|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಶ್ರೀಮಠದ ಸೇವೆಯಿಂದ ಬಾಂಧವ್ಯದ ಬೆಸುಗೆ ‘ – ಪ್ರಮೀಳಾ ಶಿವಶಂಕರ್ ಕಿರುಮಕ್ಕಿ

​” ಶ್ರೀಮಠದ ಸಂಪರ್ಕಕ್ಕೆ ಬಂದ ಮೇಲೆ ಸಮಾಜದ ಜೊತೆ ಸುಂದರವಾದ ಬಾಂಧವ್ಯ ಬೆಳೆದಿದೆ. ಸಮಾಜದ ಜೊತೆಗಿನ ಈ ನಿಕಟತೆಯು ನಮ್ಮ ಜೀವನದ ಪಥವನ್ನೇ ಸಕಾರಾತ್ಮಕವಾಗಿ ಬದಲಾಯಿಸಿದೆ. ಶ್ರೀಮಠದ ಗುರುಭಕ್ತರೆಲ್ಲರೂ ನಮ್ಮ ಸ್ವಂತ ಬಂಧುಗಳಾಗಿದ್ದಾರೆ; ಬದುಕಿನಲ್ಲಿ ಇದಕ್ಕಿಂತ ಹೆಚ್ಚಿನ ಸೌಭಾಗ್ಯ ಇನ್ನೇನು ಬೇಕು ?” ಎಂದು ಹೃದಯತುಂಬಿ ಹೇಳಿದವರು ಮುಳ್ಳೇರಿಯ ಮಂಡಲ ಕೊಡಗು ವಲಯದ ಕಿರುಮಕ್ಕಿ ಮನೆಯ ಶಿವಶಂಕರ್ ಅವರ ಪತ್ನಿಯಾಗಿರುವ ಪ್ರಮೀಳಾ ಕಿರುಮಕ್ಕಿ.
ಕಳೆದ ಎರಡೂವರೆ ದಶಕಗಳಿಂದ ಶ್ರೀರಾಮಚಂದ್ರಾಪುರ ಮಠದ ಸೇವೆಯಲ್ಲಿ ಇವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

​ಕೊಡಗಿನ ಅಮ್ಮತ್ತಿ ಒಂಟಿ ಅಂಗಡಿಯ ಕೃಷ್ಣಮೂರ್ತಿ ಕಣ್ಣಾಂಗಾಲ ಮತ್ತು ಮೀನಾಕ್ಷಿ ದಂಪತಿಗಳ ಪುತ್ರಿಯಾಗಿ ಜನಿಸಿದ ಇವರಿಗೆ, ಬಾಲ್ಯದಿಂದಲೇ ಗೋವುಗಳ ಒಡನಾಟ ದೊರಕಿತ್ತು. ಕೃಷಿ ಸಂಸ್ಕೃತಿಯಲ್ಲಿ ಬೆಳೆದ ಇವರಿಗೆ ತೋಟ, ಗದ್ದೆ ಹಾಗೂ ಗೋವುಗಳ ಮಹತ್ವದ ಅರಿವಿತ್ತು. ವಿವಾಹದ ನಂತರ ಕಿರುಮಕ್ಕಿ ಕುಟುಂಬದ ಸೊಸೆಯಾಗಿ ಬಂದ ಮೇಲೆಯೂ ತಮ್ಮ ಮನೆಯಲ್ಲಿ ಹಸುಗಳನ್ನು ಪೋಷಿಸುವ ಕಾಯಕವನ್ನು ಮುಂದುವರಿಸಿದರು.

​ಮನೆಯಲ್ಲಿ ಹಸುಗಳನ್ನು ಸಾಕುತ್ತಿದ್ದರೂ, ಶ್ರೀಮಠದ ಮೂಲಕ ನಡೆಯುವ ಗೋಸೇವಾ ಯಜ್ಞದಲ್ಲಿ ಪಾಲ್ಗೊಳ್ಳುವ ಹಂಬಲ ಇವರದ್ದಾಗಿತ್ತು.
” ನಾವು ಸ್ವತಃ ಮನೆಯಲ್ಲಿ ಹಸುಗಳನ್ನು ಸಾಕುವುದರಿಂದ ಗೋಸಾಕಣೆಯ ಕಷ್ಟ-ಸುಖಗಳು ಮತ್ತು ಅದಕ್ಕಿರುವ ಶ್ರಮ ನಮಗೆ ಪ್ರತ್ಯಕ್ಷವಾಗಿ ಗೊತ್ತಿದೆ. ಹಾಗಾಗಿಯೇ ಶ್ರೀಮಠದ ಗೋಶಾಲೆಗಳ ಗೋವುಗಳ ರಕ್ಷಣೆಗೆ ಕೈಜೋಡಿಸುವುದು ನಮ್ಮ ಕರ್ತವ್ಯ ಎಂದು ಭಾವಿಸಿದೆ” ಎನ್ನುತ್ತಾರೆ ಪ್ರಮೀಳಾ.
ಶ್ರೀಮಠದ ‘ಮಾತೃತ್ವಮ್’ ಯೋಜನೆಯ ಮೂಲಕ ‘ಮಾಸದ ಮಾತೆ’ಯಾದ ಇವರು, ಸಮಾಜಕ್ಕೆ ದೇಸಿ ತಳಿಗಳ ಮಹತ್ವವನ್ನು ಸಾರುತ್ತಾ ಅನೇಕರನ್ನು ಈ ಕಾರ್ಯಕ್ಕೆ ಪ್ರೇರೇಪಿಸಿದರು. ತಮ್ಮ ನಿರಂತರ ಶ್ರದ್ಧೆಯಿಂದ ಎರಡು ಗೋವುಗಳ ನಿರ್ವಹಣಾ ವೆಚ್ಚವನ್ನು ವಹಿಸಿಕೊಂಡು, ಶ್ರೀಗುರುಗಳಿಂದ ‘ಲಕ್ಷ ಬಾಗಿನ’ವನ್ನು ಸ್ವೀಕರಿಸುವ ಸೌಭಾಗ್ಯವನ್ನು ತಮ್ಮದಾಗಿಸಿಕೊಂಡಿದ್ದಾರೆ.

​ಪ್ರಮೀಳಾ ಅವರ ಶ್ರೀಮಠದ ಸೇವೆಗೆ ಅವರ ಕುಟುಂಬ ಸಂಪೂರ್ಣ ಬೆನ್ನೆಲುಬಾಗಿ ನಿಂತಿದೆ. ಇವರ ಮಗಳು ವಿದ್ಯಾರ್ಥಿನಿಯಾಗಿದ್ದರೂ, ತಾಯಿಯ ಹಾದಿಯಲ್ಲೇ ನಡೆದು ತಾನೂ ‘ಮಾಸದ ಮಾತೆ’ಯಾಗಿ ‘ಮಾತೃತ್ವಮ್’ ಮೂಲಕ ಗೋಸೇವೆಗೆ ಕೈಜೋಡಿಸಿರುವುದು ಈ ಕುಟುಂಬಕ್ಕೆ ಶ್ರೀಮಠದ ಮೇಲಿರುವ ಅನನ್ಯ ಶ್ರದ್ಧೆಗೆ ಸಾಕ್ಷಿಯಾಗಿದೆ.
ಪ್ರಸ್ತುತ ಕೊಡಗು ವಲಯದ ‘ಬಿಂದು ಸಿಂಧು ಪ್ರಧಾನೆಯಾಗಿ ಸೇವೆ ಸಲ್ಲಿಸುತ್ತಿರುವ ಪ್ರಮೀಳಾ ಅವರಿಗೆ, ತಮ್ಮ ಪತಿಯ ಪ್ರೋತ್ಸಾಹದಿಂದ ಮೂವರು ಮಕ್ಕಳಲ್ಲಿಯೂ ಶ್ರೀಮಠದ, ಗೋಸೇವೆಯ ಆಸಕ್ತಿ ಮೂಡಿರುವುದು ನೆಮ್ಮದಿ ತಂದಿದೆ. ಪ್ರತಿವರ್ಷವೂ ಶ್ರೀಮಠಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆಯುತ್ತಿರುವ ಅವರು ತಮ್ಮ ಕೃಷಿ ಹಾಗೂ ಗೋಸೇವೆಯ ನಡುವೆಯೇ ಶ್ರೀಮಠದ ಸೇವೆಯನ್ನು ಮುಂದುವರಿಸುತ್ತಿದ್ದಾರೆ.

​” ಶ್ರೀಮಠದ ಸಂಪರ್ಕದಿಂದ ದೊರಕಿರುವ ಈ ಬಾಂಧವ್ಯ ಮಾತುಗಳಿಗೆ ಮೀರಿದ್ದು. ಬದುಕಿನ ಪ್ರತಿಯೊಂದು ಕ್ಷಣದಲ್ಲೂ ಶ್ರೀಗುರುಸೇವೆ ನಮ್ಮನ್ನು ಸದಾ ಕಾಯುತ್ತದೆ ಎಂಬ ಅಚಲ ವಿಶ್ವಾಸ ನಮ್ಮದು” ಎಂದು ನುಡಿಯುವ ಪ್ರಮೀಳಾ ಶಿವಶಂಕರ್ ಕಿರುಮಕ್ಕಿ ಅವರಿಗೆ, ಮುಂದೆಯೂ ಶ್ರೀಮಠದ ವಿವಿಧ ಸೇವೆಗಳಲ್ಲಿ ಇನ್ನಷ್ಟು ನಿರತರಾಗುವ ಶಕ್ತಿಯನ್ನು ಶ್ರೀಗುರುಗಳು ಕರುಣಿಸಲಿ ಎಂಬುದೇ ಅಂತರಾಳದ ಪ್ರಾರ್ಥನೆಯಾಗಿದೆ.

ಪ್ರಸನ್ನಾ ವಿ. ಚೆಕ್ಕೆಮನೆ