ಸಾಗರ: ‘ನಮ್ಮ ಮಠ ನಮಗೆ ಹೆಮ್ಮೆ’ ಎಂಬ ಧ್ಯೇಯವಾಕ್ಯದೊಂದಿಗೆ ಆಶ್ವಯುಜ ಶುಕ್ಲ ಏಕಾದಶಿಯಂದು (22-10-2026) ಸಾಗರ ನಗರ ಪಶ್ಚಿಮ ವಲಯದ ವತಿಯಿಂದ ಧರ್ಮಾಭಿಮಾನ ಜಾಗೃತಗೊಳಿಸುವ, ಸಮಾಜದ ಏಕತೆ ಹೆಚ್ಚಿಸುವ ಹಾಗೂ ಸಾಧಕರಿಗೆ ಗೌರವ ಸಲ್ಲಿಸುವ ವಿಶೇಷ ಕಾರ್ಯಕ್ರಮ ಅಜಿತ್ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿದ್ದ ವಿದ್ವಾನ್ ಜಗದೀಶಶರ್ಮಾ ಸಂಪ ಅವರ ಉಪನ್ಯಾಸವು ಮಠದ ಪರಂಪರೆ, ಧಾರ್ಮಿಕ ಮೌಲ್ಯಗಳು, ಸಂಸ್ಕಾರ ಮತ್ತು ಸಮಾಜದ ಹೊಣೆಗಾರಿಕೆಗಳ ಕುರಿತು ಚಿಂತನೆಗೆ ಪ್ರೇರಣೆ ನೀಡಿತು. ಮಠವೆಂಬುದು ಕೇವಲ ಧಾರ್ಮಿಕ ಕೇಂದ್ರವಲ್ಲ; ಅದು ಸಮಾಜಕ್ಕೆ ಸಂಸ್ಕಾರ, ಮಾರ್ಗದರ್ಶನ ಮತ್ತು ಸಂಘಟನೆಯ ಶಕ್ತಿಯನ್ನು ನೀಡುವ ಮಹತ್ತ್ವದ ಸಂಸ್ಥೆ ಎಂಬ ಭಾವನೆಯನ್ನು ತಮ್ಮ ವಿದ್ವತ್ಪೂರ್ಣ ವಿಚಾರಗಳ ಮೂಲಕ ಅವರು ಮನದಟ್ಟು ಮಾಡಿಕೊಟ್ಟರು. ನಮ್ಮ ಪರಂಪರೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವುದರ ಜೊತೆಗೆ, ಅದರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ತಲುಪಿಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂಬ ಸಂದೇಶವು ಉಪನ್ಯಾಸದ ಪ್ರಮುಖ ಆಶಯವಾಗಿತ್ತು.
ಮಠದೊಂದಿಗೆ ಸಮಾಜದ ಬಂಧವನ್ನು ಗಟ್ಟಿಗೊಳಿಸುವುದು, ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವುದು ಮತ್ತು ಸಂಘಟನಾತ್ಮಕವಾಗಿ ಸಮಾಜದ ಪ್ರಗತಿಗೆ ಶ್ರಮಿಸುವುದು ಇಂದಿನ ಅಗತ್ಯವಾಗಿದೆ ಎಂಬ ವಿಚಾರಗಳು ಕಾರ್ಯಕ್ರಮಕ್ಕೆ ವಿಶೇಷ ಅರ್ಥವನ್ನು ನೀಡಿದವು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಗರ ಮಂಡಲದ ಅಧ್ಯಕ್ಷರಾದ ಮುರಳಿ ಗೀಜಗಾರು ವಹಿಸಿದ್ದರು. ಸಾಗರ ಮಂಡಲದ ಪ್ರಧಾನ ಗುರಿಕಾರರಾದ ಸುಬ್ರಹ್ಮಣ್ಯ ಚಿಪ್ಪಳಿ, ಸಾಗರ ನಗರ ಪಶ್ಚಿಮ ವಲಯದ ಅಧ್ಯಕ್ಷರಾದ ಅಶೋಕ ಹು.ಭಾ. ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೃಷಿ ಮತ್ತು ಶಿಕ್ಷಣ ಕ್ಷೇತ್ರದ ನಾಲ್ವರು ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೃಷಿ ಕ್ಷೇತ್ರದ ಸಾಧಕರಾದ ಈಶ್ವರ ತಲಕಟ್ಟು ಮತ್ತು ಅಮೋಘ ಮಾವಿನಕುಳಿ, ಶಿಕ್ಷಣ ಕ್ಷೇತ್ರದ ಸಾಧಕರಾದ ಸುಬ್ರಹ್ಮಣ್ಯ ಹೆಗಡೆ ಮತ್ತು ಶಾರದಾ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುವ ಮೂಲಕ ಸಮಾಜಕ್ಕೆ ಅವರ ಕೊಡುಗೆಯನ್ನು ಸ್ಮರಿಸಲಾಯಿತು.


