‘ಬದುಕಿನಹಾದಿಗೆ ಸದಾ ಬೆಳಕು ನೀಡುವುದು ಶ್ರೀಗುರುಗಳ ಅನುಗ್ರಹ ‘ – ವಿಜಯಲಕ್ಷ್ಮಿ ಮುಂಡೋಳುಮೂಲೆ 

ಮಾತೃತ್ವಮ್

 

‘ ​ಬದುಕಿನ ಪ್ರತಿ ಹೆಜ್ಜೆಯಲ್ಲೂ ಗುರುಗಳ ಅನುಗ್ರಹ ಮತ್ತು ಗೋಮಾತೆಯ ಆಶೀರ್ವಾದವಿದ್ದರೆ ಯಾವುದೇ ಕೊರತೆಯಿಲ್ಲದೆ ಜೀವನ ಸಾರ್ಥಕತೆಯತ್ತ ಸಾಗುತ್ತದೆ. ಇದು ನನ್ನ ಜೀವನದ ಅನುಭವ ‘ ಎಂದು ಭಾವಪೂರ್ಣವಾಗಿ ನುಡಿದವರು ಮುಳ್ಳೇರಿಯ ಮಂಡಲ, ಚಂದ್ರಗಿರಿ ವಲಯದ, ಮುಂಡೋಳುಮೂಲೆಯ ವೆಂಕಟೇಶ್ವರ ಭಟ್ ಅವರ ಪತ್ನಿ ವಿಜಯಲಕ್ಷ್ಮಿ. ಇವರು ಮೂಲತಃ ಪಾದೆಕಲ್ಲಿನ ಅರಸಳಿಕೆ ನಾರಾಯಣ ಭಟ್ ಮತ್ತು ಶಾರದಾ ದಂಪತಿಗಳ ಪುತ್ರಿ.

ಸುಸಂಸ್ಕೃತ ಪಾದೆಕಲ್ಲು ಮನೆತನದಲ್ಲಿ ಜನಿಸಿದ ಇವರು ಬಾಲ್ಯದಿಂದಲೇ ಉತ್ತಮ ಸಂಸ್ಕಾರವನ್ನು ರೂಢಿಸಿಕೊಂಡವರು. ಗೋಮಾತೆಯ ಒಡನಾಟದಲ್ಲಿ ಬೆಳೆದ ಅವರಿಗೆ ಹಸುಗಳ ಮೇಲೆ ತುಂಬಾ ಮಮತೆ.

ಅನೇಕ ವರ್ಷಗಳಿಂದ ಶ್ರೀಮಠದ ಸಂಪರ್ಕದಲ್ಲಿದ್ದ ಅವರು ಕುಸುಮಾ ಪೆರ್ಮುಖ ಅವರ ಪ್ರೇರಣೆಯಿಂದ ‘ಮಾಸದ ಮಾತೆ’ಯಾದರು. ಗೋಮಾತೆಯ ಸೇವೆಯಲ್ಲಿ ತೊಡಗಿಸಿಕೊಂಡ ಮೇಲೆ ಸಮಾಜದಲ್ಲಿ ಗೋವಿನ ಮಹತ್ವ ಮತ್ತು ಗೋಮಾತೆಯ ಸೇವೆಯ ಅವಕಾಶದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದರು. ಇದರಿಂದ ಪ್ರಭಾವಿತರಾದ ಆತ್ಮೀಯರು, ಮಿತ್ರರು ಹಾಗೂ ಬಂಧುಗಳು ಇವರ ಗೋಸೇವೆಯ ಪವಿತ್ರ ಕಾರ್ಯಕ್ಕೆ ಕೈಜೋಡಿಸಿದರು.

ಇಷ್ಟು ಮಾತ್ರವಲ್ಲದೆ ವಿಜಯಲಕ್ಷ್ಮಿಯವರು ಪ್ರತಿದಿನವೂ ಗೋಮಾತೆಯ ಸೇವೆಗಾಗಿ ತಮ್ಮ ಮನೆಯಲ್ಲಿ ಒಂದು ಪುಟ್ಟ ಕಾಣಿಕೆಯನ್ನು ಪ್ರತ್ಯೇಕವಾಗಿ ಎತ್ತಿಡುವ ಅಭ್ಯಾಸವನ್ನು ಇರಿಸಿಕೊಂಡಿದ್ದಾರೆ. ದಿನನಿತ್ಯದ ಈ ಸಮರ್ಪಣಾ ಭಾವವೇ ಇವರ ಗೋಭಕ್ತಿಯ ಸಂಕೇತವಾಗಿದೆ.

​”ಶ್ರೀಮಠದ ಮತ್ತು ಶ್ರೀಗುರುಗಳ ಸೇವೆ ಮಾಡುವ ಸಾತ್ವಿಕ ಮನಸ್ಸು ನಮ್ಮಲ್ಲಿದ್ದರೆ, ಆ ಸೇವೆಗೆ ಬೇಕಾದ ಶಕ್ತಿಯನ್ನು ಶ್ರೀಗುರುಗಳೇ ಒದಗಿಸಿಕೊಡುತ್ತಾರೆ” ಎನ್ನುವುದು ವಿಜಯಲಕ್ಷ್ಮಿಯವರ ಅನುಭವದ ನುಡಿ.

ತಮ್ಮ ಬದುಕಿನಲ್ಲಿ ‘ಮಾತೃತ್ವಮ್’ ಯೋಜನೆಯ ಗುರಿಯನ್ನು ತಲುಪಿ, ಲಕ್ಷಬಾಗಿನ ಸ್ವೀಕರಿಸಿದ್ದು ಅವರಿಗೆ ಒಂದು ಪವಾಡದಂತೆ ಅನಿಸಿದೆ. ಗುರುಗಳ ಅನುಗ್ರಹವಿಲ್ಲದೆ ಯಾವುದೇ ಪುಣ್ಯಕಾರ್ಯಗಳು ಸಾಧ್ಯವಿಲ್ಲ ಎಂದು ನಂಬುವ ಇವರಿಗೆ, ಜೀವನದಲ್ಲಿ ಲಭಿಸಿದ ಎಲ್ಲ ಒಳಿತುಗಳಿಗೂ ಶ್ರೀಗುರುಗಳ ದಿವ್ಯ ಆಶೀರ್ವಾದವೇ ಕಾರಣ ಎಂಬ ದೃಢ ವಿಶ್ವಾಸವಿದೆ. ಗುರುಕೃಪೆಯಿಂದಾಗಿ ಬದುಕಿನಲ್ಲಿ ಇದುವರೆಗೆ ಯಾವುದೇ ಕೊರತೆ ಎದುರಾಗಿಲ್ಲ ಮತ್ತು ಮುಂದೆಯೂ ಗುರುಗಳು ತಮ್ಮನ್ನು ರಕ್ಷಿಸುತ್ತಾರೆ ಎಂಬ ನಿರಾಳತೆ ಇವರದ್ದು.

 

​ವಿಜಯಲಕ್ಷ್ಮಿ ಅವರ ಪತಿ ವೆಂಕಟೇಶ್ವರ ಭಟ್ ಅವರು ಘಟಕವೊಂದರ ಗುರಿಕಾರರಾಗಿ ಶ್ರೀಮಠದ ಸೇವೆಯಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಂಡಿದ್ದಾರೆ.

ವಿಜಯಲಕ್ಷ್ಮಿ ಮುಂಡೋಳುಮೂಲೆಯವರು ಈ ಹಿಂದೆ ಚಂದ್ರಗಿರಿ ವಲಯದ ‘ಮಾತೃ ಪ್ರಧಾನೆ’ಯಾಗಿ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದಾರೆ. ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿಯಿರುವ ಇವರು ‘ಶ್ರೀಮಾತಾ ಹವ್ಯಕ ಭಜನಾ ತಂಡ’ದ ಸಕ್ರಿಯ ಸದಸ್ಯರಾಗಿದ್ದಾರೆ.

ಶ್ರೀಮಠದ ಪ್ರತಿಯೊಂದು ಸಮಾಜಮುಖಿ ಯೋಜನೆಗಳಿಗೂ ಸದಾ ಸಹಕಾರ ನೀಡುತ್ತಾ ಬದುಕನ್ನು ಧನ್ಯಗೊಳಿಸಿಕೊಳ್ಳುತ್ತಿರುವ ಇವರಿಗೆ, ತಮ್ಮ ಮೂವರು ಹೆಣ್ಣು ಮಕ್ಕಳಿಗೂ ಅತ್ಯಂತ ಯೋಗ್ಯ ಹಾಗೂ ಸುಸಂಸ್ಕೃತ ಮನೆತನದ ಬಾಂಧವ್ಯ ಒದಗಿಬಂದಿರುವುದು ಶ್ರೀಗುರುಗಳ ಅನುಗ್ರಹದಿಂದ ಎಂಬ ನಂಬಿಕೆಯಿದೆ. ಇನ್ನು ಮುಂದೆಯೂ ಸಾಧ್ಯವಾದಷ್ಟು ಕಾಲ ಶ್ರೀಮಠದ ಸೇವೆಯಲ್ಲಿ ಮತ್ತು ಗೋಸೇವೆಯಲ್ಲಿ ನಿರಂತರವಾಗಿ ಮುಂದುವರಿಯಬೇಕು ಎಂಬ ಹಂಬಲ ಇವರದ್ದು.

 

 

ಪ್ರಸನ್ನಾ ವಿ. ಚೆಕ್ಕೆಮನೆ

Leave a Reply

Your email address will not be published. Required fields are marked *