|| ಶ್ರೀರಾಮಚಂದ್ರಾಪುರ ಮಠದ ಯೋಚನೆ-ಯೋಜನೆ-ಕಾರ್ಯ-ಕಾರ್ಯಕ್ರಮಗಳ ಸಮಗ್ರ ದರ್ಶನ ||
Menu

ಅನ್ನಬ್ರಹ್ಮ ಚಾತುರ್ಮಾಸ್ಯದ ಶುಭಾರಂಭ

ಗೋಕರ್ಣ: ‘ಸರಿಯನ್ನು ಬಲ್ಲವನು ಕೇವಲ ಜ್ಞಾನಿ. ಸರಿಯನ್ನು ಬಲ್ಲವನು ಹಾಗೂ ಸರಿಯಾದ ದಾರಿಯನ್ನು ಇತರರಿಗೆ ತೋರುವವನು ಗುರು. ಸಮಾಜಕ್ಕೆ ಸರಿಯಾದ ದಾರಿಯನ್ನು ತೋರಬೇಕಾದ ಕಾರ್ಯ ಗುರುವಿನದ್ದು’ ಎಂದು ಪರಮಪೂಜ್ಯ ಶ್ರೀಸಂಸ್ಥಾನದವರು ನುಡಿದರು. ಈ ಮೂಲಕ ಪರಮಪೂಜ್ಯರು ಅನ್ನಬ್ರಹ್ಮ ಚಾತುರ್ಮಾಸ್ಯದ ವಿಶೇಷತೆಯಾದ ‘ಅನ್ನಂ ಬ್ರಹ್ಮ’ ಪ್ರವಚನ ಸರಣಿಯನ್ನು ಆರಂಭಿಸಿದರು.

 

ಅಶೋಕೆಯ ಪರಿಸರದಲ್ಲಿ ಆಷಾಢ ಹುಣ್ಣಿಮೆಯಂದು (29-07-2026) ರಂದು ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಆಶೀರ್ವಚನ ಅನುಗ್ರಹಿಸಿದ ಶ್ರೀಸಂಸ್ಥಾನದವರು ‘ಶಂಕರಾಚಾರ್ಯರು ಸೈನ್ಯ ಹಾಗೂ ಸಂಪತ್ತು ಯಾವುದೂ ಇಲ್ಲದೇ ದೇಶದಲ್ಲಿ ಧರ್ಮಸಂರಕ್ಷಣೆಯ ಕಾರ್ಯವನ್ನು ಮಾಡಿದರು. ದೇಶಾದ್ಯಂತ ಸಂಚರಿಸಿದ ಶಂಕರರು ಜನರಿಗೆ ಸರಿಯಾದ ದಾರಿಯನ್ನು ತೋರಿದರು ಹಾಗೂ ನಿತ್ಯನಿರಂತರವಾಗಿ ಆ ಕಾರ್ಯ ನಡೆಯುವಂತೆ ಮಾಡಲು ದೇಶಾದ್ಯಂತ ಮಠಗಳನ್ನು ಸ್ಥಾಪಿಸಿದರು. ಹಾಗಾಗಿ ಶಂಕರಾಚಾರ್ಯರ ಉದ್ದೇಶವೇ ಮಠದ ಉದ್ದೇಶವಾಗಿರಬೇಕು. ಶಂಕರರು ತೋರಿದ ದಾರಿಯಲ್ಲಿ ಧರ್ಮ ಪ್ರಸಾರವನ್ನು ಮಾಡುತ್ತಾ, ಸಮಾಜಕ್ಕೆ ಸರಿ – ತಪ್ಪುಗಳನ್ನು ಮಾರ್ಗದರ್ಶನ ಮಾಡುವುದು ಮಠದ ಕಾರ್ಯವಾಗಬೇಕು. ನಮ್ಮ ಮಠದ ಉದ್ದೇಶ ಹಾಗೂ ಈ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಉದ್ದೇಶವೂ ಇದೇ ಆಗಿದೆ. ಜೀವನಕ್ಕೆ ಸರಿಯಾದ ದಾರಿಯನ್ನು ತೋರುವುದು ಹಾಗೂ ಸಮಾಜದಲ್ಲಿನ ತಪ್ಪುಗಳನ್ನು ತಿದ್ದುವುದು ಮಠದ ಕಾರ್ಯ’ ಎಂದು ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಉದ್ದೇಶವನ್ನು ತಿಳಿಸಿದರು.

‘ಸಮಾಜಕ್ಕೆ ಸರಿಯಾದ ವಿಚಾರ ತಿಳಿಸುವವರಿಗೆ ಶತ್ರುಗಳು ಹುಟ್ಟಿಕೊಳ್ಳುವುದು ಪ್ರಕೃತಿ ಸಹಜ. ಸರಿದಾರಿಯಲ್ಲಿ ನಡೆಯುವವರು ಅವುಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ರಾಮ – ಕೃಷ್ಣರಿಂದ ಆರಂಭಿಸಿ, ಎಲ್ಲಾ ಮಹಾತ್ಮರ ಜೀವನದಲ್ಲೂ ಕಾಣಬಹುದು. ಕಳೆದ ವರ್ಷ ಮಾತು ಅಥವಾ ಭಾಷೆಗೆ ಸಂಬಂಧಿಸಿದ ‘ಸ್ವಭಾಷಾ ಚಾತುರ್ಮಾಸ್ಯ’ ಮಾಡಲಾಗಿತ್ತು ಹಾಗೂ ಈ ವರ್ಷ ತಿನ್ನುವ ಆಹಾರಕ್ಕೆ ಸಂಬಂಧಿಸಿದ ‘ಅನ್ನಬ್ರಹ್ಮ ಚಾತುರ್ಮಾಸ್ಯ’ ಆಚರಿಸಲಾಗುತ್ತಿದೆ. ಹೀಗೆ ಈ ವರ್ಷ ಹಾಗೂ ಕಳೆದ ವರ್ಷದ ಚಾತುರ್ಮಾಸ್ಯಗಳೆರಡೂ ನಾಲಿಗೆಗೆ ಸಂಬಂಧಿಸಿದ್ದಾಗಿದೆ. ನಾಲಿಗೆಗೆ ಸಂಬಂಧಿಸಿದ ತಪ್ಪುಗಳನ್ನು ತಿದ್ದುವ ಕಾರ್ಯ ಇದಾಗಿದೆ’ ಎಂದರು.

‘ಇಂದು ಗೌಣವಾದ ವಿಚಾರಗಳು ಮುಖ್ಯವಾಗುತ್ತಿದೆ. ಮುಖ್ಯ ವಿಚಾರಗಳು ಗೌಣವಾಗುತ್ತಿದೆ. ಇದು ಈ ಕಾಲದ ದುರಂತ’ ಎಂದ ಶ್ರೀಸಂಸ್ಥಾನದವರು ‘ಇಂದು ನಾವು ಏನನ್ನು ತಿನ್ನುತ್ತಿದ್ದೇವೆ? ಹೇಗೆ ತಿನ್ನುತ್ತಿದ್ದೇವೆ? ಆಹಾರವನ್ನು ಹೇಗೆ ತಯಾರಿಸಲಾಗಿದೆ? ಎಂಬ ಕುರಿತು ಆಲೋಚಿಸದೇ ಕೇವಲ ತುತ್ತಿನ ಚೀಲವನ್ನು ತುಂಬಿಸುವ ಕಾರ್ಯ ಮಾಡುತ್ತಿದ್ದೇವೆ. ಇಂದು ಆಹಾರದ ಕುರಿತಾಗಿ ಸಮರ್ಪಕವಾದ ಮಾಹಿತಿಯನ್ನು ಶಾಲೆಯಲ್ಲಗಲಿ, ವಿಶ್ವವಿದ್ಯಾಲಯಗಳಾಗಲ್ಲಿ ತಿಳಿಸಿಕೊಡುತ್ತಿಲ್ಲ. ನಾವು ಏನನ್ನು ತಿನ್ನುತ್ತೇವೋ ಅದೇ ನಾವಾಗುತ್ತೇವೆ. ಹಾಗಾಗಿ ನಾವೇ ಆಹಾರದ ಕುರಿತಾದ ಸರಿ ತಪ್ಪುಗಳನ್ನು ಸಮಾಜಕ್ಕೆ ತಿಳಿಸಲು ಮುಂದಾಗಿದ್ದೇವೆ’ ಎಂದರು.

ವ್ಯಾಸಪೂಜೆ:

ಇದಕ್ಕೂ ಮೊದಲು ಬೆಳಗ್ಗೆ, ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು, ತಮ್ಮ ೩೩ನೇ ಚಾತುರ್ಮಾಸ್ಯವ್ರತವನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ವ್ಯಾಸಪೂಜೆಯನ್ನು ಕೈಗೊಳ್ಳುವಮೂಲಕ ವಿಧ್ಯುಕ್ತವಾಗಿ ಆರಂಭಿಸಿದರು. ಶ್ರೀಕರಾರ್ಚಿತ ಪೂಜೆಯ ಅನಂತರ, ನಿಂಬೆಹಣ್ಣಿನಲ್ಲಿ ಕೃಷ್ಣಾದಿ ದೇವತೆಗಳು ಹಾಗೂ ವ್ಯಾಸಾದಿ ಪಂಚಕಗಳನ್ನು ಆವಾಹನೆಮಾಡಿ, ಮಠೀಯ ಪದ್ಧತಿಯಂತೆ ಪೂಜಿಸುವುದರ ಮೂಲಕ ವ್ಯಾಸಪೂಜೆ ಸಂಪನ್ನವಾಯಿತು.

ವ್ಯಾಸಪೂಜೆಯ ಅನಂತರ, ಮಠೀಯ ಪದ್ಧತಿಯಂತೆ ಪರಮಪೂಜ್ಯ ಶ್ರೀಸಂಸ್ಥಾನದವರು ‘ಗರುಡಾಸನ’ದಲ್ಲಿ ಆಸೀನರಾಗಿ ‘ವರ್ಷಾಕಾಲದ ನಾಲ್ಕು ಪಕ್ಷಗಳ ಕಾಲದ ಚಾತುರ್ಮಾಸ್ಯವ್ರತವನ್ನು ಕೈಗೊಳ್ಳುತ್ತಿದ್ದು, ಸಕಲ ಜೀವಿಗಳಿಗೂ ಯಾವುದೇ ತೊಂದರೆ ಇಲ್ಲದಿದ್ದರೆ, ನಾವು ಇಲ್ಲಿಯೇ ವ್ರತದೀಕ್ಷೆಯನ್ನು ಕೈಗೊಳ್ಳುತ್ತೇವೆ’ ಎಂದು ನುಡಿದರು. ಇದಕ್ಕೆ ಪ್ರತಿಸ್ಪಂದನೆಯಾಗಿ ‘ಸಮಸ್ತ ಶಿಷ್ಯಸ್ತೋಮದ ಒಳಿತನ್ನು ಬಯಸಿ, ಪೂಜ್ಯ ಶ್ರೀಸಂಸ್ಥಾನದವರು ಚಾತುರ್ಮಾಸ್ಯವ್ರತವನ್ನು ಕೈಗೊಳ್ಳುತ್ತಿರುವುದು ನಮ್ಮೆಲ್ಲರ ಸೌಭಾಗ್ಯವೇ ಆಗಿದೆ. ನಿತ್ಯಾನುಷ್ಠಾನಗಳಿಗೆ ಯಥಾವಿಹಿತವಾದ ಸೌಕರ್ಯವನ್ನು ನಮ್ಮಿಂದ ಪೂಜ್ಯರು ಪಡೆದುಕೊಂಡು, ನಮ್ಮೆಲ್ಲರನ್ನೂ ಹರಸಬೇಕು’ ಎಂದು ಶಿಷ್ಯವೃಂದ ಪರಮಪೂಜ್ಯರಲ್ಲಿ ಭಿನ್ನವಿಸಿಕೊಂಡ ಮನೋಜ್ಞ ಸನ್ನಿವೇಶ ಗುರುಶಿಷ್ಯರ ಅನ್ಯೋನ್ಯ ಸಂಬಂಧದ ದ್ಯೋತಕವಾಯಿತು.

ಮುಗಳಿ ತಿರುಮಲೇಶ್ವರ ಭಟ್ ಅವರು ಸರ್ವಸೇವೆ ಸಮರ್ಪಿಸಿದರೆ, ಮಂಜುನಾಥ ಸುವರ್ಣಗದ್ದೆ ದಂಪತಿಗಳು ಸಭಾಪೂಜೆ ಸಲ್ಲಿಸಿದರು. ಮಾತೃ ವಿಭಾಗದ ದೇವಿಕಾ ಶಾಸ್ತ್ರಿ ಪ್ರಸ್ತಾವನೆ ಮಾಡಿದರೆ, ಜಿ. ಎಸ್. ಹೆಗಡೆ ದಂಪತಿಗಳು ದಿನ ಪ್ರಧಾನರಾಗಿ ಮೇಲುಸ್ತುವಾರಿ ಮಾಡಿದರು.

ಕಾರ್ಯಕ್ರಮದಲ್ಲಿ ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ಶಾಸನತಂತ್ರದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಕಾರ್ಯದರ್ಶಿ ಕೆ.ಪಿ. ಎಡಪ್ಪಾಡಿ, ಹವ್ಯಕ ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪು, ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಚಾತುರ್ಮಾಸ್ಯದ ಪ್ರಧಾನ ಸಂಯೋಜಕ ಚಂದನ್ ಶಾಸ್ತ್ರಿ, ಶಾಸನತಂತ್ರ ಹಾಗೂ ಎಲ್ಲಾ ಮಂಡಲಗಳ ಪದಾಧಿಕಾರಿಗಳು, ಚಾತುರ್ಮಾಸ್ಯದ ನಿರ್ವಾಹಕರು ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳ ವಿವಿಧ ಭಾಗಗಳ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.