ಬೆಂಗಳೂರು: ಮೋಹವೆಂಬುದು ದೇವಿಯ ಮಾಯೆಯಾಗಿದ್ದು, ಮಾಯೆಯು ಎಲ್ಲವನ್ನೂ ಮರೆಸಿಬಿಡುತ್ತದೆ ಎಂದು ಪರಮಪೂಜ್ಯ ಶ್ರೀಸಂಸ್ಥಾನದವರು ತಿಳಿಸಿದರು.
ಗಿರಿನಗರದಲ್ಲಿರುವ ಶ್ರೀಮಠದ ಬೆಂಗಳೂರು ಶಾಖೆ ಶ್ರೀರಾಮಾಶ್ರಮದಲ್ಲಿ ನಡೆಯುತ್ತಿರುವ ‘ನವರಾತ್ರ ನಮಸ್ಯಾ’ ಕಾರ್ಯಕ್ರಮದಲ್ಲಿ ದುರ್ಗಾಷ್ಟಮಿಯಂದು (18-10-2026) ಲಲಿತೋಪಾಖ್ಯಾನ ಪ್ರವಚನವನ್ನು ಅನುಗ್ರಹಿಸಿದ ಸಂಸ್ಥಾನದವರು, ಸಮುದ್ರ ಮಥನವಾಗಿ ಅಮೃತ ಬರುವ ಮೊದಲು ವಿಷವೂ ಬರಬಹುದು. ಅದನ್ನು ಸ್ವೀಕರಿಸಲು ನಂಜುಂಡನಾದ ಶಿವ ಬೇಕು. ಅಮೃತ ಬಂದಾಗ ಅದು ಅಸುರರಿಗೆ ಸಿಗದಿರಲು ಮಹಾವಿಷ್ಣುವೂ ಬೇಕು. ದೇವರೂ ರಾಕ್ಷಸರು ಅಮೃತಕ್ಕಾಗಿ ಯುದ್ಧದಲ್ಲಿ ತೊಡಗಿದ್ದಾಗ ಪ್ರತ್ಯಕ್ಷವಾದ ಮೋಹಿನಿಯು ಕೇವಲ ತನ್ನ ಉಪಸ್ಥಿತಿಯ ಮಾತ್ರದಿಂದ ಯುದ್ಧವನ್ನು ನಿಲ್ಲಿಸುತ್ತಾಳೆ. ಮೋಹದ ಜಾಲಕ್ಕೆ ಸಿಕ್ಕ ರಾಕ್ಷಸರು ಅಮೃತದಿಂದ
ವಂಚಿತರಾಗುತ್ತಾರೆ ಎಂದರು.
ಜೀವನದಲ್ಲಿ ತಲೆ ಪ್ರತಿಷ್ಠೆಯನ್ನು ಮಾಡಬಾರದು. ದೇವಾಸುರರು ಸಮುದ್ರ ಮಥನ ಮಾಡುವಾಗ ರಾಕ್ಷಸರು ತಮಗೆ ವಾಸುಕಿಯ ತಲೆಯ ಭಾಗವೇ ಬೇಕು ಎಂದು ಪಡೆದುಕೊಳ್ಳುತ್ತಾರೆ. ಆದರೆ ಮಥನ ಮಾಡುವಾಗ ವಾಸುಕಿಯ ಬಾಯಿಯಿಂದ ಬಂದ ವಿಷದ ಪರಿಣಾಮವಾಗಿ ರಾಕ್ಷಸರ ತೇಜಸ್ಸು ಕ್ಷಯಿಸುತ್ತದೆ. ಹಾಗಾಗಿ ನಾವು ಜೀವನದಲ್ಲಿ ತಲೆ ಪ್ರತಿಷ್ಠೆ ಮಾಡಿದರೆ ಪತನವನ್ನು ಹೊಂದುತ್ತೇವೆ. ಅಮೃತವನ್ನು ಪಡೆಯಲು ದೇವತೆಗಳು ಹಾಗೂ ದೈತ್ಯರೇ ಸಂಧಿ ಮಾಡಿಕೊಂಡಿದ್ದರು. ಹಾಗೆಯೇ ನಾವು ಅಮೃತ ಪಡೆಯಲು ಹೊಂದಾಣಿಕೆ ಮಾಡಿಕೊಳ್ಳಬೇಕಾದ ಕಡೆ ಮಾಡಿಕೊಳ್ಳಬೇಕು; ಅದಕ್ಕೆ ತಲೆಪ್ರತಿಷ್ಠೆ ಅಡ್ಡಬರಬಾರದು ಎಂದು ತಿಳಿಸಿಕೊಟ್ಟರು.
ಶಿವ – ವಿಷ್ಣು ಕಲಹ ಸಲ್ಲ
ಶಿವ ಹಾಗೂ ವಿಷ್ಣುವಿನ ಮಧ್ಯೆ ಯಾವುದೇ ಕಲಹವಿಲ್ಲ. ಆದರೆ ಇಂದು ಶೈವರು ಹಾಗೂ ವೈಷ್ಣವರ ಮಧ್ಯೆ ಕಲಹ ಮುಗಿಯುವುದೇ ಇಲ್ಲ. ಶಿವ ಹಾಗೂ ವಿಷ್ಣುವಿನ ಹೆಸರಿನಲ್ಲಿ ಜಗಳ ಸಾಗುತ್ತಲೇ ಇದೆ. ಬಹುಶಃ ದೇವ ಲೋಕದಲ್ಲಿರುವ ಅವರಿಬ್ಬರೂ ಈ ಜಗಳವನ್ನು ನೋಡಿ ನಗುತ್ತಿರಬಹುದು. ಹಾಗಾಗಿ ನಾವು ದೇವರ ಹೆಸರಿನಲ್ಲಿ ಜಗಳವಾಡಬಾರದು ಎಂದರು.
**
ಮಾಜಿ ಅಡ್ವೊಕೇಟ್ ಜನರಲ್ ಅಶೋಕ ಹಾರನಹಳ್ಳಿ ದಂಪತಿಗಳು, ಅಶೋಕ ಭಟ್ ಉಪ್ಪುಂದ, ಪ್ರಭಾಕರ ಅಳಗೋಡು, ಹೇಮಂತ್ ಭಾಗ್ವತ್ ಮುಂತಾದವರು ಶ್ರೀಸಂಸ್ಥಾನದವರ ಆಶೀರ್ವಾದ ಪಡೆದರು.
