|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಘೃತ ಹೃದಯಕ್ಕೆ ಹಿತ, ಅಮೃತ| ‘ಅನ್ನಂ ಬ್ರಹ್ಮ’ ಪ್ರವಚನ – 54

ಅಶೋಕೆ: ತುಪ್ಪ ಹೃದಯಕ್ಕೆ ಹಿತ ಎಂಬುದು ಪ್ರಾಚೀನ ಭಾರತದ ಅಭಿಮತವಾದರೆ, ತುಪ್ಪದಿಂದ ಕೊಬ್ಬು ಹೆಚ್ಚಾಗಿ ಹೃದಯಕ್ಕೆ ತೊಂದರೆಯಾಗಬಹುದು ಎಂಬುದು ಆಧುನಿಕರ ವಾದವಾಗಿದೆ. ಜರ್ಸಿ ದನದ ತುಪ್ಪ, ವನಸ್ಪತಿ, ಕಲಬೆರೆಕೆ ತುಪ್ಪವನ್ನು ಸೇವಿಸಿ, ದೇಶಿ ಗೋವಿನ ತುಪ್ಪವನ್ನೂ ಸೇರಿಸಿಕೊಂಡು ತುಪ್ಪ ಆರೋಗ್ಯಕ್ಕೆ ಹಾನಿಕರ ಎಂದು ಹೇಳುವುದು ತಪ್ಪು ಎಂದು ಶ್ರೀಸಂಸ್ಥಾನದವರು ತಿಳಿಸಿದರು.

‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಭಾದ್ರಪದ ಶುಕ್ಲ ನವಮಿಯಂದು (20.09.2026) ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಸಂಸ್ಥಾನದವರು, ತುಪ್ಪದ ಬಗ್ಗೆ ಅಪಪ್ರಚಾರ ಹೆಚ್ಚಾಗಿದ್ದು, ತುಪ್ಪದಿಂದ ಕೊಬ್ಬು ಹೆಚ್ಚಾಗುತ್ತದೆ ಎಂಬ ತಪ್ಪು ಕಲ್ಪನೆ ಹಬ್ಬಿದೆ. ಇದರಿಂದಾಗಿ ಕೋಟ್ಯಂತರ ಜನರು ತುಪ್ಪವನ್ನು ದೂರವಿಟ್ಟಿದ್ದಾರೆ. ತುಪ್ಪದ ಕಲಬೆರೆಕೆ, ತುಪ್ಪದ ಮೂಲವಾದ ಗೋವಿನ ವರ್ಣಸಂಕರಗಳು ಬಹುದೊಡ್ಡ ಅಪಚಾರವಾಗಿದ್ದು, ಸಮಾಜ ಎಚ್ಚೆತ್ತು ಕೊಳ್ಳಬೇಕು. ಪ್ರಕೃತಿ ನಮಗೆ ಕೊಟ್ಟಿರುವಂತದ್ದನ್ನು ನಾವು ಬಳಸದೇ ಇದ್ದರೆ ಆ ವಸ್ತುಗಳು ನಮ್ಮಿಂದ ದೂರವಾಗುತ್ತಾ ಸಾಗುತ್ತದೆ. ಬಳಸುವ ಜನರು ಇದ್ದಾಗ ಮಾತ್ರ ಪ್ರಕೃತಿಯು ಸುವಸ್ತುಗಳನ್ನು ಒದಗಿಸಿಕೊಡುತ್ತದೆ ಎಂದು ಅಭಿಪ್ರಾಯಪಟ್ಟರು.

ಭಾಗವತದಲ್ಲಿ ಶ್ರೀಕೃಷ್ಣನ ದಿನಚರಿಯ ಉಲ್ಲೇಖವಿದ್ದು, ಪ್ರಾತಃಕಾಲದಲ್ಲಿ ಶೌಚಾದಿಗಳ ನಂತರ ತುಪ್ಪದಲ್ಲಿ ಮುಖವನ್ನು ನೋಡಿಕೊಂಡ ಎಂಬ ವಿವರ ಇದೆ. ಭಾರತೀಯವಾದ ಹಲವಾರು ಪ್ರಾಚೀನ ಗ್ರಂಥಗಳಲ್ಲಿಯೂ ಪ್ರಾತಃ ಕಾಲ ತುಪ್ಪದಲ್ಲಿ ಮುಖವನ್ನು ನೋಡಿ ಕೊಳ್ಳುವುದು ಪರಮ ಶುಭ ಎಂದು ಹೇಳಲಾಗಿದ್ದು, ಮಂಗಲ ದ್ರವ್ಯದ ದರ್ಶನದಿಂದ ಜೀವನವು ಮಂಗಲಮಯವಾಗುತ್ತದೆ. ಸುಗಂಧ ಮನಸ್ಸನ್ನು ಸಂತುಷ್ಟಗೊಳಿಸುವ ಜೊತೆಗೆ ಸತ್ವಗುಣವನ್ನೂ ಜಾಗೃತಗೊಳಿಸುತ್ತದೆ ಎಂದರು.

ಹಾಲಿನಿಂದ ಮೊಸರು, ಮೊಸರಿನಿಂದ ಬೆಣ್ಣೆ, ಬೆಣ್ಣೆಯಿಂದ ತುಪ್ಪ ಎಂಬಂತೆ ಅನೇಕ ಸಂಸ್ಕಾರದಿಂದ ಪಾರಂಪರಿಕವಾಗಿ ತುಪ್ಪ ಬರುತ್ತದೆ. ಆದರೆ ಇಂದು ಹಾಲಿನ ಕೆನೆಯನ್ನು ದಿನಗಳ ಕಾಲ ತಂಪು ಬೆಟ್ಟಿಗೆಯಲ್ಲಿ ಸಂಗ್ರಹಿಸುತ್ತಾ ಹೋಗಿ, ಕೆನೆಯಿಂದ ನೇರವಾಗಿ ತುಪ್ಪವನ್ನು ಮಾಡುವ ಕ್ರಮ ಜನಪ್ರಿಯವಾಗಿದೆ. ಇದು ಸರಿಯಲ್ಲ ಹಾಗೂ ಅದು ನಿಜವಾದ ತುಪ್ಪವೂ ಅಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವೇದವಾಙ್ಮಯದಲ್ಲಿ ಅತೀ ಹೆಚ್ಚು ಉಲ್ಲೇಖಿತವಾಗಿರುವ ವಸ್ತು ತುಪ್ಪ. ಇದು ತುಪ್ಪದ ಮಹತ್ವವನ್ನು ತಿಳಿಸುತ್ತದೆ. ಗೃಹಸ್ಥನಾದವನು ತುಪ್ಪವಿಲ್ಲದ ಊಟವನ್ನು ಸ್ವೀಕರಿಸಬಾರದು ಎಂಬ ನಿಯಮವಿದ್ದು, ತುಪ್ಪದ ಬಳಕೆಯಿಂದ ಜಠರಾಗ್ನಿಯೂ ವೃದ್ಧಿಯಾಗುತ್ತದೆ ಹಾಗೂ ಬುದ್ಧಿಯೂ ವೃದ್ಧಿಯಾಗುತ್ತದೆ. ಆಯಸ್ಸಿಗೂ ತುಪ್ಪಕ್ಕೂ ವಿಶೇಷವಾದ ಸಂಬಂಧವಿದ್ದು, ಶಂಕರಾಚಾರ್ಯರು ತಮ್ಮ ಕೃತಿಯಲ್ಲಿ ತುಪ್ಪವನ್ನೇ ಆಯಸ್ಸು ಎಂಬುದಾಗಿ ಉಲ್ಲೇಖಿಸಿದ್ದಾರೆ ಎಂದರು.

**

ಪ್ರವಚನ ಬಿಂದುಗಳು:

*ನಮಗೆ ಆಶೀರ್ವಾದ ಮಾಡಿ ಭಗವಂತ ಕೊಟ್ಟಿರುವುದೇ ‘ಘೃತ’.

*ಗಂಗೆ ಮತ್ತು ಗೋವು ಎರಡೂ ಮನುಷ್ಯರ ಉದ್ಧಾರಕ್ಕಾಗಿ ಇರುವುದು

*ಸಾತ್ತ್ವಿಕ ವಸ್ತುಗಳನ್ನು ಉಪಯೋಗ ಮಾಡದೇ ಇದ್ದಾಗ ಪ್ರಕೃತಿ ಅದನ್ನು ಹಿಂದೆ ತೆಗೆದುಕೊಳ್ಳುತ್ತದೆ

*ಗೃಹಸ್ಥನಾದವನು ‘ತುಪ್ಪ’ ಇಲ್ಲದ ಊಟವನ್ನು ಸ್ವೀಕಾರ ಮಾಡಬಾರದು.

*’ತುಪ್ಪ’ ಪಾಪ ಪರಿಹಾರ ಮಾಡುತ್ತದೆ ಹಾಗೂ ಅಗ್ನಿ, ಬುದ್ಧಿ ಎರಡನ್ನೂ ವೃದ್ಧಿ ಮಾಡುತ್ತದೆ .

*’ಘೃತ’ ಅಮೃತಕ್ಕೆ ಸಮಾನ.

*ಮಜ್ಜಿಗೆ ಅನೇಕ ರೋಗಗಳಿಗೆ ಔಷಧ.

*ತಂಪುಪೆಟ್ಟಿಗೆಯಲ್ಲಿ ಇಟ್ಟು ಸಂಸ್ಕಾರ ಮಾಡಿದ ತುಪ್ಪವನ್ನು ಸ್ವೀಕಾರ ಮಾಡಿದರೆ ನಾನಾ ರೋಗಗಳಿಗೆ ಕಾರಣವಾಗುತ್ತದೆ.

*ತುಪ್ಪದ ಸುಗಂಧವು ಸತ್ತ್ವಗುಣವನ್ನು ಜಾಗೃತಗೊಳಿಸಿ ಮನಸ್ಸಿಗೆ ಆಹ್ಲಾದ ಉಂಟುಮಾಡುತ್ತದೆ.

*ತುಪ್ಪದಿಂದ ಓಜಸ್ಸು, ಆಯುಸ್ಸು, ತೇಜಸ್ಸು, ವಯಸ್ಸು, ತಪಸ್ಸು ಎಲ್ಲವನ್ನೂ ಪಡೆಯಬಹುದು

**

ಮೈಸೂರು, ದಾವಣಗೆರೆ, ಹರಿಹರ ಹವ್ಯಕ ವಲಯಗಳ ಪರವಾಗಿ ಶಂಕರನಾರಾಯಣ ಶಾಸ್ತ್ರಿ ಗುರುಭಿಕ್ಷಾ ಸೇವೆ ಸಮರ್ಪಿಸಿದರು. ರಾಧೇಶ್ಯಾಮ್ ಅಗರ್ವಾಲ್, ಮುಂಟು ಅಗರ್ವಾಲ್, ಅರುಣ್ ಹೆಗಡೆ ದಾವಣಗೆರೆ, ಡಾ. ಎಸ್. ಆರ್. ಹೆಗಡೆ ದಾವಣಗೆರೆ, ಗೋಕರ್ಣದ ಪೋಲಿಸ್ ಅಧಿಕಾರಿ ಅನಿಲ್ ಕುಮಾರ್, ನಾಗರಾಜ ಪೆದಮಲೆ ದಂಪತಿಗಳು ದಿನಪ್ರಧಾನರಾಗಿ ಉಪಸ್ಥಿತರಿದ್ದರು.

ದೇಶಭಂಡಾರಿ ಸಮಾಜದಿಂದ ಸ್ವರ್ಣಪಾದುಕಾ ಪೂಜೆ: ಶ್ರೀಮಠಕ್ಕೆ ಪಾರಂಪರಿಕವಾಗಿ ನಡೆದುಕೊಳ್ಳುತ್ತಿರುವ ದೇಶಭಂಡಾರಿ ಸಮಾಜದಿಂದ ಗುರುಪರಂಪರೆಗೆ ಸ್ವರ್ಣಪಾದುಕಾ ಪೂಜೆ ಸಮರ್ಪಿತವಾಯಿತು. ಪಾದುಕಾ ಪೂಜೆ ಸ್ವೀಕರಿಸಿದ ಶ್ರೀಸಂಸ್ಥಾನದವರು, ಸಮಾಜವನ್ನು ಆಶೀರ್ವದಿಸಿದರು. ಬಾಬು ಭಂಡಾರಿ ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.