|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಶ್ರೀರಘೂತ್ತಮ ಮಠದ ಪುನರ್ನಿರ್ಮಾಣ – ಶಿಷ್ಯಭಕ್ತರಿಂದ ಖ್ಯಾಪನೆ

ಅಶೋಕೆ:‌ ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯಸಾನ್ನಿಧ್ಯದಲ್ಲಿ ಆಶ್ವಯುಜ ಕೃಷ್ಣ ಸಪ್ತಮಿಯಂದು (ನ. ೧) ಚಂದಾವರ ಸೀಮೆಯ ಶಿಷ್ಯಭಕ್ತರು ಶ್ರೀಕರಾರ್ಚಿತ ರಾಮದೇವರಿಗೆ ಸಮಗ್ರಪೂಜೆ, ಶ್ರೀಗುರುಭಿಕ್ಷಾ ಸೇವೆ ಹಾಗೂ ಖ್ಯಾಪನೆ ಸಮರ್ಪಿಸಿದರು.

ಶ್ರೀಸಂಸ್ಥಾನದವರ ಮಾರ್ಗದರ್ಶನದಲ್ಲಿ ಕೆಕ್ಕಾರು ಮಠದ ಪುನರ್ನಿರ್ಮಾಣ ಮಾಡುವ ಕುರಿತು ಪ್ರಶ್ನೆ ಚಿಂತನೆ ಮಾಡಲಾಗಿ ದೊರೆತ ಉತ್ತರಕ್ಕನುಗುಣವಾಗಿ ಮೊದಲ ಪರಿಹಾರವಾಗಿ ಅಶೋಕೆಯಲ್ಲಿ ಶ್ರೀಕರಾರ್ಚಿತ ರಾಮದೇವರಿಗೆ ಸಮಗ್ರಪೂಜೆ ಹಾಗೂ ಶ್ರೀಗುರುಭಿಕ್ಷಾ ಸೇವೆಯನ್ನು ಸಲ್ಲಿಸಿದರು. ಅನಂತರ ಆತ್ಮಲಿಂಗದ ಪುಣ್ಯಭೂಮಿ ಶ್ರೀಕ್ಷೇತ್ರ ಗೋಕರ್ಣದ ಪಾವನ ಪರಿಸರದಲ್ಲಿ, ಅಶೋಕೆಯ ಶ್ರೀಮಲ್ಲಿಕಾರ್ಜುನ ದೇವರ ದಿವ್ಯಸನ್ನಿಧಿಯಲ್ಲಿ, ಆದ್ಯ ರಘೂತ್ತಮ ಮಠದ ಪುಣ್ಯತಮ ಸ್ಥಳದಲ್ಲಿ, ಆದಿಶಂಕರರಿಂದ ಅನುಗೃಹೀತವಾದ ಶ್ರೀಸೀತಾರಾಮಚಂದ್ರ-ಚಂದ್ರಮೌಳೀಶ್ವರ-ರಾಜರಾಜೇಶ್ವರಿಯರ ಮಹಾಚೈತನ್ಯವನ್ನು ಹೊತ್ತ ಮೂಲ ಸ್ಥಳದಲ್ಲಿ ಶ್ರೀಮಠವನ್ನು ಸಂಸ್ಥಾಪಿಸಿ ಮಹದನುಗ್ರಹ ಮಾಡಿದ ಶ್ರೀಮದಾಚಾರ್ಯ ಶಂಕರಭಗವತ್ಪಾದರಲ್ಲಿ ಸಮಸ್ತ ಪೂರ್ವಾಚಾರ್ಯರ ಪ್ರಾತಿನಿಧ್ಯ ವಹಿಸಿದ, ಪ್ರಕೃತ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮುಖೇನ ಚಂದಾವರ ಸೀಮೆಯ ಶಿಷ್ಯ-ಭಕ್ತರೆಲ್ಲರೂ ಸೇರಿ ಅಂಜಲಿಬದ್ಧರಾಗಿ ಮುಷ್ಟಿ ದ್ರವ್ಯವನ್ನು ಹಿಡಿದು ಪ್ರಾರ್ಥನೆ ಸಲ್ಲಿಸಿದರು

‘ತಿಳಿದೋ ತಿಳಿಯದೆಯೋ ಆದ ದೋಷಗಳನ್ನು ಪರಿಹರಿಸ ಬೇಕು. ನಾವು ಅಥವಾ ನಮ್ಮ ಪೂರ್ವಜರು ಅರಿವಿಲ್ಲದೆ ಗುರುಪೀಠಕ್ಕೆ ತಪ್ಪು ಎಸಗಿದ್ದು ಇದ್ದರೆ ಅಥವಾ ಮಾತಿನ ಮೂಲಕ ಮನಸ್ಸಿಗೆ ನೋವುಂಟು ಮಾಡಿದ್ದೂ ಇದ್ದರೆ ಎಲ್ಲಾ ತಪ್ಪುಗಳನ್ನು, ದೋಷಗಳನ್ನು ಕೃಪಾ ಸಿಂಧುಗಳಾದ ತಾವು ಮನ್ನಿಸಿ ನಮ್ಮನ್ನು ಕಾಪಾಡಬೇಕು’ ಎಂದು ಪ್ರಾರ್ಥಿಸಿದರು . ಅನಂತರ ಎಲ್ಲರೂ ಮುಷ್ಟಿದ್ರವ್ಯವನ್ನು ಶ್ರೀಚರಣಕ್ಕೆ ಸಮರ್ಪಿಸಿ, ಅನುಗ್ರಹ ಮಂತ್ರಾಕ್ಷತೆಯನ್ನು ಪಡೆದು ಧನ್ಯರಾದರು.

ಪರಮಪೂಜ್ಯ ಶ್ರೀಸಂಸ್ಥಾನದವರು ಆಶೀರ್ವಚನವನ್ನು ಅನುಗ್ರಹಿಸಿ ಮಾರ್ಗದರ್ಶಿಸಿದರು.

‘ಕೆಕ್ಕಾರು ಮಠಕ್ಕೆ ಅಭ್ಯುತ್ಥಾನದ ಕಾಲ ಇದಾಗಿದೆ. ಇಂದಿನಿಂದಲೇ ಅದರ ಶುಭಾರಂಭ. ಪರಂಪರೆ ಎನ್ನುವುದು ಒಂದು ಪ್ರವಾಹ. ಶಿಷ್ಯರು ಮಿಂದು ಪುನೀತಾರಾಗುವವರು. ಇದು ಕೈಲಾಸದಿಂದ ಪ್ರಾರಂಭವಯಿತು. ಕೈಲಾಸದಿಂದ ಶಂಕರನು ಇಳಿದು ಬಂದು ಶಂಕರಾಚಾರ್ಯರ ರೂಪವನ್ನು ತಾಳಿ ಬಂದನು. ಕಾಲಟಿಯಲ್ಲಿ ಜನಿಸಿ ಇಡೀ ಪ್ರಪಂಚವನ್ನು ಸಂಚರಿಸಿತ್ತಾ ಗೋಕರ್ಣಕ್ಕೆ, ಮುಂದೆ ಕೆಕ್ಕಾರಿಗೂ ಕೂಡ ಪರಂಪರೆ ಹರಿದು ಬಂದಿದೆ. ಅದು ಹರಿದಲ್ಲೆಲ್ಲ ಪವಿತ್ರಗೊಳಿಸಿದೆ ಮತ್ತು ಶಿಷ್ಯರನ್ನು ಉದ್ಧಾರ ಮಾಡಿದೆ. ಅನೇಕ ಗುರುಪುಂಗವರು ಪೀಠವನ್ನು ಅಲಂಕರಿಸಿ, ತಪಸ್ಸು ಮಾಡಿ ಸಮಾಜವನನ್ನು ಉದ್ಧರಿಸುವ ಕಾರ್ಯವನ್ನು ಮಾಡುತ್ತ ಬಂದಿದ್ದಾರೆ. ನದಿ ಮನುಷ್ಯರನ್ನು ಪಾವನಗೊಳಿಸುವ ಕೆಲಸ ಮಾಡಿದರೆ, ಮನುಷ್ಯ ಅದನ್ನು ಮಲಿನಗೊಳಿಸುವ ಕೆಲಸ ಮಾಡುತ್ತ ಬಂದಿದ್ದಾನೆ. ಇಂದಿನ ಕಾಲಮಾನದಲ್ಲಿ ಇಡೀ ಊರಿನ ಮಲಿನವನ್ನು ನದಿಗೆ ಬಿಡುವ ಕಾರ್ಯವನ್ನು ಮಾಡುತ್ತಿದ್ದಾರೆ. ನದಿಗೆ ಆಣೆಕಟ್ಟನ್ನು ಕಟ್ಟುತ್ತಿದ್ದಾರೆ. ಭೌತಿಕ ಲಾಭಗಳು ಏನೇ ಇರಬಹುದು ಆದರೆ ಇದೆಲ್ಲವೂ ನದಿಗೆ ಅಪಚಾರವನ್ನು ಎಸಗುವ ಕೆಲಸವಾಗಿದೆ. ಮನುಷ್ಯ ತನ್ನ ಅಲ್ಪ ಕಾಲಿಕ ಲಾಭಕ್ಕೋಸ್ಕರ ನಿತ್ಯ ಪಾವನಗೊಳಿಸುವಂತಹ ನದಿಯನ್ನು ಕೂಡ ಮಲಿನ ಮಾಡಿದ್ದಾನೆ. ಎಲ್ಲರೂ ಮಲಿನಗೊಳಿಸುವ ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಎಂದಲ್ಲ; ಆದರೆ ಎಲ್ಲರೂ ಅದರ ಪರಿಣಾಮವನ್ನು ಅನುಭವಿಸಬೇಕಾಗಿದೆ.

ಗುರುಪರಂಪರೆಯ ವಿಷಯದಲ್ಲೂ ಕೂಡ ಇದೇ ನಡೆಯುತ್ತಾ ಬಂದಿದೆ. ಶಿಷ್ಯಸ್ತೋಮದಲ್ಲಿ ಯಾರೋ ಒಬ್ಬರಿಗೆ ಬುದ್ಧಿ ಕೆಡುವಂಥದ್ದು, ಅವರು ಅಂತ ದುಷ್ಟಕೃತ್ಯವನ್ನು ಮಾಡುವಂಥದ್ದು ಇದೆ. ಕೆಕ್ಕಾರು ಮಠದ ಪರಂಪರೆಗೂ ಅಪಚಾರವನ್ನು ಎಸಗಿದ ಹಲವಾರು ಉದಾಹರಣೆಗಳಿವೆ. ಅಂತೆಯೇ ಅಪಚಾರವೆಸಗಿದ ಕುಟುಂಬಗಳು ನಾಶವಾಗಿ ಹೋಗಿದೆ. ನೇರವಾಗಿ ಅಪಚಾರ ಎಸಗದೆ ಇದ್ದರೂ ಅವರಿಗೆ ಸಹಕಾರ ನೀಡಿದವರಿಗೆ ಅಥವಾ ಅವರೊಂದಿಗೆ ಒಡನಾಡಿದವರಿಗೂ ಕೂಡ ಆ ಪಾಪ ತಗುಲಿ ಇರುತ್ತದೆ. ಅದರಲ್ಲಿ ನಮ್ಮ ಪೂರ್ವಜರು ತಿಳಿದೋ ತಿಳಿಯದೆಯೋ ಸೇರಿರಬಹುದು. ಹಾಗಾಗಿ ಆ ಪಾಪವನ್ನು ನಾವು ತೊಳೆದುಕೊಳ್ಳಬೇಕಾಗುತ್ತದೆ’ ಎಂದು ನುಡಿದರು.

‘ಹೊಸ ಮಠವನ್ನು ಕಟ್ಟುತ್ತೇವೆ ಎಂದರೆ ಹಳೆಯ ಪಾಪವನ್ನು ನಾವು ಮೊದಲು ತೊಳೆಯಬೇಕಾಗುತ್ತದೆ. ಇಲ್ಲದೇ ಇದ್ದಲ್ಲಿ ಮುಂದಿನ ಕೆಲಸಕ್ಕೆ ಅದು ತಡೆಯಾಗುತ್ತದೆ. ಅದರ ಅಂಗವಾಗಿಯೇ ಖ್ಯಾಪನೆ ಇರುವಂಥದ್ದು. ಖ್ಯಾಪನೆ ಎಂದರೆ ನಮ್ಮಿಂದ ತಪ್ಪಾಗಿದೆ ಎಂದು ಹೇಳಿ ಕೊಳ್ಳುವಂತದ್ದು. ‘ಧರ್ಮಃ ಕ್ಷರತಿ ಕೀರ್ತನಾತ್’. ಪುಣ್ಯವೇ ಆಗಲಿ ಪಾಪವೇ ಆಗಲಿ ಅದನ್ನು ಹೇಳಿಕೊಳ್ಳುವುದರಿಂದ ಕ್ಷಯಿಸುತ್ತದೆ. ಖ್ಯಾಪನೆಯ ಫಲವಾಗಿ ಚಂದಾವರ ಸೀಮೆಯ ಎಲ್ಲ ಕುಟುಂಬಗಳಿಗೂ ಶ್ರೇಯಸ್ಸಾಗಬೇಕು, ಮುಂದಿನ ಪೀಳಿಗೆಗೆ ಒಳ್ಳೆಯದಾಗಬೇಕು. ಈ ಮಠ ಮುಂದಿನ ಪೀಳಿಗೆಗೆ ವೈಭವೋಪೇತವಾಗಿ ಉಳಿಯಬೇಕು. ಪುನರ್ನಿರ್ಮಾಣ ಕಾರ್ಯದಲ್ಲಿ ಎಲ್ಲರೂ ಭಕ್ತಿಯಿಂದ ಭಾಗವಿಸಬೇಕು’ ಎಂದು ಕರೆ ನೀಡಿದರು.