|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಶ್ರೀಗುರು ಸೇವೆಯಲ್ಲಿ ಶ್ರದ್ಧೆ – ನಂಬಿಕೆಗಳೇ ಮುಖ್ಯ ‘ ಕಲಾವತಿ ಕೃಷ್ಣ ಭಟ್ ಹೊನ್ನಾವರ

​” ಗುರುಭಕ್ತಿ ಎನ್ನುವುದು ನಮ್ಮ ಅಚಲ ನಂಬಿಕೆಯ ಮೇಲೆ ನಿಂತಿದೆ. ಶ್ರೀಮಠದ ಸೇವೆಯನ್ನು ಶ್ರದ್ಧೆ, ಭಕ್ತಿ ಮತ್ತು ನಂಬಿಕೆಯಿಂದ ಮಾಡಿದರೆ ನಮ್ಮ ಬದುಕಿನಲ್ಲಿ ಹಂಬಲಿಸಿದ ಪ್ರತಿಯೊಂದು ಕಾರ್ಯಗಳೂ ಸಿದ್ಧಿಸುತ್ತವೆ ಎಂಬುದು ನಮ್ಮ ಬದುಕಿನ ಅನುಭವ ” ಎಂದು ಭಾವಪೂರ್ಣವಾಗಿ ನುಡಿಯುವವರು ಕಲಾವತಿ ಕೃಷ್ಣ ಭಟ್. ಹೊನ್ನಾವರ ಮಂಡಲದ ಕಡ್ಲೆ ವಲಯ ನಿವಾಸಿಯಾಗಿರುವ ಕೃಷ್ಣ ಭಟ್ ಅವರ ಪತ್ನಿಯಾದ ಇವರು, ತಮ್ಮ ಪ್ರತಿಯೊಂದು ಕಾರ್ಯಗಳಲ್ಲೂ ಪತಿಯ ಪೂರ್ಣ ಸಹಕಾರ ಹಾಗೂ ಪ್ರೋತ್ಸಾಹವನ್ನು ಪಡೆದುಕೊಂಡು ಶ್ರೀರಾಮಚಂದ್ರಾಪುರ ಮಠದ ಸೇವೆಯಲ್ಲಿ ನಿರತರಾಗಿದ್ದಾರೆ.

ಹೊನ್ನಾವರ ಸಮೀಪದ ​ಗೇರುಸೊಪ್ಪೆಯ ಶಂಭು ಹೆಗಡೆ ಮತ್ತು ಗಣಪಿ ದಂಪತಿಗಳ ಪುತ್ರಿಯಾಗಿರುವ ಕಲಾವತಿ ಅವರು ಅನೇಕ ವರ್ಷಗಳಿಂದ ಶ್ರೀಮಠದ ನಿಷ್ಠಾವಂತ ಸೇವಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಕಡ್ಲೆ ವಲಯದ ಮಾತೃ ಪ್ರಧಾನೆಯಾಗಿಯೂ ಜವಾಬ್ದಾರಿಯುತ ಸೇವೆ ಸಲ್ಲಿಸಿದ್ದಾರೆ. ಕಡ್ಲೆ ವಲಯದ ಮಾತೆಯರನ್ನು ಒಗ್ಗೂಡಿಸಿ ಸಂಘಟನೆಯನ್ನು ಬಲಪಡಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಇಂದಿಗೂ ಅನೇಕ ಯುವ ಕಾರ್ಯಕರ್ತರಿಗೆ ಹಾಗೂ ಮಾತೆಯರಿಗೆ ಶ್ರೀಮಠದ ಸೇವಾ ಕಾರ್ಯಗಳಲ್ಲಿ ಸೂಕ್ತ ಮಾರ್ಗದರ್ಶನ ನೀಡುತ್ತಾ ಸಂಘಟನೆಯ ಮುಂಚೂಣಿಯಲ್ಲಿದ್ದಾರೆ.

​ಆರಂಭದಲ್ಲಿ ಶ್ರೀಮಠದ ‘ಸಾವಿರದ ಸುರಭಿ’ ಯೋಜನೆಯ ಮೂಲಕ ಗೋಸೇವಾ ಕೈಂಕರ್ಯ ಸ್ವೀಕರಿಸಿದ ಕಲಾವತಿ ಅವರು, ಮುಂದೆ ‘ಮಾತೃತ್ವಮ್’ ಯೋಜನೆಯ ಮೂಲಕವೂ ಅದನ್ನು ನಿರಂತರವಾಗಿ ಮುಂದುವರಿಸಿದರು. ತಮ್ಮ ಶ್ರದ್ಧೆ ಹಾಗೂ ಶ್ರಮದ ಫಲವಾಗಿ, ಕೇವಲ ಒಂದೇ ತಿಂಗಳ ಅವಧಿಯಲ್ಲಿ ಲಕ್ಷ ಗುರಿಯನ್ನು ತಲುಪಿದರು! ಗೋಸೇವೆಗಾಗಿ ಶ್ರೀಗುರುಗಳಿಂದ ‘ ಬಾಗಿನ’ವನ್ನು ಸ್ವೀಕರಿಸುವ ಸೌಭಾಗ್ಯ ಇವರಿಗೆ ದೊರಕಿದೆ.

“ನಮ್ಮ ವಲಯದಲ್ಲಿ ಸಾಕಷ್ಟು ಸೇವೆಗಳನ್ನು ಸಲ್ಲಿಸಲು ಗುರುಗಳ ಅನುಗ್ರಹದಿಂದ ಸಾಧ್ಯವಾಯಿತು. ಇದಕ್ಕಾಗಿ ಶ್ರೀಗುರುಗಳಿಂದ ಪುರಸ್ಕಾರ ಪಡೆದ ಆ ಕ್ಷಣ ನನ್ನ ಬದುಕಿನ ಪರಮ ಸೌಭಾಗ್ಯದ ಕ್ಷಣ” ಎಂದು ಅವರು ಸ್ಮರಿಸಿ ಕೊಳ್ಳುತ್ತಾರೆ.

​ಹಲವು ವರ್ಷಗಳಿಂದ ಭಜನಾ ತಂಡಗಳಲ್ಲಿ ಸಕ್ರಿಯರಾಗಿ ಸಾಂಸ್ಕೃತಿಕ ಸೇವೆಯಲ್ಲೂ ತೊಡಗಿಸಿಕೊಂಡಿರುವ ಕಲಾವತಿ ಅವರ ಮನೆಯಲ್ಲಿ ಇಂದಿಗೂ ಹಸುಗಳನ್ನು ಪ್ರೀತಿಯಿಂದ ಸಾಕಲಾಗುತ್ತಿದೆ.
” ಗೋಸೇವೆ ಎನ್ನುವುದು ನಮ್ಮ ದೈನಂದಿನ ಜೀವನದ ಒಂದು ಅವಿಭಾಜ್ಯ ಅಂಗ; ಗೋವುಗಳಿಲ್ಲದೆ ನಮ್ಮ ಜೀವನವೇ ಇಲ್ಲ ” ಎಂದು ಹೇಳುವ ಇವರು, ಮುಂದಿನ ತಲೆಮಾರಿನ ಮಕ್ಕಳಿಗೂ ಶ್ರೀಮಠದ ಮತ್ತು ಗೋಸೇವೆಯ ಮಾರ್ಗದರ್ಶನ ನೀಡಬೇಕು ಎನ್ನುತ್ತಾರೆ.

​” ಶ್ರೀಗುರುಗಳನ್ನು ನಂಬಿದವರು ಬದುಕಿನಲ್ಲಿ ಎಂದೂ ಸೋಲುವುದಿಲ್ಲ. ಆದರೆ ಆ ನಂಬಿಕೆ ಅಂತರಂಗದ ಶ್ರದ್ಧೆಯಿಂದ ಮೂಡಬೇಕು. ಕೇವಲ ಮನಸ್ಸಿನಲ್ಲಿ ಪ್ರಾರ್ಥಿಸಿದ ಮಾತ್ರಕ್ಕೇ ನಮ್ಮ ಬದುಕಿನ ಕಷ್ಟಗಳು ದೂರವಾಗಿ, ಕಠಿಣ ಸಮಸ್ಯೆಗಳು ಪರಿಹಾರವಾಗಿವೆ. ಇಂದು ನಾವು ಆರೋಗ್ಯವಾಗಿ, ಕ್ಷೇಮವಾಗಿ ಇರುವುದಕ್ಕೆ ಶ್ರೀಗುರುಗಳ ಅನುಗ್ರಹವೇ ಕಾರಣ ” ಎನ್ನುವ ಕಲಾವತಿ ಕೃಷ್ಣ ಭಟ್ ಅವರಿಗೆ, ಇನ್ನು ಮುಂದೆಯೂ ಶ್ರೀಮಠದ ಹಾಗೂ ಗೋಮಾತೆಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂಬ ಅಭಿಲಾಷೆ ಇದೆ.

ಪ್ರಸನ್ನಾ ವಿ. ಚೆಕ್ಕೆಮನೆ