” ಶ್ರೀ ಗುರುಗಳ ಕಾಮದುಘಾ ಯೋಜನೆಯ ಪ್ರೇರಣೆಯಿಂದ ನಮ್ಮ ಮನೆಯಲ್ಲಿ ದೇಸೀ ಗೋವುಗಳನ್ನು ಸಾಕುತ್ತಿದ್ದೇವೆ. ನಮ್ಮ ಜೀವನಕ್ಕೆ ಗೋಸಾಕಣೆಯ ನಿಜವಾದ ಸ್ಪೂರ್ತಿ ದೊರೆತದ್ದೇ ಶ್ರೀಗುರುಗಳ ಪರಿಕಲ್ಪನೆಯ ಯೋಜನೆಗಳಿಂದ. ಶ್ರೀಗುರುಗಳು ಸಮಾಜದಲ್ಲಿ ದೇಸಿ ಹಸುಗಳ ರಕ್ಷಣೆಯ ಮಹಾನ್ ಕ್ರಾಂತಿಯನ್ನು ಮಾಡದಿರುತ್ತಿದ್ದರೆ, ಇಂದಿನ ಸಮಾಜಕ್ಕೆ ದೇಸೀ ಗೋವುಗಳ ಪವಿತ್ರ ಮಹತ್ವ ಹಾಗೂ ಮೌಲ್ಯದ ಅರಿವೇ ಆಗುತ್ತಿರಲಿಲ್ಲ” ಎಂದು ಶ್ರದ್ಧೆಯಿಂದ ನುಡಿಯುತ್ತಾರೆ ಜಯಶ್ರೀ ಪ್ರವೀಣ್ ನೀರಮೂಲೆ.
ಮಂಗಳೂರು ಮಂಡಲ ಕಲ್ಲಡ್ಕ ವಲಯದ ವಾಟೆತ್ತಾಳ ನಿವಾಸಿಗಳಾಗಿರುವ ಪ್ರವೀಣ್ ನೀರಮೂಲೆ ಅವರ ಪತ್ನಿಯಾದ ಇವರು, ಉನ್ನತ ಶಿಕ್ಷಣ ಪಡೆದಿದ್ದರೂ ಕೃಷಿ ಮತ್ತು ಗೋಸೇವೆಯಲ್ಲಿ ಸಂತೃಪ್ತಿಯನ್ನು ಕಾಣುತ್ತಿದ್ದಾರೆ.
ಕೇರಳದ ಬಾಯಾರು ಸಮೀಪ ದಳಿಕುಕ್ಕುವಿನ ಶಂಕರ ಭಟ್ ಮತ್ತು ಗುಣವತಿ ಅಮ್ಮ ದಂಪತಿಗಳ ಪುತ್ರಿಯಾಗಿ ಜನಿಸಿದ ಜಯಶ್ರೀ ಅವರು ‘ಐಟಿ ಪದವೀಧರೆ’. ಮಾಹಿತಿ ತಂತ್ರಜ್ಞಾನ ರಂಗದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳುವ ಅವಕಾಶಗಳಿದ್ದರೂ, ಸಾತ್ವಿಕ ಗೃಹಿಣಿಯಾಗಿ ಕೃಷಿ ಮತ್ತು ಗೋಸೇವೆಯನ್ನು ತಮ್ಮ ಜೀವನದ ಧ್ಯೇಯವಾಗಿಸಿಕೊಂಡಿದ್ದಾರೆ. ಇವರು ಪತಿ ಪ್ರವೀಣ್ ನೀರಮೂಲೆ ಅವರ ಪ್ರೋತ್ಸಾಹದಿಂದ ತಮ್ಮ ಮನೆಯಲ್ಲಿ ಹಸುಗಳು, ಕರುಗಳು, ಹೋರಿಗಳು ಸೇರಿದಂತೆ ಸುಮಾರು ಹನ್ನೆರಡು ಗೋವುಗಳನ್ನು ಸಾಕುತ್ತಿದ್ದಾರೆ.
ತಮ್ಮ ಮನೆಯಲ್ಲೇ ಹಸುಗಳನ್ನು ಸಾಕುತ್ತಿದ್ದರೂ, ಮಂಗಳೂರಿನ ಸುಮಾ ರಮೇಶ್ ಅವರ ಪ್ರೇರಣೆಯಿಂದ ಶ್ರೀಮಠದ ‘ಮಾತೃತ್ವಮ್’ ಯೋಜನೆಯಲ್ಲಿ ‘ಮಾಸದ ಮಾತೆ’ಯಾಗಿ ತೊಡಗಿಸಿಕೊಂಡರು .
” ಪತಿ ಪ್ರವೀಣ್ ನೀರಮೂಲೆ ಹಾಗೂ ನನ್ನ ತಾಯಿ ಗುಣವತಿ ಅಮ್ಮ ಅವರ ಸಹಕಾರದಿಂದ ಮತ್ತು ಶ್ರೀಗುರುಗಳ ಕೃಪೆಯಿಂದ ಬಹಳ ಬೇಗನೆ ಗುರಿಯನ್ನು ತಲುಪಲು ಸಾಧ್ಯವಾಯಿತು” ಎನ್ನುವ ಇವರು, ಶ್ರೀಗುರುಗಳಿಂದ ‘ಲಕ್ಷ ಬಾಗಿನ’ವನ್ನು ಸ್ವೀಕರಿಸಿ ಗುರುಗಳ ಅನುಗ್ರಹ ಪಡೆಯುವ ಸೌಭಾಗ್ಯವನ್ನು ತಮ್ಮದಾಗಿಸಿಕೊಂಡಿದ್ದಾರೆ.
” ಶ್ರೀಗುರುಗಳು ಸಮಾಜಕ್ಕೆ ನೀಡಿರುವ ಸಾವಯವ ಆಹಾರ ಕ್ರಮ ಹಾಗೂ ದೈನಂದಿನ ಜೀವನದಲ್ಲಿ ದೇಸಿ ಗೋಉತ್ಪನ್ನಗಳ ಬಳಕೆಯ ಮಾರ್ಗದರ್ಶನದಿಂದಾಗಿ ಸಂಪೂರ್ಣ ಆರೋಗ್ಯವಂತ ಹಾಗೂ ನೆಮ್ಮದಿಯ ಜೀವನ ಸಾಧ್ಯವಾಗಿದೆ” ಎಂಬುದು ಜಯಶ್ರೀ ಅವರ ಅನುಭವದ ಮಾತು.
ಇವರ ಈ ಧಾರ್ಮಿಕ ಶ್ರದ್ಧೆಯು ಮುಂದಿನ ತಲೆಮಾರಿಗೂ ಹರಿದುಬಂದಿದೆ. ಇವರ ಮಕ್ಕಳಿಗೂ ಶ್ರೀಮಠದ ಸೇವೆಯಲ್ಲಿ ಹಾಗೂ ಶ್ರೀಗುರುಗಳಲ್ಲಿ ಶ್ರದ್ಧಾಭಕ್ತಿಗಳಿವೆ. ಇವರ ಮಗ ಶ್ರೀಚರಣ ಈ ಹಿಂದೆ ಶ್ರೀಮಠದ ‘ರಾಮಪದ’ ಕಾರ್ಯಕ್ರಮದಲ್ಲಿ ಹಾಗೂ ‘ಸುವರ್ಣ ಮಂಟಪ ಪೂಜೆ’ಯ ಸಂದರ್ಭದಲ್ಲಿ ತಮ್ಮ ಗಾಯನದ ಮೂಲಕ ಸಂಗೀತ ಸೇವೆಯನ್ನು ಶ್ರೀಗುರುಗಳ ಚರಣಗಳಿಗೆ ಸಮರ್ಪಿಸಿದ್ದಾನೆ.
” ಶ್ರೀಗುರುಗಳ ಕಾರುಣ್ಯದಿಂದ ನಮ್ಮ ಬದುಕು ಹಸನಾಗಿದೆ. ಭಾರತೀಯ ತಳಿಯ ಗೋವುಗಳನ್ನು ಸಾಕುತ್ತಾ, ಜೊತೆಗೆ ಶ್ರೀಮಠದ ಮಾತೃತ್ವಮ್ ಯೋಜನೆಯ ಮೂಲಕ ಗೋಸೇವೆಯನ್ನು ನಿರಂತರವಾಗಿ ಮುನ್ನಡೆಸಿಕೊಂಡು ಹೋಗುವುದೇ ನಮ್ಮ ಬದುಕಿನ ಬಹುದೊಡ್ಡ ಭಾಗ್ಯ” ಎಂದು ನುಡಿಯುವ ಜಯಶ್ರೀ ಅವರ ಅನನ್ಯ ಗೋಪ್ರೇಮ ಮತ್ತು ಗುರುಭಕ್ತಿ ಎಲ್ಲರಿಗೂ ಮಾದರಿಯಾಗಿದೆ.
ಪ್ರಸನ್ನಾ ವಿ. ಚೆಕ್ಕೆಮನೆ
