಗೆ ಗ್ರಾಮರಾಜ್ಯ ವತಿಯಿಂದ ಗೌರವಪೂರ್ವಕವಾಗಿ ಉಡುಗೊರೆಗಳನ್ನು ನೀಡಿ ಗೌರವಿಸಲಾಯಿತು. ಗ್ರಾಮರಾಜ್ಯವು ನೈಸರ್ಗಿಕ ಕೃಷಿ, ಸಾಂಪ್ರದಾಯಿಕ ಆಹಾರ ಪದ್ಧತಿ ಹಾಗೂ ಗುಣಮಟ್ಟದ ಉತ್ಪನ್ನಗಳಿಗೆ ಆದ್ಯತೆ ನೀಡುತ್ತಾ, ಗ್ರಾಮೀಣ ಉತ್ಪಾದಕರ ಉತ್ಪನ್ನಗಳನ್ನು ಹೆಚ್ಚಿನ ಗ್ರಾಹಕರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಜಿಗಣಿಯಲ್ಲಿ ಆರಂಭಗೊಂಡಿರುವ ನೂತನ ಮಳಿಗೆಯು ಈ ಪ್ರಯತ್ನಕ್ಕೆ ಮತ್ತಷ್ಟು ಬಲ ನೀಡಲಿದೆ.