|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

‘ ಅಂತರಂಗದ ನೆಮ್ಮದಿಗೆ ಆಸರೆ ಶ್ರೀಮಠದ ಸೇವೆ ‘ ಹೇಮಲತಾ ಹರ್ಷ ಗುಂಜಗೋಡು

​” ಶ್ರೀಮಠದ ಸಂಪರ್ಕ ಮತ್ತು ನಿರಂತರ ಸೇವೆಯಿಂದ ಅಂತರಂಗದಲ್ಲಿ ನೆಮ್ಮದಿ ಮೂಡುತ್ತದೆ. ಶ್ರೀಗುರುಸೇವೆಯ ಫಲದಿಂದ ನಮ್ಮ ಸಮಾಜ ಒಂದಾಗಿ ಒಳಿತಿನೆಡೆಗೆ ಮುನ್ನಡೆಯುವ ಸದ್ಗುಣವನ್ನು ರೂಢಿಸಿಕೊಳ್ಳುತ್ತಿದೆ ” ಎಂದು ಭಾವಪೂರ್ಣವಾಗಿ ನುಡಿಯುವವರು ಹೇಮಲತಾ ಹರ್ಷ ಗುಂಜಗೋಡು.
ಸಿದ್ದಾಪುರ ಮಂಡಲ, ಬಾನ್ಕುಳಿ ವಲಯದ ​ಗುಂಜಗೋಡು ಇಗ್ಗು ಭಟ್ರ ಮನೆಯ ಹರ್ಷ ಭಟ್ ಅವರ ಪತ್ನಿಯಾದ ಇವರು ಶ್ರೀರಾಮಚಂದ್ರಾಪುರ ಮಠದ ಶ್ರದ್ಧಾವಂತ ಸೇವಕಿಯಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಮುರುಡೇಶ್ವರದ ರಾಮಚಂದ್ರ ಅಡಿಗಳ್ ಮತ್ತು ಸುಮಂಗಲಾ ದಂಪತಿಗಳ ಪುತ್ರಿಯಾದ ಇವರಿಗೆ ಬಾಲ್ಯದಿಂದಲೇ ಶ್ರೀಮಠದ ಸಂಪರ್ಕ ದೊರಕಿತ್ತು. ಇವರ ತವರು ಮನೆಯು ಹಿರಿಯರ ಕಾಲದಿಂದಲೂ ಶ್ರೀಮಠದ ನಿಷ್ಠಾವಂತ ಭಕ್ತಕುಟುಂಬ. ಆ ಗುರುಭಕ್ತಿಯ ಸಂಕೇತವೋ ಎಂಬಂತೆ, ಇವರ ತವರು ಮನೆಯಲ್ಲಿ ಹುಟ್ಟುವ ಗಂಡು ಮಗುವಿನ ಹೆಸರಿನ ಆರಂಭದಲ್ಲಿ ‘ರಾಮ’ ಎಂದೇ ಹೆಸರನ್ನಿಡುವುದು ಇಂದಿಗೂ ನಡೆದುಬಂದ ಪವಿತ್ರ ಪರಂಪರೆಯಾಗಿದೆ.

ಹರ್ಷ ಭಟ್ ಅವರೊಂದಿಗೆ ವಿವಾಹವಾದ ನಂತರ ಶ್ರೀಮಠದ ಸೇವೆಗೆ ಮತ್ತಷ್ಟು ತೊಡಗಿಸಿಕೊಳ್ಳಲು ಅವರಿಗೆ ಅವಕಾಶ ದೊರಕಿತ್ತು. ಪ್ರಸ್ತುತ ಬಾನ್ಕುಳಿ ಮಠದ ಸನಿಹದಲ್ಲೇ ಇರುವ ಇವರ ಮನೆಗೆ ಶ್ರೀಮಠದ ಶ್ರದ್ಧಾವಂತ ಭಕ್ತರು, ಗುರುಬಂಧುಗಳು ಆಗಮಿಸಿದಾಗ ಅವರಿಗೆ ಆತಿಥ್ಯ ಒದಗಿಸುವ ಅವಕಾಶ ದೊರಕಿದೆ.

” ಮಠಕ್ಕೆ ಬರುವ ಗುರುಭಕ್ತರ ಉಪಚಾರ ಮಾಡುವುದೇ ನಮಗೆ ಲಭಿಸಿದ ಪರಮ ಸೌಭಾಗ್ಯ” ಎಂದು ಇವರು ಭಕ್ತಿಯಿಂದ ಸ್ಮರಿಸುತ್ತಾರೆ. ಇವರ ಪತಿ ಹರ್ಷ ಭಟ್ ಅವರೂ ಶ್ರೀಮಠದ ಸೇವಾ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿದ್ದು, ‘ಶಂಕರ ಪಂಚಮಿ’ಯ
ಸಂದರ್ಭದಲ್ಲಿ ಬಾನ್ಕುಳಿ ಮಠದಲ್ಲಿ ಸೇವೆ ಸಲ್ಲಿಸುವ ಭಾಗ್ಯವನ್ನು ಪಡೆದುಕೊಂಡಿದ್ದಾರೆ.

​ಶ್ರೀಮಠದ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಹೇಮಲತಾ ಅವರು ಸಿದ್ದಾಪುರದ ವೀಣಕ್ಕ ಅವರ ಮಾರ್ಗದರ್ಶನದಂತೆ ಶ್ರೀಮಠದ ‘ಮಾತೃತ್ವಮ್’ ಯೋಜನೆಯ ಮೂಲಕ ಮಾಸದ ಮಾತೆಯಾದರು. ಹಲವು ಗುರುಬಂಧುಗಳ ಸಹಕಾರ ಹಾಗೂ ಶ್ರೀಗುರುಗಳ ಆಶೀರ್ವಾದದ ಬಲದಿಂದ ಗುರಿಯನ್ನು ತಲುಪಿದ ಇವರಿಗೆ ಶ್ರೀಗುರುಗಳಿಂದ ‘ಲಕ್ಷ ಬಾಗಿನ’ವನ್ನು ಸ್ವೀಕರಿಸುವ ಮಂಗಲ ಸೌಭಾಗ್ಯ ಲಭಿಸಿತು.
‘ ಶ್ರೀಮಠದ ಸಂಪರ್ಕದಿಂದಾಗಿ ಕೇವಲ ಆತ್ಮೀಯರ ಸಂಖ್ಯೆ ಹೆಚ್ಚಾಗಿದ್ದಷ್ಟೇ ಅಲ್ಲ, ಮನಸ್ಸಿನ ಪರಿಧಿ ವಿಸ್ತಾರಗೊಂಡು ವಿಶಾಲ ಬಾಂಧವ್ಯ ಬೆಳೆದಿದೆ ‘ ಎನ್ನುವುದು ಇವರ ಅನುಭವದ ಮಾತು.
​ಇಂದಿನ ತಲೆಮಾರಿಗೆ ಸನಾತನ ಧರ್ಮದ ಹಾಗೂ ಭಾರತೀಯ ಪರಂಪರೆಯ ಅರಿವು ಮೂಡಿಸುವ ಬಗ್ಗೆ ಹೇಮಲತಾ ಅವರಿಗೆ ವಿಶೇಷ ಕಾಳಜಿ ಇದೆ. ಇವರ ಹಿರಿಯ ಮಗ ಪ್ರಸ್ತುತ ಶ್ರೀಗುರುಗಳ ಮಹತ್ವಪೂರ್ಣ ಯೋಜನೆಯಾದ ‘ವಿಷ್ಣುಗುಪ್ತ ವಿಶ್ವವಿದ್ಯಾಪೀಠ’ದ ಶಿವ ಗುರುಕುಲದ ವಿದ್ಯಾರ್ಥಿಯಾಗಿದ್ದಾನೆ.

” ನಮ್ಮ ಪವಿತ್ರ ಸಂಸ್ಕೃತಿ ಮತ್ತು ವೇದಜ್ಞಾನವನ್ನು ಗುರುಕುಲಗಳ ಮೂಲಕ ಕಲಿತರೆ ಮಾತ್ರ ನಮ್ಮ ಮಕ್ಕಳಲ್ಲಿ ಭಾರತೀಯ ಪರಂಪರೆಯನ್ನು, ಸನಾತನ ಮೌಲ್ಯಗಳನ್ನು ಜೀವಂತವಾಗಿ ಮುನ್ನಡೆಸಿಕೊಂಡು ಹೋಗಲು ಸಾಧ್ಯ” ಎಂಬುದು
ಅಧ್ಯಾಪಿಕೆಯಾಗಿರುವ ಅವರ ಅಂತರಾಳದಿಂದ ನುಡಿ.

​” ಶ್ರೀಗುರುಗಳ ದಿವ್ಯ ಅನುಗ್ರಹವು ಸದಾ ನಮ್ಮ ಕುಟುಂಬದ ಮೇಲಿರಲಿ, ಶ್ರೀಮಠದ ಪ್ರತಿಯೊಬ್ಬ ಗುರುಬಂಧುಗಳೂ ನಮ್ಮ ಸ್ವಂತ ಬಂಧುಗಳೇ ಆಗಿದ್ದು, ಅವರ ಒಡನಾಟ ನಮಗೆ ಸದಾ ಸಿಗುವಂತಾಗಲಿ” ಎಂದು ಬಯಸುವ ಹೇಮಲತಾ ಹರ್ಷ ಅವರಿಗೆ ಬದುಕಿನ ಕೊನೆಯವರೆಗೂ ಶ್ರೀಗುರುಸೇವೆ ಹಾಗೂ ಗೋಸೇವೆಯಲ್ಲಿಯೇ ನೆಮ್ಮದಿ ಕಂಡುಕೊಳ್ಳುವ ಅಚಲ ಅಭಿಲಾಷೆಯಿದೆ.

ಪ್ರಸನ್ನಾ ವಿ. ಚೆಕ್ಕೆಮನೆ