” ಶ್ರೀಮಠದ ಸಂಪರ್ಕಕ್ಕೆ ಬಂದ ಮೇಲೆ ಅನೇಕ ಮಂದಿ ಗುರುಬಂಧುಗಳ ಪರಿಚಯವಾಗಿದೆ. ಸುಮಾರು ಒಂದೂವರೆ ದಶಕಗಳಿಂದ ಶ್ರೀಮಠದ ಸಂಪರ್ಕದಲ್ಲಿದ್ದೇನೆ. ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡ ಬಳಿಕ ಬದುಕಿನಲ್ಲಿ ಹೊಸ ಆನಂದ ಮತ್ತು ಸಂತೃಪ್ತಿ ಮೂಡಿದೆ ” ಎಂದು ಸಂತಸದಿಂದ ಹೇಳುವವರು ಮಂಗಳೂರು ಮಂಡಲ ದಕ್ಷಿಣ ವಲಯದ ಗಣೇಶ ಸುಂದರ ಕೆ.ಜಿ. ಅವರ ಪತ್ನಿ ಗೀತಾದೇವಿ ಚೂಂತಾರು.
ಚೂಂತಾರು ವೇದಮೂರ್ತಿ ಲಕ್ಷ್ಮೀನಾರಾಯಣ ಭಟ್ ಮತ್ತು ಸರೋಜಿನಿ ದಂಪತಿಗಳ ಪುತ್ರಿಯಾದ ಗೀತಾದೇವಿ ಅವರಿಗೆ ಬಾಲ್ಯದಿಂದಲೇ ಧಾರ್ಮಿಕ ಕಾರ್ಯಗಳು ಹಾಗೂ ಸಮಾಜ ಸೇವೆಯಲ್ಲಿ ಆಸಕ್ತಿ. ಶ್ರೀಮಠದ ಸಂಪರ್ಕಕ್ಕೆ ಬಂದ ಬಳಿಕ ಈ ಆಸಕ್ತಿಗೆ ಇನ್ನಷ್ಟು ಅವಕಾಶ ದೊರೆಯಿತು. ಸಂಘಟನಾತ್ಮಕ ಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡ ಇವರು ಎರಡು ಬಾರಿ ವಲಯ ಮಾತೃಪ್ರಧಾನೆಯಾಗಿಯೂ, ಮಂಡಲದ ಬಿಂದು – ಸಿಂಧು ಪ್ರಧಾನೆಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ವಲಯದ ಕೋಶಾಧ್ಯಕ್ಷೆಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
” ಬಾಲ್ಯದಿಂದಲೇ ಹಸುಗಳ ಒಡನಾಟದಲ್ಲಿ ಬೆಳೆದವಳು ನಾನು. ಈಗಿನ ಪೇಟೆ ಜೀವನದಲ್ಲಿ ನಾವು ಮುಖ್ಯವಾಗಿ ಕಳೆದುಕೊಳ್ಳುತ್ತಿರುವುದು ಹಸುಗಳೊಂದಿಗಿನ ಆತ್ಮೀಯ ಒಡನಾಟವನ್ನು ಎಂಬುದು ಅರಿವಾಗುತ್ತಿದೆ. ಹಾಗಾಗಿ ಗೋಸೇವೆ ಮತ್ತು ಮಠದ ಸೇವೆ ಮಾಡಬೇಕು ಎಂಬ ಆಸಕ್ತಿಯಿಂದಲೇ ಮಾತೃತ್ವಮ್ ಯೋಜನೆಯ ಮೂಲಕ ಗೋಸೇವೆಗೆ ಕೈಜೋಡಿಸಿದೆ. ಈ ಕಾರ್ಯದಲ್ಲಿ ಅನೇಕ ಮಂದಿ ಸಹಕಾರ ನೀಡಿದ್ದಾರೆ. ಲಕ್ಷ ಬಾಗಿನವನ್ನೂ ಪಡೆದುಕೊಂಡಿದ್ದೇನೆ. ಜೀವನದ ಪ್ರತಿಯೊಂದು ಕ್ಷಣದಲ್ಲಿಯೂ ಗುರುಕೃಪೆ ನಮ್ಮೊಂದಿಗಿದೆ ಎಂಬ ಅನುಭೂತಿ ಮೂಡುತ್ತಿದೆ ” ಎಂದು ಸಂತಸದಿಂದ ನುಡಿಯುತ್ತಾರೆ ಗೀತಾದೇವಿ.
ಮಂಗಳೂರು ಹವ್ಯಕ ಮಹಾಸಭೆಯ ಸಕ್ರಿಯ ಸದಸ್ಯೆಯಾಗಿರುವ ಗೀತಾದೇವಿ ಅವರು ಆ ಮೂಲಕವೂ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪತಿ ಗಣೇಶ ಸುಂದರ ಅವರು ಶ್ರೀಮಠದ ಸಹಾಯ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಲಯದಲ್ಲಿ ಯಾವುದೇ ಕಾರ್ಯಕ್ರಮವಿದ್ದರೂ ಅದರ ಜವಾಬ್ದಾರಿಯನ್ನು ವಹಿಸಿಕೊಂಡು ಸಮರ್ಪಕವಾಗಿ ನಿರ್ವಹಿಸುವುದು ಗೀತಾದೇವಿ ಅವರ ವಿಶೇಷತೆ. ನಂತೂರು ಕಾಲೇಜಿನಲ್ಲಿ ನಡೆಯುವ ಹಲಸು ಮೇಳದ ಜವಾಬ್ದಾರಿಯನ್ನು ವಹಿಸಿಕೊಂಡು, ಜನರನ್ನು ಸಂಘಟಿಸಿ ಕಾರ್ಯಕ್ರಮ ಯಶಸ್ವಿಯಾಗುವಂತೆ ಮಾಡುವಲ್ಲಿ ಇವರು ತೋರಿರುವ ಆಸಕ್ತಿ ಮತ್ತು ಮುಂದಾಳತ್ವ ಗಮನಾರ್ಹವಾಗಿದೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಒಂದು ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಸಂಘಟನಾ ಸಾಮರ್ಥ್ಯ ಇವರಿಗಿದೆ.
” ಗುರುಕೃಪೆಯಿಂದ ನನಗೆ ಒಪ್ಪಿಸಿದ ಕೆಲಸಗಳನ್ನೆಲ್ಲ ಸಮರ್ಥವಾಗಿ ನಿಭಾಯಿಸಿದ್ದೇನೆ ಎಂಬ ಭರವಸೆಯಿದೆ. ನನ್ನ ಎಲ್ಲ ಕಾರ್ಯಗಳಿಗೂ ಮನೆಯವರ ಸಂಪೂರ್ಣ ಸಹಕಾರವಿದೆ. ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಸಮಾಜದಲ್ಲಿ ಜನರು ನನ್ನನ್ನು ಗುರುತಿಸುವಂತಾಗಿದೆ. ಪತಿ ಮತ್ತು ಮಕ್ಕಳ ಬೆಂಬಲ ಸದಾ ಇದೆ. ಅವರ ಸಹಕಾರದಿಂದಲೇ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಲು ಸಾಧ್ಯವಾಗಿದೆ ” ಎನ್ನುವ ಗೀತಾದೇವಿ ಅವರಿಗೆ ಶ್ರೀಮಠದ ಸೇವೆಯಲ್ಲಿ ನಿರಂತರವಾಗಿ ಮುಂದುವರಿಯಬೇಕೆಂಬ ಅಭಿಲಾಷೆಯಿದೆ.
ಪ್ರಸನ್ನಾ ವಿ. ಚೆಕ್ಕೆಮನೆ
