ಬೆಂಗಳೂರು: ಪ್ರಜೆಗಳು ಮಾಡುವ ಪಾಪದಲ್ಲಿ ಒಂದು ಪಾಲು ರಾಜನಿಗಿದೆ. ಪ್ರಜೆಗಳು ತಮ್ಮ ಸಂಪಾದನೆಯ ಪಾಲಿನಲ್ಲಿ ಕರವನ್ನು ರಾಜನಿಗೆ ಸಲ್ಲಿಸುವುದರಿಂದ, ಅವರ ಪಾಪಗಳಲ್ಲಿ ರಾಜನೂ ಪಾಲನ್ನು ಹೊಂದುತ್ತಾನೆ ಎಂದು ಪರಮಪೂಜ್ಯ ಶ್ರೀಸಂಸ್ಥಾನದವರು ತಿಳಿಸಿದರು.
ಗಿರಿನಗರದಲ್ಲಿರುವ ಶ್ರೀಮಠದ ಬೆಂಗಳೂರು ಶಾಖೆ ಶ್ರೀರಾಮಾಶ್ರಮದಲ್ಲಿ ನಡೆಯುತ್ತಿರುವ ‘ನವರಾತ್ರ ನಮಸ್ಯಾ’ ಕಾರ್ಯಕ್ರಮದಲ್ಲಿ ಆಶ್ವಯುಜ ಶುಕ್ಲ ಸಪ್ತಮಿಯಂದು (17-10-2026) ಲಲಿತೋಪಾಖ್ಯಾನ ಪ್ರವಚನವನ್ನು ಅನುಗ್ರಹಿಸಿದ ಶ್ರೀಸಂಸ್ಥಾನದವರು, ತ್ರಿಲೋಕದ ಅಧಿಪತಿಯಾದ ಇಂದ್ರನಿಗೂ ಇಂದಿನ ರಾಜಕಾರಣಿಗಳು ಹೋಲಿಕೆಯನ್ನು ಕಾಣಬಹುದು. ಇಬ್ಬರೂ ಕೂಡ ಸದಾ ತಮ್ಮ ಕುರ್ಚಿಯ ರಕ್ಷಣೆಯ ಚಿಂತೆಯಲ್ಲಿಯೇ ಇರುತ್ತಾರೆ. ಇಂದ್ರನಿಗೆ ತಪಸ್ಸನ್ನಾಚರಿಸುವವರ ಹಾಗೂ ರಾಕ್ಷಸರ ಕುರಿತಾದ ಭಯವಾದರೆ, ಇಂದಿನ ರಾಜಕಾರಣಿಗಳಿಗೆ ಸ್ವಪಕ್ಷ ಹಾಗೂ ವಿಪಕ್ಷದವರ ಕುರಿತಾದ ಭಯವಿದೆ. ಹಾಗಾಗಿ ದೇವರು ನಮಗೆ ವರವನ್ನು ಕೊಟ್ಟರೆ, ನಾವು ಪದವಿಗಳ ಹಿಂದೆ ಹೋಗದೆ ಅದನ್ನು ಮೀರಿದ ಮೋಕ್ಷವನ್ನು ಪ್ರಾರ್ಥಿಸಬೇಕು ಎಂದು ಕಿವಿಮಾತು ಹೇಳಿದರು.
ಕರ್ಮದ ಫಲ ಇಂದ್ರನಿಗೂ ತಪ್ಪಿದ್ದಲ್ಲ. ಆದರೆ ನಾವು ಕರ್ಮ ಫಲ ನಮಗೆ ಬಾಧಿಸುವುದಿಲ್ಲ ಎಂಬಂತೆ ವರ್ತಿಸುತ್ತೇವೆ. ನಾವು ಮಾಡುವ ತಪ್ಪು ಕಾರ್ಯಗಳಿಗೆ ಪೊಳ್ಳು ಸಮರ್ಥನೆಗಳನ್ನು ಕೊಡುತ್ತಾ ಇರುತ್ತೇವೆ. ಸಮಸ್ಯೆಗಳು ಬಂದಾಗ ‘ನನಗೇ ಏಕೆ ಹೀಗೆ?’ ಎಂದು ಎಲ್ಲರಲ್ಲಿ ಹೇಳುತ್ತೇವೆ. ಆದರೆ ‘ನಾನೇಕೆ ಹೀಗೆ?’ಎಂದು ಪ್ರಶ್ನಿಸಿಕೊಳ್ಳುವುದಿಲ್ಲ. ನಮ್ಮನ್ನು ನಾವು ಪ್ರಶ್ನಿಸಿಕೊಂಡಾದ ಉತ್ತಮ ಜೀವನವನ್ನು ಕಟ್ಟಿಕೊಳ್ಳಲು ಸಾಧ್ಯ.
ಸಿದ್ಧಾಂತಗಳನ್ನು ಕೇಳಿದ ನಂತರ ಅವುಗಳನ್ನು ಜೀವನಕ್ಕೆ ಅಳವಡಿಸಿಕೊಳ್ಳಬೇಕು. ಪುಸ್ತಕದಲ್ಲಿ ಓದುವುದರಿಂದ , ಪ್ರವಚನ ಕೇಳುವುದರಿಂದ ಪ್ರಯೋಜನವಿಲ್ಲ. ಅಲ್ಲಿನ ವಿಚಾರಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅದು ಸಾರ್ಥಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಮುದ್ರ ಮಥನಕ್ಕೆ ಶ್ರೀಮನ್ನಾರಾಯಣನು ದೇವತೆಗಳಿಗೆ ನೀಡಿದ ಮಾರ್ಗದರ್ಶನವನ್ನು ಪ್ರಸ್ತಾಪಿಸಿದ ಶ್ರೀಗಳು, ಸಂಸ್ಕೃತದಲ್ಲಿ ‘ಶಠಂ ಪ್ರತಿ ಶಾಠ್ಯಂ’ ಎಂಬ ಮಾತಿದ್ದು ಮೋಸಗಾರನಿಗೆ ಮೋಸದಿಂದಲೇ ಉತ್ತರಿಸಬೇಕು. ದುಷ್ಟರಿಗೆ ಸಜ್ಜನ ಭಾವದ ಭಾಷೆ ಅರ್ಥವಾಗುವುದಿಲ್ಲ.
ದುಷ್ಟರಿಗೆ ಅವರದೇ ಭಾಷೆಯಲ್ಲಿ ಉತ್ತರಿಸಬೇಕಾಗುತ್ತದೆ ಎಂದು ವಿವರಿಸಿದರು.
ಮಹಾಸರಸ್ವತೀ ಮಂತ್ರ ಹವನ, ದುರ್ಗಾ ಸಪ್ತಶತೀ ಪಾರಾಯಣ, ಮಾತೆಯರಿಂದ ಉಡಿಸೇವೆ, ಭಜನಾ ಮಂಡಳಿಗಳಿಂದ ಭಜನೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆದವು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಪ್ರೋ. ಮಲ್ಲೇಪುರಂ ಜಿ. ವೆಂಕಟೇಶ್, ಸಿ.ಎಮ್.ಆರ್. ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ. ಶಿವಕುಮಾರ್, ಸಾಹಿತಿ ಚಿಂತಾಮಣಿ ಕೊಡ್ಲಕೆರೆ, ಉದ್ಯಮಿ ನಾಗರಾಜ್ ಆರ್., ಎಲ್. ಆರ್. ಹೆಗಡೆ ಶ್ರೀಸಂಸ್ಥಾನದವರಿಂದ ಆಶೀರ್ವಾದ ಪಡೆದರು.




































