ಸುಸಂಸ್ಕೃತ ಕುಟುಂಬದಲ್ಲಿ ಜನಿಸಿ, ಆಧುನಿಕ ಶಿಕ್ಷಣವನ್ನು ಪಡೆದು, ವೃತ್ತಿಕ್ಷೇತ್ರದಲ್ಲಿ ಸಕ್ರಿಯವಾಗಿ ಸಾಧನೆ ಮಾಡುತ್ತಿರುವಾಗಲೂ ತಮ್ಮ ಮೂಲ ಬೇರುಗಳನ್ನು ಮರೆಯದೆ ಸಂಪ್ರದಾಯ ಮತ್ತು ಸೇವೆಯಲ್ಲಿ ನೆಮ್ಮದಿ ಕಾಣುವ ವ್ಯಕ್ತಿಗಳು ಅಪರೂಪ. ಇಂತಹ ಅಪರೂಪದ ಸಾಲಿಗೆ ಸೇರಿದವರು ಸೌಂದರ್ಯ ಕೊಲ್ಲಂಪಾರೆ. ಮುಳ್ಳೇರಿಯ ಮಂಡಲ ನೀರ್ಚಾಲು ವಲಯದ ಉಪ್ಪಿನೆ ನಿವಾಸಿಗಳಾಗಿರುವ ಡಾ. ಗೌತಮ್ ಅವರ ಪತ್ನಿ ಸೌಂದರ್ಯ, ಕೊಲ್ಲಂಪಾರೆಯ ನಾರಾಯಣ ಭಟ್ ಮತ್ತು ಪಾರ್ವತಿ ದಂಪತಿಗಳ ಪುತ್ರಿ.
ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಬಯೋಕೆಮಿಸ್ಟ್ರಿ ವಿಭಾಗದಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ಬಾಲ್ಯದಿಂದಲೇ ಗುರುಭಕ್ತಿಯ ಭದ್ರ ಬುನಾದಿ ದೊರಕಿದೆ.
ಕೊಲ್ಲಂಪಾರೆ ಮನೆತನವು ಅನಾದಿಕಾಲದಿಂದಲೂ ಶ್ರೀರಾಮಚಂದ್ರಾಪುರ ಮಠದ ಪರಮ ಭಕ್ತ ಮನೆತನಗಳಲ್ಲಿ ಒಂದಾಗಿರುವ ಕಾರಣ ಸೌಂದರ್ಯ ಅವರಿಗೆ ಶ್ರೀಮಠದ ನಂಟು ಸಹಜವಾಗಿ ಒದಗಿಬಂತು.
ತಮ್ಮ ಬಾಲ್ಯದ ದಿನಗಳಲ್ಲಿ ಶ್ರೀಗುರುಗಳು ಮನೆಗೆ ಆಗಮಿಸಿದ ಪವಿತ್ರ ಕ್ಷಣಗಳನ್ನು ಇಂದಿಗೂ ಅವರು ಅತ್ಯಂತ ಭಕ್ತಿಯಿಂದ ನೆನಪಿಸಿಕೊಳ್ಳುತ್ತಾರೆ. ಅಪ್ಪನ ಜೊತೆಗೆ ಸೇರಿ ಶ್ರೀಮಠದ ವಿವಿಧ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯನ್ನು ಹಂಚಲು ಮನೆಮನೆಗೆ ಹೋಗುತ್ತಿದ್ದ ಆ ದಿನಗಳೇ ಇವರಲ್ಲಿ ಗುರುಸೇವೆಯ ಮಹತ್ವದ ಅರಿವು ಮೂಡಿಸಿದ್ದವು.
” ಬೇರ್ಕಡವು ಈಶ್ವರಿ ಅಕ್ಕ, ಗೀತಕ್ಕ ಮುಳ್ಳೇರಿಯ, ಕುಸುಮಕ್ಕ ಪೆರ್ಮುಖ ಇವರ ಮಾರ್ಗದರ್ಶನದಂತೆ ‘ಮಾತೃತ್ವಮ್’ ಯೋಜನೆಯ ಮೂಲಕ ಮಾಸದ ಮಾತೆಯಾಗಿ ಗೋಮಾತೆಯ ಸೇವೆಯಲ್ಲಿ ತೊಡಗಿಸಿಕೊಂಡೆ ” ಎನ್ನುತ್ತಾರೆ ಸೌಂದರ್ಯ.
ಈ ಹಿಂದೆ ಮುಳ್ಳೇರಿಯ ಮಂಡಲದ ಯುವತಿ ಪ್ರಧಾನೆಯಾಗಿ ಸೇವೆ ಸಲ್ಲಿಸಿದ ಇವರು, ಪ್ರಸ್ತುತ ಶಾಸನ ತಂತ್ರದ ಸಂಶೋಧನಾ ಖಂಡದಲ್ಲಿ ಅನುಸಂಯೋಜಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ತಮ್ಮ ವೃತ್ತಿಯ ಒತ್ತಡಗಳ ನಡುವೆಯೂ ಗೋಸೇವೆಯನ್ನು ಮುಂದುವರಿಸುತ್ತಿರುವ ಇವರು, ತಾವು ಈ ಯೋಜನೆಗೆ ಸೇರಿದ ದಿನದ ಅನುಭವವನ್ನು ಅತ್ಯಂತ ಭಾವಪೂರ್ಣವಾಗಿ ನೆನಪಿಸಿಕೊಳ್ಳುತ್ತಾರೆ.
ಅದು ೨೦೨೧ರಲ್ಲಿ ಪೆರಾಜೆಯ ಮಾಣಿ ಮಠದಲ್ಲಿ ‘ಮಾತೃತ್ವಮ್’ ಯೋಜನೆಗೆ ಸೇರಬೇಕೆಂಬ ಸಂಕಲ್ಪದೊಂದಿಗೆ ಅಲ್ಲಿಗೆ ತೆರಳಿದ ಸೌ೦ದರ್ಯ, ಶ್ರೀಗುರುಗಳಿಂದ ಮಂತ್ರಾಕ್ಷತೆ ಪಡೆಯುವ ಮುನ್ನ, ಗೋಸೇವೆಯ ಕರಪತ್ರ ಮತ್ತು ಕೈಚೀಲಳನ್ನು ಹಿಡಿದು ರಾಮದೇವರ ಸನ್ನಿಧಿಯಲ್ಲಿ ಕುಳಿತಿರುವಾಗ ಅನಿರೀಕ್ಷಿತ ಪವಾಡವೊಂದು ನಡೆಯಿತು.
ಪಕ್ಕದಲ್ಲೇ ಕುಳಿತಿದ್ದ ಪರಿಚಿತ ಮಾತೆಯೊಬ್ಬರು, ಸೌಂದರ್ಯ ಅವರ ಕೈಯಲ್ಲಿದ್ದ ಚೀಲವನ್ನು ನೋಡಿ,
“ನೀನು ಮಾತೃತ್ವಮ್ ಯೋಜನೆಗೆ ಸೇರಿದೆಯಾ? ಹಾಗಿದ್ದರೆ ನಿನ್ನ ಈ ಗೋಸೇವೆಗೆ ನನ್ನದೂ ಒಂದು ಅಳಿಲು ಸೇವೆ ಇರಲಿ” ಎನ್ನುತ್ತಾ ಒಂದು ಮೊತ್ತದ ಕಾಣಿಕೆಯನ್ನು ನೀಡಿದರು.
ಶ್ರೀಕರಾರ್ಚಿತ ರಾಮದೇವರ ಮುಂದೆ, ಗುರುಗಳ ಸನ್ನಿಧಿಯಲ್ಲಿ ಗೋಸೇವೆಗಾಗಿ ದೊರೆತ ಆ ಮೊದಲ ಕಾಣಿಕೆಯನ್ನು ಪಡೆದುಕೊಂಡ ಆ ಕ್ಷಣದ ನೆನಪು ಇಂದಿಗೂ ಸೌಂದರ್ಯ ಅವರ ಕಣ್ಣಾಲಿಗಳನ್ನು ತೇವಗೊಳಿಸುತ್ತದೆ.
ಅಂದು ಆರಂಭವಾದ ಗೋಮಾತೆಯ ಸೇವೆಯ ಭಕ್ತಿಪಥದಲ್ಲಿ ಅವರು ಈಗಲೂ ಮುಂದುವರಿಯುತ್ತಿದ್ದಾರೆ. ಈಗಾಗಲೇ ಎರಡು ಗೋವುಗಳ ನಿರ್ವಹಣಾ ವೆಚ್ಚವನ್ನು ಸಂಗ್ರಹಿಸಿ ಶ್ರೀಗುರುಗಳಿಂದ ಬಾಗಿನವನ್ನು ಸ್ವೀಕರಿಸಿರುವ ಸೌಂದರ್ಯ ಅವರ ಈ ಸಾಧನೆಯ ಹಿಂದೆ ಅವರ ಕುಟುಂಬದ ಸಹಕಾರವಿದೆ.
‘ ತವರು ಮನೆಯ ಗುರು ಶ್ರದ್ಧೆ ಮದುವೆಯ ನಂತರ ಪತಿಯ ಮನೆಯಲ್ಲೂ ಮುಂದುವರಿದಿರುವುದು ತಮ್ಮ ಸೌಭಾಗ್ಯ’ ಎನ್ನುವ ಇವರಿಗೆ ತಮ್ಮ ಪತಿ ಡಾ. ಗೌತಮ್ ಅವರು ಬದಿಯಡ್ಕದ ಶ್ರೀಭಾರತೀ ವಿದ್ಯಾಪೀಠದ ಹಳೆ ವಿದ್ಯಾರ್ಥಿ ಎಂಬುದು ಹೆಮ್ಮೆಯ ವಿಚಾರ.
‘ ಮದುವೆಗೆ ಮುನ್ನವೇ ಆರಂಭಿಸಿದ್ದ ಗೋಸೇವೆ, ಶ್ರೀಮಠದ ಸೇವೆಯನ್ನು, ಮದುವೆಯ ನಂತರವೂ ಅಷ್ಟೇ ನಿಷ್ಠೆಯಿಂದ ಮುಂದುವರಿಸಲು ಪತಿಯ ಮನೆಯವರ ಪ್ರೋತ್ಸಾಹವೇ ಕಾರಣ ‘ ಎಂದು ಅವರು ಭಾವಪೂರ್ಣವಾಗಿ ಹೇಳುತ್ತಾರೆ.
“ಒಂದು ಕಾಲದಲ್ಲಿ ಅಡುಗೆ ಮನೆಗೆ ಮಾತ್ರ ಸೀಮಿತವಾಗಿದ್ದ ಹೆಣ್ಣುಮಕ್ಕಳು ಇಂದು ಶ್ರೀಮಠದ ಸೇವೆ ಮತ್ತು ಮಾತೃತ್ವಮ್‌ನಂತಹ ಯೋಜನೆಗಳ ಮೂಲಕ ಸಮಾಜದಲ್ಲಿ ಸಕ್ರಿಯರಾಗಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದರೆ ಅದು ಶ್ರೀಗುರುಗಳ ಕೃಪೆಯ ಸಂಕೇತ” ಎನ್ನುತ್ತಾರೆ ಸೌಂದರ್ಯ. ಈ ದೈವಿಕ ಶಕ್ತಿಯ ಮಾರ್ಗದರ್ಶನದಲ್ಲಿ ಬದುಕುವುದೇ ದೊಡ್ಡ ಪುಣ್ಯ ಎಂಬುದು ಅವರ ನಂಬಿಕೆ.
ಪ್ರತಿದಿನವೂ ಗುರುಗಳು ಅನುಗ್ರಹಿಸಿದ ಸ್ತೋತ್ರಗಳ ಪಾರಾಯಣ, ಕುಂಕುಮಾರ್ಚನೆಯಂತಹ ಧಾರ್ಮಿಕ ಆಚರಣೆಗಳನ್ನು ಶ್ರದ್ಧೆಯಿಂದ ಪರಿಪಾಲಿಸುವ ಸೌಂದರ್ಯ ಅವರು ವಿಜ್ಞಾನ ಮತ್ತು ಆಧ್ಯಾತ್ಮದ ನಡುವೆ ಒಂದು ಸುಂದರ ಸೇತುವೆಯನ್ನು ನಿರ್ಮಿಸಿದ್ದಾರೆ.
ವೃತ್ತಿಯಿಂದ ಉಪನ್ಯಾಸಕಿಯಾಗಿದ್ದರೂ, ಪ್ರವೃತ್ತಿಯಿಂದ ಒಬ್ಬ ನಿಷ್ಠಾವಂತ ಶ್ರೀಮಠದ ಶಿಷ್ಯೆಯಾಗಿ, ಗೋಸೇವಕಿಯಾಗಿ ಅವರು ಸಾಗುತ್ತಿರುವ ಹಾದಿ ಎಲ್ಲರಿಗೂ ಸ್ಫೂರ್ತಿದಾಯಕ. ಸೌಂದರ್ಯ ಅವರ ಈ ಗೋಸೇವೆ ಮತ್ತು ಗುರುಭಕ್ತಿ ನಿರಂತರವಾಗಿರಲಿ, ಅವರ ಮೂಲಕ ಶ್ರೀಮಠದ ಉದ್ದೇಶಗಳು ಸಮಾಜದ ಇನ್ನೂ ಹೆಚ್ಚಿನ ಜನರನ್ನು ತಲುಪಲಿ.
ಪ್ರಸನ್ನಾ ವಿ. ಚೆಕ್ಕೆಮನೆ