ಗುರುಭಕ್ತಿ ಮತ್ತು ಗೋಸೇವೆಯ ಸಮನ್ವಯ – ವಿಜಯಲಕ್ಷ್ಮಿ ಸೊಂದಿ

ಮಾತೃತ್ವಮ್

ಶ್ರೀರಾಮಚಂದ್ರಾಪುರ ಮಠದ ಸಕ್ರಿಯ ಕಾರ್ಯಕರ್ತೆಯಾಗಿ, ಗೋಮಾತೆಯ ಸೇವೆ ಮಾಡುತ್ತಾ ಬದುಕನ್ನು ಸಾರ್ಥಕಪಡಿಸಿಕೊಳ್ಳುತ್ತಿರುವವರು ಮಂಗಳೂರು ಮಂಡಲ, ಬಾಯಾರು ವಲಯದ ಶಿವ ಶರ್ಮ ಸೊಂದಿ ಇವರ ಪತ್ನಿ ವಿಜಯಲಕ್ಷ್ಮಿ ಸೊಂದಿ.
ಹಿಳ್ಳೆಮನೆ ಎಚ್.ಎಸ್. ಮಹಾಲಿಂಗ ಭಟ್ ಮತ್ತು ಗಂಗಮ್ಮ ದಂಪತಿಗಳ ಪುತ್ರಿಯಾಗಿ ಸಂಸ್ಕಾರಯುತ ವಾತಾವರಣದಲ್ಲಿ ಜನಿಸಿದ ಇವರು, ಬಾಲ್ಯದಿಂದಲೇ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡವರು.

​ವಿಜಯಲಕ್ಷ್ಮಿ ಅವರಿಗೆ ಗೋವುಗಳೆಂದರೆ ತುಂಬಾ ಪ್ರೀತಿ. ಅವು ದೈವಸ್ವರೂಪಿಗಳು ಎಂದು ಅವರ ನಂಬಿಕೆ. ಚಿಕ್ಕಂದಿನಿಂದಲೇ ಹಸುಗಳೊಂದಿಗೆ ಬೆಳೆದ ಇವರು, ತಮ್ಮ ಬಾಲ್ಯದ ದಿನಗಳಲ್ಲಿ ಗೋವುಗಳ ಆರೈಕೆ, ಹಾಲು ಕರೆಯುವ ಕೆಲಸಗಳನ್ನು ಶ್ರದ್ಧೆಯಿಂದ ಮಾಡುತ್ತಿದ್ದವರು. ಮದುವೆಯ ನಂತರ ಗೃಹಿಣಿಯಾಗಿ ಸಂಸಾರದ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದರೂ, ಗೋವುಗಳ ಮೇಲಿನ ಅವರ ಪ್ರೀತಿ ಕಡಿಮೆಯಾಗಲಿಲ್ಲ.

ಇಂದಿಗೂ ಅವರ ಮನೆಯಲ್ಲಿ ಹತ್ತಾರು ಹಸುಗಳನ್ನು ಅತ್ಯಂತ ವಾತ್ಸಲ್ಯದಿಂದ ಸಾಕುತ್ತಿದ್ದಾರೆ. ಅದರ ಜೊತೆಗೆ ಶ್ರೀರಾಮಚಂದ್ರಾಪುರ ಮಠದ ‘ಮಾತೃತ್ವಮ್’ ಯೋಜನೆಯ ಮೂಲಕವೂ ಅವರು ಗೋಸೇವೆಗೆ ಕೈಜೋಡಿಸಿದವರು. ಸ್ವಯಂಪ್ರೇರಣೆಯಿಂದ ಈ ಯೋಜನೆಯಲ್ಲಿ ಸಕ್ರಿಯರಾದ ಇವರು, ಒಂದು ಹಸುವಿನ ಸಂಪೂರ್ಣ ಪೋಷಣೆಯ ವೆಚ್ಚವನ್ನು ಹೊತ್ತು ‘ಲಕ್ಷ ಬಾಗಿನಿ’ಯಾಗಿದ್ದಾರೆ.
ಸಿದ್ದಾಪುರದ ಗೋಸ್ವರ್ಗದಲ್ಲಿ ನಡೆದ ಸಮಾರಂಭದಲ್ಲಿ ಶ್ರೀಗುರುಗಳ ಕರಕಮಲಗಳಿಂದ ಬಾಗಿನವನ್ನು ಸ್ವೀಕರಿಸಿದ ಆ ಕ್ಷಣವು ತಮ್ಮ ಜೀವನದ ಅತ್ಯಂತ ಧನ್ಯತೆಯ ಕ್ಷಣವೆಂದು ಅವರು ನೆನಪಿಸಿಕೊಳ್ಳುತ್ತಾರೆ.
​ ಶ್ರೀರಾಮಚಂದ್ರಾಪುರ ಮಠ ಹೊಸನಗರದಲ್ಲಿ ನಡೆದ ಶ್ರೀರಾಮಾಯಣ ಮಹಾಸತ್ರ ಮತ್ತು ವಿಶ್ವ ಗೋ ಸಮ್ಮೇಳನಗಳಂತಹ ಕಾರ್ಯಕ್ರಮಗಳಲ್ಲಿ ಕಾರ್ಯಕರ್ತೆಯಾಗಿ ಇವರು ಸೇವೆ ಸಲ್ಲಿಸಿದ್ದಾರೆ. ‘ಮಂಗಲ ಗೋಯಾತ್ರೆ’ಯ ಸಂದರ್ಭದಲ್ಲಿ ಸೊರಬದಿಂದ ಬಳ್ಳಾರಿಯವರೆಗೆ, ಇವರು ಸತತ ಒಂದು ವಾರಗಳ ಕಾಲ ಯಾತ್ರೆಯ ಜೊತೆಗಿದ್ದು, ಗೋಮಾತೆಯ ಮಹತ್ವವನ್ನು ಸಾರುವ ಈ ಯಾತ್ರೆಯಲ್ಲಿ ಪಾಲ್ಗೊಂಡವರು.

​ ಮಾತೃತ್ವಮ್ ಯೋಜನೆಯ ಬಗ್ಗೆ ಮನೆಮನೆಗೆ ತೆರಳಿ ದೇಶೀಯ ಹಸುಗಳ ಮಹತ್ವವನ್ನು ವಿವರಿಸಿದಾಗ ಜನರಿಂದ ಉತ್ತಮ ಸ್ಪಂದನೆ ದೊರಕಿರುವುದು ಗುರುಕೃಪೆಯಿಂದ ಎಂದು ವಿಜಯಲಕ್ಷ್ಮಿಯವರ ನಂಬಿಕೆ.
“ನಮ್ಮಿಂದ ಹಸು ಸಾಕಲು ಸಾಧ್ಯವಿಲ್ಲ, ಆದರೆ ನೀವು ಮಾಡುತ್ತಿರುವ ಈ ಕೆಲಸ ನಿಜಕ್ಕೂ ಶ್ಲಾಘನೀಯ” ಎನ್ನುತ್ತಾ, ಮಾತೃತ್ವಮ್ ಯೋಜನೆಯ ಗುರಿ ತಲುಪಲು ಅನೇಕ ಮಂದಿ ಕೈಜೋಡಿಸಿದ್ದಾರೆ ಎಂಬುದನ್ನು ಅವರು ಸ್ಮರಿಸಿಕೊಳ್ಳುತ್ತಾರೆ. ಇವರ ಪ್ರತಿಯೊಂದು ಸೇವಾಕಾರ್ಯದ ಹಿಂದೆಯೂ ಇವರ ಕುಟುಂಬದ ಅಚಲ ಬೆಂಬಲವಿದೆ.ಮಗ, ಸೊಸೆ ಮತ್ತು ಮೊಮ್ಮಕ್ಕಳು ಇವರ ಶ್ರೀಮಠದ ಸೇವೆ, ಗೋಮಾತೆಯ ಸೇವೆಗಳಿಗೆ ಸದಾ ಬೆನ್ನೆಲುಬಾಗಿ ನಿಂತಿದ್ದಾರೆ.
ಕುಟುಂಬದ ಈ ಸಹಕಾರದಿಂದಲೇ ಇಂದಿಗೂ ಇವರು ನಿರಂತರವಾಗಿ ಶ್ರೀಮಠದ ಸೇವೆಯನ್ನು ಮುಂದುವರಿಸಲು ಸಾಧ್ಯವಾಗಿದೆ.
​”ಶ್ರೀಮಠದ ಸೇವೆಯೆಂಬುದು ಬಾಳಿನ ಸೌಭಾಗ್ಯ. ಗುರುಸೇವೆಯಲ್ಲಿ ಮತ್ತು ಗೋವಿನ ಸೇವೆಯಲ್ಲಿ ತೊಡಗಿಸಿಕೊಂಡಾಗ ದೊರಕುವ ಮಾನಸಿಕ ಶಾಂತಿ ಮತ್ತು ನೆಮ್ಮದಿ ಅಪಾರ” ಎಂದು ನಂಬಿರುವ ವಿಜಯಲಕ್ಷ್ಮಿ ಅವರು, ಅವಕಾಶ ಸಿಕ್ಕಾಗಲೆಲ್ಲಾ ಶ್ರೀಮಠಕ್ಕೆ ಹೋಗಿ ಕಾರ್ಯಕರ್ತೆಯಾಗಿ ಸೇವೆಮಾಡುತ್ತಾರೆ.
ಬದುಕಿನ ಏಳುಬೀಳುಗಳ ನಡುವೆ ಗುರುಸ್ಮರಣೆಯೇ ತಮಗೆ ಆಸರೆಯಾಗಿದೆ ಎಂದು ಹೇಳುವ ಅವರು ಗುರುಸೇವೆಯೇ ಜೀವನದ ಪರಮ ಧರ್ಮ ಎಂದು ನಂಬಿದವರು. ನಿರಂತರ ಶ್ರೀಮಠದ ಸೇವೆ, ಅಚಲ ಗುರುಭಕ್ತಿ ಮತ್ತು ಗೋಮಾತೆಯ ಮೇಲಿನ ಪವಿತ್ರ ಪ್ರೀತಿಯೇ ವಿಜಯಲಕ್ಷ್ಮಿ ಸೊಂದಿ ಅವರ ಬದುಕಿನ ಶಕ್ತಿ.

ಪ್ರಸನ್ನಾ ವಿ. ಚೆಕ್ಕೆಮನೆ

Leave a Reply

Your email address will not be published. Required fields are marked *