ಬೆಂಗಳೂರು: ದೇವತೆಗಳು ಕೋಲನ್ನು ತೆಗೆದುಕೊಂಡು ಜೀವಿಗಳಿಗೆ ದಂಡನೆ ಮಾಡುವುದಿಲ್ಲ. ಯಾರನ್ನಾದರೂ ಉದ್ಧಾರ ಮಾಡಬೇಕೆಂದರೆ ದೇವರು ಜೀವಿಗೆ ಒಳ್ಳೆಯ ಬುದ್ಧಿಯನ್ನು ಅನುಗ್ರಹಿಸುತ್ತಾರೆ. ಹಾಗೆಯೇ ಶಿಕ್ಷೆ ಕೊಡಬೇಕಾದಾಗ ಜೀವಿಯ ಬುದ್ಧಿಯನ್ನು ಕೆಡಿಸುವ ಮೂಲಕ ಜೀವಿಯು ತೊಂದರೆಗೆ ಒಳಗಾಗುವಂತೆ ಮಾಡುತ್ತಾರೆ ಎಂದು ಪರಮಪೂಜ್ಯ ಶ್ರೀಸಂಸ್ಥಾನದವರು ತಿಳಿಸಿದರು.
ಗಿರಿನಗರದಲ್ಲಿರುವ ಶ್ರೀಮಠದ ಬೆಂಗಳೂರು ಶಾಖೆ ಶ್ರೀರಾಮಾಶ್ರಮದಲ್ಲಿ ನಡೆಯುತ್ತಿರುವ ‘ನವರಾತ್ರ ನಮಸ್ಯಾ’ ಕಾರ್ಯಕ್ರಮದಲ್ಲಿ ಮಹಾನವಮಿಯಂದು (19-10-2026) ಲಲಿತೋಪಾಖ್ಯಾನ ಪ್ರವಚನವನ್ನು ಅನುಗ್ರಹಿಸಿದ ಶ್ರೀಸಂಸ್ಥಾನದವರು, ನಮ್ಮ ಪತನ ಹಾಗೂ ಏಳ್ಗೆಯ ಲಕ್ಷಣಗಳನ್ನು ನಮ್ಮಲ್ಲೇ ಕಾಣಬಹುದಾಗಿದ್ದು, ನಮ್ಮ ಬುದ್ಧಿ ಯಾವ ದಿಕ್ಕಿನಲ್ಲಿ ಸಾಗಿದೆ, ನಮ್ಮ ಆಚರಣೆಗಳು ಏನಾಗಿದೆ ಎಂಬುದನ್ನು ನಾವು ಅವಲೋಕಿಸಿಕೊಂಡರೆ ನಮ್ಮ ಭವಿಷ್ಯವನ್ನು ನಾವು ಅರಿತುಕೊಳ್ಳಬಹುದು. ನಾವು ಸರಿದಾರಿಯಲ್ಲಿದ್ದರೆ ದೇವರು ನಮ್ಮನ್ನು ಅನುಗ್ರಹಿಸುತ್ತಿದ್ದಾನೆ ಎಂದೂ, ನಾವು ತಪ್ಪು ದಾರಿಯಲ್ಲಿ ಹೆಜ್ಜೆಯನ್ನಿಟ್ಟಿದ್ದರೆ ನಾವು ದೇವರು ಅವಕೃಪೆಗೆ ಒಳಗಾಗಿದ್ದೇವೆ ಎಂದು ಅರ್ಥ. ಶಿವ ಭಕ್ತನಾಗಿ, ನಿತ್ಯ ದೇವರ ಆರಾಧನೆಯಲ್ಲಿ ತೊಡಗಿಸಿಕೊಂಡಿದ್ದ ಭಂಡಾಸುರನು, ವಿಷ್ಣು ಮಾಯೆಯಿಂದ ಮೋಹಿನಿಯ ಮೋಹಕ್ಕೆ ಒಳಗಾಗಿ ಅವುಗಳಿಂದ ವಿಮುಖನಾದ. ಆ ಮೂಲಕ ಅವನ ಅವನತಿ ಆರಂಭವಾಯಿತು ಎಂದು ಭಂಡಾಸುರನ ಕಥಾಭಾಗವನ್ನು ವಿವರಿಸಿದರು. ನಾವು ಅನುಷ್ಠಾನವನ್ನು ಬಿಟ್ಟರೆ ಮುಂದೆ ಹೊಂಡಕ್ಕೆ ಬೀಳುತ್ತೇವೆ. ಸಾತ್ತ್ವಿಕವಾದುದನ್ನು ಮಾಡುವ ಮನಸ್ಸು ಬಂದರೆ ಆಶೀರ್ವಾದ ಆಗುತ್ತಿದೆ ಎಂದರ್ಥ. ಹಾಗಾಗಿ ನಮ್ಮ ಪತನ-ಉತ್ಥಾನಗಳನ್ನು ನಮ್ಮ ಆಚರಣೆಗಳು ತೋರಿಸುತ್ತವೆ ಎಂದು ಎಚ್ಚರಿಸಿದರು.
ಸೃಷ್ಟಿಯನ್ನು ನಾವು ಯಾವಾಗಲೂ ವ್ಯತ್ಯಾಸಗೊಳಿಸಲು ಹೋಗಬಾರದು. ಸೃಷ್ಟಿ ಎಂಬುದು ಶಂಕರವಾದರೆ, ಸೃಷ್ಟಿಯಲ್ಲಿ ನಮ್ಮ ಹಸ್ತಕ್ಷೇಪ ಸಂಕರವಾಗಿದೆ. ನೈಸರ್ಗಿಕ ಪ್ರಕ್ರಿಯೆ ಯಾವಾಗಲು ಸುಂದರವಾಗಿದ್ದು, ಅದರಲ್ಲಿ ನಾವು ಹಸ್ತಕ್ಷೇಪವನ್ನು ಮಾಡಬಾರದು. ತಾರಕಾಸುರನ ವಧೆಯೆ ಶಿವನ ಮಗನಿಂದ ಆಗಬೇಕಿತ್ತು. ಧ್ಯಾನದಲ್ಲಿದ್ದ ಶಿವನನ್ನು ಒಲಿಸಿಕೊಳ್ಳಲು ದೇವತೆಗಳು ತಪ್ಪಸ್ಸಿನ ಮಾರ್ಗವನ್ನು ಹಿಡಿಯಬಹುದಾಗಿತ್ತು. ಆದರೆ ಶಿವನ ಮೇಲೆ ಮನ್ಮಥನ ಬಾಣವನ್ನು ಶಿವನ ಮೇಲೆ ಪ್ರಯೋಗಿಸಿದರು. ಹೂವನ್ನು ಬಾಣವಾಗಿ ಪ್ರಯೋಗ ಮಾಡುವ ಬದಲು, ಅದೇ ಹೂವನ್ನು ಪೂಜೆಗೆ ಬಳಸಿದ್ದರೆ ಶಿವ ಸಂಪ್ರೀತನಾಗುತ್ತಿದ್ದ. ತಾರಕಾಸುರನ ಸಂಹಾರವಾಗುತ್ತಿತ್ತು. ಆದರೆ ಮನ್ಮಥನ ಬಾಣ ಪ್ರಯೋಗವಾದ್ದರಿಂದ ತಾರಕಾಸುರನ ಪೀಡೆಯ ಜೊತೆಗೆ ಭಂಡಾಸುರನ ಕಾಟವನ್ನೂ ದೇವತೆಗಳು ಅನುಭವಿಸುವಂತಾಯಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಲಲಿತೋಪಾಖ್ಯಾನದ ಪ್ರವಚನದಲ್ಲಿ ದೇವಿಯನ್ನು ವರ್ಣಿಸುತ್ತಿರುವುದು ರಾಜರಾಜೇಶ್ವರಿಯ ದಿವ್ಯ ರೂಪ ನಮ್ಮ ಚಿತ್ತಭಿತ್ತಿಯಲ್ಲಿ ಮೂಡಿ ಧ್ಯಾನದಲ್ಲಿ ಆಕೆ ಮೂಡಲಿ ಎಂದಾದರೆ, ಈ ಪ್ರವಚನ ಮಾಲಿಕೆಯಲ್ಲಿನ ಕಥೆಗಳು ಅದರಲ್ಲಿನ ತತ್ತ್ವಗಳನ್ನು ನಾನು ನೆನಪಿಡಲು ಸಹಕಾರಿ. ಈ ಪ್ರವಚನ ಮಾಲಿಕೆಯು ಹಯಗ್ರೀಯನಿಂದ ಅಗಸ್ತ್ಯ ಮಹರ್ಷಿಗಳಿಗೆ ಉಪದೇಶಿಸಿದ ಲಲಿತೋಪಾಖ್ಯಾನದ ಯಥಾವತ್ ಪ್ರಸ್ತುತಿಯಾಗಿದ್ದು, ಜನಮನ ರಂಜನೆಯ ವಿಷಯಗಳನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿಲ್ಲ ಎಂದರು.
**
ಭಾ.ಜ.ಪ. ಪಕ್ಷದ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಬಸವನಗುಡಿ ಶಾಸಕ ಎಲ್. ಎ. ರವಿ ಸುಬ್ರಹ್ಮಣ್ಯ, ಖ್ಯಾತ ಶಿಲ್ಪಿ ಜಿ. ಎಲ್. ಭಟ್, ಉದ್ಯಮಿ ಅರವಿಂದ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಸಂಸ್ಥಾನದವರ ಆಶೀರ್ವಾದ ಪಡೆದರು. ಸರಸ್ವತೀ ಸೂಕ್ತ ಹವನ, ದುರ್ಗಾದೀಪ ನಮಸ್ಕಾರ, ಕುಂಕುಮಾರ್ಚನೆ, ರಾಜರಾಜೇಶ್ವರೀ ಪೂಜೆ ನಡೆಯಿತು. ಸುಬ್ರಾಯ ಹೆಗಡೆ ಹೊಸಕೋಟೆ, ಸಂದೀಪ್ ಮೂರ್ತಿ, ಪ್ರಕಾಶ್ ಮಳಲಗದ್ದೆ, ದಿನಪ್ರಧಾನರಾಗಿ ಸುಬ್ರಹ್ಮಣ್ಯ ಕೆರೆಮೂಲೆ ದಂಪತಿಗಳು ಉಪಸ್ಥಿತರಿದ್ದರು.
