ಶ್ರೀಮಠದ ವಿವಿಧ ಅಂಗಸಂಸ್ಥೆಗಳಲ್ಲಿ ನವರಾತ್ರ ಮಹೋತ್ಸವವನ್ನು ಭಕ್ತಿ-ಶ್ರದ್ಧೆಗಳಿಂದ ಆಚರಿಸಲಾಯಿತು.
ಕೆಕ್ಕಾರು ಶಾಖೆ ಶ್ರೀರಘೂತ್ತಮ ಮಠದಲ್ಲಿರುವ ಶ್ರೀರಾಜರಾಜೇಶ್ವರೀ ದೇವಸ್ಥಾನದಲ್ಲಿ ಸಪ್ತಶತೀ ಪಾರಾಯಣ, ಜೇನುತುಪ್ಪದ ಅಭಿಷೇಕ, ಅನೇಕ ಭಜನಾ ತಂಡಗಳಿಂದ ಭಜನಾ ಸೇವೆ, ಮಾತೆಯರಿಂದ ಕುಂಕುಮಾರ್ಚನೆ, ಪುಷ್ಪಾಲಂಕಾರ, ಉಡಿ ಸೇವೆ ಮುಂತಾದ ಅನೇಕ ಸೇವೆಗಳು ಸಮರ್ಪಣೆಗೊಂಡವು.



ಶಿರಸಿ ಶಾಖೆ ಅಂಬಾಗಿರಿ ಶ್ರೀರಾಮಕೃಷ್ಣ ಕಾಳಿಕಾ ಮಠದಲ್ಲಿ ಶ್ರೀದೇವಿಗೆ ಅಭಿಷೇಕ, ಕುಂಕುಮಾರ್ಚನೆ, ಪಾರಾಯಣ ಸೇವೆ, ಮಾತೆಯರಿಂದ ಕುಂಕುಮಾರ್ಚನೆ, ಸ್ತೋತ್ರ ಪಠಣ, ಪುರುಷರಿಂದ ಗಾಯತ್ರೀ ಜಪ, ಆಗಮಿಸಿದ ಭಕ್ತಜನರಿಂದ ಶ್ರೀದೇವಿಗೆ ಉಡಿ ಸಮರ್ಪಣೆ, ಅರ್ಚನೆ, ದೇಸಿ ತುಪ್ಪದ ದೀಪ ಸೇವೆ, ಭಜನಾ ಸೇವೆ ನಡೆದವು.


ಕಿತ್ರೆಯ ಶ್ರೀಕ್ಷೇತ್ರ ದೇವಿಮನೆ ಶ್ರೀಶಿವಶಾಂತಿಕಾ ಪರಮೇಶ್ಬರೀ ದೇವಸ್ಥಾನದಲ್ಲಿ ಪ್ರತಿದಿನ ಚಂಡಿಕಾ ಹವನ, ಸಪ್ತಶತೀ ಪಾರಾಯಣ, ದೀಪ ನಮಸ್ಕಾರ, ಅನ್ನದಾನ, ಮಾತೆಯರಿಂದ ಭಜನೆ ಕಾರ್ಯಕ್ರಮಗಳು ಅತ್ಯಂತ ವಿಜೃಂಭಣೆಯಿಂದ ನಡೆದವು.


ಸಾಗರದ ಶ್ರೀರಾಘವೇಶ್ವರ ಭವನದಲ್ಲಿ ಶ್ರೀರಾಘವೇಶ್ವರ ಭವನ ಸಮಿತಿ ಹಾಗೂ ಸಾಗರ, ರಾಮಚಂದ್ರಾಪುರ ಮತ್ತು ಸಿದ್ದಾಪುರ ಹವ್ಯಕ ಮಂಡಲಗಳು ಸಂಯೋಜಿಸಿದ್ದ ಲಲಿತೋಪಾಸನೆ ಕಾರ್ಯಕ್ರಮ ಅತ್ಯಂತ ಶ್ರದ್ದಾಭಕ್ತಿ ಹಾಗೂ ವೈಭವದಿಂದ ಜರುಗಿತು. ಪರಮಪೂಜ್ಯ ಶ್ರೀಸಂಸ್ಥಾನದವರ ಮಾರ್ಗದರ್ಶನದಂತೆ ಶ್ರೀಲಲಿತಾ ದೇವಿಯ ಪ್ರತಿಷ್ಠಾಪನೆ, ಶ್ರೀದುರ್ಗಾ ಸಪ್ತಶತೀ ಪಾರಾಯಣ, ಲಲಿತಾ ಪೂಜೆ, ಸಾಮೂಹಿಕ ಕುಂಕುಮಾರ್ಚನೆ, ದೀಪ ನಮಸ್ಕಾರ ಕಾರ್ಯಕ್ರಮಗಳು ಸಂಪನ್ನಗೊಂಡವು.


ಮುಜುಂಗಾವಿನ ಶ್ರೀಭಾರತೀ ವಿದ್ಯಾಪೀಠದಲ್ಲಿ ವಿದ್ಯಾದಶಮಿಯಂದು ಶಾರದಾಪೂಜಾ ಕಾರ್ಯಕ್ರಮ ಮತ್ತು ವಿದ್ಯಾಲಯದ ವಾಹನಗಳಿಗೆ ವಾಹನ ಪೂಜೆಯನ್ನು ನಡೆಸಲಾಯಿತು.

ಭಾನ್ಕುಳಿ ಶಾಖೆ ಶ್ರೀರಾಮದೇವ ಮಠದಲ್ಲಿ ಶ್ರೀದೇವೀಭಾಗವತ ಪಾರಾಯಣ, ಸಪ್ತಶತೀ ಪಾರಾಯಣ, ಶ್ರೀದೇವೀ ಪೂಜೆಗಳು ನಡೆದವು.
ಮಂಡಲ ವಲಯಗಳ ಶಿಷ್ಯಭಕ್ತರಿಂದ ಶ್ರೀದೇವಿಗೆ ಊಡಿಸೇವೆ, ಕುಂಕುಮಾರ್ಚನೆ, ಭಜನೆ, ಅರ್ಧನಾರೀಶ್ವರಾಷ್ಟಕ ಸ್ತೋತ್ರ ಪಠಣ, ವಸ್ತ್ರಾಲಂಕಾರ, ಪುಷ್ಪಾಲಂಕಾರ, ಅನ್ನದಾನ ಹಾಗೂ ಸರ್ವಸೇವೆಗಳು ಸಮರ್ಪಣೆಗೊಂಡವು.


