|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

” ಶ್ರೀಮಠದ ಸೇವೆಯ ಹೊರತಾಗಿ ಬದುಕೇ ಇಲ್ಲ ” – ವಿದ್ಯಾಗೌರಿ ಉಪ್ಪಂಗಳ

” ತಾಯಿಯ ತವರುಮನೆಯ ಕಡೆಯಿಂದಲೇ ನನಗೆ ಶ್ರೀಮಠದ ಸಂಪರ್ಕ ದೊರಕಿದೆ. ಬಾಲ್ಯದಲ್ಲಿ ಹಿರಿಯರ ಜೊತೆಗೆ ದೊಡ್ಡ ಗುರುಗಳ ಕಿರೀಟೋತ್ಸವಕ್ಕೆ ಹೋದ ನೆನಪು ಈಗಲೂ ಮನದಲ್ಲಿ ಹಸಿರಾಗಿದೆ. ಮದುವೆಯ ನಂತರವೂ ಶ್ರೀಮಠದ ಸಂಪರ್ಕ ನಿರಂತರವಾಗಿ ಮುಂದುವರಿದಿದ್ದು, ಇಂದಿಗೂ ಅದೇ ಶ್ರದ್ಧೆ ಮತ್ತು ಭಕ್ತಿಯಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ” ಎಂದು ನುಡಿದವರು ಮುಳ್ಳೇರಿಯ ಮಂಡಲ, ಪಳ್ಳತ್ತಡ್ಕ ವಲಯದ ಉಪ್ಪಂಗಳ ವೆಂಕಟ್ರಮಣ ಭಟ್ ಅವರ ಪತ್ನಿ ವಿದ್ಯಾಗೌರಿ.

ಕಬ್ಬಿನಹಿತ್ತಿಲು ಮೂಲದ ಪಟ್ಟೆ ಕಾವು ನಿವಾಸಿಗಳಾದ ಗೋವಿಂದರಾವ್ ಮತ್ತು ಸಾವಿತ್ರಿ ದಂಪತಿಗಳ ಪುತ್ರಿಯಾದ ವಿದ್ಯಾಗೌರಿ ಅವರು ಸುಮಾರು ಮೂರು ದಶಕಗಳಿಂದ ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಾಲ್ಯದಿಂದಲೇ ಧಾರ್ಮಿಕ ವಾತಾವರಣದಲ್ಲಿ ಬೆಳೆದ ಇವರಿಗೆ ಶ್ರೀಮಠದೊಂದಿಗಿನ ಒಡನಾಟ ಹೊಸತೇನಲ್ಲ. ತವರುಮನೆಯಲ್ಲಿದ್ದಾಗ ಆರಂಭವಾದ ಗುರುಭಕ್ತಿ, ವಿವಾಹದ ನಂತರವೂ ಅದೇ ರೀತಿಯಲ್ಲಿ ಮುಂದುವರಿದಿದೆ. ಕಾಲ ಬದಲಾದರೂ ಶ್ರೀಮಠದ ಮೇಲಿನ ಶ್ರದ್ಧೆ ಮತ್ತು ಸೇವಾಭಾವದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

” ಗದ್ದೆ ಬೇಸಾಯ ಮತ್ತು ಕೃಷಿ ಸಂಸ್ಕೃತಿಯ ವಾತಾವರಣದ ತವರುಮನೆಯಲ್ಲಿ ಸಾಕಷ್ಟು ಹಸುಗಳಿದ್ದವು. ಹಟ್ಟಿ ತುಂಬ ಹಸುಗಳನ್ನು ಸಾಕಿದ ಮನೆ ನಮ್ಮದು. ಹಾಗಾಗಿ ಬಾಲ್ಯದಿಂದಲೇ ಹಸುಗಳ ಒಡನಾಟ ನನಗೆ ತುಂಬಾ ಪ್ರಿಯ. ಇಂದಿಗೂ ಗೋವುಗಳೊಂದಿಗಿನ ಆ ಆತ್ಮೀಯತೆ, ಪ್ರೀತಿ ಹಾಗೆಯೇ ಉಳಿದಿದೆ. ಹಿಂದೆ ಎಲ್ಲಾ ತಳಿಯ ಹಸುಗಳನ್ನು ಸಾಕುತ್ತಿದ್ದೆವು. ಶ್ರೀಗುರುಗಳ ಕಾಮದುಘಾ ಯೋಜನೆ ಆರಂಭವಾದ ಮೇಲೆ ನಮ್ಮ ಹಟ್ಟಿ ದೇಸಿ ಹಸುಗಳಿಗೆ ಮಾತ್ರ ಸೀಮಿತವಾಗಿದೆ. ಗೀರ್, ಕಾಂಕ್ರೀಜ್, ಸಾಹಿವಾಲ್ ಮೊದಲಾದ ತಳಿಯ ಹಸುಗಳನ್ನು ನಾವು ಪ್ರೀತಿಯಿಂದ ಸಾಕುತ್ತಿದ್ದೇವೆ. ಇದಕ್ಕೆ ಕಾರಣ ಶ್ರೀಗುರುಗಳ ಮೇಲಿನ ಶ್ರದ್ಧೆ ಮತ್ತು ನಂಬಿಕೆ. ದೇಸಿ ಹಸುಗಳ ಹಾಲು ಆರೋಗ್ಯಕ್ಕೆ ಉತ್ತಮ. ಹಸುಗಳ ಒಡನಾಟ ಮನಸ್ಸಿಗೂ ಮುದ ನೀಡುತ್ತದೆ” ಎನ್ನುವ ವಿದ್ಯಾಗೌರಿ ಅವರು ಗೋಸೇವೆಯನ್ನು ತಮ್ಮ ಬದುಕಿನ ಒಂದು ಭಾಗವಾಗಿಸಿಕೊಂಡಿದ್ದಾರೆ.

ಗೋವುಗಳ ಮೇಲಿನ ಪ್ರೀತಿಯ ಜೊತೆಗೆ ಶ್ರೀಗುರುಗಳ ಮೇಲಿನ ಶ್ರದ್ಧೆಯಿಂದ ಮಾತೃತ್ವಮ್ ಯೋಜನೆಗೆ ಕೈಜೋಡಿಸಿ ಎರಡು ಹಸುಗಳ ಪೋಷಣಾ ವೆಚ್ಚವನ್ನು ಸಂಗ್ರಹಿಸಿದ್ದಾರೆ. ಶ್ರೀ ಗುರುಗಳಿಂದ ಬಾಗಿನ ಸ್ವೀಕರಿಸಿದ ಸಂತಸ ಇವರಿಗಿದೆ. ತಮ್ಮ ಮನೆಯಲ್ಲಿ ಸಾಕುವ ಹಸುಗಳು ಕರು ಹಾಕಿದಾಗ, ಮೊದಲ ಬಾರಿಗೆ ತಯಾರಿಸುವ ತುಪ್ಪವನ್ನು ಶ್ರೀಗುರುಗಳಿಗೆ ಸಮರ್ಪಿಸುವ ಪದ್ಧತಿಯನ್ನು ಇವರು ಇರಿಸಿಕೊಂಡಿದ್ದಾರೆ. ಇತ್ತೀಚೆಗೆ ಗುರುವಾಯೂರಿನಲ್ಲಿ ನಡೆದ ಶ್ರೀಸಂಸ್ಥಾನದವರ ತುಲಾಭಾರಕ್ಕಾಗಿ ತಮ್ಮ ಮನೆಯ ಹಸುಗಳ ಹಾಲಿನಿಂದಲೇ ಬೆಣ್ಣೆಯನ್ನು ತಯಾರಿಸಿ ಸಮರ್ಪಿಸಿರುವುದು ಇವರ ಸೇವಾ ಮನೋಭಾವಕ್ಕೆ ಮತ್ತೊಂದು ನಿದರ್ಶನವಾಗಿದೆ. ತಮಗೆ ಸಾಧ್ಯವಾದ ರೀತಿಯಲ್ಲಿ ಗೋಮಾತೆಯ ಸೇವೆ ಹಾಗೂ ಗುರುಸೇವೆಯನ್ನು ಸಲ್ಲಿಸುವುದರಲ್ಲಿಯೇ ಅವರು ಸಂತೃಪ್ತಿಯನ್ನು ಕಾಣುತ್ತಾರೆ.

ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿ ಸಂಪನ್ಮೂಲ ಸಂಗ್ರಹಿಸುವ ಕಾರ್ಯದಲ್ಲಿಯೂ ತೊಡಗಿಸಿಕೊಂಡಿರುವ ವಿದ್ಯಾಗೌರಿಯವರು ಶ್ರೀಮಠದ ಅಂಗಸಂಸ್ಥೆಯಾದ ಬದಿಯಡ್ಕದ ಮಹಿಳೋದಯದ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಎಲ್ಲರಿಗೂ ಮಾದರಿಯಾಗಿದ್ದಾರೆ. ತಮ್ಮ ಸ್ವಂತ ದುಡಿಮೆಯಿಂದಲೂ ಶ್ರೀಮಠದ ವಿವಿಧ ಯೋಜನೆಗಳಿಗೆ ಕಾಣಿಕೆ ಸಲ್ಲಿಸುತ್ತಿದ್ದಾರೆ.

” ಶ್ರೀಮಠದ ಸಂಪರ್ಕಕ್ಕೆ ಬಂದ ಮೇಲೆ ಬದುಕಿನ ಕಷ್ಟಗಳಿಗೆ ಕುಗ್ಗದೆ ಅವುಗಳನ್ನು ಧೈರ್ಯದಿಂದ ಎದುರಿಸುವ ಆತ್ಮವಿಶ್ವಾಸ ದೊರಕಿದೆ. ಚಿಂತೆಗಳನ್ನು ಪಕ್ಕಕ್ಕೆ ಸರಿಸಿ ಜೀವನವನ್ನು ಭರವಸೆಯಿಂದ ಎದುರಿಸುವ ಧೈರ್ಯ ಬಂದಿದೆ. ಶ್ರೀಮಠದ ಎಲ್ಲ ಯೋಜನೆಗಳಿಗೂ ಮನೆಯಿಂದ ಒಂದು ಮೊತ್ತವನ್ನು ಸಮರ್ಪಿಸಿದರೆ, ನನ್ನ ಸ್ವಂತ ದುಡಿಮೆಯಿಂದಲೂ ಒಂದು ಮೊತ್ತವನ್ನು ಕಾಣಿಕೆಯಾಗಿ ನೀಡುತ್ತೇನೆ ” ಎನ್ನುವ ವಿದ್ಯಾಗೌರಿ ಅವರು ನಾರಾಯಣೀಯಮ್ ಪಠಣವನ್ನು ತಮ್ಮ ಜೀವನದ ಒಂದು ಭಾಗವಾಗಿಸಿಕೊಂಡಿದ್ದಾರೆ. ನಾರಾಯಣೀಯಮ್ ಅಧ್ಯಯನ ಮತ್ತು ಅಧ್ಯಾಪನ ಇವರ ಮೆಚ್ಚಿನ ಹವ್ಯಾಸಗಳಲ್ಲೊಂದಾಗಿದೆ. ಧಾರ್ಮಿಕ ಅಧ್ಯಯನದ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಇತರರಿಗೂ ಅದರ ಪ್ರಯೋಜನ ದೊರೆಯುವಂತೆ ಮಾಡುವ ಆಸಕ್ತಿ ಇವರಲ್ಲಿದೆ.

” ಶ್ರೀಮಠದ ಸೇವೆಯ ಹೊರತಾಗಿ ನನಗೆ ಬದುಕೇ ಇಲ್ಲ ” ಎಂದು ಅಭಿಮಾನದಿಂದ ಹೇಳುವ ವಿದ್ಯಾಗೌರಿ ಅವರ ಎಲ್ಲ ಸೇವಾಕಾರ್ಯಗಳಿಗೂ ಪತಿ ವೆಂಕಟ್ರಮಣ ಭಟ್ ಅವರ ಸಂಪೂರ್ಣ ಬೆಂಬಲವಿದೆ. ಘಟಕವೊಂದರ ಗುರಿಕ್ಕಾರರಾಗಿಯೂ ಸೇವೆ ಸಲ್ಲಿಸುತ್ತಿರುವ ಅವರು ಕೂಡ ಶ್ರೀಮಠದ ನಿಷ್ಠಾವಂತ ಭಕ್ತರು.

ದಂಪತಿಗಳಿಬ್ಬರೂ ಗುರುಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಮಾತ್ರವಲ್ಲದೆ ತಮ್ಮ ಮುಂದಿನ ಪೀಳಿಗೆಗೂ ಗುರುಸೇವೆಯ ಮಹತ್ವದ ಹಾದಿಯನ್ನು ತೋರಿದ್ದಾರೆ. ಇವರ ಮೊಮ್ಮಗ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಎಂಟನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ.

ಶ್ರೀಮಠದೊಂದಿಗಿನ ಒಡನಾಟ, ಗುರುಸೇವೆ, ಗೋವುಗಳ ಮೇಲಿನ ಪ್ರೀತಿ, ಸ್ವಂತ ದುಡಿಮೆಯಿಂದ ಸೇವೆ ಸಲ್ಲಿಸುವ ಆಸಕ್ತಿ ಮತ್ತು ನಾರಾಯಣೀಯಮ್ ಅಧ್ಯಯನ ಇವೆಲ್ಲವೂ ವಿದ್ಯಾಗೌರಿ ಅವರ ಬದುಕಿನ ಅವಿಭಾಜ್ಯ ಅಂಗಗಳಾಗಿವೆ.
‘ ಶ್ರೀಮಠದ ಸೇವೆಯಲ್ಲಿ ದೊರೆಯುವ ಆನಂದವನ್ನು ವರ್ಣಿಸಲು ಸಾಧ್ಯವಿಲ್ಲ ‘ ಎನ್ನುವ ಅವರು, ಕೊನೆಯ ಉಸಿರಿನವರೆಗೂ ಇದೇ ಶ್ರದ್ಧೆ ಮತ್ತು ಭಕ್ತಿಯಿಂದ ಗುರುಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಹಂಬಲ ಹೊಂದಿದ್ದಾರೆ.

ಪ್ರಸನ್ನಾ ವಿ. ಚೆಕ್ಕೆಮನೆ