“ ಗೋಸೇವೆ ಇಹಕ್ಕೂ ಪರಕ್ಕೂ ಪುಣ್ಯಪ್ರದವಾದ ಸೇವೆ. ಎಲ್ಲಾ ಗೋಪ್ರೇಮಿಗಳಿಗೂ ಹಸುಗಳನ್ನು ಸಾಕಬೇಕು, ಗೋಮಾತೆಯ ಸೇವೆ ಮಾಡಬೇಕು ಎಂಬ ಅಭಿಲಾಷೆ ಇರುತ್ತದೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಹಸುಗಳನ್ನು ಸಾಕಲು ಬೇಕಾದ ವ್ಯವಸ್ಥೆ ಮತ್ತು ಅನುಕೂಲತೆ ಎಲ್ಲರಿಗೂ ಇರುವುದಿಲ್ಲ. ಅಂತಹವರಿಗೆ ಶ್ರೀಗುರುಗಳು ಮಾತೃತ್ವಮ್ ಯೋಜನೆಯ ಮೂಲಕ ಗೋಸೇವೆ ಮಾಡುವ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ. ಈ ಯೋಜನೆಯ ಮೂಲಕ ಗೋಮಾತೆಯ ಸೇವೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರುವುದು ನಮ್ಮ ಭಾಗ್ಯ” ಎಂದು ನುಡಿಯುತ್ತಾರೆ ಗೀತಾ ಮೂಳೂರು.
ಉಪ್ಪಿನಂಗಡಿ ಮಂಡಲ ದರ್ಭೆ ವಲಯದ ಈಶ್ವರ ಭಟ್ ಮೂಳೂರು ಅವರ ಪತ್ನಿಯಾಗಿರುವ ಗೀತಾ ಅವರಿಗೆ ಬಾಲ್ಯದಿಂದಲೇ ಹಸುಗಳೆಂದರೆ ತುಂಬಾ ಪ್ರೀತಿ. ಪುಣಚ ಸುಬ್ರಾಯಶಾಸ್ತ್ರಿ ಮತ್ತು ಜಯಶಾಸ್ತ್ರಿ ದಂಪತಿಗಳ ಪುತ್ರಿಯಾದ ಇವರು, ಚಿಕ್ಕಂದಿನಿಂದಲೇ ಗೋವುಗಳ ಒಡನಾಟದಲ್ಲಿ ಬೆಳೆದವರು.
” ನಾನು ಏಳನೇ ತರಗತಿಯಲ್ಲಿ ಓದುತ್ತಿದ್ದಾಗಲೇ ಹಸುಗಳ ಸೇವೆ ಮಾಡುತ್ತಿದ್ದೆ. ಹಾಲು ಕರೆಯುವುದೂ ನನಗೆ ಚೆನ್ನಾಗಿ ಅಭ್ಯಾಸವಾಗಿತ್ತು. ಹಸುಗಳೊಂದಿಗೆ ಬೆಳೆದ ಆ ದಿನಗಳ ಒಡನಾಟ ಇಂದಿಗೂ ಮನಸ್ಸಿನಲ್ಲಿ ಹಸಿರಾಗಿದೆ. ಮುಂದೆ ಶ್ರೀಮಠದ ಸಂಪರ್ಕಕ್ಕೆ ಬಂದ ಬಳಿಕ ಶ್ರೀಗುರುಗಳ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ವಿವಿಧ ಧಾರ್ಮಿಕ ಮತ್ತು ಸಮಾಜಮುಖಿ ಕಾರ್ಯಗಳ ಬಗ್ಗೆ ಶ್ರದ್ಧೆ ಬೆಳೆಯಿತು. ಮಾತೃತ್ವಮ್ ಯೋಜನೆಯ ಮೂಲಕ ಗೋಸೇವೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ದೊರಕಿದಾಗ ಅದನ್ನು ಸಂತೋಷದಿಂದ ಸ್ವೀಕರಿಸಿದೆ ” ಎನ್ನುತ್ತಾರೆ ಗೀತಾ.
ಗೋವುಗಳ ಸೇವೆಯನ್ನು ನಿರಂತರವಾಗಿ ಮುಂದುವರಿಸಬೇಕೆಂಬ ಉದ್ದೇಶದಿಂದ ಗೀತಾ ಅವರು ಮಾತೃತ್ವಮ್ ಯೋಜನೆಯಡಿ ‘ಮಾಸದ ಮಾತೆ’ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಗಾಗಲೇ ಮೂರು ಹಸುಗಳ ಪೋಷಣೆಯ ಗುರಿ ತಲುಪಿದ ಇವರಿಗೆ, ಈ ಸೇವಾ ಪಯಣದಲ್ಲಿ ಅನೇಕ ಗುರುಬಂಧುಗಳ ಸಹಕಾರ ದೊರೆತಿದೆ. ಶ್ರೀಮಠದ ಸಂಪರ್ಕದಿಂದ ಅನೇಕ ಮಂದಿಯ ಪರಿಚಯವಾಗಿ, ಪರಸ್ಪರ ಆತ್ಮೀಯತೆ ಬೆಳೆದಿದೆ. ಮಠದ ಸೇವಾಕಾರ್ಯಗಳು ಕೇವಲ ಧಾರ್ಮಿಕ ಚಟುವಟಿಕೆಗಳಿಗೆ ಸೀಮಿತವಾಗದೆ, ಪರಸ್ಪರ ಪ್ರೀತಿ ಮತ್ತು ಸಹಕಾರದಿಂದ ಜನರನ್ನು ಬೆಸೆಯುವ ಕಾರ್ಯವನ್ನೂ ಮಾಡುತ್ತಿವೆ ಎಂಬುದು ಅವರ ಅನುಭವದ ನುಡಿ.
ಗೀತಾ ಅವರ ಇಬ್ಬರು ಪುತ್ರಿಯರೂ ಶ್ರೀಮಠ ಮತ್ತು ಶ್ರೀಗುರುಗಳ ಬಗ್ಗೆ ಶ್ರದ್ಧಾಭಕ್ತಿಯನ್ನು ಹೊಂದಿದ್ದಾರೆ. ಬಾಲ್ಯದಿಂದಲೇ ಮಠದ ಸಂಸ್ಕಾರದಲ್ಲಿ ಬೆಳೆದ ಅವರು, ಮಠದ ವಿವಿಧ ಸೇವಾಕಾರ್ಯಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ. ಶ್ರೀಮಠದ ಸಂಪರ್ಕದಿಂದ ಮಕ್ಕಳಲ್ಲಿ ಧಾರ್ಮಿಕ ಶ್ರದ್ಧೆ ಮತ್ತು ಸೇವಾಮನೋಭಾವ ಬೆಳೆದಿರುವುದು ಗೀತಾ ಅವರಿಗೆ ಸಂತೃಪ್ತಿ ನೀಡಿದೆ.
ಜೀವನದಲ್ಲಿ ಎದುರಾಗುವ ಕಷ್ಟಗಳು ಮತ್ತು ಸವಾಲುಗಳನ್ನು ಎದುರಿಸಲು ಶ್ರೀಗುರುಗಳ ಆಶೀರ್ವಾದ ಹಾಗೂ ಮಂತ್ರಾಕ್ಷತೆಯೇ ತಮಗೆ ಧೈರ್ಯ ನೀಡಿವೆ ಎಂಬುದು ಗೀತಾ ಅವರ ದೃಢವಾದ ನಂಬಿಕೆ. ಮನಸ್ಸು ಕುಗ್ಗುವಂತಹ ಸಂದರ್ಭಗಳಲ್ಲಿ ಗುರುಗಳ ಆಶೀರ್ವಚನದಿಂದ ಸಮಾಧಾನ ಮತ್ತು ಆತ್ಮವಿಶ್ವಾಸ ದೊರೆತಿದೆ ಎಂದು ಅವರು ಸ್ಮರಿಸಿಕೊಳ್ಳುತ್ತಾರೆ. ಬದುಕಿನ ಏರಿಳಿತಗಳ ನಡುವೆಯೂ ತಮ್ಮ ಶ್ರದ್ಧೆಯನ್ನು ಉಳಿಸಿಕೊಂಡು, ಸಾಧ್ಯವಾದಷ್ಟು ಕಾಲ ಗೋಸೇವೆಯನ್ನು ಮುಂದುವರಿಸಬೇಕು ಎಂಬ ಹಂಬಲ ಅವರಲ್ಲಿದೆ.
ಗೀತಾ ಅವರ ಗೋಸೇವೆಯ ಆಸಕ್ತಿಗೆ ತಾಯಿಯ ಸೇವಾಮನೋಭಾವವೂ ಪ್ರೇರಣೆಯಾಗಿದೆ. ಅವರ ತಾಯಿ ಜಯಶಾಸ್ತ್ರಿ ಅವರು ಮಾತೃತ್ವಮ್ ಯೋಜನೆ ಆರಂಭವಾಗುವುದಕ್ಕೂ ಮೊದಲೇ ಗೋಸೇವೆಯಲ್ಲಿ ತೊಡಗಿಸಿಕೊಂಡವರು . ಗೋಸ್ವರ್ಗ ಆರಂಭವಾದ ಕಾಲದಿಂದಲೇ ಪ್ರತಿವರ್ಷ ಗೋಮಾತೆಯ ಸೇವೆಗಾಗಿ ಕಾಣಿಕೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಮುಂದೆ ಮಾತೃತ್ವಮ್ ಯೋಜನೆಯ ಮೂಲಕವೂ ಗೋಸೇವೆಯಲ್ಲಿ ತೊಡಗಿಸಿಕೊಂಡು ಶ್ರೀಗುರುಗಳಿಂದ ಬಾಗಿನವನ್ನು ಪಡೆದುಕೊಂಡಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳು ಎದುರಾಗಿದ್ದರೂ, ಗೋಮಾತೆಯ ಸೇವೆಗೆ ಕಾಣಿಕೆ ಸಲ್ಲಿಸುವ ಆಸಕ್ತಿ ಅವರಲ್ಲಿ ಇಂದಿಗೂ ಕಡಿಮೆಯಾಗಿಲ್ಲ. ತಮ್ಮಿಂದ ಸಾಧ್ಯವಾದ ರೀತಿಯಲ್ಲಿ ಸೇವೆಯನ್ನು ಮುಂದುವರಿಸುತ್ತಿರುವ ಅವರ ನಿಸ್ವಾರ್ಥ ಮನೋಭಾವ ಮಗಳು ಗೀತಾ ಅವರಿಗೂ ಸ್ಫೂರ್ತಿಯಾಗಿದೆ.
ತಾಯಿಯಿಂದ ಬಂದ ಗೋವುಗಳ ಮೇಲಿನ ಪ್ರೀತಿ, ಶ್ರೀಮಠದ ಸೇವೆಯ ಪ್ರೇರಣೆ, ಶ್ರೀಗುರುಗಳ ಮೇಲಿನ ಭಕ್ತಿ ಹಾಗೂ ಗೋಸೇವೆಯಲ್ಲಿ ತೊಡಗಿಸಿಕೊಳ್ಳುವ ಅವಕಾಶ ಇವೆಲ್ಲವೂ ಗೀತಾ ಮೂಳೂರು ಅವರ ಬದುಕಿನಲ್ಲಿ ಮಹತ್ವದ ಸ್ಥಾನ ಪಡೆದಿವೆ. ಮಾತೃತ್ವಮ್ ಯೋಜನೆಯ ಮೂಲಕ ಗೋಮಾತೆಯ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾ ಸೇವೆಯನ್ನು ಮುಂದುವರಿಸುತ್ತಿರುವ ಅವರು, ಗೋಸೇವೆಯ ಮೂಲಕ ದೊರೆಯುವ ಆತ್ಮತೃಪ್ತಿಯನ್ನೇ ತಮ್ಮ ಬದುಕಿನ ಸಂತೋಷವೆಂದು ಭಾವಿಸಿಕೊಂಡಿದ್ದಾರೆ.
ಪ್ರಸನ್ನಾ ವಿ. ಚೆಕ್ಕೆಮನೆ
