|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

‘ ಶ್ರೀಮಠದ ಸೇವೆಗಾಗಿ ದೊರಕಿದ ಪುನರ್ಜನ್ಮವಿದು ‘ ಗೀತಾಲಕ್ಷ್ಮಿ ರಮೇಶ್ ಚಂದ್ರ ಪಂಜಿಗದ್ದೆ

​” ಶ್ರೀಗುರುಗಳ ದಿವ್ಯ ಆಶೀರ್ವಾದದ ಬಲದಿಂದ ಲಭಿಸಿದ ಪುನರ್ಜನ್ಮವಿದು. ಶೀಗುರುಕಾರುಣ್ಯವೇ ನಮ್ಮನ್ನು ಸಂಕಷ್ಟಗಳ ಕಡಲಿನಿಂದ ಪಾರು ಮಾಡಿ ಜೀವದಾನ ನೀಡಿದೆ. ಶ್ರೀಗುರುಗಳು ಕರುಣಿಸಿದ ಬದುಕನ್ನು ಕೊನೆಯ ಉಸಿರಿರುವವರೆಗೂ ಶ್ರೀಗುರುಸೇವೆಗೆ ಮತ್ತು ಗೋಸೇವೆಗೆ ಸಂಪೂರ್ಣವಾಗಿ ಮೀಸಲಾಗಿರಿಸುತ್ತಿದ್ದೇವೆ ” ಎಂದು ಭಾವಪೂರ್ಣವಾಗಿ ನುಡಿದವರು ಗೀತಾಲಕ್ಷ್ಮಿ ಪಂಜಿಗದ್ದೆ.

ಮಂಗಳೂರು ಮಂಡಲ ವಿಟ್ಲ ವಲಯದ ಕುಕ್ಕಿಲ ನಿವಾಸಿಗಳಾಗಿರುವ ಪಂಜಿಗದ್ದೆ ರಮೇಶ್ ಚಂದ್ರ ಅವರ ಪತ್ನಿಯಾದ ಗೀತಾಲಕ್ಷ್ಮಿ, ಸುಮಾರು ಎರಡು ದಶಕಗಳಿಂದ ಶ್ರೀರಾಮಚಂದ್ರಾಪುರ ಮಠದ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

​ ಪುತ್ತೂರು ಸಮೀಪ ಕುಂಜೂರಿನ ನಿವಾಸಿಗಳಾದ ದಿವಾಣ ಕೃಷ್ಣ ಭಟ್ ಮತ್ತು ಭಾರತಿ ಕೆ. ಭಟ್ ದಂಪತಿಗಳ ಪುತ್ರಿಯಾಗಿ ಜನಿಸಿದ ಇವರಿಗೆ, ಬಾಲ್ಯದಿಂದಲೇ ಹಸುಗಳ ಒಡನಾಟ ಇತ್ತು. ತವರು ಮನೆಯಿಂದಲೇ ಲಭಿಸಿದ ಈ ಗೋಪ್ರೇಮ ಮತ್ತು ಶ್ರೀಮಠದ ಸಂಪರ್ಕವು, ವಿವಾಹದ ನಂತರ ಪಂಜಿಗದ್ದೆ ಕುಟುಂಬಕ್ಕೆ ಬಂದ ಮೇಲೂ ನಿರಂತರವಾಗಿ ಮುಂದುವರಿಯಿತು. ಮನೆಯಲ್ಲಿ ಗೋವುಗಳನ್ನು ಪ್ರೀತಿಯಿಂದ ಪೋಷಿಸುತ್ತಿದ್ದ ಇವರಿಗೆ, ಕಾಲಕ್ರಮೇಣ ಕೆಲವು ಅನಿವಾರ್ಯ ಕಾರಣಗಳಿಂದಾಗಿ ಮನೆಯಲ್ಲೇ ಹಸುಗಳನ್ನು ಸಾಕುವುದು ಸವಾಲಿನ ವಿಷಯವಾಗಿತ್ತು.

​ಗೀತಾಲಕ್ಷ್ಮಿ ಪಂಜಿಗದ್ದೆ ಅವರ ಬದುಕಿನಲ್ಲಿ ಶ್ರೀಗುರುಗಳ ಅಭಯದ ನಿಜವಾದ ಅನುಭವವಾಗಿದ್ದು ಬದುಕಿನ ಸಂಕಷ್ಟಗಳ ಕ್ಷಣಗಳಲ್ಲಿ. ಕೆಲವು ವರ್ಷಗಳ ಹಿಂದೆ ಇವರ ಪತಿ ರಮೇಶ್ ಚಂದ್ರ ಅವರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೆ ಈಡಾಗಿ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿತ್ತು. ಆದರೆ, ಕಾರಿನಲ್ಲಿದ್ದ ಪತಿ ಹಾಗೂ ಮಕ್ಕಳು ಚಿಕ್ಕ ಪುಟ್ಟ ಗಾಯಗಳೊಂದಿಗೆ ಪವಾಡಸದೃಶವಾಗಿ ಪಾರಾಗಿದ್ದರು! ಕಾರಿನಲ್ಲಿದ್ದ ಶ್ರೀಗುರುಗಳ ದಿವ್ಯ ಮಂತ್ರಾಕ್ಷತೆಯ ರಕ್ಷಾಕವಚವೇ ತಮ್ಮ ಕುಟುಂಬವನ್ನು ಮೃತ್ಯುವಿನ ಮುಖದಿಂದ ಕಾಪಾಡಿತು ಎಂಬುದು ಇವರ ಅಚಲ ನಂಬಿಕೆ.

​ಇನ್ನೊಂದು ಘಟನೆ ಇವರ ಬದುಕನ್ನೇ ಅಲ್ಲಾಡಿಸಿಬಿಟ್ಟಿತು. ಮನೆಯ ಕೋಣೆಯೊಳಗೆ ಸಂಭವಿಸಿದ ತೀವ್ರ ವಿದ್ಯುತ್ ಆಘಾತಕ್ಕೆ ಒಳಗಾದ ಗೀತಾಲಕ್ಷ್ಮಿ ಮತ್ತು ರಮೇಶ್ ಚಂದ್ರ ದಂಪತಿಗಳಿಬ್ಬರೂ ಸಾವಿನ ದವಡೆಯಿಂದ ಪಾರಾಗಿ ಬಂದದ್ದು ಕೇವಲ ಶ್ರೀಗುರುಗಳ ಕೃಪೆಯಿಂದ ಮಾತ್ರ. ಈ ವಿದ್ಯುತ್ ಆಘಾತದ ದುರಂತದಿಂದಾಗಿ ಇಂದಿಗೂ ಅನೇಕ ದೈಹಿಕ ಯಾತನೆಗಳು, ತೊಂದರೆಗಳು ಗೀತಾಲಕ್ಷ್ಮಿ ಅವರನ್ನು ಬಾಧಿಸುತ್ತಿವೆ. ಆದರೂ,
” ಇದು ನಮಗೆ ಗುರುಗಳು ಕರುಣಿಸಿದ ಪುನರ್ಜನ್ಮ. ಈ ಬದುಕು ಇನ್ನು ಸಂಪೂರ್ಣವಾಗಿ ಶ್ರೀಮಠದ ಸೇವೆಗೆ ಮೀಸಲು” ಎಂಬ ನಿರ್ಧಾರಕ್ಕೆ ಬಂದವರು ಇವರು.

​ತಮಗೆ ಲಭಿಸಿದ ಪುನರ್ಜನ್ಮದ ಪ್ರತಿ ಕ್ಷಣವನ್ನೂ ಗುರುಸೇವೆಯಲ್ಲಿ ಧನ್ಯಗೊಳಿಸಲು ತೀರ್ಮಾನಿಸಿದ ಗೀತಾಲಕ್ಷ್ಮಿ ಅವರು, ಶ್ರೀಮಠದ ‘ಮಾತೃತ್ವಮ್’ ಯೋಜನೆಯ ಮೂಲಕ ‘ಮಾಸದ ಮಾತೆ’ಯಾದರು. ಮನೆಯಲ್ಲಿ ಪ್ರತ್ಯಕ್ಷವಾಗಿ ಹಸುಗಳನ್ನು ಸಾಕಲು ಸಾಧ್ಯವಾಗದ ಕೊರತೆಯನ್ನು ಈ ಯೋಜನೆಯ ಮೂಲಕ ನೀಗಿಸಿಕೊಂಡರು. ಇವರ ನಿರಂತರ ಶ್ರದ್ಧೆ ಹಾಗೂ ಪರಿಶ್ರಮದಿಂದಾಗಿ ಈಗಾಗಲೇ ನಾಲ್ಕು ಗೋವುಗಳ ಸಂಪೂರ್ಣ ನಿರ್ವಹಣೆಯ ಗುರಿಯನ್ನು ತಲುಪಿದ್ದಾರೆ.

​ಗೀತಾಲಕ್ಷ್ಮಿ ಅವರ ಪತಿ ಮತ್ತು ಇಬ್ಬರು ಪುತ್ರರು ಶ್ರೀಮಠದ ಮತ್ತು ಶ್ರೀಗುರುಗಳ ಸೇವೆಯಲ್ಲಿ ಸಂಪೂರ್ಣ ಬೆಂಬಲವಾಗಿ ನಿಂತಿದ್ದಾರೆ. ಇವರ ಸೊಸೆ ಮಂಗಳೂರು ನಂತೂರಿನ ಶ್ರೀಭಾರತೀ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಇಡೀ ಕುಟುಂಬವೇ ಶ್ರೀಮಠದ ಆಶಯಗಳಿಗೆ ಸ್ಪಂದಿಸುತ್ತಿದೆ.

​” ನಮ್ಮ ಬದುಕಿಗೆ ಸರಿಯಾದ ಮಾರ್ಗದರ್ಶನ ನೀಡಿದವರು, ಕಷ್ಟದ ಹಾದಿಯಲ್ಲಿ ಜೀವದಾನ ಅನುಗ್ರಹಿಸಿದವರು ಶ್ರೀಗುರುಗಳು. ದೈಹಿಕ ಯಾತನೆಗಳನ್ನು ಬದಿಗೊತ್ತಿ, ಈ ಉಸಿರಿರುವ ತನಕ ಗುರುಸೇವೆ ಮತ್ತು ಗೋಸೇವೆಯಲ್ಲಿ ನಿರತರಾಗಿರುವುದೇ ನಮ್ಮ ಜೀವನದ ಧನ್ಯತೆ ” ಎಂದು ನುಡಿಯುವ ಗೀತಾಲಕ್ಷ್ಮಿ ರಮೇಶ್ ಚಂದ್ರ ಪಂಜಿಗದ್ದೆ ಅವರು ಶ್ರೀಮಠದ ಹೆಚ್ಚಿನ ಎಲ್ಲಾ ಸೇವೆಗಳಿಗೂ ಕೈಜೋಡಿಸುತ್ತಾ ಮತ್ತಷ್ಟು ಶ್ರದ್ಧೆಯಿಂದ ಶ್ರೀಗುರು ಸೇವೆಯಲ್ಲಿ ನಿರತರಾಗಿದ್ದಾರೆ.

ಪ್ರಸನ್ನಾ ವಿ. ಚೆಕ್ಕೆಮನೆ