ರಾಮಚಂದ್ರಾಪುರ-ಕಾಂಚೀ ಪೀಠಾಧಿಪತಿಗಳ ಸಮಾಗಮ

ಮಠ

ಪುತ್ತೂರು: ‘ಪರಂಪರೆ, ಸಂಸ್ಕೃತಿಯ ನಿರಂತರ ಪಾಲನೆ ಅಗತ್ಯವಾಗಿದೆ. ಕುಲಗಳು ಒಂದಾದಾಗ ಬಲ ಹೆಚ್ಚಾಗುತ್ತದೆ. ಈ ಮೂಲಕ ಸಮಾಜದ ಶಕ್ತಿ ವೃದ್ಧಿಸುತ್ತದೆ. ಸಂಸ್ಕಾರದ ಸಂರಕ್ಷಣೆಯ ಕಾರ್ಯಗಳನ್ನು ಸಮಾಜ ಮಾಡಬೇಕು. ಯೋಗ ಸಾಧನೆಯ ಕಾರ್ಯ ನಡೆಯಬೇಕಾಗಿದೆ’ ಎಂದು ಶ್ರೀ ಕಾಂಚೀ ಕಾಮಕೋಟಿ ಪೀಠ ಜಗದ್ಗುರು ಶಂಕರಾಚಾರ್ಯ ಶ್ರೀ ಶಂಕರ ವಿಜೇಯೇಂದ್ರ ಸರಸ್ವತೀ ಮಹಾಸ್ವಾಮಿಗಳವರು ತಿಳಿಸಿದರು.

ಅವರು ಶ್ರೀರಾಮಚಂದ್ರಾಪುರ ಮಠದ ಮಾಣಿ-ಪೆರಾಜೆ ಶಾಖೆಗೆ ಭೇಟಿ ನೀಡಿ, ಮಠದ ದೇವತಾ ಸಾನ್ನಿಧ್ಯವನ್ನು ದರ್ಶಿಸಿ ಆಶೀರ್ವಚನ ನೀಡಿದರು.

‘ಕುಲ ದೇವತಾ, ಕುಲ ಗುರುಗಳ ನೆನಪು ಪ್ರತಿಯೊಬ್ಬರಲ್ಲಿ ಇರಬೇಕು. ಆಚರಣೆಗಳನ್ನು ಕಾಲಕಾಲಕ್ಕೆ ನಡೆಸಿದಾಗ ಮಾತ್ರ ನಮ್ಮ ಏಳಿಗೆ ಸಾಧ್ಯವಾಗುತ್ತದೆ. ಸಮಾಜದ ಪರಿವರ್ತನೆಗಳಿಗಾಗಿ ಪ್ರತಿಯೊಬ್ಬರು ಕೆಲಸ ಮಾಡಬೇಕು. ಸಮಾಜದ ಹಿತಕ್ಕಾಗಿ ಶ್ರೀರಾಮಚಂದ್ರಾಪುರ ಮಠ ಗ್ರಾಮಣಿಗಳನ್ನೊಳಗೊಂಡ ವ್ಯವಸ್ಥೆಯನ್ನು ಇಟ್ಟುಕೊಂಡಿದೆ. ಇಂತಹ ಸಂಸ್ಥೆಗಳು ಇದ್ದಾಗ ಆಧ್ಯಾತ್ಮಿಕ ಪ್ರಗತಿ, ಅರ್ಥಿಕ ಅಭಿವೃದ್ಧಿಗೆ ಸಹಕಾರವಾಗುತ್ತದೆ’ ಎಂದರು.

ಅನಂತರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ‌ ಮಹಾಸ್ವಾಮಿಗಳವರು ಅನುಗ್ರಹ ಸಂದೇಶ ನೀಡಿದರು.

‘ಪ್ರತಿ ಮನೆಯಲ್ಲಿ ಆರೋಗ್ಯ – ನೆಮ್ಮದಿ ಇರಬೇಕು. ಆಹಾರ ಶುದ್ಧತೆಯಿಂದ ಜೀವನ ಶುದ್ಧವಾಗುತ್ತದೆ. ತೋಟದಲ್ಲಿ ಅಡಿಕೆ, ಮನೆಯಲ್ಲಿ ಅಡಿಗೆ ಎರಡು ಮುಖ್ಯ’ ಎಂದು ಆಹಾತ ಮತ್ತು ಆಚಾರಗಳ ಮಹತ್ತ್ವವನ್ನು ತಿಳಿಸಿದರು. ‘ಕಾಂಚೀ ಗುರುಗಳು ನೀಡಿರುವ ಸಂದೇಶವನ್ನು ಆಚರಿಸಿ ಧರ್ಮ-ಸಂಸ್ಕೃತಿಗಳನ್ನು ರಕ್ಷಿಸುವುದು ಶಿಷ್ಯರೆಲ್ಲರ ಹೊಣೆ. ಪರಂಪರೆಯನ್ನು ಉಳಿಸುವ ಜತೆಗೆ ಸಮಾಜ ರಕ್ಷಣೆ ಕಾರ್ಯವಾಗಬೇಕು. ದಕ್ಷಿಣ ಕನ್ನಡಕ್ಕೆ ಆಗಾಗ ಶ್ರೀಗಳ ಆಗಮನ ಆದಾಗ ಸನಾತನಿಗಳಿಗೆ ಪ್ರಯೋಜನವಾಗಲಿದೆ’ ಎಂದು ನುಡಿದರು.

ಶ್ರೀರಾಮಚಂದ್ರಾಪುರ ಮಠದಿಂದ ಕಾಂಚಿಯ ಪರಮಪೂಜ್ಯರಿಗೆ ಉಪಾಯನ ಸಮರ್ಪಣೆ, ಸಾಲಿಗ್ರಾಮ ಸಹಿತ ಸ್ವರ್ಣ ಖಚಿತ ರುದ್ರಾಕ್ಷಿಯ ಹಾರ ಸಮರ್ಪಣೆ ಮಾಡಲಾಯಿತು. ಕಾಂಚೀ ಮಠದಿಂದ ಶ್ರೀಸಂಸ್ಥಾನದವರಿಗೆ ಉಪಾಯನದ ಸಮರ್ಪಣೆ ನಡೆಯಿತು. ಪೆರಾಜೆ ಮಠದ ಶ್ರೀದೇವರ ಪುಷ್ಪ ರಥೋತ್ಸವಕ್ಕೆ ಚಾಲನೆಯನ್ನು ಕಂಚಿ ಶ್ರೀಗಳು ನೀಡಿದರು.

ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಕೀಲರಾದ ಡಾ. ಅರುಣ್ ಶ್ಯಾಮ, ರಾಜಶೇಖರ್, ಕರ್ನಾಟಕ ಮಾನವ ಹಕ್ಕುಗಳ ಆಯೋಗ್ಯದ ಅಧ್ಯಕ್ಷ ಡಾ. ಟಿ. ಶ್ಯಾಮ್ ಭಟ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಹವ್ಯಕ ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪು, ಶಾಸನತಂತ್ರ ಕಾರ್ಯದರ್ಶಿ ಕೃಷ್ಣಪ್ರಸಾದ್ ಎಡಪ್ಪಾಡಿ, ಪೆರಾಜೆ ಮಠದ ಕ್ರಿಯಾಸಮಿತಿಯ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *