ಸಾಗರ ಮಂಡಲ ಪೂರ್ವ ವಲಯದ ಗಾಂಧಿನಗರ ನಿವಾಸಿಯಾಗಿರುವ ವೇದಾವತಿ ಅವರು, ವೃತ್ತಿಯಿಂದ ಅಧ್ಯಾಪಿಕೆಯಾಗಿ ನೂರಾರು ಮಕ್ಕಳಿಗೆ ಜ್ಞಾನದ ಬೆಳಕನ್ನು ನೀಡಿದವರು. ಪ್ರಸ್ತುತ ನಿವೃತ್ತ ಜೀವನದ ಪ್ರತಿ ಕ್ಷಣವನ್ನು ಅವರು ಶ್ರೀರಾಮಚಂದ್ರಾಪುರ ಮಠದ ವಿವಿಧ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಗೋಸೇವೆ ಮತ್ತು ಶ್ರೀಮಠದ ಸೇವೆಯ ಮೂಲಕ ನೆಮ್ಮದಿಯನ್ನು ಕಂಡುಕೊಂಡಿದ್ದಾರೆ.
ಆವಿನಹಳ್ಳಿಯ ದುರ್ಗಾ ಭಟ್ ಮತ್ತು ಜಯಲಕ್ಷ್ಮಿ ಅಮ್ಮ ದಂಪತಿಗಳ ಪುತ್ರಿಯಾಗಿ ಜನಿಸಿದ ವೇದಾವತಿ ಅವರು, ಸಾಗರ ಗಾಂಧೀನಗರದ ಬಿ.ಕೆ. ರಾಮಣ್ಣ ಅವರ ಪತ್ನಿ.
ಚಿಕ್ಕಂದಿನಿಂದಲೇ ಗೋಮಾತೆ ಎಂದರೆ ಇವರಿಗೆ ಅಪಾರವಾದ ಪ್ರೀತಿ ಮತ್ತು ಮಮತೆ.. ಬಾಲ್ಯದ ಆ ಅವಿನಾಭಾವ ಸಂಬಂಧವೇ ಇಂದು ಇವರನ್ನು ಶ್ರೀಮಠದ ಗೋಸೇವಾ ಯೋಜನೆಗಳತ್ತ ಸೆಳೆದಿದೆ.
ಕಳೆದ ೨೦ ವರ್ಷಗಳಿಂದ ಶ್ರೀಮಠದ ನಿಕಟ ಸಂಪರ್ಕ ಹೊಂದಿರುವ ವೇದಾವತಿಯವರು, ಸಾಗರ ಮಂಡಲದ ರುಕ್ಮಾವತಿ ಅವರ ಪ್ರೇರಣೆ ಹಾಗೂ ಮಾರ್ಗದರ್ಶನದಿಂದ ಪ್ರಭಾವಿತರಾಗಿ ‘ಮಾತೃತ್ವಮ್’ ಯೋಜನೆಯ ಮೂಲಕ ‘ಮಾಸದ ಮಾತೆ’ಯಾಗಿ ಸೇರ್ಪಡೆಗೊಂಡರು.
ಎರಡು ಹಸುಗಳ ಪೂರ್ಣ ಪೋಷಣೆಯ ವೆಚ್ಚವನ್ನು ತಾವೇ ಭರಿಸುವ ಮೂಲಕ ಗೋಸೇವೆಯ ಪವಿತ್ರ ಯಜ್ಞದಲ್ಲಿ ಕೈಜೋಡಿಸಿದ ವೇದಾವತಿಯವರು ಶ್ರೀಗುರುಗಳಿಂದ ‘ಲಕ್ಷ ಬಾಗಿನ’ವನ್ನು ಸ್ವೀಕರಿಸಿದ ಕ್ಷಣವನ್ನು ತಮ್ಮ ಬದುಕಿನ ಅತ್ಯಂತ ಶ್ರೇಷ್ಠ ಮತ್ತು ಸಂತಸದ ಕ್ಷಣವೆಂದು ಭಾವಿಸುತ್ತಾರೆ.
“ನನ್ನ ಇಂದಿನ ನೆಮ್ಮದಿಯ ಬದುಕಿಗೆ ಶ್ರೀಮಠದ ಸೇವೆ ಮತ್ತು ಗುರುಗಳ ಅನುಗ್ರಹವೇ ಕಾರಣ” ಎಂದು ಅವರು ವಿನಮ್ರವಾಗಿ ನುಡಿಯುತ್ತಾರೆ.
ಇವರ ಗೋಪ್ರೇಮವು ಮಾತೃತ್ವಮ್ ಯೋಜನೆಗೆ ಮಾತ್ರ ಸೀಮಿತವಾಗಿಲ್ಲ. ಇತ್ತೀಚೆಗೆ ಹೊಸನಗರದ ಶ್ರೀರಾಮಚಂದ್ರಾಪುರಮಠದ ಮಹಾನಂದಿ ಗೋಲೋಕದಲ್ಲಿ ನಡೆದ ‘ಕೃಷ್ಣಾರ್ಪಣಂ’ ಕಾರ್ಯಕ್ರಮದಲ್ಲಿ ಇವರು ಒಂದು ಗೋಮಾತೆಯನ್ನು ದತ್ತು ಸ್ವೀಕರಿಸುವ ಮೂಲಕ ತಮ್ಮ ಸಮರ್ಪಣಾ ಭಾವವನ್ನು ಮತ್ತಷ್ಟು ವಿಸ್ತಾರವಾಗಿಸಿದರು.
“ಮಕ್ಕಳಿಗೆ ಬಾಲ್ಯದಿಂದಲೇ ಗೋವನ್ನು ಪ್ರೀತಿಸಲು ಕಲಿಸಬೇಕು; ಆ ಮೂಲಕವೇ ಅವರಿಗೆ ನಿಜವಾದ ಭಾರತೀಯ ಸಂಸ್ಕಾರ ದೊರಕುತ್ತದೆ” ಎಂಬುದು ಅಧ್ಯಾಪಿಕೆಯಾಗಿ ಇವರ ಅನುಭವದ ಮಾತುಗಳು.
ಶ್ರೀಮಠದ ಸಂಪರ್ಕವು ಮುಂದಿನ ತಲೆಮಾರಿನ ಜೀವನವನ್ನು ಸುಗಮವಾಗಿಸುತ್ತದೆ ಎನ್ನುವ ಅವರು, ಮಕ್ಕಳಿಗೆ ವೇದಾಭ್ಯಾಸ ಮತ್ತು ಪುರಾಣ ಕಥೆಗಳನ್ನು ತಿಳಿಸುವ ಮೂಲಕ ಜೀವನ ಮೌಲ್ಯಗಳನ್ನು ಬೆಳೆಸುವ ಅಗತ್ಯತೆಯನ್ನು ಒತ್ತಿ ಹೇಳುತ್ತಾರೆ.
ಮನೆಯಲ್ಲಿ ನೇರವಾಗಿ ಗೋವನ್ನು ಸಾಕಲು ಸಾಧ್ಯವಾಗದಿದ್ದರೂ, ಶ್ರೀಮಠದ ವಿವಿಧ ಯೋಜನೆಗಳ ಮೂಲಕ ಗೋಸೇವೆ ಮಾಡುವ ಅವಕಾಶವಿರುವುದನ್ನು ಎಲ್ಲರಿಗೂ ಸಾರುತ್ತಾ, ವಿಶ್ರಾಂತ ಜೀವನವನ್ನು ಸಾಗಿಸುತ್ತಿರುವ ವೇದಾವತಿಯವರು
” ಸಾಧ್ಯವಿದ್ದಷ್ಟು ಕಾಲ ಶ್ರೀಮಠದ ಸೇವೆಯಲ್ಲಿ ಮತ್ತು ಗೋಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಶ್ರೀಮಠದ ಸೇವೆಯಲ್ಲಿ ತೊಡಗಿಸಿಕೊಂಡ ಮೇಲೆ ಏಕಾಂಗಿ ಎಂಬ ಭಾವನೆ ನನಗೆ ಬಂದಿಲ್ಲ. ಆತ್ಮೀಯರ ಒಡನಾಟ ಮನಸ್ಸಿಗೆ ಭರವಸೆ, ನೆಮ್ಮದಿ ನೀಡಿದೆ ” ಎಂದು ಹೇಳುತ್ತಾರೆ.
ಶಿಕ್ಷಣದ ಮೂಲಕ ಜ್ಞಾನದ ದೀಪ ಹಚ್ಚಿದ ವೇದಾವತಿಯವರು, ಇಂದು ಗೋಸೇವೆ, ಗುರು ಸೇವೆಯ ಮೂಲಕ ಭಕ್ತಿಯ ಬೆಳಕನ್ನು ಹರಡುತ್ತಾ ಸಂಪೂರ್ಣವಾಗಿ ತಮ್ಮನ್ನು ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಪ್ರಸನ್ನಾ ವಿ. ಚೆಕ್ಕೆಮನೆ