‘ ಶ್ರೀಗುರುಚರಣಗಳಲ್ಲಿ ಅಪರಿಮಿತ ಶ್ರದ್ಧೆ ಮತ್ತು ಗೋಮಾತೆಯ ಮೇಲಿನ ಮಮತೆ ಜೊತೆ ಸೇರಿದಾಗ ಜೀವನ ಆನಂದಮಯವಾಗುತ್ತದೆ. ಶ್ರೀಗುರುಗಳ ಅನುಗ್ರಹವಿದ್ದರೆ ಬದುಕು ಬಂಗಾರವಾಗುತ್ತದೆ ‘ ಎಂದು ಭಾವಪೂರ್ಣವಾಗಿ ನುಡಿದವರು, ಸಿದ್ದಾಪುರ ಮಂಡಲ ಬಾನ್ಕುಳಿ ವಲಯದ ಬಾಲಚಂದ್ರ ಹೆಗಡೆಯವರ ಪತ್ನಿ ಕುಸುಮಾ ಹೆಗಡೆ.
ಶ್ರೀರಾಮಚಂದ್ರಾಪುರ ಮಠದ ನಿಷ್ಠಾವಂತ ಸೇವಕರಾದ ಅವರಿಗೆ ತಮ್ಮ ಬದುಕಿನ ಪ್ರತಿಯೊಂದು ಯಶಸ್ಸು ಹಾಗೂ ನೆಮ್ಮದಿಯ ಹಿಂದೆ ಶ್ರೀಗುರುಗಳ ದಿವ್ಯ ಆಶೀರ್ವಾದವಿದೆ ಎಂದು ದೃಢವಾದ ನಂಬಿಕೆಯಿದೆ.
ಕುಸುಮಾ ಅವರ ಧಾರ್ಮಿಕ ಮತ್ತು ಸಾತ್ತ್ವಿಕ ಬದುಕಿಗೆ ಪ್ರೇರಣೆ ತವರು ಮನೆಯ ಸುಸಂಸ್ಕೃತ ಪರಿಸರದಿಂದಲೇ ದೊರಕಿತ್ತು. ಕಡ್ಕಾರ್ ವೆಂಕಟರಮಣ ಮತ್ತು ಗಂಗಾ ದಂಪತಿಗಳ ಪುತ್ರಿಯಾದ ಇವರು ಮದುವೆಯ ನಂತರ ಶ್ರೀಮಠಕ್ಕೆ ಮತ್ತಷ್ಟು ನಿಕಟವಾದರು.
ಶ್ರೀಮಠದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುವ, ಸದಾ ಶ್ರೀಮಠದ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುವ ಇವರ ಮನೆಯವರೆಲ್ಲರೂ ಶ್ರೀಮಠದ ಸೇವೆಯಲ್ಲಿ ನಿರತರಾದವರು.
ಶ್ರೀಮಠದ ಸೇವಾಕಾರ್ಯಗಳಲ್ಲಿ ಸಕ್ರಿಯರಾಗಿದ್ದ ಕುಸುಮಾ ಬಾಲಚಂದ್ರಹೆಗಡೆ ಅವರು ಸಿದ್ದಾಪುರದ ವೀಣಕ್ಕ ಅವರ ಪ್ರೋತ್ಸಾಹದಿಂದ ಶ್ರೀಮಠದ ಮಹತ್ವಾಕಾಂಕ್ಷೆಯ ‘ಮಾತೃತ್ವಮ್’ ಯೋಜನೆಯಲ್ಲಿ ಮಾಸದ ಮಾತೆಯಾಗಿ ಕೈಜೋಡಿಸಿದರು.
ಗೋಮಾತೆಯ ಸೇವೆಯ ಕಾರ್ಯದಲ್ಲಿ ನಿರತರಾದ ಇವರ ನಿರಂತರ ಪರಿಶ್ರಮದ ಫಲವಾಗಿ ಇವರು ಈಗಾಗಲೇ ಮೂರು ಹಸುಗಳ ಗುರಿಯನ್ನು ತಲುಪಿ, ನಾಲ್ಕನೇ ಹಸುವಿನ ಸೇವೆಯನ್ನು ಮುಂದುವರಿಸುತ್ತಿದ್ದಾರೆ.
ಕುಸುಮಾ ಅವರ ಗೋಪ್ರೇಮ ಕೇವಲ ಶ್ರೀಮಠದ ಯೋಜನೆಗಳಿಗೆ ಮಾತ್ರ ಸೀಮಿತವಾಗಿಲ್ಲ; ಇವರು ತಮ್ಮ ಮನೆಯಲ್ಲಿಯೂ ಹಸುಗಳನ್ನು ಸಾಕಿ ಅತ್ಯಂತ ಪ್ರೀತಿಯಿಂದ ಪೋಷಿಸುತ್ತಿದ್ದಾರೆ. ಸಾವಯವ ಕೃಷಿ ಪದ್ಧತಿಗೆ ತಮ್ಮ ಬದುಕಿನಲ್ಲಿ ಮೊದಲ ಆದ್ಯತೆ ನೀಡಿದ್ದಾರೆ. ರಾಸಾಯನಿಕ ಮುಕ್ತ ಕೃಷಿಯ ಮೂಲಕ ಭೂಮಿತಾಯಿಯನ್ನು ರಕ್ಷಿಸುವ ಹಾಗೂ ಗೋಆಧಾರಿತ ಕೃಷಿಯ ಮೂಲಕ ಸಮೃದ್ಧಿಯನ್ನು ಕಾಣುವ ಇವರ ಚಿಂತನೆ ಶ್ಲಾಘನೀಯವಾಗಿದೆ.
ಮಹಿಳೆಯರ ಯಾವುದೇ ಒಂದು ಕಾರ್ಯದಲ್ಲಿ ಪತಿಯ ಸಂಪೂರ್ಣ ಬೆಂಬಲವಿದ್ದರೆ ಆ ಹಾದಿ ಮತ್ತಷ್ಟು ಸುಗಮವಾಗುತ್ತದೆ. ಕುಸುಮಾ ಅವರ ಈ ಸುಂದರ ಭಕ್ತಿಪಥಕ್ಕೆ ಪತಿ ಬಾಲಚಂದ್ರ ಹೆಗಡೆ ಅವರ ಪ್ರೋತ್ಸಾಹ ನಿರಂತರವಾಗಿದೆ. ಬಾಲಚಂದ್ರ ಹೆಗಡೆ ಅವರು ಬಾನ್ಕುಳಿ ಮಠದ ಕಾರ್ಯದರ್ಶಿಗಳಾಗಿ ಶ್ರೀಮಠದ ಜವಾಬ್ದಾರಿಯನ್ನು ಅತ್ಯಂತ ಶ್ರದ್ಧೆಯಿಂದ ನಿಭಾಯಿಸುತ್ತಿದ್ದು, ಪತ್ನಿಯ ಗೋಸೇವೆಯ ಸಂಕಲ್ಪಕ್ಕೆ ಸದಾ ಬೆನ್ನೆಲುಬಾಗಿ ನಿಂತಿದ್ದಾರೆ.
”ಶ್ರೀಗುರುಗಳ ಕೃಪೆಯಿಂದಾಗಿ ನಮ್ಮ ಬದುಕಿನಲ್ಲಿ ಎಲ್ಲವೂ ಒಳಿತಾಗಿದೆ. ಗುರುಗಳ ಅನುಗ್ರಹದಿಂದಲೇ ಮಗನಿಗೆ ಉತ್ತಮ ಉದ್ಯೋಗ ದೊರೆತು ಬದುಕು ನಿರಾಳವಾಗಿದೆ. ನಮ್ಮ ಇಬ್ಬರು ಮಕ್ಕಳಿಗೂ ಶ್ರೀಮಠದ ಸೇವೆಗಳಲ್ಲಿ, ಶ್ರೀಗುರುಗಳ ಮೇಲೆ ಅಚಲವಾದ ಶ್ರದ್ಧೆ ಇದೆ. ಬದುಕಿನ ಎಲ್ಲ ಸಂಕಷ್ಟಗಳನ್ನೂ ದೂರವಾಗಿಸಿ, ನಮಗೆ ಸದಾ ಶಾಂತಿ ಮತ್ತು ನೆಮ್ಮದಿಯನ್ನು ಕರುಣಿಸಿರುವುದು ಶ್ರೀಗುರುಗಳ ಅನುಗ್ರಹವೇ ” ಎಂದು ಕುಸುಮಾ ಬಿ. ಹೆಗಡೆ ಅವರು ಭಕ್ತಿಪೂರ್ವಕವಾಗಿ ನುಡಿಯುತ್ತಾರೆ.
ಶ್ರೀಮಠದ , ಗುರುಗಳ ಆಶಯಗಳನ್ನು ಅತ್ಯಂತ ನಿಷ್ಠೆಯಿಂದ ಪಾಲಿಸುವ ಕುಸುಮಾ ಹೆಗಡೆಯವರಿಗೆ ಶ್ರೀಗುರುಗಳ ಸೇವೆ ಹಾಗೂ ಗೋಮಾತೆಯ ಸೇವೆಯಲ್ಲಿ ನಿರಂತರವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂಬುದೇ ಮನದಾಳದ ಅಭಿಲಾಷೆ.
ಪ್ರಸನ್ನಾ ವಿ. ಚೆಕ್ಕೆಮನೆ