ಯಾವುದೇ ಪುಣ್ಯ ಕಾರ್ಯವನ್ನಾದರೂ ಫಲಾಪೇಕ್ಷೆ ಹಾಗೂ ಪ್ರಚಾರವಿಲ್ಲದೆ ಮಾಡಿದರೆ ಆ ಕಾರ್ಯದ ಫಲ ದುಪ್ಪಟ್ಟು ಸಿಗುತ್ತದೆ ಎಂಬ ಭಾವನೆ ನಳಿನಿ ಲಕ್ಷ್ಮೀನಾರಾಯಣ ತೆಪ್ಪ ಅವರದ್ದು. ಹಾಗಾಗಿಯೇ ತಾವು ಮಾಡಿದ ಯಾವುದೇ ಪುಣ್ಯಕಾರ್ಯಗಳ ಬಗ್ಗೆ ಹೆಚ್ಚು ವಿವರಿಸದೆ, ಗೋಸೇವೆ, ಶ್ರೀಮಠದ ಸೇವೆ ಹಾಗೂ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ತೆರೆಮರೆಯಲ್ಲಿಯೇ ಇರಲು ಬಯಸುವ ಅಪರೂಪ ವ್ಯಕ್ತಿತ್ವದ ಶ್ರೀಮಾತೆ ನಳಿನಿ ಲಕ್ಷ್ಮೀನಾರಾಯಣ ತೆಪ್ಪ.
ಸಿದ್ದಾಪುರ ಮಂಡಲ ಅಂಬಾಗಿರಿ ವಲಯದ ಬನವಾಸಿ ರಸ್ತೆಯ ಪಕ್ಕದಲ್ಲಿರುವ ಶಿರಸಿಕರ್ ಕಾಲನಿಯಲ್ಲಿ ವಾಸವಾಗಿರುವ ಲಕ್ಷ್ಮೀನಾರಾಯಣ ಅವರ ಪತ್ನಿ ನಳಿನಿ ಅವರ ತವರುಮನೆ ಕೊಡಗಿನ ಮಡಿಕೇರಿ.
‘ಭಾರತೀಸುತ’ ಕಾವ್ಯನಾಮದಲ್ಲಿ ಖ್ಯಾತರಾಗಿರುವ ಹಿರಿಯ ಸಾಹಿತಿ ಎಸ್. ಆರ್. ನಾರಾಯಣರಾವ್ ಹಾಗೂ ನಾಗವೇಣಿ ದಂಪತಿಗಳ ಪುತ್ರಿಯಾದ ಇವರಿಗೆ ಬಾಲ್ಯದಿಂದಲೇ ಹಸುಗಳ ಮೇಲೆ ತುಂಬಾ ಮಮತೆ. ಮನೆಯಲ್ಲಿಯೇ ಗೋವುಗಳನ್ನು ಸಾಕುತ್ತಿದ್ದ ದಿನಗಳ ಒಡನಾಟ ಅವರಲ್ಲಿ ಗೋವುಗಳ ಬಗೆಗಿನ ಪ್ರೀತಿಯನ್ನು ಇನ್ನಷ್ಟು ಗಾಢವಾಗಿಸಿತ್ತು. ಗೋವುಗಳೊಂದಿಗೆ ಬೆಳೆದ ಈ ಆತ್ಮೀಯತೆಯೇ ಮುಂದೆ ಗೋಸೇವೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಯಿತು.
ತಮ್ಮ ಮನೆಯಲ್ಲಿಯೂ ಗೋವುಗಳನ್ನು ಸಾಕುತ್ತಿದ್ದ ನಳಿನಿ ಅವರು, ಶ್ರೀಮಠದ ಮಾತೃತ್ವಮ್ ಯೋಜನೆಯ ಮೂಲಕವೂ ಗೋಸೇವೆ ಮಾಡುವ ಪುಣ್ಯಕಾರ್ಯಕ್ಕೆ ಮನ ಮಾಡಿದರು. ತಮಗೆ ಮಾಸದ ಮಾತೆಯಾಗಲು ಪ್ರೇರಣೆ ನೀಡಿದವರು ಶಿರಸಿಯ ವೀಣಕ್ಕ ಎಂಬುದನ್ನು ಅವರು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಾರೆ.
ಗೋಮಾತೆಯ ಮೇಲಿನ ಪ್ರೀತಿ ಮತ್ತು ಶ್ರೀಮಠದ ಸೇವಾಕಾರ್ಯಗಳ ಬಗ್ಗೆ ಹೊಂದಿರುವ ಶ್ರದ್ಧೆ ಎರಡೂ ಸೇರಿ ಮಾತೃತ್ವಮ್ ಯೋಜನೆಯೊಂದಿಗೆ ಬೆರೆಯಲು ಅವರಿಗೆ ಅವಕಾಶ ಮಾಡಿಕೊಟ್ಟಿವೆ.
“ಗೋಮಾತೆಗೆ ಇಂದು ಸಹಜವಾದ ಜೀವನ ಸಾಧ್ಯವಾಗುತ್ತಿಲ್ಲ. ಆಧುನಿಕ ಜೀವನಶೈಲಿಯ ನಡುವೆ ಗೋಪ್ರೇಮಿಗಳಿಗೂ ಗೋಮಾತೆಯನ್ನು ಮನೆಯಲ್ಲಿ ಸಾಕಲು ಕಷ್ಟವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಶ್ರೀರಾಮಚಂದ್ರಾಪುರ ಮಠ ನಡೆಸುವ ಯೋಜನೆಯ ಮೂಲಕ ಗೋಸೇವೆ ಮಾಡುವುದು ಅತ್ಯುತ್ತಮ” ಎನ್ನುವ ನಳಿನಿ ಅವರು ನಿವೃತ್ತ ಶಿಕ್ಷಕಿಯಾಗಿದ್ದು, ಪ್ರತಿವರ್ಷವೂ ಗೋಮಾತೆಯ ಸೇವೆಗಾಗಿ ಒಂದು ನಿರ್ದಿಷ್ಟ ಮೊತ್ತವನ್ನು ಸಮರ್ಪಿಸುತ್ತಾರೆ.
ಗೋವುಗಳನ್ನು ಮನೆಯಲ್ಲಿ ಸಾಕಲು ಸಾಧ್ಯವಾಗದಿದ್ದರೂ, ಅವುಗಳ ಪಾಲನೆ ಮತ್ತು ಪೋಷಣೆಗೆ ತಮ್ಮಿಂದಾದ ನೆರವು ನೀಡುವ ಮೂಲಕ ಗೋಸೇವೆಯಲ್ಲಿ ಪಾಲ್ಗೊಳ್ಳಬಹುದು ಎಂಬುದಕ್ಕೆ ಶ್ರೀಮಠದ ಮಾತೃತ್ವಮ್ ಯೋಜನೆಯೇ ಉತ್ತಮ ಅವಕಾಶ ಎಂಬುದು ಅವರ ಅಭಿಪ್ರಾಯ.
ತಮ್ಮ ಪತಿ ಹಾಗೂ ಮಕ್ಕಳು ಗೋಸೇವೆ ಮತ್ತು ಸಮಾಜಸೇವೆಗೆ ಸಹಕಾರ ನೀಡುತ್ತಿದ್ದಾರೆ ಎಂದು ಸಂತೋಷದಿಂದ ಹೇಳುವ ನಳಿನಿ ಅವರಿಗೆ, ತಾವು ಕೈಗೊಂಡ ಸೇವಾಕಾರ್ಯಗಳನ್ನು ಹೆಚ್ಚು ಪ್ರಚಾರವಿಲ್ಲದೆ ತೆರೆಮರೆಯಲ್ಲಿಯೇ ಸದಾ ಮುಂದುವರಿಸಬೇಕು ಎಂಬ ಅಭಿಲಾಷೆ.
ಸೇವೆ ಮಾಡುವುದೇ ಮುಖ್ಯ, ಆದರೆ ಅದನ್ನು ಎಲ್ಲರಿಗೂ ತಿಳಿಸುವ ಹಂಬಲ ಮುಖ್ಯವಾಗಬಾರದು ಎಂಬ ನಿಲುವು ಅವರ ಮಾತುಗಳಲ್ಲಿಯೂ ವ್ಯಕ್ತವಾಗುತ್ತದೆ. ಪ್ರಚಾರದ ನಿರೀಕ್ಷೆಯಿಲ್ಲದೆ, ತಮ್ಮಿಂದ ಸಾಧ್ಯವಾದಷ್ಟು ಸಮಾಜಕ್ಕೆ ಮತ್ತು ಗೋಮಾತೆಗೆ ನೆರವಾಗುವುದರಲ್ಲಿಯೇ ಅವರು ಸಂತೃಪ್ತಿಯನ್ನು ಕಾಣುತ್ತಾರೆ.
ಶ್ರೀಗುರುಗಳ ಹಾಗೂ ದೇವರ ಅನುಗ್ರಹದಿಂದ ಈ ಸೇವೆಯನ್ನು ನಿರಂತರವಾಗಿ ಮುಂದುವರಿಸಲು ಬಯಸುವ ನಳಿನಿ ಅವರು, ಅಂಬಾಗಿರಿ ಮಠದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಮಠದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರ ಜೊತೆಗೆ, ಮಠದೊಂದಿಗೆ ಹೊಂದಿರುವ ಆತ್ಮೀಯ ಸಂಬಂಧವನ್ನು ಉಳಿಸಿಕೊಂಡು, ಅದರ ಜೊತೆಗೆ ಸಮಾಜ ಸೇವಾಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳುವುದು ಅವರಿಗೆ ತುಂಬಾ ಪ್ರಿಯವಾದ ವಿಚಾರ.
ಗೋಮಾತೆಯ ಮೇಲಿನ ಪ್ರೀತಿ, ಶ್ರೀಮಠದ ಮೇಲಿನ ಶ್ರದ್ಧೆ, ಕುಟುಂಬದ ಸಹಕಾರ ಹಾಗೂ ಸದ್ದಿಲ್ಲದೆ ಸಮಾಜ ಸೇವೆ ಸಲ್ಲಿಸಬೇಕೆಂಬ ಮನೋಭಾವ ಇವೆಲ್ಲವೂ ನಳಿನಿ ಲಕ್ಷ್ಮೀನಾರಾಯಣ ತೆಪ್ಪ ಅವರ ಬದುಕಿನ ವೈಶಿಷ್ಟ್ಯಗಳು. ತಾವು ಮಾಡುವ ಸೇವೆಯ ಬಗ್ಗೆ ಹೇಳಿಕೊಳ್ಳುವುದಕ್ಕಿಂತ ಅದನ್ನು ನಿಷ್ಠೆಯಿಂದ ಮುಂದುವರಿಸುವುದರಲ್ಲಿಯೇ ನಿಜವಾದ ತೃಪ್ತಿಯನ್ನು ಕಾಣುವ ಅವರು, ಮಾತೃತ್ವಮ್ ಯೋಜನೆಯ ಮೂಲಕ ಗೋಸೇವೆಯಲ್ಲಿ ಪಾಲ್ಗೊಳ್ಳುತ್ತಾ ತಮ್ಮ ಸೇವಾಪಯಣವನ್ನು ಮುಂದುವರಿಸುತ್ತಿದ್ದಾರೆ.
ಪ್ರಸನ್ನಾ ವಿ. ಚೆಕ್ಕೆಮನೆ
