ಭಟ್ಕಳ: ಪರಮಪೂಜ್ಯ ಶ್ರೀಸಂಸ್ಥಾನದವರ ದಿವ್ಯಾಶಿರ್ವಾದ ಮತ್ತು ಸಪರಿವಾರ ದುರ್ಗಾ ಪರಮೇಶ್ವರಿಯ ಅನುಗ್ರಹದಿಂದ ಶ್ರೀರಾಮಚಂದ್ರಾಪುರ ಮಠದ ಸನ್ನಿಧಿ ಸಂಸ್ಥೆಯಾದ ದೇವಿಮನೆ ಶ್ರೀಸಶಿವಶಾಂತಿಕಾ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ, ದೇವಿಮನೆ ಆಡಳಿತ ಮಂಡಳಿ ಮತ್ತು ಸಶಿವಶಾಂತಿಕಾ ಧಾರ್ಮಿಕ ಮಂಡಳಿಯ ಸಹಯೋಗದಲ್ಲಿ ವಿವಿಧ ಅನುಷ್ಠಾನಗಳು ನಡೆದವು.

ಹಲವಾರು ವರ್ಷಗಳಿಂದ ಶ್ರೀಕ್ಷೇತ್ರದಲ್ಲಿ ಹಲವು ಅನುಷ್ಠಾನಗಳು ನಡೆಸುತ್ತಾ ಬಂದಿದ್ದು ಈ ಬಾರಿ ಆಷಾಢ ಶುಕ್ಲ ಪಂಚಮಿಯಿಂದ ದಶಮಿಯವರೆಗೆ (19-7-2026 ರಿಂದ 24-7-2026) ಕೃಷ್ಣಯಜುರ್ವೇದ ಸ್ವಾಹಾಕಾರ ನಡೆಯಿತು. ಸ್ವರ್ಣಪಾದುಕಾಭಿಕ್ಷೆ – ಧನ್ವಂತರೀಹವನ – ಶುಕ್ಲ ಯಜುರ್ವೇದ ಪಾರಾಯಣ – ಗಣಪತಿ ಆಥರ್ವಶೀರ್ಷ ಹವನ ಅನುಷ್ಠಾನಗಳು ಕೂಡ ನಡೆದವು.
ಈ ಕಾರ್ಯಕ್ರಮದ ನೇತೃತ್ವವನ್ನು ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಶಿವಗುರುಕುಲದ ಪ್ರಧಾನ ಪ್ರಾಚಾರ್ಯರಾದ, ಶ್ರೀ ಅಗ್ನಿಹೋತ್ರಿ ಮಂಜುನಾಥ ಭಟ್ಟರು ಮತ್ತು ವರದಳ್ಳಿಯ ಪಾಠಶಾಲೆಯ ಶ್ರೀ ವೇದಮೂರ್ತಿ ಲಕ್ಷ್ಮೀನಾರಾಯಣ ಭಟ್ಟರು, ಅಂತೆಯೇ ಧಾರ್ಮಿಕ ಮಂಡಳಿಯ ಎಲ್ಲಾ ವೈದಿಕರು ಸ್ವೀಕರಿಸಿ ಚೊಕ್ಕವಾಗಿ ನಡೆಸಿ ಕೊಟ್ಟರು.
ವಿಶೇಷವೆಂದರೆ ಈ ಕಾರ್ಯಕ್ರಮದಲ್ಲಿ ಶಿವಗುರುಕುಲದ 54ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡರು.

